ಬೆನ್ನುಡಿ (ಹಾಸ್ಯಪ್ರಬಂಧ)
ಕೆಲವರ ಮುಖಕ್ಕಿಂತಲೂ ಅವರ ಬೆನ್ನಲ್ಲೇ ಹೆಚ್ಚು ಭಾವನೆಗಳಿವೆ ಎಂದು ಒಬ್ಬರು ಭಾಷಣದಲ್ಲಿ ಹೇಳಿದರು ಎಂದು ಸೋಷಿಯಲ್ ಮೀಡಿಯಾ ವರದಿ ಓದಿದೆ. ಮುಖದಲ್ಲಿರುವ ಭಾವನೆಗಳನ್ನು ವ್ಯಕ್ತ ಪಡಿಸಲು ಜುಕರ್ ಬರ್ಗ್ ಮಹಾಶಯ ಫೇಸ್ ಬುಕ್ ಪ್ರಾರಂಭಿಸಿದ ಹಾಗೆ ಈಗ ಬೆನ್ನಿನ ಭಾವನೆಗಳನ್ನು ವ್ಯಕ್ತಗೊಳಿಸಲು ಬ್ಯಾಕ್ ಬುಕ್ ಒಂದು ಪ್ರಾರಂಭವಾಗುವುದೇ ಬಾಕಿ. ಬ್ಯಾಕ್ ಅಪ್ ಅನ್ನುವುದನ್ನ ತಿರುಚಿ ಬ್ಯಾಕ್ ಆಪ್ ಎಂಬ ಹೆಸರನ್ನು ನಾನು ಈಗಲೇ ಪೇಟೆಂಟ್ ಮಾಡೋಣ ಎಂದು ಯೋಚಿಸುತ್ತಿದ್ದೇನೆ. ಹೇಗೆ ವಾಟ್ಸಾಪ್ ನಮ್ಮೆಲ್ಲರನ್ನೂ ವಾಟ್ಸಾಪಿ ಜೀರ್ಣೋಭವ ಎಂದು ಸ್ವಾಹಾ ಮಾಡಿ ನಮ್ಮ ಸಮಾಜದ ಬೆನ್ನೆಲುಬಾಗಿರುವಂತೆ ನಟಿಸುತ್ತಿದೆಯೋ ಬ್ಯಾಕಾಪ್ ಅದಕ್ಕೆ ತಕ್ಕ ಟಾಕ್ ಬ್ಯಾಕ್ ಅಥವಾ ಪ್ರತ್ಯುತ್ತರ ನೀಡಬಲ್ಲದು ಎಂದು ನಾನು ನಂಬಿದ್ದೇನೆ. ಬೆನ್ನಿಗೆ ಹುಟ್ಟಿದವರು ಎಂದರೆ ತಮ್ಮ ತಂಗಿಯರು. ಫೇಸ್ ಬುಕ್ ಬೆನ್ನಿಗೆ ಹುಟ್ಟಿದ ವಾಟ್ಸಾಪ್ ತನ್ನ ಅಣ್ಣನನ್ನೇ ಮೀರಿಸುವಂತೆ ಬೆಳೆಯತೊಡಗಿ ಜುಕರ್ ಬರ್ಗ್ ಕಂಗಾಲಾಗಿ ತಮ್ಮನಿಗೆ ಒಂದಷ್ಟು ಬಿಳಿಯನ್ನ ಹಾಕಿ ತನ್ನ ಬ್ಯಾಕನ್ನು ರಕ್ಷಿಸಿಕೊಂಡಿದ್ದು ನಿಮಗೆ ತಿಳಿಯದ ವಿಷಯವೇನಲ್ಲ. ವಾಟ್ಸಾಪ್ ಸೃಷ್ಟಿಸಿದ ಮಹಾನುಭಾವಂದಿರೇ ಬ್ಯಾಕಾಪ್ ಆಪನ್ನು ಸೃಷ್ಟಿಸಲು "ವೀ ವಿಲ್ ಬೀ ರೈಟ್ ಬ್ಯಾಕ್" ಎನ್ನುತ್ತಾ ಜುಕರ್ ಬರ್ಗ್ ಮಹಾಶಯನಿಗೆ ಬೆನ್ನು ತೋರಿಸಿ ಬಿಟ್ಟರೆ ಹೇಗೆ ಎಂದು ಕಲ್ಪಿಸಿಕೊಳ್ಳಿ!
ಬೆನ್ನಿನಲ್ಲಿ ಏನು ಭಾವನೆಗಳಿವೆ ಎಂದು ಯೋಚಿಸುತ್ತ ನಾನು ಬೆಂಚ್ ಮೇಲೆ ಕುಳಿತುಕೊಂಡು ಮಸಾಲಾ ಚಾಟ್ ತಿನ್ನುತ್ತಿದ್ರಾಗ ಅನೇಕ ಸಾಕ್ಷಾತ್ ಕಾರಗಳು ನನಗೆ ಉಂಟಾದವು. ಪ್ರಾಮ್ ತಳ್ಳಿಕೊಂಡು ಕೈಯಲ್ಲಿ ಫೋನ್ ಹಿಡಿದು ಮಾತಾಡುತ್ತಾ "ನೋ ಪ್ರೇಮ್ ಐ ಕ್ಯಾನ್ ನಾಟ್ ಕುಕ್ ಟುಡೆ" ಎನ್ನುತ್ತಾ ಪ್ರೇಮಾಲಾಪದಲ್ಲಿ ತೊಡಗಿದ ತಾಯಿಯ ಚಿತ್ರ ನನ್ನ ಮನೋಫ್ರೇಮ್ ಮೇಲೆ ಮೂಡಿತು. ಈ ಫೈಯರ್ ವರ್ಕ್ ನಡುವೆಯೂ ಮಗು ತನಗೆ ತಾಯಿಯ ಬೆಂಗಾವಲು ಇದೆ ಎನ್ನುವ ಧೈರ್ಯದಿಂದ ಬಾಯಲ್ಲಿದ್ದ ಪ್ಯಾಸಿಫೈಯರನ್ನು ಚೀಪುತ್ತಾ ಪ್ಯಾಸನ್ನು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಆಹಾ! ಬೆನ್ನಿನಲ್ಲಿ ಭಾವನೆಗಳು ಇಲ್ಲವೆಂದು ಹೇಗಾದರೂ ಹೇಳಲು ಸಾಧ್ಯ ಎಂದು ಯೋಚಿಸಿ ನಾನು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ.
"ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿ ಮೆಟ್ಲು" ಎಂಬ ಧ್ವನಿ ಕೇಳಿತು. ಕೊಚ್ಚೆಕಲ್ಲಿನ ಮೇಲೆ ಹುಷಾರಾಗಿ ಕಾಲಿಟ್ಟು ನಡೆದು ಹೋಗುತ್ತಾ ಜೊತೆಗೆ ಮಗನನ್ನೂ ದಾಟಿಸುತ್ತಿದ್ದ ತಾಯಿ ಅವನಿಗೆ ಬೆನಕನ ಸ್ತುತಿ ಹೇಳಿಕೊಡುತ್ತಲೇ ಮೆಟ್ಲ ಮೇಲೆ ಕೂತಿದ್ದ ಪಾಣಿಪೂರಿಯವನ ಕಡೆಗೆ ನೋಟ ನೆಟ್ಟಿದ್ದಳು. ಬೆನಕ ಎಂಬುದು ವಿನಾಯಕ ಪದದ ತದ್ಭವ ಎಂದು ಹೇಳುತ್ತಾರಲ್ಲ ಅದು ನಿಜವೇ ಎಂದು ಯೋಚಿಸಿದೆ. ಬೆನಕ ಎಂಬುದಕ್ಕೂ ಬೆನ್ನಿಗೂ ಏನೋ ಸಂಬಂಧ ಇರಲೇ ಬೇಕು. ಐ ವಿಲ್ ವಾಚ್ ಯುವರ್ ಬ್ಯಾಕ್ ಎಂಬ ಇಂಗ್ಲಿಷ್ ಪ್ರಯೋಗವನ್ನು ನೋಡಿ. ಶತ್ರು ಹಿಂದಿನಿಂದ ಬಂದು ಬೆನ್ನಿಗೆ ಇರಿದರೆ ಎಂಥ ಮಹಾವೀರ ಕೂಡಾ ಉಳಿಯಲಾರ. ನಿನ್ನ ಬೆನ್ನನ್ನು ಕಾಯುವೆ, ಬೆಂಗಾವಲು ಇತ್ಯಾದಿ ಪ್ರಯೋಗಗಳು ಕನ್ನಡದಲ್ಲೂ ಇವೆಯಲ್ಲಾ! ನಮ್ಮ ಬೆನ್ನನ್ನು ಕಾಯುವವನೇ ಬೆನಕ ಆಗಿರಬಹುದಾ ಎಂಬ ಬಹುವ್ರೀಹಿ ಯೋಚನೆಯು ಬಹುವಾಗಿ ಕಾಡಿಸಿತು. ಕನ್ನಡ ವ್ಯಾಕರಣದ ನೆನಪಾದಾಗ ಕನ್ನಡದ ಅನೇಕ ಪದ್ಯಗಳು, ಪಾಠಗಳು ನೆನಪಿಗೆ ಬಂದವು.
ಒಬ್ಬಳು ಕವಯಿತ್ರಿ "ಬೆನ್ನು ಬೆನ್ನೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು?" ಎಂದು ಹಾಡಿದ್ದು ನೆನಪಾಯಿತು. ಎಷ್ಟು ಮುಂದಾಲೋಚನೆ! ಬ್ಯಾಕ್ ಟು ದ ಫ್ಯೂಚರ್ ಮಾದರಿಯಲ್ಲಿ ಈ ಕವಯಿತ್ರಿ ಕೂಡಾ ಕಾಲಯಂತ್ರದಲ್ಲಿ ಚಲಿಸಿ ಪೂರ್ವಕಾಲಕ್ಕೆ ಹಿಂದಿರುಗಿ ಬರೆದಿರಬೇಕು ಎನ್ನಿಸಿತು. ಬೆನ್ನನ್ನು ಬೀಳುಗಳೆವರು ಅರ್ಥಾತ್ ಬೆನ್ನನ್ನು ಅಥವಾ ಅದರ ಮೌಲ್ಯವನ್ನು ಕೆಳಕ್ಕೆ ಬೀಳಿಸುವವರು ಕಣ್ಣು ಕಾಣದ ಗಾವಿಲರು (ಗ್ರಾಮೀಣರು) ಎಂದು ನಿಖರವಾಗಿ ಹೇಳಿದ್ದಾಳೆ ಕವಯಿತ್ರಿ! ಫೇಸ್ಬುಕ್ ವಾಟ್ಸಾಪ್ ಇತ್ಯಾದಿ ಓದದೇ ಬೆನ್ನಿನ ಮಹತ್ವವನ್ನು ತಿಳಿದುಕೊಳ್ಳದ ಗಾವಿಕರು ಬೆನ್ನನ್ನು ಬೀಳುಗಳೆಯದೆ ಏನು ಮಾಡಿಯಾರು ಎಂದು ಕೋಪವೂ ಬಂತು.
ಆದರೆ ಅದೇ ಗಾವಿಲರು ಅದೆಷ್ಟು ಗಾದೆಗಳನ್ನು ಬೆನ್ನಿನ ಕುರಿತಾಗಿ ಕಟ್ಟಿದ್ದಾರಲ್ಲ ಎಂಬ ಅನುಮಾನವೂ ಬಂತು. "ಬೆನ್ನಿಗೆ ಎಣ್ಣೆ ಹಚ್ಚಿಕೊಂಡು ಕಾದಿರು" ಎಂಬುದು ತಾಯಂದಿರು ಹಿಂದೆ ಮಕ್ಕಳಿಗೆ ಹೆದರಿಸುತ್ತಿದ್ದ ರೀತಿ. ತಪ್ಪು ಮಾಡಿದವರಿಗೆ ತಂದೆಯೇ ಬೆನ್ನಿಗೆ ಗುದ್ದುತ್ತಿದ್ದುದು ಎಂಬುದು ಇದರಿಂದ ತಿಳಿಯುತ್ತದೆ. ಹಾಗೆ ಗುದ್ದುವಾಗ ಬೆನ್ನಿಗೆ ಹಚ್ಚಿದ ಎಣ್ಣೆಯಿಂದ ಏಟಿನ ಫೋರ್ಸ್ ಸ್ವಲ್ಪ ಕಡಿಮೆ ಆಗುತ್ತಿತ್ತು ಎಂಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ತತ್ತ್ವವನ್ನು ಕನ್ನಡ ತಾಯಂದಿರು ಆಗಲೇ ತಿಳಿದುಕೊಂಡು ಬಿಟ್ಟಿದ್ದರು. ಬೆನ್ನಿನ ನೋವಿಗೆ ಹಚ್ಚಿಕೊಳ್ಳಬಹುದಾದ "ಬೆನ್ ಗೇ" ಎಂಬ ಒಂದು ಕ್ರೀಮಿಗೆ ಹೆಸರು ಕೊಟ್ಟವನು ಒಬ್ಬ ಕನ್ನಡಿಗನೇ ಇರಬೇಕೆಂಬ ಅನುಮಾನ ನನ್ನನ್ನು ಅನೇಕ ಸಲ ಕಾಡಿದೆ. ಅಂದಹಾಗೆ ಬೆನ್ನಿಗೆ ಗುದ್ದುವ ಮಾತು ಬಂದಾಗ ನನ್ನ ಸಹವಿದ್ಯಾರ್ಥಿಯೊಬ್ಬನ ನೆನಪಾಗಿ ಬೆನ್ನಿನಲ್ಲಿ ಲಘುವಾದ ಚಳುಕು ಮೂಡಿತು. ಇವನು ಪ್ರತಿದಿನ ನಾನು ಕಂಡಾಗ ಬೆನ್ನಿಗೆ ಗುದ್ದುತ್ತಿದ್ದ. ಆಗ ಬೆನ್ ಗೇ ಕ್ರೀಮ್ ಕೂಡಾ ಇರಲಿಲ್ಲ. ಬೆನ್ನಿಗೆ ನಾನು ಹಚ್ಚಿಕೊಂಡು ಹೋಗುತ್ತಿದ್ದ ಎಣ್ಣೆಯೂ ಬೇನೆಗೆ ಅಷ್ಟು ಉಪಯುಕ್ತವಾಗಿರಲಿಲ್ಲ ಬಿಡಿ.
ಬೆನ್ನು ಬಿಡದ ಭೂತದ ಬಗ್ಗೆ ಕೇಳದವರು ಯಾರು! ಚಂದಮಾಮ ಪತ್ರಿಕೆಯ ಪ್ರತಿ ಅಂಕದಲ್ಲೂ ಭೂತವು ವಿಕ್ರಮನ ಬೆನ್ನನ್ನು ಹಿಡಿದುಕೊಳ್ಳುತ್ತಿತ್ತು. ಆ ವಿಕ್ರಮನೋ ಇದು ತಿಳಿದೂ ತಿಳಿದೂ ಭೂತ ಇರುವ ಮರಕ್ಕೆ ಅದು ಯಾಕೆ ಹೋಗುತ್ತಿದ್ದನೋ! ಬೆನ್ನಿಗೆ ಬೀಳುವ ಗುದ್ದಿನ ಬಗ್ಗೆ ತಿಳಿದೂ ನಾನು ಶಾಲೆಗೆ ಹೋಗುತ್ತಿದ್ದ ಹಾಗೆ ಅವನಿಗೆ ಏನಿತ್ತೋ ಕಾರಣ! ಮೊನ್ನೆ ಒಬ್ಬರು ಸಹೋದ್ಯೋಗಿ ಬೆನ್ನು ಹಿಡಿದುಕೊಂಡಿದೆ ಎಂದು ರಜಾ ಹಾಕಿದಾಗ ನಾನು ನಿಜಕ್ಕೂ ಗಾಬರಿಯಾಗಿದ್ದೆ. ಏಕೆಂದರೆ ಅವರ ಹೆಸರೂ ವಿಕ್ರಂ. ನಾನು ಫೋನ್ ಮಾಡಿ "ಏನು ಹಿಡಿದುಕೊಂಡಿದೆ?" ಎಂದು ಕೇಳಿದೆ. ಅವರು "ಬೆನ್ನು" ಎಂದು ನೋವಿನ ಧ್ವನಿಯಲ್ಲಿ ಆದಷ್ಟೂ ತಾಳ್ಮೆಯಿಂದ ಹೇಳಿದರು. "ಸರಿ, ಬೆನ್ನು ಹಿಡಿದುಕೊಂಡಿದೆ ಓಕೆ, ಆದರೆ ಏನು ಹಿಡಿದುಕೊಂಡಿರೋದು?" ಎಂದು ಕೇಳಿದ್ದರಲ್ಲಿ ಅಂಥ ತಪ್ಪೇನಿದೆ ಹೇಳಿ? ಫೋನ್ ಕುಕ್ಕಿ ಬಿಡುವಷ್ಟು? ನನಗಂತೂ ಕೆಲವರ ವರ್ತನೆಯೇ ವಿಚಿತ್ರ ಎನ್ನಿಸುತ್ತದೆ. ಅವರು ಕೆಲಸಕ್ಕೆ ವಾಪಸ್ ಬಂದಾಗ ನಾನು ಪದೇ ಪದೇ ಅವರ ಬೆನ್ನನ್ನು ನೋಡಿ ಏನೂ ಹಿಡಕೊಂಡಿಲ್ಲ ತಾನೇ ಎಂದು ನೋಡಿದ್ದಕ್ಕೂ ಕೋಪ! "ಜಸ್ಟ್ ವಾಚಿಂಗ್ ಯುವರ್ ಬ್ಯಾಕ್ ವಿಕ್ರಂ!" ಎಂದು ವಿವರಿಸಿದರೂ "ಗೆಟ್ ಆಫ್ ಮೈ ಬ್ಯಾಕ್" ಎಂಬ ಗುಡುಗು!
ಬೆನ್ನು ತೋರಿಸಿ ಓಡಿ ಹೋದ ಶತ್ರುಗಳೂ ಮತ್ತು
ಶತ್ರುವನ್ನು ಬೆಂಬತ್ತಿ ಹೋಗುವುದಂತೂ ನಮ್ಮ ಚರಿತ್ರೆಯಲ್ಲಿ ಬಹಳ ಕಾಮನ್. ಶತ್ರುವು ಬೆನ್ನನ್ನು ಯಾಕೆ ತೋರಿಸಿ ಓಡಿ ಹೋಗುತ್ತಿದ್ದರೋ ನನಗೆ ಎಂದೂ ಬಿಡಿಸದ ಒಗಟು. ಬಹುಶಃ "ಎಣ್ಣೆ ಹಚ್ಚಿಕೊಂಡು ಬಂದಿದ್ದೇನೆ ನೋಡು!" ಎಂದು ಪುರಾವೆ ನೀಡಲು ಹಾಗೆ ಮಾಡುತ್ತಿದ್ದರೋ ಏನೋ. "ಬೆಂಬತ್ತಿ" ಅಂದರೆ ಬೆನ್ನನ್ನು ಹತ್ತಿ ಎಂದು ನಮ್ಮ ಕನ್ನಡ ಮೇಷ್ಟ್ರು ನಮಗೆ ಹೇಳಿಕೊಟ್ಟರು. ಚಂದಮಾಮ ಓದುತ್ತಿದ್ದ ನಾನು ಆಗ ಬೇತಾಳವು ವಿಕ್ರಮನ ಬೆಂಬತ್ತಿ ಹೋದ ಚಿತ್ರವನ್ನೇ ಕಣ್ಣ ಮುಂದೆ ತಂದುಕೊಂಡೆ. ಅಬ್ಬಾ ಶತ್ರುಗಳ ಬೆಂಬತ್ತಿ ಹೋಗುತ್ತಿದ್ದರಲ್ಲಾ ಈ ವೀರಾಗ್ರಣಿಗಳು! ಶತ್ರು ಕುದುರೆಯ ಬೆಂಬತ್ತಿ ಹೋಗುತ್ತಿರುವಾಗ ಶತ್ರುವಿನ ಬೆಂಬತ್ತಿ ಹೋಗುತ್ತಿರುವ ಡಬಲ್ ಡೆಕ್ಕರ್ ಚಿತ್ರವನ್ನು ಊಹಿಸಿಕೊಂಡು ನಾನು ನಡುಗಿದೆ. ಈಗಿನ ಯಾವ ಆಕ್ಷನ್ ಮೂವಿಗಳಲ್ಲೂ ಇಂಥ ಬೆಂಬತ್ತಿದ ದೃಶ್ಯವನ್ನು ಯಾರೂ ಚಿತ್ರಿಸಿಲ್ಲ ಬಿಡಿ!
ಬ್ಯಾಕ್ ಬುಕ್ ಎಂಬುದು ಮೇಲಿನ ಎಲ್ಲಾ ಕಾರಣಗಳಿಂದ ಎಷ್ಟು ಮುಖ್ಯವೆಂದು ನಿಮಗೀಗ ಅರ್ಥವಾಗಿರಬಹುದಲ್ಲ? ಇಂಗ್ಲೆಂಡ್ ಜನರು ಬೆನ್ನಿನ ಮಹತ್ವವನ್ನು ಜಗತ್ತಿಗೆ ತಿಳಿಸಲು ಒಂದು ದೊಡ್ಡ ಗಡಿಯಾರಕ್ಕೆ ಬಿಗ್ ಬೆನ್ ಎಂದೇ ಹೆಸರು ಕೊಟ್ಟರು. ಅಲ್ಲಿ ಬಿಗ್ ಬೆನ್ ತೋರಿಸುವ ಸಮಯವನ್ನೇ ಎಲ್ಲರೂ ಅನುಸುತ್ತಾ ಬೆನ್ಮುಖರಾಗಿದ್ದಾರೆ.
ಜನರ ಮುಖಕ್ಕಿಂತ ಅವರ ಬೆನ್ನಿನಲ್ಲೆ ಹೆಚ್ಚು ಭಾವನೆಗಳಿವೆ ಎಂದರೆ ಬೆನ್ನಿನ ಮುಖಸ್ತುತಿ ಆಗಲಾರದು. ಇಂತಿ ಬೆನ್ ಗಳೂರಿನ ರವಿಕುಮಾರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ