ಕ್ಲಿಯರ್ ವಾಟರ್ ನೆನಪುಗಳು
ವಾಲ್ಟ್ ಡಿಸ್ನಿ ವರ್ಲ್ಡ್, ಎಪ್ಕಾಟ್ ಸೆಂಟರ್ ಮತ್ತು ಸೀ ವರ್ಲ್ಡ್ ಇವುಗಳನ್ನು ಒಂದಲ್ಲ ಎರಡು ಸಲ ನೋಡುವ ಅದೃಷ್ಟ ನನಗೆ ಬಂತು. ಮೈಸೂರಿನಲ್ಲಿದ್ದವರಿಗೆ ಹೇಗೆ ದಸರಾ ನೋಡಲು ಬಂದ ಅತಿಥಿಗಳ ಜೊತೆಗೆ ದಸರಾ ವೈಭವ ನೋಡಲು ಅನೇಕಾನೇಕ ಅವಕಾಶಗಳು ಬರುತ್ತವೋ ಹಾಗೇ ಫ್ಲಾರಿಡಾ, ಕ್ಯಾಲಿಫೋರ್ನಿಯಾ ಇಂಥ ಕಡೆ ವಾಸವಿದ್ದವರಿಗೆ ಇದೇ ರೀತಿಯ ಅವಕಾಶಗಳು ಬರುತ್ತಿರುತ್ತವೆ. ಮುಂದೆ ನಾನು ಪಿಎಚ್.ಡಿ. ಮಾಡಲು ಕ್ಯಾಲಿಫೋರ್ನಿಯಾಗೆ ಹೋದಾಗ ಡಿಸ್ನಿ ಲ್ಯಾಂಡ್, ಸೀ ವರ್ಲ್ಡ್ ಮುಂತಾದವನ್ನು ಇದೇ ರೀತಿ ಹಲವು ಸಲ ಸುತ್ತಿದ್ದೇನೆ. ಡಿಸ್ನಿ ವರ್ಲ್ಡ್ ನಮ್ಮಲ್ಲಿನ ಮುಗ್ಧ ಮಗುವನ್ನು ಮತ್ತೊಮ್ಮೆ ಜಾಗೃತಗೊಳಿಸುತ್ತದೆ. ಎಲ್ಲಿ ನೋಡಿದರೂ ಬಣ್ಣ, ಎಲ್ಲಿ ನೋಡಿದರೂ ಕಾರ್ಟೂನ್ ಪಾತ್ರಗಳು, ಎಲ್ಲಿ ನೋಡಿದರೂ ಮ್ಯಾಜಿಕ್. ಅದೇನು ಸಿಂಡರೆಲ್ಲಾ ಅರಮನೆ! ಎಲ್ಲರೊಂದಿಗೆ ಕೈಕುಲುಕುವ ಮಿಕಿ ಮೌಸ್! ಅದೇನು ಮ್ಯೂಸಿಕ್ ಬ್ಯಾಂಡ್! ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಲೂ ಉಲ್ಲಾಸದಲ್ಲಿರುವ ಜನಸ್ತೋಮ! ನಾನು ನೋಡಿದಾಗಲೂ ಮತ್ತು ಈಗಲೂ ಡಿಸ್ನಿ ವರ್ಲ್ಡ್ ಸಾಕಷ್ಟು ಬದಲಾಗಿರಲು ಸಾಧ್ಯ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಲ್ಲಿ ಇನ್ನೂ ಹೊಸ ಬಗೆಯ ಅನುಭವಗಳನ್ನು ಅತಿಥಿಗಳಿಗೆ ನೀಡುತ್ತಿರಬಹುದು. ಅಮೆರಿಕಾದಲ್ಲಿ ಯಾವುದೇ ಸ್ಥಳವು ಕಾಲ ಕಳೆದಂತೆ ಬದಲಾಗುತ್ತಲೇ ಇರುತ್ತದೆ. ಒಮ್ಮೆ ನನ್ನ ಪೂರ್ವ ಸಹೋದ್ಯೋಗಿ ಜೀನ್ ಫ್ರಾಂಜ್ ಜೊತೆಗೆ ದೆಹಲಿ, ಚೆನ್ನೈ, ಕೋಲ್ಕತಾ ಮುಂತಾದ ಹಲವು ಕಡೆ ಸುತ್ತುವಾಗ ಅವರೊಂದಿಗೆ ಈ ಕುರಿತು ಸಂಭಾಷಣೆ ನಡೆದಿದ್ದು ನೆನಪಾಗುತ್ತಿದೆ. ನಮ್ಮ ಕ್ಯಾಬ್ ಕೋಲ್ಕತಾದಿಂದ ಖರಗಪುರಕ್ಕೆ ಹೋಗುತ್ತಿತ್ತು. ಸುತ್ತಲೂ ಕಾಣುವ ದೃಶ್ಯಗಳು ಭಾರತದ ಬಡತನವನ್ನು ಸಾರಿ ಹೇಳುತ್ತಿದ್ದವು. ಕೋಲ್ಕತಾ ನಗರಕ್ಕೆ ಹೋದಾಗ ಕಾಣುವುದು ಅಲ್ಲಿಯ ಕಳಾಹೀನ ಕಟ್ಟಡಗಳು. ಮಳೆಯಲ್ಲಿ ನೆಂದು ಬಿಸಿಲಲ್ಲಿ ಬೆಂದು ವರ್ಷಗಳಿಂದಲೂ ಸುಣ್ಣಬಣ್ಣ ಕಾಣದ ಕಟ್ಟಡಗಳು. ಜೀನ್ ಇವನ್ನೆಲ್ಲ ಗಮನಿಸಿದ್ದರು. "ನೋಡು, ಅಮೆರಿಕಾದಲ್ಲಿ ನಾವು ಎಲ್ಲವನ್ನೂ ಆಗಾಗ ಬದಲಾಯಿಸುತ್ತಿರುತ್ತೇವೆ. ಇಲ್ಲಿ ಒಮ್ಮೆ ಕಟ್ಟಿದ್ದನ್ನು ಹಾಗೇ ಬಿಟ್ಟುಬಿಡುತ್ತಾರೆ. ಅವರಿಗೆ ತಮ್ಮ ಕಟ್ಟಡದ ಬಗ್ಗೆ ಅಭಿಮಾನ ಇದ್ದಂತಿಲ್ಲ" ಎಂದರು. ಆಗ ನಾನು ಓದಿದ ಇಂಜಿನಿಯರಿಂಗ್ ಕಾಲೇಜಿನ ಚಿತ್ರ ಕಣ್ಣಮುಂದೆ ಹಾದುಹೋಯಿತು. ನಾನು ಓದಿದಾಗ ಹೇಗಿತ್ತೋ ಕಟ್ಟಡ ಅದಕ್ಕಿಂತಲೂ ದುಃಸ್ಥಿತಿಯಲ್ಲಿತ್ತು. ಈಗ ಕೊನೆಗೂ ಕಟ್ಟಡದ ಭಾಗ್ಯೋದಾಯವಾಗಿ ಅದು ಮತ್ತೊಮ್ಮೆ ಕಂಗೊಳಿಸುತ್ತಿದೆ. ಹಣ ಇಲ್ಲದೇ ಇರುವುದರಿಂದ ನಾವು ಪುನರ್ನವೀಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲವೇ? ಪುನರ್ನವೀಕರಣಕ್ಕೆ ಬಜೆಟ್ ಇಟ್ಟುಕೊಂಡರೆ ನಮ್ಮ ಎಕಾನಮಿ ಬೆಳೆದು ಇನ್ನಷ್ಟು ಜನರಿಗೆ ಉದ್ಯೋಗ ಸಿಕ್ಕುವುದಲ್ಲವೇ? ಯೋಚಿಸಬೇಕಾದ ವಿಷಯ.
ಆಗ ಇನ್ನೂ ಆಧುನಿಕ ತಂತ್ರಜ್ಞಾನ ಕಾಲಿಟ್ಟಿರಲಿಲ್ಲ. ಕೊಡಾಕ್ ಫಿಲ್ಮ್ ರೀಲುಗಳನ್ನು ಹಾಕಿ ಕ್ಯಾಮೆರಾಗಳನ್ನು ಫೋಕಸ್ ಮಾಡಿ ಚಿತ್ರಗಳನ್ನು ತೆಗೆಯುತ್ತಿದ್ದ ಕಾಲ. ಹಾಗೆ ತೆಗೆದ ಫಿಲ್ಮ್ ರೀಲನ್ನು ಫಾರ್ಮಸಿಗಳಿಗೆ ತೆಗೆದುಕೊಂಡು ಹೋದರೆ ಅದನ್ನು ಡೆವಲಪ್ ಮಾಡಿ ಕೆಲವು ಗಂಟೆಗಳಲ್ಲಿ ಫೋಟೋಗಳನ್ನು ಹಿಂದಿರುಗಿಸುತ್ತಿದ್ದರು. ಅದೆಷ್ಟು ಫೋಟೋಗಳು ಹಾಳಾಗಿರುತ್ತಿದ್ದವೋ! ಅರ್ಧ ಕಪ್ಪಾದ, ಪೂರ್ತಿ ಕಪ್ಪಾದ ಚಿತ್ರಗಳು! ಕಣ್ಣುಗಳು ಕೆಂಪಾದ ಚಿತ್ರಗಳು! ಬೇರೊಬ್ಬರಿಗೆ ತೋರಿಸಲು ಮನಸ್ಸಾಗದೆ ಕಸದಬುಟ್ಟಿಗೆ ಹೋಗುತ್ತಿದ್ದ ಚಿತ್ರಗಳು! ಈ ರೀಲುಗಳ ಮೇಲೆ ಮತ್ತು ಫೋಟೋ ಡೆವೆಲಪ್ಮೆಂಟ್ ಮೇಲೆ ನಾನೂ ಸೇರಿದಂತೆ ಜನ ಅದೆಷ್ಟು ಹಣ ಸುರಿದಿದ್ದಾರೋ! ಡಿಸ್ನಿ ವರ್ಲ್ಡ್ ಮುಂತಾದ ಕಡೆ ಕೊಡಾಕ್ ಅಲ್ಲಲ್ಲಿ ಕೊಡಾಕ್ ಸ್ಪಾಟ್ ಎಂಬ ಹಲಗೆಗಳನ್ನು ತೂಗುಹಾಕಿ "ಇಲ್ಲಿ ಚಿತ್ರ ತೆಗೆದರೆ ಉತ್ತಮ" ಎಂಬ ಸೂಚನೆಯನ್ನೂ ಕೊಡುತ್ತಿತ್ತು! ಆಗ ಉತ್ತುಂಗದಲ್ಲಿದ್ದ ಕಂಪನಿ ಇಂದು ನಾಮೋನಿಶಾನೆಯಿಲ್ಲದಂತೆ ಮರೆಯಾಗಿದೆ. ಡಿಜಿಟಲ್ ಕ್ಯಾಮೆರಾ ಅಭಿವೃದ್ಧಿ ನಡೆದದ್ದೇ ಕೊಡಾಕ್ ಕಂಪನಿಯಲ್ಲಿ. ಆದರೆ ಕೆಮಿಕಲ್ ಮತ್ತು ಫಿಲ್ಮ್ ವ್ಯಾಪಾರಕ್ಕೆ ಚ್ಯುತಿ ತರಬಹುದು ಎಂದು ಡಿಜಿಟಲ್ ಕ್ಯಾಮೆರಾ ಅಭಿವೃದ್ಧಿಯನ್ನು ಕೊಡಾಕ್ ಕಡೆಗಣಿಸಿತು. ಕ್ಯಾಮೆರಾ ಕಂಪನಿಯ ಬಳಿ ದೂರದೃಷ್ಟಿಯ ಲೆನ್ಸ್ ಇರಲಿಲ್ಲ!
ಸವಾರಿ ಮಾಡಿಕೊಂಡು ಹೋಗಲು ಅದೆಷ್ಟು ಬಗೆಯ ರೈಡ್ಸ್ ಇವೆ ಅಲ್ಲಿ! ಪುಟ್ಟ ಮಕ್ಕಳಿಗೆ ಸೂಕ್ತವಾದ ಇಟ್ಸ್ ಎ ಸ್ಮಾಲ್ ವರ್ಲ್ಡ್ ಆಫ್ಟರ್ ಆಲ್ ಮುಂತಾದ ಸೌಮ್ಯವಾದ ಸವಾರಿಗಳು. ದೊಡ್ಡವರಿಗೆ ಹೆದರಿ ಹೃದಯವೇ ಬಾಯಿಗೆ ಬರುವಂತೆ ಮಾಡುವ ಸ್ಫೇಸ್ ಮೌಂಟನ್ನಿನಂಥ ಸವಾರಿಗಳು. ನನ್ನ ಸೋದರ ಸಂಬಂಧಿಯೊಬ್ಬನನ್ನು ಡಿಸ್ನಿಲಾಂಡಿಗೆ ಕರೆದುಕೊಂಡು ಹೋದಾಗ ನಾನು ಮಾಡಿದ ತಪ್ಪೆಂದರೆ ಅವನನ್ನು ಮೊದಲೇ ಸ್ಪೇಸ್ ಮೌಂಟನ್ ಸವಾರಿಗೆ ಕರೆದುಕೊಂಡು ಹೋಗಿದ್ದು. ಅದಕ್ಕೆ ಉದ್ದ ಕ್ಯೂ ಇರುತ್ತದೆ. ಕ್ಯೂನಲ್ಲಿ ನಿಂತಾಗ ಘೋಷಣೆಗಳು ಕೇಳುತ್ತಿರುತ್ತವೆ. ನಿಮ್ಮ ಹೃದಯ ದುರ್ಬಲವಾದರೆ ಸವಾರಿ ಮಾಡದಿರಿ. ನೀವು ಗರ್ಭಿಣಿಯಾದರೆ ಸವಾರಿ ಮಾಡಬೇಡಿ. ಇದನ್ನು ಕೇಳುತ್ತಲೇ ಎಷ್ಟೋ ಜನರಿಗೆ ಹೃದಯದಲ್ಲಿ ಅಳುಕು ಉಂಟಾಗುತ್ತದೆ. ಕೆಲವರು ಕ್ಯೂ ಬಿಟ್ಟು ಹೊರಡುತ್ತಾರೆ. ನಾನು ಮತ್ತು ಶ್ರೀಧರ್ ಸವಾರಿಯಲ್ಲಿ ಕೂತೆವು. ನಮ್ಮ ಸೀಟಿನಲ್ಲಿ ಕೂತಾಗ ನಮ್ಮನ್ನು ಭದ್ರವಾಗಿರಿಸಲು ಒಂದು ಅಡ್ಡಗೋಲು ಬಂದು ನಮ್ಮೆದುರಿಗೆ ಸೇರುತ್ತದೆ. ಮೊದಲು ಸೌಮ್ಯವಾಗಿಯೇ ಇರುವ ಸವಾರಿ ಕ್ರಮೇಣ ವೇಗ ಪಡೆದುಕೊಳ್ಳುತ್ತದೆ. ಸುತ್ತಲೂ ಕತ್ತಲು. ನಡುನಡುವೆ ಕಣ್ಣು ಕೋರೈಸುವ ಬೆಳಕು. ನಾವು ಯಾವುದೋ ವ್ಯೋಮಯಾತ್ರೆಗೆ ಹೊರಟಿದ್ದೇವೆ ಎಂಬ ಅನುಭವ. ಒಮ್ಮೆಲೇ ನಮ್ಮ ಸವಾರಿ ಮೇಲಿಂದ ಕೆಳಗೆ ಧುಮುಕಿ ನಮ್ಮ ಕರುಳೆಲ್ಲಾ ಹೊರಗೆ ಬಂದ ಅನುಭವ! ಭಯಮಿಶ್ರಿತ ಹರ್ಷದಿಂದ ಕೂಗಾಡುವ ಜನ. ಅದರಲ್ಲಿ ನಿಮ್ಮ ಧ್ವನಿಯೂ ಇರಬಹುದು. ಕೊನೆಗೂ ಸವಾರಿ ಮುಗಿದಾಗ ಆಬ್ಬ ಮುಗಿಯಿತಲ್ಲ ಎಂಬ ಸಮಾಧಾನ. ಶ್ರೀಧರ್ ಈ ಸವಾರಿಯನ್ನು ಅನುಭವಿಸಿದ ಮೇಲೆ ಮುಂದಿನ ಸವಾರಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸತೊಡಗಿದ. ಆಗ ಅವನನ್ನು ಇಟ್ಸ್ ಎ ಸ್ಮಾಲ್ ವರ್ಲ್ಡ್ ಸವಾರಿಗೆ ಕರೆದುಕೊಂಡು ಹೋದೆ. ನೀರಿನಲ್ಲಿ ಬಹಳ ಮೆತ್ತಗೆ ಸಾಗುವ ದೋಣಿವಿಹಾರ. ಸುತ್ತಲೂ ನಾವು ಓದಿದ ಯಕ್ಷಕಿನ್ನರ ಕಥೆಗಳ ಸಾಕ್ಷ್ಯಚಿತ್ರಗಳು. ಮಕ್ಕಳಿಗೆ ಪ್ರಿಯವಾಗುವ ಇಟ್ಸ್ ಎ ಸ್ಮಾಲ್ ವರ್ಲ್ಡ್ ಆಫ್ಟರ್ ಆಲ್ ಸಂಗೀತ. ಈ ಸವಾರಿಯಾದ ಮೇಲೆ ಶ್ರೀಧರ್ ಮತ್ತೆ ಚೇತರಿಸಿಕೊಂಡ!
ಎಪ್ಕಾಟ್ ಸೆಂಟರ್ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ರೋಚಕವಾಗಿ ಪರಿಚಯಿಸುವ ಪ್ರಯತ್ನ. ಅಲ್ಲೂ ಅನೇಕ ಸವಾರಿಗಳಿವೆ. ವಿಭಿನ್ನ ದೇಶಗಳಲ್ಲಿ ವಿಜ್ಞಾನದ.ಬೆಳವಣಿಗೆ ಕುರಿತು ಮಾಹಿತಿ ನೀಡುವ ಸವಾರಿಗಳಿವೆ. ಭಾರತವನ್ನು ಕಡೆಗಣಿಸಲಾಗಿದೆ ಎಂದು ನನಗೆ ಆಗ ಅನ್ನಿಸಿತು. ಈಚೆಗೆ ಧಾರವಾಡದಲ್ಲಿರುವ ಸೈನ್ಸ್ ಮ್ಯೂಸಿಯಮ್ಮಿಗೆ ಹೋದಾಗ ಬಹಳ ಸಂತೋಷವಾಯಿತು. ಇಲ್ಲಿ ಭಾರತದಲ್ಲಿ ನಡೆದ ಸಂಶೋಧನೆಗಳನ್ನು ಬಹಳ ಒಳ್ಳೆಯ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಈ ಮ್ಯೂಸಿಯಂ ಬಗ್ಗೆ ಬಹಳ ಜನರಿಗೆ ಗೊತ್ತಿರಲಾರದು. ಶಾಲಾ ಮಕ್ಕಳಿಗೆ ತೋರಿಸಲು ಬಹಳ ಉತ್ತಮ ಸ್ಥಳ.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ