ಪಾನ್ ಗೋಡೆ


ಪಾನ್ ಗೋಡೆ

ಈಗ ಹೇಗಿದೆಯೋ ಗೊತ್ತಿಲ್ಲ. ನಾನು ಐಐಟಿ ದೆಹಲಿ ಸೇರಿದಾಗ ನನಗೆ ಬಹಳ ಶಾಕ್ ಆಗಿದ್ದು ಆ ಗೋಡೆಯನ್ನು ನೋಡಿ.  ವಿವಿಧ ಡಿಪಾರ್ಟ್ಮೆಂಟ್ ಕಚೇರಿಗಳು ಇರುವ ಕಟ್ಟಡಕ್ಕೂ ಮತ್ತು ಆಡಳಿತ ವರ್ಗದವರು ಕೂಡುವ ಕಟ್ಟಡಕ್ಕೂ ನಡುವೆ ಒಂದು ಒಳದಾರಿ ಇತ್ತು.  ಮೊದಲನೇ ಮಹಡಿಯಲ್ಲಿದ್ದ ನಮ್ಮ ಡಿಪಾರ್ಟ್ಮೆಂಟ್ನಿಂದ ಈ ದಾರಿ ಬಳಸಿಕೊಂಡು ಹೋಗುವಾಗ ಡೀನ್ ಮುಂತಾದವರ ಕಚೇರಿಗಳು ಮೊದಲು ಸಿಕ್ಕುತ್ತಿದ್ದವು. ಅನಂತರ ಒಂದು ಓಣಿಯಂತಹ ದಾರಿ ಸಿಕ್ಕುತ್ತಿತ್ತು.  ಈ ಓಣಿಯನ್ನು ನಾನು ಮೊದಲ ಸಲ ನೋಡಿದಾಗ ನನಗೆ ಆಘಾತವೇ ಆಗಿತ್ತು. ಅಕ್ಕಪಕ್ಕದ ಗೋಡೆಗಳ ಮೇಲೆಲ್ಲಾ ಕೆಂಪು ಗುರುತುಗಳು. ಇವು ಪಾನ್ ಜಗಿದು ಉಗಿದ ಗುರುತುಗಳು ಎಂದು ನಂತರ ತಿಳಿಯಿತು.

ಪಾನ್ ಕಲೆಯ ಓಣಿಯನ್ನು ದಾಟಿ ಹೋದರೆ ಕಾರಕೂನರು ಕುಳಿತುಕೊಳ್ಳುವ ಕೋಣೆ ಸಿಕ್ಕುತ್ತಿತ್ತು. ಇಲ್ಲಿ ಹೋಗಬೇಕಾಗಿ ಬರುವ ಸಂದರ್ಭಗಳನ್ನು ನಾನು ದ್ವೇಷಿಸುತ್ತಿದ್ದೆ. ನಾನು ಹೋದಾಗ ನಮ್ಮ ಡಿಪಾರ್ಟ್ಮೆಂಟ್ ಕೆಲಸಗಳಿಗೆ ನಿಯುಕ್ತನಾಗಿದ್ದ ಕಾರಕೂನ ಬಹುತೇಕ ಸೀಟಿನ ಮೇಲೆ ಇರುತ್ತಲೇ ಇರಲಿಲ್ಲ. ಎಲ್ಲಿ ಎಂದರೆ ಚಾಯ್ ಪೇ ಗಯೇನ್ ಹೈನ್ ಜೀ ಎಂಬ ನಿರಾಳ ಉತ್ತರ ಸಿಕ್ಕುತ್ತಿತ್ತು. ನಾನು ಕಬ್ ಆಯೇಂಗೇ ಎಂದು ಮರುಪ್ರಶ್ನೆ ಕೇಳಿದೆನೋ ನನ್ನನ್ನು ಕೆಕ್ಕರಿಸಿ ನೋಡಿ ಅಬ್ ಚಾಯ್ ಪೇ ಗಯೇನ್ ಹೈನ್ ಆತೇ ಹೋಂಗೆ ಎಂಬ ಪ್ರತ್ಯುತ್ತರ ಸಿಕ್ಕುತ್ತಿತ್ತು.  ಈ ಕಾರಕೂನರಿಗೆ ಟೀಚಿಂಗ್ ಸ್ಟಾಫ್ ಎಂದರೆ ಅಸಹನೆ ಇತ್ತು. ಏನಾದರೂ ಮಾಡಿ ಅವರನ್ನು ಪೀಡಿಸುವುದು ಕಾರಕೂನರ ಹವ್ಯಾಸವಾಗಿತ್ತು. 

ಎಲ್ಲಕ್ಕಿಂತ ಕಷ್ಟವೆಂದರೆ ಪ್ರವಾಸ ಭತ್ಯೆಯನ್ನು ಮರಳಿ ಪಡೆಯುವುದು. ನಾನು ಈ ಜಂಜಾಟವೇ ಬೇಡ ಎಂದು ಒಮ್ಮೆಯೂ ಎಲ್ ಟಿ ಸಿ ಸ್ಕೀಮನ್ನು ಬಳಸಲೇ ಇಲ್ಲ. ಡಿಪಾರ್ಟ್ಮೆಂಟ್ ಕೆಲಸಕ್ಕೆ ಹೋದಾಗ ಮರಳಿಬಂದ ನಂತರ ಒಂದು ದೊಡ್ಡ ಫಾರ್ಮ್ ತುಂಬಬೇಕಿತ್ತು. ಆ ಫಾರ್ಮಿನ ಸೈಜ್ ನೋಡಿದರೆ ತಲೆನೋವು ಬರುವಂತಿತ್ತು. ಮನೆಯಿಂದ ಹೊರಟು ನಾವು ಮುಟ್ಟಬೇಕಾದ ಸ್ಥಳವನ್ನು ಹೋಗಿ ಮುಟ್ಟುವವರೆಗೂ ಬಳಸಿದ ಎಲ್ಲ ಪ್ರವಾಸಾನು ಸಂಧಾನಗಳ ವಿವರಗಳನ್ನು ನೀಡಬೇಕು. ಆಟೋ, ಟ್ಯಾಕ್ಸಿ, ರೈಲು, ವಿಮಾನ ಇವುಗಳಷ್ಟೇ ಅಲ್ಲ ಅಲ್ಲಿ ಒಂಟೆ ಸವಾರಿಗೂ ಒಂದು ಸ್ಥಳವಿತ್ತು.  ಇದು ಬ್ರಿಟಿಷ್ ಆಡಳಿತದ ಉಳಿದ ವಾಸನೆ ಇರಬಹುದು.  ಯಾವ ಮಹಾನುಭಾವ ಒಂಟೆಯ ಮೇಲೆ ಹೋಗಿ ಐಐಟಿ ಕೆಲಸ ಪೂರೈಸಿಕೊಂಡು ಬಂದನೋ ಅವನನ್ನು ಸಂತುಷ್ಟಗೊಳಿಸಲು ಇಂಥದೊಂದು ಸಾಲನ್ನು ಸೇರಿಸಿ ಎಲ್ಲರಿಗೂ ಉಪಕಾರ ಮಾಡಿದ್ದಾರೆ. ಈಗಲಾದರೂ ಈ ವೈಪರೀತ್ಯಗಳು ಹೋಗಿರಬಹುದು ಎಂದು ನನ್ನ ದೂರದ ಆಸೆ. 

ಆಗತಾನೇ ಖಾಸಗಿ ವಿಮಾನಸಂಸ್ಥೆಗಳು ಭಾರತದಲ್ಲಿ ಹುಟ್ಟಿಕೊಳ್ಳುಟ್ಟಿದ್ದವು.  ವಿಮಾನ ಪ್ರಯಾಣ ಕೇವಲ ಅಸೋಸಿಯೇಟ್ ಪ್ರೊಫೆಸರ್ ಮತ್ತು ಅವರ ಮೇಲ್ದರ್ಜೆಯವರಿಗೆ ಎಂಬ ವಿಚಿತ್ರ ನಿಯಮ ಇತ್ತು.  ಅಸಿಸ್ಟೆಂಟ್ ಪ್ರೊಫೆಸರ್ ಆದಾಗ ಟೂ ಟಯರ್ ಏಸಿ ರೈಲು ಪ್ರಯಾಣದಲ್ಲಿ ಈಗಾಗಲೇ ಟೂ ಟೈರ್ಡ್ ಆಗಿದ್ದ ನಾನು
ಅಸೋಸಿಯೇಟ್ ದರ್ಜೆಗೆ ಬಡ್ತಿ ಹೊಂದಿದ ಹೊಸತರಲ್ಲಿ ಆಗ ಚಾಲ್ತಿಯ್ಲಿದ್ದ ಸಹಾರಾ ಏರ್ ಲೈನ್ಸ್ ವಿಮಾನದಲ್ಲಿ ಒಮ್ಮೆ ಪ್ರಯಾಣ ಮಾಡಿದೆ.  ನಾನು ತುಂಬಿಸಿದ ಉದ್ದ ಫಾರ್ಮ್ ಅನ್ನು ಕಾರಕೂನ ಹಿಂದಕ್ಕೆ ಕಳಿಸಿದ. ನಮ್ಮ ಕೆಲಸಗಳ ನಡುವೆ ಈ ಕಾರಕೂನ ಮಹಾಶಯನನ್ನು ಹೋಗಿ ನೋಡುವುದು ಅಷ್ಟೇನೂ ಸುಲಭವಲ್ಲ. ಇಷ್ಟಕ್ಕೂ ಆತ ಸೀಟ್ ಮೇಲೆ ಸಿಕ್ಕಬೇಕಲ್ಲ.  ಕೊನೆಗೂ ಒಮ್ಮೆ ಭೇಟಿ ಆಯಿತು.

ನಾನು: ಇದನ್ನು ಯಾಕೆ ಹಿಂದಿರುಗಿಸಿದ್ದೀರಿ?

ಕಾರಕೂನ: (ಪಾನ್ ಜಗಿಯುತ್ತಾ) ಬರೆದಿದ್ದೀನಲ್ಲ ಡಾಕ್ಟರ್ ಸಾಬ್?

ಬಹಳ ಪುಟ್ಟ ಕೆಂಪು ಗುರುತನ್ನು ನಾನು ಗಮನಿಸಿ: ಓಹ್! ಇದೇನು? ಇಲ್ಲಿ ಏನಿದೆ ತೊಂದರೆ?

ಕಾರಕೂನ: (ತುಟಿಯ ಅಂಚಿನಲ್ಲೇ ನಗುತ್ತಾ) ಡಾಕ್ಟರ್ ಸಾಬ್, ನೀವು ಪ್ರೈವೇಟ್ ಏರ್ ಲೈನ್ಸ್ ಬಳಸಿದ್ದೀರಿ.  ನಾಟ್ ಅಲೋಡ್ ಆಸ್ ಪರ್ ರೂಲ್ಸ್.

ನಾನು: (ಅವಾಕ್ಕಾದರೂ ಸಾವರಿಸಿಕೊಂಡು) ಪ್ರೈವೇಟ್ ಏರ್ ಲೈನ್ಸ್ ಇರಲೇ ಇಲ್ಲ. ಈ ರೂಲ್ ಯಾವಾಗ ಪ್ರಾರಂಭ ಆಯಿತು?

ಕಾರಕೂನ: ಡಾಕ್ಟರ್ ಸಾಬ್ ಐಐಟಿ ಸರಕಾರಿ ಸಂಸ್ಥೆ.  ಸರಕಾರಿ ಸೇವೆಗಳನ್ನು ಬಳಸಬೇಕು.

ನಾನು: ಆದರೆ ಈ ಬಗ್ಗೆ ಯಾವ ರೂಲ್ ಇದೆ? ತೋರಿಸಿ.

ಕಾರಕೂನನ ಪಕ್ಕದಲ್ಲಿದ್ದ ಇತರರು: ಅದು ಹಾಗೇ ಡಾಕ್ಟರ್ ಸಾಬ್. ಪ್ರೈವೇಟ್ ಏರ್ ಲೈನ್ಸ್ ನಾಟ್ ಅಲೋಡ್.

ಮಾತಾಡಿ ಏನೂ ಪ್ರಯೋಜನವಿಲ್ಲ ಎಂದು ನನಗೆ ಈಗಾಗಲೇ ಅನುಭವಕ್ಕೆ ಬಂದಿತ್ತು. 

ನಾನು: ಈಗ ಏನು ಮಾಡು ಅಂತೀರಾ?

ಕಾರಕೂನ: (ಹಾಗೆ ಬನ್ನಿ ದಾರಿಗೆ ಎನ್ನುವ ಧಾಟಿಯಲ್ಲಿ)  ಟೂ ಟಯರ್ ಏಸಿ ದರವನ್ನು ಪಾಸ್ ಮಾಡುತ್ತೇನೆ. ಕೊಡಿ ಇಲ್ಲಿ ಫಾರ್ಮ್.

ನನ್ನ ಟಯರ್ ಇನ್ನೂ ಏಸಿ ಟೂ ಟಯರ್ ದರ್ಜೆಯಿಂದ ಮೇಲೇರಲು ತಯಾರ್ ಇರಲಿಲ್ಲ. ನಾನು ಮುಂದೆ ಪ್ರೊಫೆಸರ್ ಆದಮೇಲೂ ನನಗೆ ನೆನಪಿರುವಂತೆ  ವಿಮಾನ ಪ್ರಯಾಣದ ರೀ ಇಂಬರ್ಸ್ಮೆಂಟ್ ಪಡೆಯಲೇ ಇಲ್ಲ.

ನಾನು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತ ಹೊರಟೆ. ಸಣ್ಣ ಓಣಿಯಂಥ ದಾರಿಯಲ್ಲಿ ಹೋಗುವಾಗ ಗೋಡೆಯ ಮೇಲೆ ನೋಡಿದೆ.  ಪಾನ್ ಕಲೆಗಳು ನನ್ನನ್ನು ಅಣಕಿಸಿದವು.  ನಾನೇನಾದರೂ ಪಾನ್ ಅಗಿಯುತ್ತಿದ್ದರೆ ಗೋಡೆಯ ಮೇಲೆ ಉಗುಳುತ್ತಿದ್ದೆನೋ ಏನೋ! ಈ ಕಲೆಗಳು ಹೇಗೆ ಮೂಡಿರಬಹುದು ಎಂಬ ಒಂದು ಹೊಳಹು ಮನಸ್ಸಿನಲ್ಲಿ ಹಾದುಹೋಯಿತು.

ಇಂದು ಬಹುಶಃ ಎಲ್ಲ ಕಚೇರಿಗಳಲ್ಲೂ ಇ-ಆಡಳಿತ ಬಂದಿದೆ.   ಆದರೆ ಮನೋಭಾವ ಬದಲಾಗಿದೆ ಎಂದು ಹೇಳಲಾರೆ. ಈಗಂತೂ ಆನ್ಲೈನ್ ಫಾರ್ಮುಗಳನ್ನು ಹುಡುಕಿ ತುಂಬುವುದೇ ಒಂದು ಸಾಹಸ. ಅದೆಷ್ಟು ಸಲ ಲಾಗಿನ್. ಅದೆಷ್ಟು ಸಲ ಪಾಸ್ ವರ್ಡ್ ತುಂಬುವುದು! ಅದೆಷ್ಟು ಸಲ ಕ್ಯಾಪ್ಚ ಕೋಡನ್ನು ತುಂಬಿಸುವುದು! ನೀವು ನಂಬುತ್ತೀರೋ ಇಲ್ಲವೋ ಈ ಕ್ತಾಪ್ಚ ಕೋಡ್ ಕೂಡಾ ನನಗೆ ಕೈ ಕೊಡುತ್ತದೆ. ತೆರೆಯ ಮೇಲೆ ಇದ್ದಿದ್ದನ್ನೇ ತುಂಬಿಸಿದ ಮೇಲೂ ಮತ್ತೊಂದು ಕ್ಯಾಪ್ಚ ಹಲ್ಲು ಕಿರಿಯುತ್ತದೆ.  ಸದ್ಯ ನಾನು ಪಾನ್ ಜಗಿಯುವುದಿಲ್ಲ ಎಂಬ ಕಾರಣದಿಂದ ನನ್ನ ಕಂಪ್ಯೂಟರ್ ಸ್ಕ್ರೀನ್ ಉಳಿದುಕೊಂಡಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)