ಏಕಾಕಿ

ಮೂಲ ಕವಿತೆ: ಎಲ್ಲಾ ವ್ಹೀಲರ್ ವಿಲ್ ಕಾಕ್ಸ್ ಅನುವಾದ: ಸಿ ಪಿ ರವಿಕುಮಾರ್ ನೀನು ನಕ್ಕರೆ ನಗುವುದು ಜೊತೆಗೆ ಜಗತ್ತು, ಅತ್ತರೆ ನೀನು ಅಳಬೇಕು ಏಕಾಂಗಿಯಾಗಿ. ಕಷ್ಟಗಳು ಸಾಕಷ್ಟಿವೆ ಜಗತ್ತಿನಲ್ಲಿ ಹೀಗಾಗಿ ಹೀರುವುದದು ಸಂತಸವನ್ನು ಬಿಡದೆ ತೊಟ್ಟೂ. ನೀನು ಹಾಡಿದರೆ ಬೆಟ್ಟಗಳೂ ಹಾಡುತ್ತವೆ ಜೊತೆಗೆ, ಗಾಳಿಯಲ್ಲಿ ಕಳೆದುಹೋಗುವುದು ನಿನ್ನ ನಿಟ್ಟುಸಿರು. ಪ್ರತಿಧ್ವನಿ ಉಕ್ಕುವುದು ನಗುಮೊಗದ ಕತೆಗೆ, ಗೋಳುಕತೆಗೆ ಮೌನವೇ ಏಕೈಕ ಶ್ರೋತೃ. ಸಂಭ್ರಮಿಸಿದಾಗ ಜನ ಬರುವರು ಹುಡುಕುತ್ತ, ಮರಳುವರು ನೀನು ಬಿಕ್ಕಿದರೆ ಅತ್ತು. ಬೇಕು ಎಲ್ಲರಿಗೂ ನಿನ್ನ ಸುಖದ ಪೂರ್ಣ ಮೊತ್ತ, ಯಾರಿಗೂ ಬೇಡ ನಿನ್ನ ದುಃಖ ಕಿಂಚಿತ್ತೂ. ನಗುತ್ತಿದ್ದರೆ ನಿನಗೆ ನೂರಾರು ಗೆಳೆಯರು, ಅತ್ತಾಗ ನಿಲ್ಲುವುದಿಲ್ಲ ಯಾರೂ ಒಂದು ನಿಮಿಷ. ಬೇಡ ಎನ್ನುವುದಿಲ್ಲ ನೀನಿತ್ತ ಸಿಹಿ ಜೇನು ಯಾರೂ, ನೀನೇ ಕುಡಿಯಬೇಕು ಜೀವನದ ಕಹಿವಿಷ. ಜನ ಹುಡುಕಿ ಬರುವರು ಏರ್ಪಡಿಸಿದರೆ ಔತಣಕೂಟ, ಯಾರೂ ನೋಡುವುದಿಲ್ಲ ಹಿಡಿದಾಗ ಉಪವಾಸ ವೃತ. ವಿಜಯಿಯಾಗಿ ನೀಡು ಕೊಡುಗೆ, ಜೀವಿಸಲು ಇದು ಮಾರ್ಗ, ಯಾರೂ ಜೊತೆ ಬರುವುದಿಲ್ಲ ನೀನು ಎಲ್ಲಾ ಬಿಟ್ಟು ಹೊರಟಾಗ. ಬೃಹತ್ ಬಂಡಿಯೂ ಸಾಗುವಷ್ಟು ಸುಖದ ಹಾದಿಯ ಗಾತ್ರ, ನೋವಿನ ಇಕ್ಕಟ್ಟು ಓಣಿಯಲ್ಲಿ ಸಾಗಲು ಒಬ್ಬರಿಗೆ ಮಾತ್ರ