ವಸಂತಾಗಮನ

ಮೂಲ: ಷಾನ್ ಕಾರ್ಲ್ಸನ್

ಕನ್ನಡಕ್ಕೆ: ಸಿ ಪಿ ರವಿಕುಮಾರ್ 


ಕಿವಿಗೊಟ್ಟು ಕೇಳಿದರೆ ಬೆಳಗಿನ ಜಾವದ ಮಂಪರಿನಲ್ಲಿ
ಕೇಳುವುದು  ಅವಳ ತಂದೆ ಸ್ಕೈತ್ ಹಿಡಿದು ದಿವಸದ 
ಮೊದಲ ಹೊರೆಗಾಗಿ ಹುಲ್ಲು ಕೀಳುವ ಸದ್ದು. ಕೆಳಗಿಂದ ಮೇಲೆ
ಮತ್ತೆ ಮೇಲಿನಿಂದ ಕೆಳಗೆ ಏಕತಾನದಲ್ಲಿ  ಚಲಿಸುವ 
ಕತ್ತಿಯ ಕೂರಲಗಿಗೆ ಬೆದರಿ ಮೊಲ ಕಾಡುಕೋಳಿಗಳು 
ಓಡಿ ಹುದುಗಿಕೊಳ್ಳುವುದು ಹೊಲದ ಬದಿಯ ಪೊದೆಗಳಲ್ಲಿ.
ಅವನ ತೋಳುಗಳು ಬೀಸುವವು ಇಡೀ ದಿವಸ ರಭಸ ಗಸಗಸ.
ದಿಕ್ಕಾಪಾಲಾಗಿ ಚೆದುರುವ ಹೊಲದ ಹೆಗ್ಗಣಗಳ ಓಡಾಟದ
ಸದ್ದು ಕೇಳುವುದು. ಕಣ್ಣಿಗೆ ಕಾಣದಂತೆ ಎಲ್ಲೋ ಹುದುಗಿದ 
ಒಂದು ಕೋಗಿಲೆಯು ಆಗಾಗ ಕೂಗಿ ಕರೆಯುವುದು.
ಇನ್ನೂ ತೇವವಿರುವ ಮಣ್ಣಿನಲ್ಲಿ ಕಾಣುವುವು ಅಲ್ಲಲ್ಲಿ
ಕೋಗಿಲೆ ಹೂಗಳು. ನಸುಗೆಂಪು ಬಣ್ಣದ ಪುಟ್ಟ ದಳಗಳ
ಮೇಲೆ ಚಿನ್ನದ ಹುಡಿ ಮಿಂಚುವುದು.  ಹೂವಿನ ನಾಜೂಕು
ಕಡ್ಡಿಗಳನ್ನು ಕಿತ್ತು ಸಿಕ್ಕಿಸಿಕೊಳ್ಳುವಳು ಮುಡಿಗೆ
ಚಿನ್ನದ ಕಿರೀಟದಂತೆ ದಿನವಿಡೀ. ರಾತ್ರಿಯ ಕನಸಿನಲ್ಲೂ 
ಸುಳಿಯದು ಕ್ಷೀಣಿಸುತ್ತಾ ಈ ಹಾಡುಗಳೆಲ್ಲ ಒಂದು ದಿನ 
ಸ್ತಬ್ಧವಾಗಿಬಿಡುವವು ಎಂಬ ಯಾವ ಆಲೋಚನೆ.

(ಕೋಗಿಲೆ ಹೂ ಎಂಬುದು ಹೊಲಗಳಲ್ಲಿ ಬೆಳೆಸಿಕೊಳ್ಳುವ ಒಂದು ಬಗೆಯ ಹೂವಿನ ಸಸ್ಯ. ಈ ಹೂವುಗಳು ವಸಂತಾಗಮನದ ಸಮಯಕ್ಕೆ ಅರಳುವ ಕಾರಣ ಅವುಗಳಿಗೆ ಕೋಗಿಲೆ ಹೂಗಳು ಎಂಬ ಹೆಸರಿದೆ.)




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ