ನೀನು ಬಂದರೆ ಮೆತ್ತಗೆ

 ನೀನು ಬಂದರೆ ಮೆತ್ತಗೆ


ಮೂಲ : ಆಡ್ರೆ ಲಾರ್ಡ್

ಕನ್ನಡಕ್ಕೆ : ಸಿ ಪಿ ರವಿಕುಮಾರ್


ನೀನು ಬಂದರೆ ಹೆಜ್ಜೆ ಇಡುತ್ತ ಮೆತ್ತಗೆ
ಮರದಲ್ಲಿ ಗಾಳಿ ನುಸುಳಿ ಬರುವ ಹಾಗೆ
ನನಗೆ ಕೇಳುವುದೆಲ್ಲ ನಿನಗೂ ಕೇಳಿಸೀತು 
ಶೋಕವು ಕಂಡಿದ್ದೆಲ್ಲ ನಿನಗೂ ಕಂಡೀತು.

ನೀನು ಬಂದರೆ ಹೆಜ್ಜೆ ಇಡುತ್ತ ಹಗುರವಾಗಿ
ಹುಲ್ಲಿನ ಮೇಲೆ ಸುರಿವ ಮಂಜಿನ ಹಾಗೆ
ನಿನ್ನನ್ನು ಸಂತೋಷದಿಂದ ಸ್ವೀಕರಿಸುತ್ತೇನೆ
ಕೇಳದೇ ನಿನ್ನನ್ನು ಬೇರೇನೂ ಪ್ರಶ್ನೆ.

ಕೂಡಬಹುದು ನನ್ನ ಬಳಿ ನೀನು
ಉಸಿರಿನಂತೆ ನಿಶ್ಶಬ್ದವಾಗಿ.
ಸತ್ತು ಬಿದ್ದವರಿಗೆ ಮಾತ್ರ ಉಂಟು
ಸಾವನ್ನು ನೆನೆಸಿಕೊಳ್ಳುವ ಶಕ್ತಿ.

ನಾನು ಮೌನ ವಹಿಸುತ್ತೇನೆ ನೀನು ಬಂದಾಗ
ನಿನಗೆ ಚುಚ್ಚುವುದಿಲ್ಲ ಮಾತಿನ ಕಟಕಿ.
ಏಕೆ ಹೇಗೆಂದೆಲ್ಲ ಪ್ರಶ್ನಿಸುವುದಿಲ್ಲ ಈಗ.
ಏನು ಮಾಡುವೆಯೆಂದು ಕೇಳುವುದಿಲ್ಲ.

ನಾವು ಕುಳಿತಿರೋಣ  ಇಲ್ಲಿ ಮೌನವಾಗಿ
ಎರಡು ವಿಭಿನ್ನ ಸಂವತ್ಸರಗಳ ಕೆಳಗೆ.
ನಮ್ಮ ನಡುವಣ ಈ ಫಲವತ್ತಾದ ಮಣ್ಣು
ನಮ್ಮ ಕಣ್ಣೀರನ್ನು ಹೀರುವುದು ಒಳಗೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ