ನಾನು ತುಳಿಯದ ಹಾದಿ

ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್ 

ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 



(ಕವಿತೆ ಓದುವ ಮುನ್ನ ಒಂದು ಪೀಠಿಕೆ:
ನಮ್ಮ ಮುಂದೆ ಎಷ್ಟೋ ಸಂದರ್ಭಗಳಲ್ಲಿ ಕವಲು ಹಾದಿಗಳು ಎದುರಾಗುತ್ತವೆ.  ಎರಡೂ ಕವಲುಗಳಲ್ಲಿ ಒಮ್ಮೆಲೇ ಸಂಚರಿಸಲು ಸಾಧ್ಯವೇ? ಇನ್ನೂ ನಮ್ಮನ್ನು ನಾವೇ ಕ್ಲೋನ್ ಮಾಡಿಕೊಳ್ಳುವ ತಂತ್ರಜ್ಞಾನ ಸಿದ್ಧವಾಗಿಲ್ಲ! ನಿರ್ವಾಹವಿಲ್ಲದೆ ಯಾವುದಾದರೊಂದು ಹಾದಿಯನ್ನು ಹಿಡಿಯಲೇ ಬೇಕು. ಹಾಗೆ ಹಿಡಿದ ಕವಲು ದಾರಿ ನಮಗೆ ಸಿದ್ಧಿಸದೆ ನಾವು ಬ್ಯಾಕ್ ಟ್ರ್ಯಾಕ್ ಮಾಡಬೇಕಾಗಬಹುದು. ಆಗ ಮತ್ತೆ ಅದೇ ಕವಲಿಗೆ ಹಿಂದಿರುಗಬಹುದು - ಇದರ ಪ್ರಾಬಬಿಲಿಟಿ ಬಹಳ ಕಡಿಮೆ! ನಾವು ಏನು ಆಗುತ್ತೇವೊ  ಅದು ನಮ್ಮ ನಿರ್ಧಾರಗಳ ಮೇಲೆ ಅವಲಂಬಿಸುತ್ತದೆ. ರಾಬರ್ಟ್ ಫ್ರಾಸ್ಟ್ ಕವಿ ತನ್ನ ಜೀವನದಲ್ಲಿ ಇಂಥ ಕವಲನ್ನು ಎದುರಿಸಿರಬಹುದು.  ಆಗ ಅವನು ನಿರ್ಧಾರ ಕೈಗೊಳ್ಳಲು ಯಾವ ಮಾನದಂಡವನ್ನು ಉಪಯೋಗಿಸಿದ? ಬೇರೆಯವರು ಹೆಚ್ಚಾಗಿ ಬಳಸದ ಹಾದಿಯಲ್ಲಿ ಹೋಗವುದೇ ಒಳ್ಳೆಯದೆಂಬ ಹ್ಯೂರಿಸ್ಟಿಕ್ ಬಳಸಿ ನಿರ್ಧಾರವನ್ನು ಕೈಗೊಂಡೆ ಎಂದು ಕವಿ ನಮಗೆ ಹೇಳುತ್ತಾನೆ. ಈ ನಿರ್ಧಾರ ತನ್ನ ಜೀವನಪಥದ ವಿನ್ಯಾಸವನ್ನು ಬದಲಿಸಿತು ಎಂಬ ನಿರ್ಧಾರಕ್ಕೆ ಕವಿ ಬರುತ್ತಾನೆ.  ನೀವೂ ನಿಮ್ಮ ನಿರ್ಧಾರಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ!  ರಾಬರ್ಟ್ ಫ್ರಾಸ್ಟ್ ಹೇಳುವುದನ್ನು ನೀವು ಒಪ್ಪುತ್ತೀರಾ?)



ಕವಲಾಗಿದೆ ಕಾಡಿನಲ್ಲಿ ನಾನು ನಡೆದು ಬಂದ ದಾರಿ 
ಬಯಸಿದರೂ ಎರಡನ್ನೂ ಸವೆಸಲಾರೆ 
ಮಾಡಲೇ ಬೇಕು ಆಯ್ಕೆ, ಇರುವುದು ನಾನೊಬ್ಬನೇ! 
ವ್ಯಥೆಯಿಂದ ಸುಮ್ಮನೇ ನೋಡುತ್ತ ನಿಂತೆ 
ದೃಷ್ಟಿ ನಿಲುಕುವವರೆಗೆ ಹಾಗೇ ಬಹು ಹೊತ್ತು, 
ಹಿಡಿಯಲಾಗದ  ಮತ್ತೊಂದು ದಾರಿಯನ್ನು 

ನಿಡುಸುಯ್ದು ಹಿಡಿದೆ ಇನ್ನೊಂದು ಕವಲನ್ನು
ವ್ಯತ್ಯಾಸವೇನಿಲ್ಲ ಇದಕ್ಕೂ ಇನ್ನೊಂದಕ್ಕೂ 
ಸಮೃದ್ಧವಾಗಿದೆ ಈ ಹಾದಿಯಲ್ಲಿ ಹುಲ್ಲು 
ಕಾಲ್ತುಳಿತಕ್ಕೆ ಸಿಕ್ಕದೆ ಹರಡಿದೆ ಎಲ್ಲೆಲ್ಲೂ 
ಹುಲ್ಲು ಇಲ್ಲವೆಂದಿಲ್ಲ ಆ ಇನ್ನೊಂದು ಕವಲಲ್ಲಿ 
ಹೆಜ್ಜೆಗಳ ತುಳಿತಕ್ಕೆ ನಾಶವಾಗಿದೆ ಅಲ್ಲಲ್ಲಿ 

ಎರಡು ದಾರಿಗಳಲ್ಲೂ ಮುಂಜಾನೆ ಉದುರಿದ್ದ ಎಲೆಗಳಿವೆ 
ಜನರ ಕಾಲಿಗೆ ಸಿಕ್ಕಿ ಇನ್ನೂ ಕಪ್ಪಾಗದೆ 
ಮತ್ತೊಮ್ಮೆ ಎಂದಾದರೂ ಆ ದಾರಿಯಲಿ ಸಾಗುವೆನು 
ಎಂದು ನಿರ್ಧರಿಸಿ ಮುನ್ನಡಿಯನಿಟ್ಟರೂ 
ದಾರಿಗಳು ಕವಲಾಗಿ ಸಾಗಿದರೆ  ಹೀಗೆ 
ನನಗೆ ಸಂಶಯ ಇತ್ತ ಬರುವೆನೇ ಮತ್ತೆ?

ಮುಂದೊಂದು ದಿನ, ಎಷ್ಟೋ ಯುಗಗಳ ಅನಂತರ,
ನೆನೆಸಿಕೊಳ್ಳುವೆನೇನೋ ನಿಟ್ಟುಸಿರಿಟ್ಟು ನನ್ನ ನಿರ್ಧಾರ 
ಕಾಡಿನಲ್ಲಿ ಬೇರಾದವು ಎರಡು ಕಿರುದಾರಿ
ನಾ ಹಿಡಿದೆ ಮಂದಿ ಹೆಚ್ಚು ಬಳಸದೊಂದು ಹಾದಿ
ಎರಡು ಹಾದಿಗಳ ನಡುವೆ ಇದ್ದ ವ್ಯತ್ಯಾಸ 
ಬದಲಿಸಿತು ನನ್ನ ಜೀವನಪಥದ ವಿನ್ಯಾಸ

Kannada translation by C.P. Ravikumar of "The Road Not Taken" by Robert Frost

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)