ಮೊಬೈಲಿಣಿ!




ಹರಟೆ: ಸಿ.ಪಿ. ರವಿಕುಮಾರ್ 

ಇಂಥವರನ್ನು ನೀವು ಖಂಡಿತಾ ನೋಡಿರುತ್ತೀರ. ಬಸ್ ನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಪಕ್ಕದಲ್ಲಿ ಕುಳಿತು ಕೊಳ್ಳುತ್ತಾರೆ. ಟಿಕೆಟ್ ಕೊಳ್ಳಲು ಹಣ ಹೊರತೆಗೆಯುವ ಮುಂಚೆ ಮೊಬೈಲ್ ಫೋನ್ ಕೈಗೆತ್ತಿಕೊಳ್ಳುತ್ತಾರೆ.  ಚಕಚಕ ಸ್ಪೀಡ್ ಡಯಲ್ ಮಾಡಿ ಸುಖಾಸೀನರಾಗುತ್ತಾರೆ. ಮುಖದ ತುಂಬಾ ನಗೆ. ತಮ್ಮ ಸ್ನೇಹಿತನೋ ಸ್ನೇಹಿತೆಯೋ ಎದುರಿಗೇ ಇರುವಂತೆ ಕಲ್ಪನೆ.  ಅಕ್ಕಪಕ್ಕ ಇರುವವರ ಪರಿವೆ ಇಲ್ಲ. ಸಂಭಾಷಣೆ ಪ್ರಾರಂಭವಾದರೆ ಮುಗಿಯುವ ಸೂಚನೆಯೇ ತೋರುವುದಿಲ್ಲ.  ಇವರ ಸಂಭಾಷಣೆಗೆ ಇಂಥದೇ ಒಂದು ವಿಷಯ ಬೇಕು ಎಂದೂ ಇಲ್ಲ.

ಒಮ್ಮೆ ನನ್ನ ಪಕ್ಕದಲ್ಲೇ ಕುಳಿತಿದ್ದ ಒಬ್ಬ ಮೊಬೈಲಿಣಿ ತಾನು ತನ್ನ ಮದುವೆಗೆ ಕೊಂಡ ಸೀರೆಗಳನ್ನು ಕುರಿತು ಇಡೀ ಪ್ರಯಾಣದ ಉದ್ದಕ್ಕೂ ಮಾತಾಡಿದಳು.

"ಅಲ್ಲ, ಆ ಕಲರ್ ಅಲ್ಲ, ಒಂದು ಥರಾ ಹನಿ ಕಲರ್."

"..."

"ಉಹೂಂ. ಅದು ತೀರಾ ಡಾರ್ಕ್ ಆಯಿತು. ಇನ್ನೂ ಲೈಟಾಗಿದೆ. ಗೊತ್ತಾಯಿತಾ?"

"..."

ಬಣ್ಣದ ವಿವರವನ್ನೂ ಮಾತಿನ ಮಾಧ್ಯಮದಲ್ಲಿ ಬಿತ್ತರಿಸಬಹುದು ಎಂಬುದು ನನಗೆ ಆಗಲೇ ಗೊತ್ತಾಗಿದ್ದು. ಯಾವ ಕವಿಯೂ ಲೇಖಕನೂ  ಇಂಥದ್ದನ್ನು ಸಾಧಿಸಿರಲಾರ. ಮುಂದೆ ಸೀರೆಯ ಮೇಲಿರುವ ಜರಿ ಅಲಂಕಾರಗಳ ವಿವರಣೆ ನಡೆಯಿತು. ಮದುವೆಗೆ ಸುಮಾರು ಹತ್ತು ಸೀರೆಗಳನ್ನಾದರೂ ಆಕೆ ಖರೀದಿ ಮಾಡಿದ್ದಳೆಂದು ತೋರುತ್ತದೆ. ಮೊದಮೊದಲು ನಾನು ನನ್ನ ಕೈಯಲ್ಲಿದ್ದ ಪುಸ್ತಕವನ್ನು ಓದಲು ಪ್ರಯತ್ನಿಸಿದೆ. ಇಲ್ಲ! ಮದುವೆ ಸೀರೆ ಜಾಹೀರಾತು ನನ್ನನ್ನು ಓದಲು ಬಿಡಲಿಲ್ಲ!

ನಾನು ಮನೆಗೆ ಬಂದು ನನ್ನ ಹೆಂಡತಿಯ ಹತ್ತಿರ ಇದನ್ನು ಹೇಳಿಕೊಂಡೆ. ನನಗೆ ಸಹಾನುಭೂತಿ ಸಿಕ್ಕಬಹುದು ಎಂಬ ನನ್ನ ಊಹೆ ತಪ್ಪಾಯಿತು. "ಅವಳ ಸೀರೆ ವಿವರ ನಿಮಗೆ ನೆನಪಿದೆಯೇ?" ಎಂದು ನನ್ನ ಹೆಂಡತಿ ಕುತೂಹಲ ವ್ಯಕ್ತ ಪಡಿಸಿದಳು! ನಾನು ರೇಗಿದ್ದಕ್ಕೆ "ನೀವು ಬಿಡಿ! ಹುಡುಗಿಯರಿಗೆ ಅವರ ಮದುವೆ ಸೀರೆ ಅಂದರೆ ಹಾಗೆ ಇರುತ್ತೆ ಅಭಿಮಾನ. ಅಂದಹಾಗೆ ಹನಿ ಕಲರ್ ಸೀರೆ ನನ್ನ ಹತ್ತಿರ ಇಲ್ಲ!" ಎಂದಳು.

ಇನ್ನೊಮ್ಮೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ವಾಯುವಜ್ರವನ್ನು ಒಮ್ಮೆ ಪ್ರಯೋಗಿಸುವ ಹುಮ್ಮಸ್ಸಿನಿಂದ ಹೊರಟೆ. ನನ್ನ ಪಕ್ಕದಲ್ಲಿ ಮತ್ತು ನನ್ನ ಹಿಂದಿನ ಸೀಟಿನಲ್ಲಿ ಎರಡರಲ್ಲೂ ಆಸೀನರಾಗಿದ್ದರು ಕಾಲ್-ಭೈರವಿಯರು. ಇಬ್ಬರೂ ಇಪ್ಪತ್ತರ ಹರೆಯದ ತರುಣಿಯರು.

ಹಿಂದಿನ ಸೀಟಿನ ಮಹಾ-Call-ಇ ಗೆ ದೇವರು ಒಳ್ಳೆಯ ಕಂಚಿನ ಕಂಠವನ್ನೇ ದಯಪಾಲಿಸಿದ್ದಾನೆ. ಅವಳು ಹಿಂದಿಯಲ್ಲಿ ಸಂಭಾಷಣೆ ಪ್ರಾರಂಭಿಸಿಯೇ ಬಿಟ್ಟಳು.  ದುರದೃಷ್ಟವಶಾತ್ ನನಗೆ ಭಾಷೆ ಹಿಂದಿ ತಿಳಿಯುತ್ತದೆ.  ಹೀಗಾಗಿ ನನಗೆ ಅವಳು ತನ್ನ ಬಾಸ್ ಜೊತೆ ನಡೆಸುತ್ತಿದ್ದ ಸಲ್ಲಾಪವನ್ನು ಕೇಳುವ ದುರವಕಾಶ ದೊರೆಯಿತು.  "ಹೋಗಿ ಸರ್, ನೀವಂತೂ!" ಇತ್ಯಾದಿ ಸರಸಗಳನ್ನೂ ಅವಳು ಬಾಸ್ ಜೊತೆಗೆ ಸುತ್ತಲೂ ಇದ್ದವರಿಗೂ ಧಾರಾಳವಾಗಿ ಹಂಚಿದಳು.  ಬಸ್ ಹತ್ತಾರು ಕಡೆ ನಿಂತಿತು, ಹೊರಟಿತು. ಇವಳ ಸಂಭಾಷಣೆ ಮಾತ್ರ ನಿಲ್ಲದೆ ಓಡುತ್ತಲೇ ಇತ್ತು.  ಒಮ್ಮೆ ಇದ್ದಕ್ಕಿದ್ದ ಹಾಗೇ ಇವಳ ಸಂಭಾಷಣೆ ನಿಂತಿತು. ಅಬ್ಬಾ! ಎಂದು ನಾನು ನಿಟ್ಟುಸಿರು ಬಿಡುವಷ್ಟರಲ್ಲಿ, "ಸಾರಿ ಸರ್. ಕಾಲ್ ಕಟ್ಟಾಗಿ ಹೋಯಿತು!" ಎಂದು ಅವಳು ಪುನರಾರಂಭಿಸಿದಳು.  ಮಾತು ಮಾತಿನಲ್ಲಿ ಅವಳು "ಸರ್, ನೋಡಿ, ಆ ಕಸ್ಟಮರ್ ನನ್ನ ಜೊತೆ ಲೋಕಲ್ ಲ್ಯಾಂಗ್ವೇಜ್ ನಲ್ಲಿ ಮಾತಾಡೋದಕ್ಕೆ ಬಂದ! ಹೀಗೆಲ್ಲಾದರೂ ಕೇಳಿದ್ದೀರಾ?" ಎಂದು ದೊಡ್ಡದಾಗಿ ನಕ್ಕಳು.

ನನಗೆ ಅವತ್ತು ಯಾಕೋ ತಾಳ್ಮೆ ಕಡಿಮೆಯಾಗಿತ್ತು.  ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ವಿಮಾನ ಹಿಡಿದು ಬೇರೆ ಊರಿಗೆ ಪ್ರಯಾಣ ಮಾಡಿ ರಾತ್ರಿ ಮನೆಗೆ ಹಿಂದಿರುಗುತ್ತಿದ್ದೆ. ಈಕೆಯ ವಾಗ್ಝರಿಯನ್ನು ಕೊನೆಗೆ ತಡೆಯಲಾರದೆ ಹೋದೆ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ಎಂದು ಉದಾರವಾಗಿ ಉಪದೇಶ ನೀಡಿದ ಬಸವಣ್ಣನೂ ಇಂದು ಇರುತ್ತಿದ್ದರೆ ಈ ಡೊಂಕನ್ನು ಖಂಡಿತಾ ಸಹಿಸುತ್ತಿರಲಿಲ್ಲ ಎನ್ನಿಸಿತು.  ಹಿಂದಕ್ಕೆ ತಿರುಗಿ  "ಮೇಡಂ, ಸ್ವಲ್ಪ ರೆಸ್ಟ್ ತೆಗೆದುಕೊಳ್ಳಿ," ಎಂದೆ.  ಆಕೆಯ ಪಕ್ಕದಲ್ಲಿ ಕುಳಿತಿದ್ದ ಒಬ್ಬ ವಯಸ್ಕರು ನನ್ನ ಕಡೆ ಕೃತಜ್ಞತೆಯಿಂದ ನೋಡಿದರು! ಅವಳಿಗೆ ಏನೆನ್ನಿಸಿತೋ, ನನ್ನ ಕಡೆ ಸ್ವಲ್ಪ ದುರುಗುಟ್ಟಿ ನೋಡಿ ಮೊಬೈಲ್ ಒಳಗಿಟ್ಟಳು.

"ಅಬ್ಬಾ!" ಎಂದು ನಾನು ನಿಟ್ಟುಸಿರು ಬಿಟ್ಟೆ. ಆದರೆ ನನ್ನ ದುರದೃಷ್ಟ! ನನ್ನ ಪಕ್ಕದಲ್ಲಿದ್ದ ಮೊಬೈಲಿಣಿಗೆ ಆಗಲೇ ಕರೆ ಬರಬೇಕೆ?

ಕಾಲ್-ಆಯಾ! ತಸ್ಮೈ ನಮಃ!

ಆಕೆ ಲಗುಬಗೆಯಿಂದ ಕಾಲ್ ತೆಗೆದುಕೊಂಡಳು. ಅವಳ ಸ್ನೇಹಿತನ ಜೊತೆ ಪ್ರೇಮ  ಸಂಭಾಷಣೆ ಅವ್ಯಾಹತವಾಗಿ ನಡೆಯಿತು. ಇದನ್ನು ಕೇಳಿದ ಹಿಂದಿನ ಸೀಟಿನ ಕಾಲಿಣಿಗೆ ಉತ್ತೇಜನ ದೊರೆಯಿತು! ಆಕೆ ಯಾರನ್ನೂ ಲೆಕ್ಕಿಸದೆ "ಸಾರಿ ಸರ್, ಕಾಲ್ ಕಟ್ಟಾಗಿ ಹೋಯಿತು," ಎಂದು ಮತ್ತೆ ಪ್ರಾರಂಭಿಸಿದಳು!

ಅಂದಿನಿಂದ ನಾನು ವಾಯುವಜ್ರ ಎಂದರೆ ಹೆದರುತ್ತೇನೆ. ವಾಯುವಿನ ಮೂಲಕ ತರಂಗರೂಪದಲ್ಲಿ ವಾಕ್-ಯುದ್ಧವನ್ನೇ ಸಾರಬಲ್ಲ ವಜ್ರಾಯುಧವನ್ನು ಯಾರು ಕಂಡುಹಿಡಿದರೋ ಎಂದು ಮನಸಾರ ಶಪಿಸುತ್ತೇನೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)