ಡೇರೆ ಹೂಗಳು

ಕವಿತೆ ಓದುವ ಮುನ್ನ ... 




ವಿಲಿಯಂ ವರ್ಡ್ಸ್ ವರ್ತ್ ಒಬ್ಬ ನಿಸರ್ಗಪ್ರಿಯ ಕವಿ. ಪ್ರಕೃತಿಯ ದೃಶ್ಯದಲ್ಲಿ ಅನಾದೃಶವಾದ ದರ್ಶನವನ್ನು ಕಂಡುಕೊಳ್ಳುವುದು ರೊಮ್ಯಾಂಟಿಕ್ ಕವಿಗಳ ಪ್ರಥೆ. ಕನ್ನಡದಲ್ಲಿ ರೊಮ್ಯಾಂಟಿಕ್ ಕಾವ್ಯ ಮಾರ್ಗದಲ್ಲಿ ಬರೆದ ಕುವೆಂಪು ಬೆಳ್ಳಕ್ಕಿಗಳ ಸಾಲನ್ನು ನೋಡಿ ಅದರಲ್ಲಿ ದೇವರ ರುಜುವನ್ನು ಕಾಣುತ್ತಾರೆ.


ವರ್ಡ್ಸ್ ವರ್ತ್ ಕವಿಯ ಡ್ಯಾಫೊಡಿಲ್ಸ್ ಕವಿತೆಯನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸುವುದು ಸಾಮಾನ್ಯ. ಡ್ಯಾಫೊಡಿಲ್ಸ್ ಎಂದರೆ ಡೇರೆ ಹೂವಲ್ಲ - ಆದರೆ ಅನುವಾದದ ಅನುಕೂಲಕ್ಕೆ ನಾನು ಅದನ್ನು ಡೇರೆ ಹೂವು ಎಂದು ಭಾವಿಸಿದ್ದೇನೆ. ಈ ಕವಿತೆಯಲ್ಲಿ ಕವಿ ನಿಸರ್ಗದ ಸುಂದರ ಸೃಷ್ಟಿ ನಮಗೆ ಹೇಗೆ ಸಾಂತ್ವನ ನೀಡಬಲ್ಲದು ಎಂಬುದನ್ನು ಕುರಿತಾಗಿ ಬರೆದಿದ್ದಾನೆ.


ಸೋಷಿಯಲ್ ಮೀಡಿಯಾ ಬಳಸುವ ಎಲ್ಲರೂ ಆಗಾಗ ತಮಗೆ ಕಂಡ ಯಾವುದಾದರೂ ಪ್ರಾಣಿ, ಹೂವು, ಬೆಟ್ಟ, ಗುಡ್ಡ ಮೊದಲಾದ ನೈಸರ್ಗಿಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವರ್ಡ್ಸ್ ವರ್ತ್ ಕಾಲದಲ್ಲಿ ಹೀಗೆ ಚಿತ್ರಗಳನ್ನು ತೆಗೆಯುವುದಾಗಲಿ, ಬೇರೆಯವರೊಂದಿಗೆ ಹಂಚಿಕೊಳ್ಳುವುದಾಗಲಿ ಸಾಧ್ಯವಿರಲಿಲ್ಲ! ತಾನು ಕಂಡ ಸುಂದರ ದೃಶ್ಯವನ್ನು ತನ್ನ ನೆನಪಿನ ಕೋಶದಲ್ಲಿ ಹಿಡಿದಿಟ್ಟುಕೊಳ್ಳುವುದು ಮಾತ್ರ ಸಾಧ್ಯವಾಗಿತ್ತು. ಏಕಾಂತದಲ್ಲಿ ಖಾಲಿತನವನ್ನು ಅನುಭವಿಸುವಾಗ ಇಂಥ ದೃಶ್ಯಗಳೇ ನೆರವಿಗೆ ಬರುತ್ತವೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ. ಇದೇ ವರ್ಡ್ಸ್ ವರ್ತ್ "ದ ವರ್ಲ್ಡ್ ಈಸ್ ಟೂ ಮಚ್ ವಿತ್ ಅಸ್" (ನಮ್ಮ ಸುತ್ತಲೂ ವಿಪರೀತವಾಗಿದೆ ಇಹದ ವ್ಯಾಪಾರ) ಎಂದು ಕೊರಗುತ್ತಾನೆ! ಪಾಪ, ಸೋಷಿಯಲ್ ಮೀಡಿಯಾ ಕಾಲದಲ್ಲಿ ಅವನು ಇದ್ದಿದ್ದರೆ ಏನು ಮಾಡುತ್ತಿದ್ದನೋ!

ಡೇರೆ ಹೂಗಳು

ಮೂಲ ಇಂಗ್ಲಿಷ್ ಕವಿತೆ: ವಿಲಿಯಂ ವರ್ಡ್ಸ್ ವರ್ತ್ 

ಕನ್ನಡ ಅನುವಾದ : ಸಿ. ಪಿ. ರವಿಕುಮಾರ್ 


ಸಾಲು ಬೆಟ್ಟದ ಮೇಲೆ ತೇಲುತ್ತ ಸಾಗುತಿಹ
ಬೆಳ್ಳಿಮೋಡದ ಹಾಗೆ ಒಬ್ಬಂಟಿ ಅಲೆಯುತ್ತ
ಬರುತಿರಲು ಒಂದುದಿನ ನನ್ನ ಕಣ್ಣಿಗೆ ಬಿತ್ತು
ಕೆರೆಯ ಬದಿಯೊಳು ನೆರೆದ ಡೇರೆಗಳ ಗುಂಪು
ಮರದ ಸಾಲಿನ ಕೆಳಗೆ ಸುರಿದ ಚಿನ್ನದ ರಾಶಿ
ನರುಗಂಪು ಸೂಸುತ್ತಿವೆ ತಂಗಾಳಿ ಬೀಸಿ!


ಕ್ಷೀರಪಥದೊಳು ಮಿನುಗುತ್ತ ಹೊಳೆವುವೋ ಹೇಗೆ
ತಾರೆಗಳು, ಹೊಳೆಯುತ್ತಿವೆ ಡೇರೆಗಳು ಹಾಗೆ
ಹರಡಿಕೊಂಡಿವೆ ಕೆರೆಯ ದಡದ ಉದ್ದಕ್ಕೂ
ಮರೆಯಾಗದ ಸಾಲು ನೋಡಿದವು ಚಕ್ಷು!
ಹತ್ತು ಸಾವಿರವಾದರೂ ಇದ್ದೀತು ಸಂಖ್ಯೆ
ಕತ್ತು ಅಲ್ಲಾಡಿಸುತ್ತ ಮಂದಾನಿಲದ ಗಾನಕ್ಕೆ


ಕಿರಣ ಸ್ಪರ್ಶಕ್ಕೆ ಕುಣಿವ ನೀಲ ಅಲೆಗಳಿಗೆ
ಅರುಣವರ್ಣದ ತಂಡ ನೀಡುತಿದೆ ಸ್ಪರ್ಧೆ
ನವಿರೆಬ್ಬಿಸುವ ಇಂಥ ನಲಿವ ಸನ್ನಿಧಿಯಲ್ಲಿ
ನವಿಲಾಗಿ ನರ್ತಿಸದೆ ಕವಿಯ ಮನವರಳಿ?
ಹಾಗೇ ಒಂದು ಕ್ಷಣ ಕಣ್ಮುಚ್ಚಿ ಯೋಚಿಸಿದೆ
ಕೈಗೆ ದೊರಕಿತು  ಬಂದು ಎಂಥ ನಿಧಿ ನನಗೆ!


ಕೆಲವೊಮ್ಮೆ ಅಡ್ಡಾಗಿ ನನ್ನ ಮಂಚದ ಮೇಲೆ
ಖಾಲಿತನ ತುಂಬಿರಲು ದೃಷ್ಟಿಸುತ ಸೊನ್ನೆ
ಡೇರೆ ಹೂಗಳು ಕಂಡು ನನ್ನ ಒಳಗಣ್ಣಿಗೆ
ಮೇರೆ ತಿಳಿಯದು ನಲಿವು! ಏಕಾಂತದ ಘಳಿಗೆ
ಎದೆಯಲ್ಲಿ ತುಂಬುವುದು ಹರುಷ ತಾನಾಗೇ
ಪದವೆತ್ತಿ ಕುಣಿವುದೆದೆ  ಡೇರೆಗಳ ಜೊತೆಗೆ 
----


Kannada Translation by C.P. Ravikumar of "Daffodils" by William Wordsworth

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)