ಅದ್ಭುತ ವಿಜಯ






File:Malik E Maidan.jpg
ಸ್ಫೂರ್ತಿ: ರಾಬರ್ಟ್ ಸದೇ ಬರೆದ ಬ್ಯಾಟಲ್ ಆಫ್ ಬ್ಲೆನ್ ಹೈಮ್  ಎಂಬ ಇಂಗ್ಲಿಷ್ ಕವಿತೆ 

ಸಿ.ಪಿ. ರವಿಕುಮಾರ್ 


ಬೇಸಗೆಯ ಸಂಜೆ ನಂಜಪ್ಪ ಕುಳಿತಿದ್ದ 
ಮನೆ ಹೊರಗೆ  ಕೆಲಸ ಮುಗಿಸಿ 
ಮುಸ್ಸಂಜೆ ಬಿಸಿಲಲ್ಲಿ ಆಡುವ ಮೊಮ್ಮಕ್ಕಳು 
ನದಿಯ ಬಳಿ ಹರಡಿರುವ  ಮರಳ ರಾಶಿ

ರಾಜಣ್ಣನಿಗೆ ಸಿಕ್ಕಿ ಏನೋ ಗುಂಡಗಿನ  ವಸ್ತು 
ತಳ್ಳುತ್ತ ಬರುವುದನು ನೋಡಿ 
ಏನಜ್ಜ ಎಂದು ಬೆರಳು ಮಾಡಿದಳು ಲಕ್ಷ್ಮಿ 
ಅಣ್ಣ ಬರುತಿದ್ದ ಕಡೆಗೆ ಓಡಿ 

ಬೆಳ್ಳಗಿನ ನುಣುಪಾದ ಗೋಲವನು ಮೆಲ್ಲಗೆ 
ಎತ್ತಿಕೊಂಡನು ಅಜ್ಜ  ಕೈಯಲ್ಲಿ 
ನತದೃಷ್ಟ ಯಾರದೋ ತಲೆಬುರುಡೆ!
ಎಂದನು ತಲೆ ಕೊಡವಿ ನಿಟ್ಟುಸಿರು ಚೆಲ್ಲಿ 

ತೋಟದಲಿ ಗುದ್ದಲಿಗೆ, ಹೊಲದಲ್ಲಿ ನೇಗಿಲಿಗೆ 
ಆಗಾಗ ಸಿಗುವಂಥ ವಸ್ತು 
ದೊಡ್ಡಕಾಳಗದಲ್ಲಿ ಸತ್ತವರ ಕುರುಹುಗಳು 
ಎಷ್ಟು ಜನ ಸತ್ತರೋ, ಯಾರಿಗೆ ಗೊತ್ತು?  

ಕೆರಳಿತು ಮಕ್ಕಳ ಕುತೊಹಲ, ಕಥೆಯನ್ನು 
ಹೇಳಲೇಬೇಕೆಂದು ಗೋಗರೆದರು 
ಯಾರಲ್ಲಿ ನಡೆಯಿತು ಯುದ್ಧ? ಯಾವಾಗ?
ಯಾಕೆ ನಡೆಯಿತು? ನಮಗೆ ಹೇಳಲೇಬೇಕು

ತಾಳಿಕೋಟೆಯ ಯುದ್ಧ ಕೇಳಿಲ್ಲದವರಾರು 
ನೂರಾರು ವರ್ಷಗಳು  ಕಳೆದಿದ್ದರೂ 
ವಿಜಯನಗರ ಅರಸರನು ಸೋಲಿಸಿದರಂತೆ 
ದಕ್ಷಿಣದ ದೊಡ್ಡ ಸುಲ್ತಾನರು 

ನನ್ನ ಮರಿಮುತ್ತಜ್ಜ ಇದ್ದ ಸ್ಥಳ ಗೊತ್ತೇ?
ಬಿಜಾಪುರ ಹತ್ತಿರದ ತಾಳಿಕೋಟೆ 
ಬೆಂಕಿ ಬಿದ್ದಿತು ಅವನ ಮನೆಗೆ ಕಾಳಗದಲ್ಲಿ 
ಓಡಿ ಬಂದನು ಹೆಂಡತಿ-ಮಕ್ಕಳ ಜೊತೆಗೆ 

ಹೊತ್ತು ಉರಿಯಿತು ಊರು, ನೆತ್ತರ ಹೊಳೆ ಹರಿಯಿತು 
ನರಮೇಧ ನಡೆಯಿತಂತೆ ನಡುಹಗಲೂ ಇರುಳೂ 
ಸಾವಿರಾರು ಸಂಖ್ಯೆಯಲ್ಲಿ ಸಾವುಂಡರು ಯೋಧರು 
ಮಡಿದರಂತೆ ಹೆಂಗಸರು, ಗರ್ಭಿಣಿಯರು, ಮಕ್ಕಳು 

ಖಡ್ಗದಿಂದ ರಾಮರಾಯ ದೊರೆಯ ತಲೆ ಹಾರಿಸಿ 
ರುಂಡವನ್ನು ಊರಿನಲ್ಲಿ ಮಾಡಿ ಮೆರವಣಿಗೆ 
ಲೂಟಿ ನಡೆಯಿತಂತೆ ನಿಧಿಗೆ ತಿಂಗಳುಗಟ್ಟಲೆ 
ಇಂಥವೆಲ್ಲ ನಡೆಯುತ್ತವೆ ಯುದ್ಧದಲ್ಲಿ ಮಕ್ಕಳೇ! 

ಇಂಥವೆಲ್ಲ  ನಡೆಯುತ್ತವೆ ಯುದ್ಧದಲ್ಲಿ ಮಕ್ಕಳೇ!
ವಿಜಯ ಕಹಳೆ ಮೊಳಗಿದಾಗ ಎಲ್ಲಾ ಕಡೆ ಕತ್ತಲೆ 
ಸಾವಿರಾರು ಸಂಖ್ಯೆಯಲ್ಲಿ ಕೊಳೆಯುತಿದ್ದ ಶವಗಳು 
ಅಲೆಯುತಿದ್ದ ನಾಯಿ-ನರಿ, ಹಾರುತಿದ್ದ ಡೇಗೆ 

ಇಂಥವೆಲ್ಲ ನಡೆಯುತ್ತವೆ ಯುದ್ಧದಲ್ಲಿ ಮಕ್ಕಳೇ
ವಿಜಯಲಕ್ಷ್ಮಿ ಒಲಿವಳೇ ರಕ್ತ ಕೋಡಿ ಹರಿಯದೆ?
ಸುಲ್ತಾನರು ಗೆದ್ದಮೇಲೆ ಎಲ್ಲ ಶಾಂತವಾಯಿತು
ಈ ವಿಜಯದ ಸಾಕ್ಷಿಯಾಗಿ ಬಿಜಾಪುರವು ನಿಂತಿದೆ

"ಸಾವಿರಾರು ಸಾವು, ರಕ್ತ ಕೋಡಿಯಾಗಿ ಹರಿಯಿತೆ?
ಅಜ್ಜ ಇಂಥ ಹಾಳು ಯುದ್ಧ ಯಾರಿಗೆ ಬೇಕಾಗಿದೆ?"
ಅಲ್ಲ ಮಗಳೆ! ಮುಗ್ಧ ಹಸುಳೆ!
ಯುದ್ಧದಲ್ಲಿ ಇಂಥವೆಲ್ಲ ನಡೆದೇ ನಡೆಯುತ್ತದೆ!

ಸೋಲನುಂಡ ವಿಜಯನಗರ ಹಾಳಾಯಿತು ಕೊನೆಗೆ 
 ಬೀಳಾಯಿತು ವಿಜಯದ ನಗೆ ಮೆರೆಯುತಿದ್ದ ಹಂಪೆಗೆ 
 "ಯುದ್ಧದಿಂದ ಒಳ್ಳೆಯದೇನಾಯಿತು ಹೇಳಜ್ಜ" 
ಗೊತ್ತಿಲ್ಲ ಮಗು, ಒಟ್ಟಿನಲ್ಲಿ ಅದು ಅದ್ಭುತ  ವಿಜಯ


-------------

ಈ ಕವಿತೆಯಲ್ಲಿ ಬರುವ ತಾಳಿಕೋಟೆಯ ಯುದ್ಧವನ್ನು ಓದುಗ ಕೇವಲ ಸಾಂಕೇತಿಕವಾಗಿ ಸ್ವೀಕರಿಸಬೇಕು. ಕವಿತೆಯ ಸಂದರ್ಭಕ್ಕೆ ಯಾವುದೇ ಯುದ್ಧವಾಗಬಹುದು - ಎಲ್ಲ ಯುದ್ಧಗಳೂ ಅನಿಷ್ಟವೇ ಎಂಬುದು ಮೂಲ ಕವಿತೆಯ (ಹಾಗೂ ಈ ಭಾವಾನುವಾದದ) ಆಶಯ. 

Inspired by the English poem "The Battle of Blenheim" by Robert Southey

Photograph: Courtesy of  English Wikipedia entry on Battle of Talikota

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)