ನಿಶಾ ಭಿಕಾರಿಣಿ



ಮೂಲ ಹಿಂದಿ ಕವಿತೆ: ಗುಲ್ಜಾರ್ 
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 

ಒಂಟಿ ಬರುವಳು ನಿತ್ಯ ನಿಶಾ ಭಿಕಾರಿಣಿ ಪಾಪ! ಒಬ್ಬಂಟಿಯಾಗಿ ತೆರಳುವಳು
ಚಳಿಗೆ ನಡುಗುವ ಕಪ್ಪು ಕೈಗಳಲಿ ಹಿಡಿದು ಹೊಳೆವ ತಿಂಗಳ ಬಟ್ಟಲು

ಲಕ್ಷ ನಕ್ಷತ್ರಗಳ ವಜ್ರ ವೈಡೂರ್ಯ ತುಂಬಿರುವ ಕಪ್ಪು ಸೆರಗು
ಇಷ್ಟೆಲ್ಲ ಇದ್ದರೂ ಏನು ಬೇಡುತ್ತಿಹಳು, ಏನಿವಳ  ಕಷ್ಟ  ಕೊರಗು?

ಜೋಗಿಣಿಯ ಹಾಗೆ ಕಾಣುವಳು ಯಾರೋ, ಕಣ್ಣಲ್ಲಿ ಅರೆ ನಿದ್ರೆ ಎಚ್ಚರ
ಗಲ್ಲಿ ಗಲ್ಲಿಗಳಲ್ಲೂ ತಿರುಗುವಳು ಒಬ್ಬಂಟಿ, ಹೊದ್ದು ಕಪ್ಪಾದ ಹಚ್ಚಡ

ಬೇಡುತ್ತಾ ನಿತ್ಯ ಬರುವಳು , ಪಾಪ,  ಒಳಗಿದೆಯೇ ನೋಡಿ  ಪುಟ್ಟ  ಮರಿ ಹಗಲು
ಹಾಕಿ ಬಿಡಿ ಇವಳ ಮಡಿಲಿಗೆ, ಸುಮ್ಮನೆ ತೊಂದರೆ ಕೊಡುವುದು ಮಲಗಲು

Kannada translation by C.P. Ravikumar of a Hindi Poem by Gulzar

ಈ ಕವಿತೆಯನ್ನು ಒಂದು ಹಿಂದಿ ಚಿತ್ರದಲ್ಲಿ ಜೋಗುಳದ ರೊಪದಲ್ಲಿ ಬಳಸಿಕೊಳ್ಳಲಾಗಿದೆ. ಲತಾ ಮಂಗೇಶ್ಕರ್ ಅಧ್ಭುತವಾಗಿ ಹಾಡಿದ್ದಾರೆ. ರಾತ್ರಿಯನ್ನು ಒಬ್ಬ ಭಿಕಾರಿಣಿಗೆ ಹೋಲಿಸಿರುವ  ಕವಿಯ ಕಲ್ಪನೆ ಅನನ್ಯವಾದುದು. ಚಂದ್ರ ಭಿಕಾರಿಣಿಯ ಬಟ್ಟಲಿನಂತೆ ಕವಿಗೆ ಗೋಚರವಾಗುತ್ತದೆ. ಲಕ್ಷಾಂತರ ವಜ್ರಗಳಿದ್ದರೂ ಬೇಡುವ ಸ್ಥಿತಿಯಲ್ಲಿರುವ ನಿಶಾ ಭಿಕಾರಿಣಿಯ ಬಗ್ಗೆ ನಮಗೆ ಅನುಕಂಪ ಮೂಡುತ್ತದೆ.  ಎಷ್ಟೋ ಬಂಧುಗಳಿದ್ದರೂ ಇದ್ದರೂ ಒಬ್ಬಂಟಿಯಾಗಿ ಬದುಕಬೇಕಾದ ಎಷ್ಟು ಜನರಿಲ್ಲ? ಜೋಗುಳದ ಕೊನೆಯಲ್ಲಿ ಕವಿಯ ತುಂಟತನ ಕಾಣಿಸಿಕೊಂಡು ಕವಿತೆಗೆ ಒಂದು ಬೇರೆ ರೂಪ ಪ್ರಾಪ್ತವಾಗುತ್ತದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)