ಗಾಂಧಿ

ಮೂಲ ಹಿಂದಿ ರಚನೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ 


ದೇಶದಲ್ಲಿ ಎಲ್ಲೇ ಹೋದರೂ
ಕಿವಿಗೆ ಕೇಳುತ್ತದೆ ಅದೇ ಆಹ್ವಾನ:
ಜಡತ್ವ ಹೊಡೆದೋಡಿಸಲು 
ಸೃಷ್ಟಿಸು ಯಾವುದಾದರೂ ಭೂಕಂಪ! 
ಕವಿದಿರುವ ಕತ್ತಲಿನಲ್ಲಿ 
ನಿನ್ನ ದೊಂದಿ ಮತ್ತೆ ಹಚ್ಚು!
ಇಡೀ ಬೆಟ್ಟವನ್ನು ಕೈಯಲ್ಲಿ ಹೊತ್ತು
ಹನುಮಂತನ ಉಪಾದಿಯಲ್ಲಿ ಲಂಘಿಸು!
ಬಿರುಗಾಳಿ ಎಬ್ಬಿಸು, ಕವಿ!
ಗರ್ಜಿಸು! ಗರ್ಜಿಸು! ಗರ್ಜಿಸು!

ನಾನು ತಣ್ಣಗೆ ಕುಳಿತು ಯೋಚಿಸುತ್ತೇನೆ -
ನಾನೆಂದು ಗರ್ಜಿಸಿದೆ?
ನನ್ನ ಗರ್ಜನೆಯೆಂದು ಜನರು ಭ್ರಮಿಸಿದರಲ್ಲ
ಅದು ನಿಜಕ್ಕೂ ಗಾಂಧಿಯ ಗರ್ಜನೆಯಾಗಿತ್ತು
ನಮಗೆ ಜನ್ಮ ಕೊಟ್ಟರಲ್ಲ
ಆ ಗಾಂಧಿಯ ಗರ್ಜನೆ.

ಆಗಲೂ ನಾವು ನೋಡಿದ್ದು
ಬಿರುಗಾಳಿಯನ್ನು, ಗಾಂಧಿಯನ್ನಲ್ಲ

ಬಿರುಗಾಳಿ ಮತ್ತು ಗರ್ಜನೆಗಳ
ನೇಪಥ್ಯದಲ್ಲಿ  ಅವರು ಇರುತ್ತಿದ್ದರು.
ನಿಜವೆಂದರೆ
ತಮ್ಮ ಲೀಲೆಯಲ್ಲಿ
ಬಿರುಗಾಳಿ ಗರ್ಜನೆಗಳು
ಸೇರಿಕೊಳ್ಳುವುದನ್ನು ಕಂಡು
ಅವರು ನಗುತ್ತಿದ್ದರು.

ಗರ್ಜನೆ ಹೊರಡುವುದು
ದೊಡ್ಡ ಧ್ವನಿಯಿಂದಲ್ಲ
ಮೆಲುದನಿಯಿಂದ
ಒಂಟಿ ಉರಿಯುವ ಮೋಂಬತ್ತಿಯಂಥ ಧ್ವನಿ
ಹದ್ದಿನಂತಲ್ಲ ಪಾರಿವಾಳದ ನಡೆ ನಡೆಯುವ ಧ್ವನಿ

ಗಾಂಧಿ ಹದ್ದನ್ನೂ ಮೀರಿಸಿದ ಹದ್ದಾಗಿದ್ದರು
ಏಕೆಂದರೆ ಅವರು ನೀರವತೆಯ ಸದ್ದಾಗಿದ್ದರು


---

[ಈ ಕವಿತೆಯನ್ನು ಬರೆದ ರಾಮಧಾರಿ ಸಿಂಹ್ "ದಿನಕರ್" ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲುಗೊಂಡ ಕವಿ. ಅವರನ್ನು "ವೀರ ರಸದ" ಕವಿ ಎಂದು ಕರೆಯುತ್ತಿದ್ದರಂತೆ. ಜನ ಅವರ ಕವಿತೆಗಳಿಂದ ಉತ್ತೇಜಿತರಾಗುತ್ತಿದ್ದರು. ಅವರು ರಚಿಸಿದ ಕವಿತೆಯಾದ "ಸಿಂಹಾಸನವನ್ನು ತೆರವು  ಮಾಡಿ! ಜನತೆ ಬರಲು ಸಿದ್ಧವಾಗಿದೆ!" ಎಂಬ ಕವಿತೆಯನ್ನು  ಬ್ರಿಟಿಷ್  ಸರಕಾರಕ್ಕೆ ಎಚ್ಚರಿಕೆಯ ರೂಪದಲ್ಲಿ ಬರೆಯಲಾಗಿದೆ.  ಅವರಿಗೆ ಮೊದಮೊದಲು ಗಾಂಧೀಜಿಯವರ ತತ್ತ್ವಗಳು ಅಷ್ಟು ರುಚಿಸುತ್ತಿರಲಿಲ್ಲವಂತೆ; "ಹದ್ದಿನ ನಡಿಗೆಯಿಂದ ನಡೆದರೆ ಏನಾದರೂ ಆದೀತು, ಹೀಗೆ ಪಾರಿವಾಳದ ನಡೆ ನಡೆದರೆ ಏನು ಬಂತು" ಎಂಬ ಧೋರಣೆ. ಆದರೆ ಕಾಲಕ್ರಮೇಣ ಅವರಿಗೆ ಗಾಂಧೀಜಿಯ ದರ್ಶನ ವೇಧ್ಯವಾಯಿತು. ಸ್ವಾತಂತ್ರ್ಯದ ಅನಂತರ ಕೂಡಾ "ದಿನಕರ್"  ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಅವರ ಕವಿತೆಗಳನ್ನು ಓದುವುದೇ ಒಂದು ರೋಮಾಂಚಕ ಅನುಭವ. ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿ ಕವಿಗಳಲ್ಲಿ ಅವರು ದ್ವಿತೀಯ ಕವಿ.

ಈ ಕವಿತೆಯಲ್ಲಿ ಅವರು ಗಾಂಧೀಜಿಯನ್ನು ಕುರಿತು ಇದ್ದ ನಿಲುವುಗಳ ಬಗ್ಗೆ ಸೂಕ್ಷ್ಮವಾಗಿ ಬರೆದಿದ್ದಾರೆ. ಯಾವುದೇ ನೇತಾರನ ಗರ್ಜನೆಗೆ ಶಕ್ತಿ ಬರುವುದು ಅದರ ಹಿಂದಿರುವ ಲಕ್ಷಾಂತರ ಜನರ ಮೌನದಿಂದ, ಗಾಂಧೀಜಿ ನಮ್ಮ ದೇಶದ ಕೋಟ್ಯಾಂತರ ಜನರ ಮೌನಕ್ಕೆ ಧ್ವನಿಯಾಗಿದ್ದರು. ಅವರು ಗರ್ಜಿಸಿ ಭಾಷಣಗಳನ್ನು ಕೊಡದೆ ಬಹಳ ದೊಡ್ಡದನ್ನು ಸಾಧಿಸಿದರು ಎಂಬ ಭಾವ ಇಲ್ಲಿ ವ್ಯಕ್ತವಾಗಿದೆ.]

Kannada translation by C.P. Ravikumar of a Hindi Poem by Ramdhari Singh "Dinakar"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)