ನಮ್ಮ ಆಸ್ತಿಯ ಬೆಲೆ

ಸಿ ಪಿ ರವಿಕುಮಾರ್ 

ಜೂನ್ 6 "ಕನ್ನಡದ ಆಸ್ತಿ" ಎಂದೇ ಪ್ರಸಿದ್ಧರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.  ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು "ಚಿಕವೀರ ರಾಜೇಂದ್ರ" ಕಾದಂಬರಿಗಾದರೂ ಅವರು ತಮ್ಮ ಸಣ್ಣ ಕತೆಗಳಿಗಾಗಿ ಪ್ರಸಿದ್ಧರು.  ನಾನು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅವರ ಕತೆ "ನಿಜಗಲ್ಲಿನ ರಾಣಿ" ಪಾಠವಾಗಿತ್ತು.  ಇದೊಂದು ಐತಿಹಾಸಿಕ ಕತೆ. ಕತೆಯಲ್ಲಿ ಬರುವ ರಾಮರಸ ನಾಯಕ, ಲಕುಮವ್ವೆ, ಗಿರಿಜವ್ವೆ, ಕಸ್ತೂರಿ - ಈ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವಂಥವು. ಈ ಕತೆಯನ್ನು ನಾನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದು ನನ್ನ ಬ್ಲಾಗ್ ನಲ್ಲಿ ಲಭ್ಯವಾಗಿದೆ (ಇಲ್ಲಿ ಓದಿ).

ಮಾಸ್ತಿ ಅವರನ್ನು ಭೇಟಿ ಮಾಡಿದ ಸುಸಂದರ್ಭ ನನ್ನ ಜೀವನದಲ್ಲೂ ಬಂದಿತ್ತು! ನಾನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಹೊರತಂದ ವಿಶ್ವಕಥಾಕೋಶ ಎಂಬ ದೊಡ್ಡ ಪ್ರಾಜೆಕ್ಟ್ ನಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ವಿಯೆಟ್ನಾಮ್ ಕಥೆಗಳ ಸಂಕಲನವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ ಪ್ರಾಜೆಕ್ಟ್ ನನಗೆ ಕೊಟ್ಟವರು ದಿವಂಗತ ನಿರಂಜನ. ಆಗ ನಾನು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ಹೊಸದು. "ಕುರಿ" ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ವಿಷಯ ನಿರಂಜನ ಅವರಿಗೆ ತಿಳಿದಿತ್ತು. ಹೀಗಾಗಿ ಅವರಿಗೆ ನಾನು ಈ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಬಂದಿರಬಹುದು. ನಿರಂಜನ ಅವರು ನನ್ನ ತಂದೆ ಸಿ. ಎಚ್. ಪ್ರಹ್ಲಾದರಾವ್ ಅವರ ಮಿತ್ರರು ಎಂಬುದೂ ಅವರ ಆಯ್ಕೆಗೆ ಪುಟ ಕೊಟ್ಟಿರಬಹುದು! ಇಪ್ಪತ್ತೈದು ಪುಸ್ತಕಗಳ ದೊಡ್ಡ ಪ್ರಾಜೆಕ್ಟನ್ನು ನಿರಂಜನ ಮತ್ತು ನವಕರ್ನಾಟಕ ತಂಡದವರು ಹೇಗೆ ಸುವ್ಯವಸ್ಥಿತವಾಗಿ ನಡೆಸಿದರು ಎಂಬುದು ಇಂದಿಗೂ ಉತ್ತಮ ನಿರ್ವಹಣೆಗೆ ನಿದರ್ಶನವಾಗಬಲ್ಲದು. ಪ್ರತಿ ದೀಪಾವಳಿ ಮತ್ತು ಯುಗಾದಿಗೆ ನಾಲ್ಕು ನಾಲ್ಕು ಪುಸ್ತಕಗಳ ಬಿಡುಗಡೆ! ನನ್ನ ಪುಸ್ತಕವು ಮೊದಲನೇ ಕಂತಿನಲ್ಲೇ ಹೊರಬಂತು. ಪುಸ್ತಕದ ಬಿಡುಗಡೆ ಇದ್ದದ್ದು ವುಡ್ ಲ್ಯಾಂಡ್ ಹೋಟೆಲ್ ನಲ್ಲಿ. ಬಿಡುಗಡೆಗೆ ಬಂದಿದ್ದವರು - ಮಾಸ್ತಿ, ತಮಿಳು ಕತೆಗಾರ ಜಯಕಾಂತನ್, ಹಾ. ಮಾ. ನಾಯಕ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹಾಗೂ ಇನ್ನೂ ಅನೇಕ ದಿಗ್ಗಜರು. ಇವರ ಜೊತೆ ನಾನೂ ವೇದಿಕೆಯ ಮೇಲೆ! ನನ್ನ ಪುಸ್ತಕದ ಪ್ರತಿಯ ಮೇಲೆ ಈ ಎಲ್ಲ ದೊಡ್ಡವರ ಸಹಿ ಹಾಕಿಸಿಕೊಂಡಿದ್ದು ನನಗೆ ನೆನಪಿದೆ. ವಿಶ್ವದ ಎಲ್ಲಾ ಭಾಷೆಗಳ ಸಣ್ಣಕತೆಗಳ ಸಂಗ್ರಹವನ್ನು ಬಿಡುಗಡೆ ಮಾಡಲು ಮಾಸ್ತಿ ಅವರನ್ನು ಕರೆದಿದ್ದು ಔಚಿತ್ಯಪೂರ್ಣವಾಗಿತ್ತು.



ಮೂವತ್ತು ವರ್ಷಗಳ ನಂತರ ವಿಶ್ವಕಥಾಕೋಶದ ದ್ವಿತೀಯ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಂದಿನ ಸಮಾರಂಭಕ್ಕೆ ನವಕರ್ನಾಟಕ ತಂಡದ ರಾಜಾರಾಂ ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ಲೇಖಕರನ್ನು ಆಹ್ವಾನಿಸಿದ್ದರು. ಅನೇಕ ಮಂದಿ ಅನುವಾದಕರು ಇಂದು ಬದುಕಿಲ್ಲ. ಹಾಲೆಂಡ್, ಬೆಲ್ಜಿಯಂ ದೇಶಗಳ ಕತೆಗಳನ್ನು ಭಾಷಾಂತರಿಸಿದ ನನ್ನ ತಂದೆ ಸಿ ಎಚ್ ಪ್ರಹ್ಲಾದರಾವ್ ಕೂಡಾ ಇವರಲ್ಲಿ ಒಬ್ಬರು. ಅವರ ಪರವಾಗಿ ನನ್ನ ತಾಯಿಯನ್ನು ವೇದಿಕೆಯ ಮೇಲೆ ಕರೆದು ಅವರಿಗೆ ಪ್ರತಿಗಳನ್ನು ಕೊಟ್ಟದ್ದು ಪ್ರಕಾಶನ ಸಂಸ್ಥೆಯ ದೊಡ್ಡತನ.  ವಿಶ್ವಕಥಾಕೋಶ ಕನ್ನಡಕ್ಕೆ ಸೇರಿದ ಅಪೂರ್ವ ಆಸ್ತಿ; ಅದನ್ನು ಕಾಯ್ದುಕೊಂಡು ಬಂದದ್ದು ಪ್ರಕಾಶನದ ದೂರದೃಷ್ಟಿ. ನಾನು ರಾಜಾರಾಂ ಅವರಿಗೆ ಪತ್ರ ಬರೆದು "ಮೂವತ್ತು ವರ್ಷಗಳ ಅವಧಿಯಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ; ಇನ್ನಷ್ಟು ಹೊಸ ಕತೆಗಳನ್ನು ಸೇರಿಸಬಹುದಿತ್ತಲ್ಲವೇ?" ಎಂದು ಕೇಳಿದೆ. ಅದಕ್ಕೆ ಅವರು ಉತ್ತರ ಬರೆದು "ಹಾಗೆ ಮಾಡಲು ಸಾಧ್ಯವಿಲ್ಲ; ಅದು ಮೂಲ ಸಂಪಾದಕರಿಗೆ ಅಪಚಾರವಾಗುತ್ತದೆ" ಎಂದು ವಿವರಿಸಿದರು.  ನಿರಂಜನರಂಥ ಸಮರ್ಥ ಸಂಪಾದಕರು ಸಿಕ್ಕರೆ ಮಾತ್ರ ಇಂಥ ಕೆಲಸಕ್ಕೆ ಕೈ ಹಾಕಬಹುದು ಎಂದೂ ಸೂಚಿಸಿದರು.

ಮಾಸ್ತಿ ಅವರ ಸಣ್ಣಕತೆಗಳನ್ನು  ಇಂದಿಗೂ ಜನ ಓದುತ್ತಾರೆಯೇ? ಅವರು ಇಂದಿಗೂ ಪ್ರಸ್ತುತ ಲೇಖಕರೆ? ಈ ವಿಷಯ ಕುರಿತು ಕನ್ನಡ ಲೇಖಕ ಕೆ. ಸತ್ಯನಾರಾಯಣ ಇಂದು "ಸಂವಾದ" ಕಾರ್ಯಕ್ರಮದಲ್ಲಿ ಮಾತಾಡಿದರು (ಜೂನ್ 29, 2014).  ಇದುವರೆಗೂ ಮಾಸ್ತಿ ಅವರ ಕಾದಂಬರಿಗಳು ನಮ್ಮ ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಲಿಲ್ಲ ಎಂದು ಅವರು ತಿಳಿಸಿದ್ದು ಕೇಳಿ ನನಗೆ ಆಶ್ಚರ್ಯವಾಯಿತು.  ಕನ್ನಡ ಪಠ್ಯ ಪುಸ್ತಕಗಳ ದುರವಸ್ಥೆ ಕುರಿತು "ಕನ್ನಡ ಪಾಠಗಳು ಏಕೆ ನೀರಸವಾಗಿರುತ್ತವೆ?" ಎಂಬ ನನ್ನ ಬ್ಲಾಗ್ ನಲ್ಲಿ  ಬರೆದಿದ್ದೇನೆ.  ಮಾಸ್ತಿ ಅವರ ಹೆಸರನ್ನು ಕೇಳದೇ ಇಂದು  ಕನ್ನಡವನ್ನು ದ್ವಿತೀಯ ಭಾಷೆಯಾಗಿ ಸ್ವೀಕರಿಸಿದ ಮಕ್ಕಳು  ಹತ್ತನೆಯ ತರಗತಿಯವರೆಗೆ ಕನ್ನಡ ಓದಬಹುದು. ಪ್ರೇಮ್ ಚಂದ್ ಹೆಸರು ಕೇಳದೆ ಹಿಂದಿಯನ್ನು ಓದಿದ ಮಕ್ಕಳು ಇರಲಾರರು. "ಕನ್ನಡದ ಆಸ್ತಿ" ಎಂದು ನಾವು ಹೇಳಿಕೊಳ್ಳುವ ಮಾಸ್ತಿಗೇ ಈ ದುರ್ಗತಿ!

ಸತ್ಯನಾರಾಯಣ ಅವರ ಭಾಷಣದ ಮೂಲಕ ಅನೇಕ ವಿಚಾರಗಳು ತಿಳಿದವು. ಮಾಸ್ತಿ ಅವರು ಹುಟ್ಟಿದ್ದು ಜೂನ್ 6, ಅವರು ಸ್ವರ್ಗಾಧೀನರಾದದ್ದೂ ಜೂನ್ 6. ಅವರು ಬರೆದದ್ದು ಒಟ್ಟು 100 ಸಣ್ಣ ಕತೆಗಳು. ಅವರ ಕೊನೆಯ ಕತೆ "ಮಾಯಣ್ಣನ ಕನ್ನಡಿ."  ಮಾಸ್ತಿ ಅವರು 29 ಕತೆಗಳನ್ನು ಮಾತ್ರ ಬರೆದ ಹೊಸ್ತಿಲಲ್ಲಿ ಬೇಂದ್ರೆ ಅವರು ಮಾಸ್ತಿ ಅವರ ಸಾಹಿತ್ಯವನ್ನು ಕುರಿತು ಲೇಖನ ಬರೆದಿದ್ದರಂತೆ (1940).  ಮಾಸ್ತಿ ಅವರೊಂದಿಗೆ ಮಾತಾಡಿದ ತಮ್ಮ ವೈಯಕ್ತಿಕ ಅನುಭವವನ್ನು ಸತ್ಯನಾರಾಯಣ ಹೇಳಿದರು.  "ಜೀವನದಲ್ಲಿ ಪ್ರತಿಯೊಂದು ಕ್ಷಣವೂ ಒಳ್ಳೆಯ ಮತ್ತು ದುಷ್ಟ ಶಕ್ತಿಗಳ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಯಾವಾಗಲೋ ಒಂದರ ಕೈ ಇನ್ನೊಂದರ ಕೈಗಿಂತ ಮೇಲಾಗುತ್ತದೆ. ಆ ಕ್ಷಣವನ್ನು  ಗ್ರಹಿಸಿ ಹಿಡಿದಿಡಬಲ್ಲವನೇ ಲೇಖಕ," ಎಂದು ಮಾಸ್ತಿ ತಮಗೆ ಹೇಳಿದ್ದನ್ನು ನೆನೆಸಿಕೊಂಡರು. "ಮಾಸ್ತಿ ಅವರ ಕತೆಗಳಲ್ಲಿ ಕಾಸ್ಮಿಕ್ ಎನರ್ಜಿ ಎನ್ನುವುದನ್ನು ನಾವು ಗ್ರಹಿಸಬಹುದು. ಇದು ಎಲ್ಲ ಲೇಖಕರಲ್ಲಿ ಕಾಣುವುದಿಲ್ಲ. ಪ್ರೇಮ್ ಚಂದ್ ಅವರಲ್ಲಿ ಇದು ಕಾಣದು - ಶರತ್ ಚಂದ್ರ ಅವರ ಕತೆಗಳಲ್ಲಿ ಅದು ನಮಗೆ ಸಿಕ್ಕಬಹುದು," ನನ್ನ ಪ್ರಶ್ನೆಗೆ ಉತ್ತರಿಸುವಾಗ ಅವರು ಹೇಳಿದರು.  ಇನ್ನೊಂದು  ಪ್ರಶ್ನೆಗೆ ಉತ್ತರಿಸುವಾಗ "ನಾವು ಮಾಸ್ತಿ ಅವರ ಕತೆಗಳನ್ನು ಅನೇಕ ವರ್ಷಗಳ ನಂತರ ಮತ್ತೆ ಓದಿದರೆ ಅದರಲ್ಲಿ ನಮಗೆ ಮತ್ತಷ್ಟು ಹೊಳಹುಗಳು ಕಾಣುತ್ತವೆ. ಯಾವುದೇ ಒಳ್ಳೆಯ ಲೇಖಕನಿಗೆ ಕಾಯುವ ತಾಳ್ಮೆ ಬೇಕು. ಅಂತಹ ತಾಳ್ಮೆ ಇಲ್ಲದ ಲೇಖಕನ ಕೃತಿಗಳು ಕಾಲಪ್ರವಾಹದಲ್ಲಿ ಕೊಚ್ಚಿ ಹೋಗುತ್ತವೆ; ಮಾಸ್ತಿ, ಕುವೆಂಪು, ಬೇಂದ್ರೆ ಇವರು ತಾವು ಕೇವಲ ಇಂದಿನ ಜನರಿಗೆ ಮಾತ್ರ ಬರೆಯುತ್ತಿಲ್ಲ, ತಾವು ಸಾರ್ವಕಾಲಿಕರು ಎನ್ನುವ ಅರಿವಿನಿಂದ ಬರೆದರು" ಎಂದದ್ದು ನನಗೆ ಮೆಚ್ಚುಗೆಯಾಯಿತು.

"ಮಾಸ್ತಿ ಅವರ ಕತೆಗಳ ನಡಿಗೆ ನಿಧಾನವಾದುದು. ಇಂದಿನ ವೇಗದ ಯುಗದಲ್ಲಿ ಮಾಸ್ತಿ ಅವರು ಪ್ರಸ್ತುತರೇ?" ಎಂದು ನಾನು ಕೇಳಿದ ಪ್ರಶ್ನೆಗೆ "ಇಂಥ ಪ್ರಶ್ನೆ ಬಂದೇ ಬರುತ್ತದೆ" ಎಂದು ಊಹಿಸಿದ್ದ ಸತ್ಯನಾರಾಯಣ ಅವರು "ಈ ವೇಗದ ಬದುಕಿಗೆ ಆಂಟಿಡೋಟ್ ಆಗಿ ಮಾಸ್ತಿ ಅವರು ಪ್ರಸ್ತುತರಾಗುತ್ತಾರೆ" ಎಂದು ಥಟ್ಟನೆ ಉತ್ತರಿಸಿದರು.

ಮಾಸ್ತಿ ಅವರ ಕತೆಗಳ ಅನುವಾದ ಕುರಿತು ಒಂದಷ್ಟು ಚರ್ಚೆಯಾಯಿತು. ಅವರ ಕತೆಗಳ  ಅನುವಾದಗಳಲ್ಲಿ ಸಾಕಷ್ಟು ಕಳೆದುಹೋಗುವ ವಿಷಯ ಬಂತು.  ನಮ್ಮ ಆಸ್ತಿ ಎಂದು ನಾವು ಹೇಳಿಕೊಳ್ಳುವ ಮಾಸ್ತಿ ಅವರ ಕತೆಗಳನ್ನು ಬೇರೆಯವರಿಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಿದಾಗ ಮಾತ್ರ ನಮ್ಮ ಆಸ್ತಿಗೆ ಬೆಲೆ.  ಇಂದಿನ ಆನ್ ಲೈನ್ ಯುಗದಲ್ಲಿ ಮಾಸ್ತಿ ಮೊದಲಾದ ಲೇಖಕರಿಗೆ ಅವರಿಗೆ ತಕ್ಕ ಸ್ಥಾನವನ್ನು ದೊರಕಿಸಿಕೊಡುವ ಕೆಲಸ ಆಗಬೇಕಾಗಿದೆ.  ಹಿಂದಿಯ ಕವಿತಾಕೋಶ್ ಮಾದರಿಯ ಕೆಲಸ ಕನ್ನಡದಲ್ಲೂ ಆಗಬೇಕಾಗಿದೆ.

ಕಾರ್ಯಕ್ರಮವನ್ನು ಆಯೋಜಿಸಿದ "ಸಂವಾದ"ದ ವಿ ಆರ್ ಕುಲಕರ್ಣಿ ಅವರಿಗೆ ಕೃತಜ್ಞತೆಗಳು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)