ಗಂಡಸರು

ಮೂಲ ಅಮೆರಿಕನ್ ಕವಿತೆ : ಮಾಯಾ ಆಂಜೆಲೋ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 



ಳೆಯ ವಯಸ್ಸಿನಲ್ಲಿ ನಾನು
ಪರದೆಯ ಮರೆಯಿಂದ ಇಣುಕಿ ನೋಡುತ್ತಿದ್ದೆ
ಗಂಡಸರು ರಸ್ತೆಯ ಮೇಲೆ ಅಡ್ಡಾಡುವುದನ್ನು. 
ಕುಡುಕರು,  ಮುದುಕರು, 
ಮೆಣಸಿನ ಕಾಯಂತೆ ಖಾರ ಖಾರ ಯುವಕರು. 
ನೋಡುತ್ತಿದ್ದೆ. ಈ ಗಂಡಸರು ಯಾವಾಗಲೂ 
ಎಲ್ಲಾದರೂ ಹೋಗುತ್ತಲೇ ಇರುತ್ತಾರೆ. 
ನನ್ನ ಇರವು ಅವರಿಗೆ ಗೊತ್ತು. 
ಹದಿನೈದು ವರ್ಷ ಅಲ್ಲವೇ,
ಅವರಿಗಾಗಿ ಹಾತೊರೆಯುತ್ತಿದ್ದ ವಯಸ್ಸು. 
ನನ್ನ ಕಿಟಕಿಯ ಕೆಳಗೆ ನಿಲ್ಲುತ್ತಿದ್ದರು ಒಂದೆರಡು ಕ್ಷಣ -
ಅವರ ಭುಜಗಳು 
ಯುವತಿಯ ಸ್ತನಗಳ ಹಾಗೆ ಮೇಲೆದ್ದು
ಅವರ ಹಿಂಭಾಗಕ್ಕೆ ಪಟಪಟ ತಾಗುವ 
ಅವರ ಜಾಕೆಟ್ ಹಿಮ್ಮೈ. 

ಗಂಡಸರು.

ಒಮ್ಮೆ ನಿನ್ನನ್ನು ತಮ್ಮ ಅಂಗೈ ಮೇಲೆ 
ಮೃದುವಾಗಿ ಹಿಡಿಯುತ್ತಾರೆ 
ಜಗತ್ತಿನಲ್ಲಿ ಉಳಿದಿರುವ 
ಕೊನೆಯ ಕೋಳಿಮೊಟ್ಟೆ ನೀನು ಎಂಬಂತೆ. ನಂತರ 
ಬಿಗಿಯಾಗುತ್ತಾರೆ.  ಸ್ವಲ್ಪೇ ಸ್ವಲ್ಪ. 
ಮೊದಲ ಹಿಡಿತ ಸುಖಕರವೇ. 
ಕ್ಷಣಿಕ ಆಲಿಂಗನ. 
ರಕ್ಷಿಸಿಕೊಳ್ಳಲು ನಿನಗೆ ಇಷ್ಟವೂ ಆಗದಷ್ಟು ಮೃದು. 
ಆಗ ಮತ್ತಷ್ಟು. 
ನೋವು ಪ್ರಾರಂಭವಾಗುವುದು ಆವಾಗಲೇ.  
ಗಾಬರಿಗೆ ಹಾಕಿಕೊಳ್ಳುವೆ ಮುಗುಳ್ನಗುವಿನ ಮುಖವಾಡ. 
ಗಾಳಿಯೇ ಮಾಯವಾದಾಗ 
ನಿನ್ನ ಮಿದುಳು ಪಟ್ ಎಂದು
ಭಯಂಕರವಾಗಿ ಸ್ಫೋಟಗೊಳ್ಳುತ್ತದೆ ಎರಡು ಕ್ಷಣ 
ಬೆಂಕಿ ಕಡ್ಡಿಯ ತುದಿಯಂತೆ. ಸಂಪೂರ್ಣ ವಿಚ್ಛಿದ್ರವಾಗಿ. 
ನಿನ್ನ ರಸ
ಅವರ ಕಾಲಿನ ಮೇಲೆ ಒಸರುತ್ತ ಜಾರಿ
ಅವರ ಬೂಟುಗಳ ಮೇಲೆ ಒಣಗುತ್ತದೆ ಕಲೆಯಾಗಿ.  

ಜಗತ್ತು ಮತ್ತೆ ಸರಿ ಹೋಗಿ 
ನಾಲಗೆಗೆ ಮತ್ತೆ ರುಚಿ ಹತ್ತಲು ಪ್ರಾರಂಭವಾಗುವಷ್ಟರಲ್ಲಿ 
ನಿನ್ನ ಮೈ ಮುಚ್ಚಿ ಹೋಗಿದೆ, ಸದಾಕಾಲಕ್ಕೂ, 
ಯಾವ ಕೀಲಿ ಕೈ ಉಳಿದಿಲ್ಲ.

ನಂತರ ಕಿಟಕಿ ತೆರೆದುಕೊಳ್ಳುತ್ತದೆ 
ನಿನ್ನ ಮಸ್ತಿಷ್ಕದೊಳಗೆ. 
ಪರದೆಗಳು ಗಾಳಿಗೆ ಹೊಯ್ದಾಡುತ್ತವೆ. 
ಗಂಡಸರ ಓಡಾಟ. 
ಏನೋ ತಿಳಿದವರು. 
ಎಲ್ಲಿಗೋ ಹೊರಟವರು, ಸಾಧಕರು. 
ಈ ಸಲ 
ನಾನು ಬರೀ ನಿಂತು ನೋಡುತ್ತೇನೆ, ಸಾಕು. 

ಪ್ರಾಯಶಃ. 

===
Kannada translation of Maya Angelou's "Men"
(c) 2014, C.P. Ravikumar

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)