ನಿನ್ನದೇ ನಿರೀಕ್ಷೆ

ಸಿ ಪಿ ರವಿಕುಮಾರ್ 

ಖಾಮೋಶಿ (ಮೌನ) ಹಿಂದಿ ಚಿತ್ರ ಒಂದು ದುರಂತ ಕಥೆಯನ್ನು ಹೇಳುತ್ತದೆ. ಚಿತ್ರದ ನಾಯಕ (ರಾಜೇಶ್ ಖನ್ನಾ) ಒಬ್ಬ ಭಗ್ನ ಪ್ರೇಮಿ; ಕವಿ. ಮುರಿದ ಪ್ರೇಮದ ಕಾರಣ ಅವನ ಮನಸ್ಸು ವಿಕಲ್ಪವಾಗುತ್ತದೆ. ಅವನನ್ನು ಮನೋವಿಕಾರಗಳ ಆಸ್ಪತ್ರೆಗೆ ಕರೆದು ತರುತ್ತಾರೆ. ಅಲ್ಲಿ ಒಬ್ಬ ನರ್ಸ್ (ವಹೀದಾ ರೆಹಮಾನ್) ಅವನ ಶುಶ್ರೂಷೆಗೆ ನೇಮಕಗೊಳ್ಳುತ್ತಾಳೆ. ಡಾಕ್ಟರ್ ನಡೆಸುತ್ತಿರುವ ಚಿಕಿತ್ಸೆಯಲ್ಲಿ  ಅವಳಿಗೆ ವಿಶೇಷವಾದ  ಪಾತ್ರ ಕೊಡಲಾಗುತ್ತದೆ. ರೋಗಿಯೊಂದಿಗೆ ಪ್ರೇಮವನ್ನು ನಟಿಸಿ ಅವನನ್ನು ಗುಣ ಮಾಡುವ ಹೊರೆ ಅವಳದು. ಹಿಂದೊಮ್ಮೆ ಇದೇ ರೀತಿಯ ಪ್ರಯೋಗದಲ್ಲಿ ಭಾಗಿಯಾದ ನರ್ಸ್ ಈ ನಟನೆಯು ತನ್ನ ಮನಸ್ಸಿನ  ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಬಲ್ಲವಳು. ಆದರೆ ಬೇರೆ ದಾರಿಯಿಲ್ಲದೆ ಮತ್ತೊಮ್ಮೆ ಪ್ರೇಮವನ್ನು ಅಭಿನಯಿಸಲು ಒಪ್ಪುತ್ತಾಳೆ.  ಪ್ರೇಮವನ್ನು ನಟಿಸುತ್ತಾ ಅವಳು ನಾಯಕನಲ್ಲಿ ನಿಜವಾಗಿ ಅನುರಕ್ತಳಾಗುತ್ತಾಳೆ. ನಾಯಕ ಗುಣಮುಖನಾಗಿ ಒಂದು ದಿನ ಹೊರಟು ನಿಲ್ಲುತ್ತಾನೆ. ನಾಯಕಿಯ ಮನಸ್ಸಿನ ಮೇಲೆ ಇದು ಆಘಾತ ಉಂಟು ಮಾಡುತ್ತದೆ. ಅವಳು ಸ್ವಯಂ ಮನೋವಿಕಾರಕ್ಕೆ ಗುರಿಯಾಗುತ್ತಾಳೆ. ಈ ದುರಂತ ನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯ ಮನೋಜ್ಞವಾಗಿದೆ. ಚಿತ್ರಕ್ಕೆ ಒಪ್ಪುವ ಗಂಭೀರ ಶೈಲಿಯ ಸಂಗೀತವನ್ನು ಹೇಮಂತ್ ಕುಮಾರ್ ನೀಡಿದ್ದಾರೆ. ಅವರೇ ಹಾಡಿರುವ ಹಾಡು "ತುಮ್ ಪುಕಾರ್ ಲೋ! ತುಮ್ಹಾರಾ ಇಂತೆಜಾರ್ ಹೈ ..." ಬಹಳ ಜನಪ್ರಿಯವಾಯಿತು. ರಾತ್ರಿಯ ನೀರವದಲ್ಲಿ ನಾಯಕ ಕುಳಿತು ತನ್ನ ಮನಸ್ಸಿನ ನಾಯಕಿಯನ್ನು ನೆನೆಯುತ್ತಿದ್ದಾನೆ. ಅವನಿಗೆ ತನ್ನ ಪ್ರೇಮಿಕೆಯ ನಿರೀಕ್ಷೆಯಲ್ಲಿ ನೀರವದ ರಾತ್ರಿಯೂ ಅಶಾಂತವೆಂದು ಗೋಚರಿಸುತ್ತಿದೆ. ಮೊದಲ ಸಲ ಅವನನ್ನು ಕಾಣಲು ಬಂದ ನಾಯಕಿ  ಈ ಗೀತೆಯನ್ನು ಕೇಳುತ್ತಾ ಮೆಟ್ಟಲು ಏರುತ್ತಾ ಬರುವ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.  ಕವಿ ಗುಲ್ಜಾರ್ ಈ ಚಿತ್ರಗೀತೆಗೆ ಸಾಹಿತ್ಯ ಒದಗಿಸಿದ್ದಾರೆ. ಗೀತೆಯ ಕನ್ನಡ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ. 

ಇಂದು ನಿನ್ನದೇ ನಿರೀಕ್ಷೆ 

ಮೂಲ ಹಿಂದಿ ಗೀತೆ - ಗುಲ್ಜಾರ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

ನಿರೀಕ್ಷೆ ಇಂದು ನಿನ್ನದೇ! ಒಮ್ಮೆ ಕರೆಯಬಾರದೆ?
ಕನಸು ಆಯುತಾ ನಿಶೆ ಬೇಸತ್ತಿದೆ! 
ನಿರೀಕ್ಷೆ ಇಂದು ನಿನ್ನದೇ!

ಮಾತು ಹೃದಯದಾಳದಿಂದ ತುಟಿಗೆ ಬಂದಿದೆ
ಜಾಗರಣೆಯ ರಾತ್ರಿ ಇನ್ನೂ ಎಷ್ಟು ಕಾದಿವೆ?
ಹೇಳಿಬಿಡಲೇ ಸುಮ್ಮನೆ? ಮನಸು ಸೋತಿದೆ!
ನಿರೀಕ್ಷೆ ಇಂದು ನಿನ್ನದೇ!

ಭಾರವಾಗಿದೆ ಎದೆ ಹಾಗೂ ಕಣ್ಣೆವೆ!
ನಿನ್ನ ಸ್ಥಿತಿಯೂ ನನ್ನದೇ ಎಂದು ನಂಬಲೇ?
ಶಾಂತಿ ಇದ್ದರೂ ನಿಶೆ ಅಶಾಂತವಾಗಿದೆ!
ನಿರೀಕ್ಷೆ ಇಂದು ನಿನ್ನದೇ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)