ಓಟದ ಹಿಂದೆ ಮುಂದೆ



ಸಿ ಪಿ ರವಿಕುಮಾರ್ 

ನೆನ್ನೆ ಹೀಗಾಯಿತು
ಮನೆಯಿಂದ ಹೊರಟಾಗ ಕಣ್ಣಿಗೆ ಬಿದ್ದ
ಬೆಳ್ಳಗಿನ ಯೂನಿಫಾರ್ಮ್ ಹಾಕಿಕೊಂಡು ಹೊರಟಿದ್ದ ಹುಡುಗ

ಇಂಥ ಹುಡುಗರು ಹತ್ತಾರು ಜನ
ಆದರೆ ಇವನು ಕಣ್ಣು ಸೆಳೆದದ್ದೇಕೆ?
ಕಣ್ಣಿಗೆ ಕನ್ನಡಕ
ಗಂಭೀರ ಮುಖ
ಸ್ವಲ್ಪ ಸ್ಥೂಲ ಶರೀರ
ಕಾಲು ಎಳೆಯುತ್ತಾ ಹಾಕುತ್ತಾನೆ

ನಾನು ಹಲೋ ಎಂದೆ
ಮುಗುಳ್ನಕ್ಕೆ

ಅವನು ಗಂಭೀರವಾಗಿ ಹಲೋ ಅಂದ

ಅವನ ಮುಂದೆಯೇ ಓಡುತ್ತಾ ಹೋದರು
ಇಬ್ಬರು ಹುಡುಗರು

ನಾನೂ ಅವನನ್ನು ಹಾದು ಹೊರಟೆ
ಕಾರ್ಯದ ಅವಸರ ನನಗೂ ಇತ್ತು
ಅಪರಾಧಿ ಭಾವನೆ ನನ್ನನು ಕಾಡಿತು

ತನ್ನ ಮುಂದೆಯೇ ಓಡಿ ಹೋದ ಹುಡುಗರು
ತನ್ನನ್ನು ಹಾದು ಹೋಗುವವರೇ ಎಲ್ಲರೂ
ಹೇಗೆ ಅನ್ನಿಸಿರಬಹುದು ಅವನಿಗೆ!
ಎಷ್ಟು ನೋವಾಗಿರಬಹುದು ಮನಸ್ಸಿಗೆ!
ಹೀಗೆ ಯೋಚಿಸಿ ನನ್ನಲ್ಲಿ ಹುಟ್ಟಿತು ಮರುಕ

ನನ್ನ ಹಿಂದೆ ಯಾರೋ ಓಡಿ ಬರುವ ಸದ್ದು ಕೇಳಿ
ಹಿಂದಕ್ಕೆ ತಿರುಗಿದೆ

ಕಷ್ಟ ಪಟ್ಟು ಓಡಿ ಬರುತ್ತಿದ್ದಾನೆ ಅವನು
ಶಾಲೆಯ ಬಸ್ ಹೊರಟು ಹೋಗುವುದೆಂಬ ದಿಗಿಲು

"ಹುಷಾರು! ಹುಷಾರು!" ಎಂದು ಉದ್ಗರಿಸಿದೆ ನಾನು
ಅವನು ಹೆದರಿದ
ಓಟ ನಿಲ್ಲಿಸಿ ನಡೆಯತೊಡಗಿದ

ಯಾರೋ ಬಯ್ಯುವುದು ಕೇಳಿಸಿತು
ಅವನ ತಾಯಿ ಇರಬೇಕು
"ಯಾಕೆ ಇಷ್ಟು ನಿಧಾನವಾಗಿ ನಡೆಯುತ್ತಿದ್ದೀ?"

ತನ್ನ ಮಗನ ಬಗ್ಗೆ ಮರುಕವೇ ಇಲ್ಲವೇ ತಾಯಿಗೆ!
ಎಂದು ತಾಪವಾಯಿತು ಮನಸ್ಸಿಗೆ
ಆ ಮಗುವಿನ ಅಳಲು ನನಗೇ ಬಂದಂತೆ

ನಂತರ  ಹೊಳೆಯಿತು ನನಗೆ ತಡವಾಗಿ
ತನ್ನ ಮಗು ಯಾರಿಗೂ ಕಡಿಮೆ ಇಲ್ಲವೆಂಬ ಹೆಮ್ಮೆ ತಾಯಿಗೆ
ಮರುಕ ತೋರುವುದರಿಂದ ಏನು ಸಾಧಿಸಿದ ಹಾಗೆ?
ಓಡುವುದನ್ನು ಕಲಿಸುವುದರಲ್ಲಿದೆ ತಾಯಿಯ ಸಾಧನೆ




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)