ಬೆಟ್ಟದ ಮೇಲೊಂದು ಮನೆ

ಕವಿತೆ ಓದುವ ಮುನ್ನ ... 



ರಾಬರ್ಟ್ ಫ್ರಾಸ್ಟ್ ಈ ಕವಿತೆಯಲ್ಲಿ  ತಾನು ಕಂಡ ಒಂದು "ಬೆಟ್ಟದ ಮನೆ"ಯನ್ನು ಕುರಿತು ಬರೆದಿದ್ದಾನೆ. ಅಕ್ಕ ಮಹಾದೇವಿ "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ?" ಎಂದು ಪ್ರಶ್ನಿಸಿದಳು. ಫ್ರಾಸ್ಟ್ ಗೆ ಬೆಟ್ಟದ ಮೇಲೆ ಮನೆ ಮಾಡಿದವನನ್ನು ಕುರಿತು ಕುತೂಹಲವಿದೆ. ಅವನು ಬೆಟ್ಟದ ತುತ್ತ ತುದಿಯಲ್ಲಿ ಮನೆ ಮಾಡಿದ್ದೇಕೆ? ಬೆಟ್ಟದ ಮೇಲೆ ಹತ್ತಿಕೊಂಡು ಹೋಗುವ ಎದೆಗಾರಿಕೆ ಉಳ್ಳವನು ಕಾಡು ಮೃಗಗಳಿಗೆ ಹೆದರುತ್ತಿದ್ದನೆ? ಅವನ "ಒರಟು ಒರಟಾದ" ಆತ್ಮವನ್ನು ಕವಿ ಕಲ್ಪಿಸಿಕೊಳ್ಳುತ್ತಾನೆ. ಮನುಷ್ಯ ನೆಲಕ್ಕೆ ಹತ್ತಿರವಾಗಿ ಬದುಕುವವನು. ಭೂಮಿಯ ಕೊಡುಗೆಗಳೇ ಅವನಿಗೆ ಊಟ, ಉಡುಗೆಗಳು. ಇಷ್ಟಾದರೂ ಬೆಟ್ಟದ ಮೇಲೆ ಮನೆ ಮಾಡಿದವನ ಸಂತತಿ ಸ್ವಲ್ಪ ಭಿನ್ನವೇ ಇರಬಹುದು! ಅವನು ಮೃಗಗಳನ್ನು ಬೇಟೆಯಾಡಿ ಬದುಕಿರಬಹುದು. ಇಂಥ ಪರಾಕ್ರಮಿಯನ್ನೂ ಅಂಜಿಕೆಗಳು ಕಾಡಿದವೇ? ಅದಕ್ಕೇ ಅವನು ಮನೆ ಎಂಬ ಸುರಕ್ಷತೆಯನ್ನು ಬಯಸಿದನೆ? ಬೆಟ್ಟದ ಮೇಲೂ ಮನೆಯನ್ನು ಮಾಡಿದವನ ಸಂತತಿ ಈಗ ನಾಶವಾಗಿದೆ ಎನ್ನುವಾಗ ಕವಿತೆಯಲ್ಲಿ ನಿರಾಸೆ ಕುರುಹನ್ನು ಗುರುತಿಸಬಹುದು...

ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್ 

ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 


ಮರಳಿನಂತೆ ತೋರುವುದಲ್ಲಿ ಸ್ವರ್ಣ ಗಗನ 
ಮರಳುಭೂಮಿ ತೋರುವುದು ಸ್ವರ್ಣದಂತೆ 
ಸುತ್ತಲೂ ಎಲ್ಲೂ  ಗೋಚರಿಸದು ಮನೆಮಾರು 
ಎಲ್ಲಿ ನೋಡಿದರಲ್ಲಿ  ಸ್ನಿಗ್ಧ ನೀರವತೆ 
ತಾಳಿ, ಅಲ್ಲಿ ಕಾಣುವುದೇನು ಕಪ್ಪಾಗಿ, 
ಬೆಟ್ಟದ ಅರ್ಧ ಎತ್ತರದಲ್ಲಿ ಸರಿಸುಮಾರು?
ಶಿಲೆಯ ಮೇಲಣ ಕಲೆಯಲ್ಲ, ಕಪ್ಪು ನೆರಳಲ್ಲ, 
ಹಿಂದೆ ಬದುಕಿದ ಒಬ್ಬ ಮಾನವನ ಗೂಡು. 
ಹತ್ತಿ ಹೋಗುತ್ತಿದ್ದ ಅಲ್ಲೊಬ್ಬ ತೆವಳುತ್ತ 
ಕಾಡುವ  ಅಂಜಿಕೆಗಳಿಂದ ಮುಕ್ತಿಗಾಗಿ 
ಒರಟು ಒರಟಾದ ಅವನ ಆತ್ಮದ ನೋಟ 
ಕಲ್ಪಿಸುತ್ತದೆ ಇಂದು ನನ್ನ ಒಳದೃಷ್ಟಿ -
ತೆವಳುತ್ತ ಎಲ್ಲೋ ಮರೆಯಾದ ಗೆರೆಯಾಗಿ 
ಮಸುಕಾಗುತ್ತಿದೆ ಅವನ ಸಂತತಿಯು ಕೂಡಾ 
ಇದು ನಡೆದು ಕಳೆದವು ಎಷ್ಟೋ ಸವತ್ಸರ 
ಗೆರೆಯನಳಿಸಿತು ಉರುಳಿ ದಶ ಸಹಸ್ರ 

ಕಾಮೆಂಟ್‌ಗಳು

  1. A Cliff Dwelling
    by Robert Frost

    There sandy seems the golden sky
    And golden seems the sandy plain.
    No habitation meets the eye
    Unless in the horizon rim,
    Some halfway up the limestone wall,
    That spot of black is not a stain
    Or shadow, but a cavern hole,
    Where someone used to climb and crawl
    To rest from his besetting fears.
    I see the callus on his soul
    The disappearing last of him
    And of his race starvation slim,
    Oh years ago - ten thousand years.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)