ಅಯ್ಯೋ ವ್ಯಾಕರಣ ಕ್ಯಾಕರನಾ?

(ಒಂದು ಹರಟೆ)

ಸಿ ಪಿ ರವಿಕುಮಾರ್ 
ಈಚೆಗೆ ಮಿತ್ರರೊಬ್ಬರು ಹಂಚಿಕೊಂಡ ಫೇಸ್ ಬುಕ್ ಚಿತ್ರಪಟದಲ್ಲಿದ್ದ ಬ್ಯಾನರಿನಲ್ಲಿ ಅರಸೀಕೆರೆ ಅನ್ನುವುದನ್ನು ARSIKERE ಅಂತ ಬರೆದಿದ್ದರು. ಅರಸಿಯ+ಕೆರೆ ಎನ್ನುವ ಪ್ರತ್ಯಯವುಳ್ಳ ಸಮಾಸಪದ ಅರಸೀಕೆರೆ. ARASIKERE ಎಂದು ಬರೆಯುವುದೇ ಸರಿ ಎಂದು ನಾನು ಕಾಮೆಂಟ್ ಹಾಕೋಣವೇ ಎಂದು ಯೋಚಿಸಿದೆ.  ಈನಡುವೆ "ಅಯ್ಯೋ ವ್ಯಾಕರಣ ಕ್ಯಾಕರನಾ?" ಎನ್ನುವ ಹಾಗೆ ಭಾಷೆಯನ್ನು ಬಳಸುತ್ತಿರುವವರಿಗೆ ನಾನು ಕಾಗುಣಿತ ದೋಷಗಳ ಬಗ್ಗೆ ಹೇಳಿದರೆ ಖಂಡಿತ ನನಗೆ ಸಾಕಷ್ಟು ಡಿಸ್ಲೈಕ್ ಬರುತ್ತವೆ ಎಂದು ಸುಮ್ಮನಾದೆ. ಅರಸೀಕೆರೆಯನ್ನು ಅರಸಿಕೆರೆ ಎಂದು ಬರೆಯುವುದು ಕೂಡಾ ಸರಿಯಲ್ಲವೆಂದು ನನ್ನ ಅಭಿಪ್ರಾಯ - ಹಾಗೆ ಬರೆದಾಗ ಜನ ಅರ+ಸಿಕೆರೆ ಎನ್ನಲು ಪ್ರಾರಂಭಿಸುವುದು ಖಂಡಿತ! ಅಂದಹಾಗೆ ಅರಸೀಕೆರೆಯಲ್ಲಿ ಕೆರೆ ಇದೆಯೇ, ಆ ಕೆರೆ ಯಾವ ಅರಸಿಯದು, ಇವೆಲ್ಲಾ ತಿಳಿದುಕೊಳ್ಳಲು ಯೋಗ್ಯವಾದ ವಿಷಯಗಳು! ಗೊತ್ತಿದ್ದರೆ ತಿಳಿಸಿ.
ಬೆಂಗಳೂರಿನಲ್ಲೂ ಅರಕೆರೆ ಇದೆ. ಎಷ್ಟೋ ಜನ ಕನ್ನಡಿಗರಿಗೇ ಅರಕೆರೆ ಎಂದರೆ ಅರಸನ+ಕೆರೆ ಎನ್ನುವುದು ಗೊತ್ತಿಲ್ಲ. ಹಿಂದೆ ಅರಸ-ಅರಸಿಯರು ತಮಗಾಗಿ ಕೆರೆಗಳನ್ನು ಕಟ್ಟಿಸಿಕೊಂಡು ಸಾಮಾನ್ಯರಿಗೆ ಬಾವಿಗಳನ್ನು ತೋಡುತ್ತಿದ್ದರು ಎಂದು ಕಾಣುತ್ತದೆ. "ಕೆರೆಯಂ ಕಟ್ಟಿಸು ಬಾವಿಯಂ ಸವೆಸು" ಎನ್ನುವಾಗ "ಸ್ವಂತಕ್ಕಾಗಿ ಕೆರೆ ಕಟ್ಟಿಸಿಕೋ, ಜನರಿಗಾಗಿ ಬಾವಿಯನ್ನು ಸವೆಸು" ಎಂಬ ನಿಗೂಢ ಅರ್ಥವಿದೆಯೇ ಎಂಬುದರ ಬಗ್ಗೆ ಮುಂದೆ ಯಾರಾದರೂ ಸಂಶೋಧನೆ ಮಾಡಿಯಾರು. ಸರಳವಾದುದರಲ್ಲಿ ಕಠಿಣವಾದುದನ್ನು ಹುಡುಕುವುದೇ ಸಂಶೋಧನೆ. ಎಲ್ಲರಿಗೂ ಕಾಣುವುದನ್ನೇ ಬರೆದರೆ ಯಾರೂ ಓದುವುದಿಲ್ಲ. ಹೀಗಾಗಿ ಯಾರಿಗೂ ಕಾಣದ್ದನ್ನು ಕಲ್ಪಿಸಿಕೊಂಡಾದರೂ ಬರೆಯುವುದು ಇಂದಿನ ಪತ್ರಕರ್ತರು ಹಾಕಿಕೊಡುವ ಮಾದರಿ. ಇರಲಿ! ಬೆಂಗಳೂರಿನಲ್ಲಿ ಅರಕೆರೆ ಎನ್ನುವುದನ್ನು ARKERE ಎಂದು ಬರೆದದ್ದು ನೋಡಿದಾಗ ನನಗೆ ಕಿರ್ಕಿರಿಯಾಗುತ್ತದೆ. ನೀವು ARAKERE  ಎಂದೇ ಬರೆಯಿರಿ. 
ಬನ್ನೇರುಘಟ್ಟ ಅನ್ನುವುದನ್ನು BANNERGHATTA ಎಂದು ಬರೆಯುವುದು ರೂಢಿಯಾಗಿದೆ. ಕನ್ನಡಿಗರು ಕೂಡಾ ಬನ್ನೇರ್ ಘಟ್ಟ ಎನ್ನುತ್ತಾರೆ. ಇದು ಹಿಂದಿಯ ಪ್ರಭಾವವಿರಬಹುದು. ಯಾವಾಗ ಭರತನು ಭರತ್ ಆದನೋ, ರಮೇಶನು ರಮೇಶ್ ಆದನೋ, ಅಂದು ಬನ್ನೇರು ಬನ್ನೇರ್ ಆಯಿತು. ಒಬ್ಬರು ಮಿತ್ರರು  ನಮ್ಮ ಭಾವಗೀತೆಗಳ ಕವಿ ಲಕ್ಷ್ಮೀನಾರಾಯಣ ಭಟ್ಟರ ಹೆಸರನ್ನು  "N.S. LAKSHMINARAYAN BHAT"  ಎಂದು ಬರೆದಾಗ ನಾನು ಪ್ರತಿಭಟ್ ಸಿದ್ದೆ. ಈಗ ಭರತ, ರಾಮ ಇವರೆಲ್ಲಾ ಕನ್ನಡ ಪಠ್ಯಪುಸ್ತಕಗಳಲ್ಲಿ ಮಾತ್ರ ಇದ್ದಾರೆ. ಕನ್ನಡ ಕ್ಲಾಸಿನಿಂದ ಹೊರಗೆ ಬಂದಾಗ ಅವರು ಭರತ್, ರಾಮ್ ಆಗಿ ಬದಲಾಗುತ್ತಾರೆ. ಅಂದಹಾಗೆ ಬನ್ನೇರುಘಟ್ಟದಲ್ಲಿ "ಬನ್ನೇರು" ಎಂಬುದರ ಗೂಢ ನನಗೆ ಇನ್ನೂ ಗೊತ್ತಾಗಿಲ್ಲ. ಅದು ಬನ್ನೂರುಘಟ್ಟ ಆಗಬೇಕಾಗಿತ್ತಾ? ಅಥವಾ ಬನ+ಏರು+ಘಟ್ಟ ಇವು ಸೇರಿ ಬನ್ನೇರುಘಟ್ಟ ಆಗಿದೆಯಾ? ಬನ್ನಿ ರಾಬಿಟ್ಟಿಗೂ ಇದಕ್ಕೂ ಸಂಬಂಧವಿದೆ ಎಂದು ಒಬ್ಬರು ಮಿತ್ರರು ನನಗೆ ಹೇಳಿದಾಗ ನಾನು ಖಂಡಿತ ನಂಬಲಿಲ್ಲ. 
ಇನ್ನು ಪಾಳ್ಯಗಳ ಗತಿಯಂತೂ ಕೇಳಬೇಡಿರಿ! "ಪಾಳೆಯಪಟ್ಟು" ಎನ್ನುವುದು ಪಾಳೆಯವಾಗಿ, ಜನರ ಬಾಯಲ್ಲಿ ಪಾಳ್ಯವಾಗಿ, ಕನ್ನಡೇತರರ ಬಾಯಲ್ಲಿ ರುಚಿಯಾದ ಪಲ್ಯವಾಗಿದೆ! ಬೆಂಗಳೂರಿನಲ್ಲಿ ಅದೆಷ್ಟು ಬಗೆಯ ಪಲ್ಯಗಳು ಸಿಕ್ಕುತ್ತವೆ ಗೊತ್ತೇ? ಮೈಕಲ್ ಪಲ್ಯ, ಗುರುಗುಂಟೇ ಪಲ್ಯ (ಎಲ್ಲವನ್ನೂ ಶಿಷ್ಯನೇ ಕಬಳಿಸಿದರೆ ಗುರುಗಿಲ್ಲ ಪಲ್ಯ!), ಸುದ್ದಗುಂಟೇ ಪಲ್ಯ (ಶುದ್ಧವಾಗುಂಟೇ ಪಲ್ಯ? ಏನೋ, ಸ್ವಚ್ಚ ಭಾರತ ಅಭಿಯಾನದವರು ಇನ್ನೂ ಈ ಕಡೆ ಬಂದಿಲ್ಲ!) ... ಅಂದಹಾಗೆ ಪಾಳೆಯಗಾರರು ಎಂದರೆ ರಾಜರು ಎಂದುಕೊಂಡೇ ಬೆಳೆದ ನನಗೆ ಇಂದಿನ ಪಾಳ್ಯಗಳ ಸ್ಥಿತಿ ನೋಡಿ ಅವರ ಬಗ್ಗೆ ಅಭಿಮಾನ ಒಂದು ಇಂಚು ಕಡಿಮೆಯಾಗಿದೆ.ಬಿಎಂಟಿಸಿ ಬಸ್ಸಿನ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣದವರೆಗೆ ಮಾತ್ರವೇ ಒಂದು ಪಾಳ್ಯ?! ಇದಕ್ಕಾಗಿ ಯುದ್ಧಗಳೇ ನಡೆಯುತ್ತಿದ್ದವೆ? ಅಥವಾ ಈಗಿನ ಚಿತ್ರಗಳಲ್ಲಿ ತೋರಿಸುವ ರೌಡಿ ಹೊಡೆದಾಟಗಳಿಗೆ ಆಗ ಯುದ್ಧ ಎನ್ನುತ್ತಿದ್ದರೋ!

BANGLORE, CHIKMAGLUR, DODBALLAPUR ಇತ್ಯಾದಿ ಸ್ಪೆಲ್ಲಿಂಗ್ ಅಪಭ್ರಂಶಗಳನ್ನು ನೋಡಿರಿ! ಮುಂದಿನ ಜನಾಂಗದವರು ಇವನ್ನು ಗೂಗಲ್ ಲಿಪ್ಯಂತರ ಬಳಸಿ ಬಂಗ್ಲೊರೆ, ಚಿಕ್ಮಗ್ಲುರ್, ದೊಡ್ಬಲ್ಲಪುರ್ ಇತ್ಯಾದಿಯಾಗಿ ಬಳಸುವುದು ಖಂಡಿತ! ಬೆಂಗಳೂರನ್ನು BENGALURU ಮಾಡಿದ್ದೇನೋ ಈ ದೃಷ್ಟಿಯಿಂದ ಒಳ್ಳೆಯದೇ. ಆದರೆ ಇದನ್ನು ಗಗನಸಖಿಯರು ಬೆಂಗಾಲೂರು ಎನ್ನುತ್ತಾ ನಮ್ಮನ್ನು ಬೆಂಗಾಲಿಗೆ ಸೇರಿಸಿಬಿಟ್ಟಿದ್ದಾರೆ. ನಮ್ಮ ಕಾಳು ಯಾಕೋ ಬೇಯುತ್ತಿಲ್ಲ!
ಇಂಗ್ಲಿಷ್ ಭಾಷೆಯನ್ನು ಕಲಿಯುವ ಉತಾಹದಲ್ಲಿ ನಮ್ಮ ಊರುಕೇರಿಪಾಳ್ಯಗಳು  "ಹೇಳಹೆಸರಿಲ್ಲದಂತಾಗುತ್ತಿದೆ" ಎಂಬುದೇ ನನ್ನ ಚಿಂತೆ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿಯಿರಿ ಎಂದು ನನ್ನ ಹೆಂಡತಿ ನನಗೆ ನೀಡುವ ಪಾಠವನ್ನು ನಾನು ಇನ್ನಾದರೂ ಕಲಿಯಬೇಕು.

ಕಾಮೆಂಟ್‌ಗಳು

  1. ಮಿತ್ರ ಸೀತಾರಾಂ ಮೈಸೂರಿನಿಂದ ಕಳಿಸಿದ ಈ ಪ್ರತಿಕ್ರಿಯೆ ಓದಿ - ನಿಮಗೆ ಮೈಸೂರುಪಾಕ್ ತಿಂದಷ್ಟೇ ಸಂತೋಷವಾಗಬಹುದು -
    ಅಯ್ಯೋ, ವ್ಯಾಕರಣ-ಕ್ಯಾಕರನಾ" ಮೂಲಕ ಊರುನಾಮಭಂಗ ಹೇಗೆ ಊರುಮಾನಭಂಗವನ್ನು ಉಂಟಾಗಿಸುತ್ತಿದೆ ಎಂಬುದನ್ನು ತಿಳಿದಾಗ, ಇಂದಿನ ಭಾಷಾಸ್ಥಿತಿಯ ಬಗ್ಗೆ "ವ್ಯಾ!" ಎಂದು "ವಾಂತಿ ಕರನಾ" ಎನಿಸುತ್ತದೆ. ಹಿಂದಿನ ವೈಯಾಕರಣಿಗಳು "ವೈ-ಆಗ್ರ" ಆವೇಶದಲ್ಲಿದ್ದಂತೆ ಕಟ್ಟಿದ ಭಾಷಾ-ತಾಜ್‍ಮಹಲ್ ಸಂಕೀರ್ಣವು ಇಂದು "ವ್ಯಾಕೀರ್ಣ" ಆಗಿರುವುದನ್ನು ಕಂಡು ಇಂದಿನ ಭಾಷಾಪ್ರೇಮಿಗಳು ವ್ಯಾ-ಕುಲರಾಗುವುದು ಅಥವಾ ವ್ಯಾಘ್ರಪಾದದಿಂದ ವ್ಯಾಘಾತವಾದಂತೆಯೇ ಭಾವಿಸುವುದು ಸಹಜ. ಈ ಬಗ್ಗೆ ವೈಯಾಕರಣಿಗಳೆಲ್ಲ ವೈಯ್ಯಾಳಿಕಾವಲ್‍ನಲ್ಲಿ (ಪೋಲಿಸ್ ಕಾವಲಿಲ್ಲದೆ) ಸಭೆಸೇರಿ, "ವೈ?" ಎಂದು ಒಂದೆರಡು ಗುಟುಕು ವೈನ್ ಹಾಕಿ ವ್ಯಾಖ್ಯಾನಿಸುವುದು ಈಗ ಅಗತ್ಯವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಗಯ್ಯಾಳಿಕಾವಲ್‍ನಲ್ಲಿ ಕೆಲವರು ಸಭೆಸೇರಿ ವ್ಯಾ-ಕರಣದ ಬಗ್ಗೆ ಕ್ಯಾ-ಕರಿಸಬಹುದು ಎಂಬುದನ್ನು ಇಲ್ಲಿ ಗಂಭೀರ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
    "ಪಾಳ್ಯ" "ಪಲ್ಯ" ಆಗಿ, "ಮಲ್ಯ" "ಮಾಲ್ಯ" ಆಗಿ ಹೆಸರುಗಳಿಗೆ ಮೌಲ್ಯವೇ ಇಲ್ಲದಂತಾಗಿರುವ ಸ್ಥಿತಿಯನ್ನೂ ನೀವು ಚೆನ್ನಾಗಿ ಚಿತ್ರಿಸಿದ್ದೀರಿ. ಇದನ್ನು ಸುಧಾರಿಸಲು "ಶಲ್ಯ"ನಿಗೆ ಶಲ್ಯ ಅಥವಾ ಶಾಲು ಹೊದಿಸಿ, ಅವನ ಹೆಸರಲ್ಲಿ ಶಾಲ್ಯನ್ನ ಸೇವೆ ಮಾಡಿಸುವುದು ಉಪಯುಕ್ತವಾಗಬಹುದು. ಇನ್ನು Bun-Air-Gutter, Bun-Shun-Curry ಹೆಸರುಗಳ ಮೂಲದ ಬಗ್ಗೆ "ಬೇಕರಿ" ಮಾಲೀಕರಲ್ಲಿ ಉತ್ತರ ಸಿಗಬಹುದು; ಅವರನ್ನೊಮ್ಮೆ "ನಮಗಿದು ಬೇಕ್ರಿ" ಎಂದು ಕೇಳಿನೋಡಬೇಕು. [ಪದಾರ್ಥ ಸೀದು ಕರಕಾಗಿದ್ದರೆ, "ಬೇಕರಿಗೊಂಡಿದೆ" ಎನ್ನುವರು.] ಕಡೆಯದಾಗಿ, ಮೈಸುರು, ತುಮಕುರು, ಬೆಂಗಳುರು ಎಂದು "ಊರು" ಮೊಟಕಾಗಿರುವುದನ್ನು ಕಂಡಾಗಲೆಲ್ಲ ನನಗೆ ಮೈ ಮೇಲೆ "ಕುರು" ಎದ್ದು "ಸುರುಸುರು" ಎಂದು ಉರಿಸುತ್ತಿರುವ ಅನುಭವ ಬರುತ್ತದೆ. ಯಾರೋ "ಉರು" ಹೊಡೆದು ಪಾಸ್ ಮಾಡಿರುವವರು ಹೀಗೆ ಊರು ಹೆಸರುಗಳನ್ನು ಉರುಳಿಗೆ ಹಾಕಿ ಉರುಟಿಸಲು ಪ್ರಯತ್ನಿಸಿರಬೇಕು. ಇದನ್ನು ಊರುಭಂಗವೇ ಎಂದು ತೀವ್ರವಾಗಿ ಭಾವಿಸಿದವರು, ಮಂಗಗಳುರುವಿನ ಬಾಳೆಯ ತೋಟದ ಪಕ್ಕದ ಕಾಡಲ್ಲಿ ಒಂದು ಉಪವಾಸ ಸತ್ಯಾಗ್ರಹ ಹೂಡುವುದು ಒಳಿತು.

    ಪ್ರತ್ಯುತ್ತರಅಳಿಸಿ
  2. ಹೂಬಳ್ಳಿಯಿಂದ ಆವೃತವಾಗಿ ಹೂಬಳ್ಳಿ ಆಗಿ ಪ್ರಗತಿಪರ ಚಿಂತಕರಿಂಗ ಹುಬ್ಬಳ್ಳಿ ಆಗಿ ಆಧುನಿಕತೆಗೆ ಸಿಕ್ಕಿ ಹುಬ್ಳಿ ಆಯ್ತು (ಹೂಬಳ್ಳಿಗಳು ಇಂದಿಗೂ ಇವೆ ಕಟ್ಟಡದ ಹೂದಾನಿಯಲ್ಲಿ )

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ರಸ್ತೆಯಲ್ಲಿ ಹುಬ್ಬಿದೆ ("ಉಬ್ಬಿದೆ") ಅನ್ನುವ ಫಲಕಗಳ ಬಗ್ಗೆ ಈಚೆಗೆ ತುಂಬಾ ಚರ್ಚೆಯಾಗಿತ್ತು.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)