ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ!



ಮೂಲ ಭೋಜಪುರಿ - ಮೀರಾಬಾಯಿ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 
"ಕರಮ್ ಕೀ ಗತಿ ನ್ಯಾರೀ ಸಂತೋ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು. ಹೃದಯನಾಥ್ ಮಂಗೇಶ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್  ಈ ಭಜನೆಯನ್ನು  ಹಾಡಿದ್ದಾರೆ.  ಅಂತರ್ಜಾಲದಲ್ಲಿ ಲಭ್ಯವಾಗಿದೆ, ನೀವೂ ಕೇಳಬಹುದು. ಈ ಭಜನೆಯಲ್ಲಿ ಮೀರಾಬಾಯಿ ವಿಧಿಯ ವಿಪರ್ಯಾಸವನ್ನು ಕುರಿತು ಹೇಳುತ್ತಿದ್ದಾಳೆ. ದೊಡ್ಡ ದೊಡ್ಡ ಕಣ್ಣುಗಳನ್ನು ಪಡೆದ ಜಿಂಕೆಯ ಕರ್ಮ ಒಣಕಲು ಕಾಡಿನಲ್ಲಿ ಅಲೆದಾಡುವುದು! ಮೀರಾಬಾಯಿಗೆ ತನ್ನ ಜೀವನದ ಬಗ್ಗೆ ಕೂಡಾ ಹೀಗೇ ಅನ್ನಿಸಿರಬಹುದು. ತಾನು ಹುಟ್ಟಿದ್ದು ಗಿರಿಧರ ಗೋಪಾಲನಿಗಾಗಿ - ಆದರೆ  ರಾಜನೊಬ್ಬ ತನ್ನನ್ನು ಬಲವಂತದಿಂದ ಮದುವೆಯಾಗಿದ್ದಾನೆ.  ಇದೂ ಕರ್ಮದ ಆಟವೆಂದೇ ಅವಳಿಗೆ ತೋರುತ್ತದೆ.   

ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ!
ಸಂತರೇ ಹೇಳುವೆ ಕೇಳಿ, ನಾ ಕಂಡ ತರಹ

ಮೃಗಕ್ಕೆ ಕೊಟ್ಟದ್ದೇಕೆ ದೊಡ್ಡ ಬಟ್ಟಲುಗಣ್ಣು ?
ಅಲೆಯುತ್ತದೆ ನೋಡುತ್ತ ಒಣಕಲು ಕಾಡನ್ನು!

ಕೊಕ್ಕರೆಗೆ ಕೊಟ್ಟದ್ದೇಕೆ ಉಜ್ವಲ ಬಿಳಿ ಬಣ್ಣ?
ಕೋಗಿಲೆಗೆ ಬಳಿದು ಬರಿಯ ಕಪ್ಪನ್ನ!

ಸಿಹಿನೀರು ತುಂಬಿ ಪುಟ್ಟ ನದಿಗಳೊಡಲಲ್ಲಿ 
ತುಂಬಿದ್ದೇಕೆ  ಉಪ್ಪುನೀರು  ಕಡಲಲ್ಲಿ!

ಮೂರ್ಖನ ಕೈಯಲ್ಲಿ ರಾಜ್ಯಭಾರವನಿತ್ತು
ಪಂಡಿತನನ್ನಲಸುವೆ ಭಿಕ್ಷಾಪಾತ್ರೆ ಕೊಟ್ಟು!

ಮೀರಾಳಿಗೆ ಒಡೆಯ ಗಿರಿಗೋವರ್ಧನಧಾರಿ
ಬೇರೇನೋ ಬಗೆದಿರುವ ರಾಜ ಅನ್ಯವಿಚಾರಿ!
- ಸಿ ಪಿ ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)