ಮುಗ್ಧ ಪ್ರಶ್ನೆಗಳು



ಮಾಸೂಮ್ (ಮುಗ್ಧ) ಹಿಂದಿಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಹಾಡನ್ನು ಬರೆದವರು ಗುಲ್ಜಾರ್.  ಮೊದಲು ಫ್ರೆಂಚ್ ಭಾಷೆಯಲ್ಲಿ ಅನಂತರ ಇಂಗ್ಲಿಷ್ ಭಾಷೆಯಲ್ಲಿ ತಯಾರಾದ "ಮ್ಯಾನ್, ವುಮನ್ ಅಂಡ್ ಚೈಲ್ಡ್" ಚಿತ್ರದಿಂದ ಪ್ರಭಾವಿತವಾದ ಮಾಸೂಮ್ ಚಿತ್ರವನ್ನು ನಿರ್ದೇಶಿಸಿದವರು ಶೇಖರ್ ಕಪೂರ್.  ಈ ಚಿತ್ರದಲ್ಲಿ ಅನ್ಯೋನ್ಯದಿಂದ ಸಂಸಾರ ಮಾಡಿಕೊಂಡಿರುವ ಗಂಡ-ಹೆಂಡಿರ ಕಥೆ ಇದೆ (ಅಭಿನಯ - ನಸೀರುದ್ದೀನ್ ಶಾಹ್ ಮತ್ತು ಶಬಾನಾ ಆಜ್ಮಿ).  ಇವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು.  ಈ ಮಕ್ಕಳು ಹಾಡುವ "ಲಕಡೀ ಕೀ ಕಾಠೀ" ಹಾಡನ್ನು  ನೀವು ಕೇಳಿರಬಹುದು. ಇವರೆಲ್ಲರ ಸುಂದರ ಜೀವನದಲ್ಲಿ ಒಮ್ಮೆಲೇ ಬಿರುಗಾಳಿ ಬೀಸುತ್ತದೆ. ಗಂಡ ಹಿಂದೆ ಒಮ್ಮೆ ಜೀವನದಲ್ಲಿ ಎಡವಿದ್ದಾನೆ - ಅವನ ಹಳೆಯ ಸಂಬಂಧದಿಂದ ಅವನಿಗೊಬ್ಬ ಮಗನಿದ್ದಾನೆ ಎಂದು ಅವನಿಗೇ ತಿಳಿದಿಲ್ಲ.  ಇದ್ದಕ್ಕಿದ್ದಂತೆ ಅವನಿಗೊಂದು ಪತ್ರ ಬರುತ್ತದೆ. ಅವನ ಹಿಂದಿನ ಗೆಳತಿ ಈ ವಿಷಯ ತಿಳಿಸಿ ತಾನು ಸಾವಿನ ಅಂಚಿನಲ್ಲಿದ್ದೇನೆಂದು ಬರೆದಿದ್ದಾಳೆ. ತನ್ನ ಮಗನನ್ನು ಅವನು ಕರೆದುಕೊಂಡು ಬರುತ್ತಾನೆ.  ಅವನ ಹೆಂಡತಿ-ಮಕ್ಕಳಿಗೆ ಇದರಿಂದ ಆಘಾತವಾಗುತ್ತದೆ. ಮುದ್ದಾದ ಮಗುವನ್ನು ಪ್ರೀತಿಸಬೇಕೋ ದ್ವೇಷಿಸಬೇಕೋ ತಿಳಿಯದೆ ಹೆಂಡತಿ ತೊಳಲಾಡುತ್ತಾಳೆ. ಗಂಡನೂ ಅಪರಾಧೀ ಪ್ರಜ್ಞೆಯಿಂದ ತೊಳಲಾಡುತ್ತಾನೆ. ತಮ್ಮ ಬದುಕಿನಲ್ಲಿ ಒಮ್ಮೆಲೇ ಪ್ರವೇಶಿಸಿದ ಮಗುವಿನ ಮುಗ್ಧ ಪ್ರಶ್ನೆಗಳು ಅವರನ್ನು ದಂಗಾಗಿಸುತ್ತವೆ.

ಗುಲ್ಜಾರ್ ಅವರಿಗೆ ಈ ಮಗುವಿನ ಪ್ರಶ್ನೆಗಳಲ್ಲಿ ಜೀವನದ ಸರಳ ಪ್ರಶ್ನೆಗಳು ಕಾಣುತ್ತವೆ. ನಾವು ಜೀವನದಲ್ಲಿ ಏನೇ ಪಡೆದರೂ ಅದಕ್ಕೆ ಬೆಲೆ ತೆರಬೇಕು. ತಾನು ಹಿಂದೆ ಕಂಡ ಸುಖಕ್ಕೆ ಬೆಲೆ ಪಡೆಯಲು ಬಂದ ಜೀವನದಂತೆ ಮುಗ್ಧ ಮಗು ನಾಯಕನಿಗೆ ಕಾಣುತ್ತದೆ. ಈ ಹಾಡನ್ನು ಚಿತ್ರಕ್ಕಾಗಿ ಹಾಡಿದವರು ಅನೂಪ್ ಘೋಶಾಲ್ ಎಂಬ ಗಾಯಕ. ಇದೇ ಹಾಡನ್ನು ಲತಾ ಮಂಗೇಶ್ಕರ್ ಕೂಡಾ ಹಾಡಿದ್ದಾರೆ.  ಹುಡುಕಿದರೆ ನಿಮಗೆ ಅಂತರ್ಜಾಲದಲ್ಲಿ ಸಿಕ್ಕುತ್ತದೆ.



ಮೂಲ ಹಿಂದಿ - ಗುಲ್ಜಾರ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ನಿನ್ನೊಂದಿಗೆ ನನಗೆ ಮುನಿಸಿಲ್ಲ ಬದುಕೇ, ದಂಗಾಗಿದ್ದೇನೆ ಅಷ್ಟೇ,
ಇನ್ನೇನಿಲ್ಲ, ನಿನ್ನ ಮುಗ್ಧ ಪ್ರಶ್ನೆಗಳು ನನ್ನನ್ನು ಬಾಧಿಸುತ್ತಿವೆ 
ಬದುಕಿದ್ದಕ್ಕೆ ಮುಂದೆ ನೋವು ಹೊರಬೇಕೆಂದು ಗೊತ್ತಿರಲಿಲ್ಲ
ನಕ್ಕಾಗ ಮುಗುಳ್ನಗೆಯ ಸಾಲ ತೀರಿಸಬೇಕೆಂದು ಗೊತ್ತಿರಲಿಲ್ಲ
ಯಾವಾಗಲಾದರೂ ನಕ್ಕರೆ ಈಗ ಭಾಸವಾಗುತ್ತದೆ
ಸಾಲದ ಭಾರವನ್ನಿಟ್ಟಂತೆ ತುಟಿಗಳ ಮೇಲೆ 
ನಿನ್ನ ದುಃಖಗಳು ಹೇಳಿಕೊಟ್ಟವು ಬದುಕೇ
ಹೊಸ ಸಂಬಂಧಗಳ ಪಾಠ ಹಲವಾರು
ತಂಪಾದ ನೆರಳು ಸಿಕ್ಕಿದ್ದು ಯಾವಾಗ?
ಅನುಭವಿಸಿದಾಗ ರಣಬಿಸಿಲು 
ತುಂಬಿ ಬಂದಿದೆ ಇಂದು, ಸುರಿದು ಹೋಗಲಿ ಬಿಂದು,
ನಾಳೆ ಇವುಗಳಿಗಾಗಿ ಕಾತರಿಸಬಹುದು ಕಣ್ಣು -
ಎಲ್ಲಿ ಕಳೆದುಹೋಯಿತೋ, ಇಲ್ಲೇ ಬಚ್ಚಿಟ್ಟಿದ್ದೆ
ಪುಟ್ಟದೊಂದು ಕಣ್ಣೀರ ಹನಿ ಕಾಣುತ್ತಿಲ್ಲವೆಂದು!
- ಸಿ ಪಿ ರವಿಕುಮಾರ್

ಕಾಮೆಂಟ್‌ಗಳು

  1. गीतकार : गुलज़ार,

    तुझ से नाराज़ नहीं जिंदगी, हैरान हूँ मैं
    तेरे मासूम सवालों से परेशान हूँ मैं

    जीने के लिए सोचा ही नहीं, दर्द संभालने होंगे
    मुस्कुराए तो, मुस्कुराने के कर्ज़ उतारने होंगे
    मुस्कुराऊ कभी तो लगता है, जैसे होठों पे, कर्ज़ रखा है

    जिंदगी तेरे गम ने हमें रिश्ते नये समज़ाए
    मिले जो हमें , धूप में मिले छाँव के ठन्डे साए

    आज अगर भर आई हैं, बूंदे बरस जाएगी
    कल क्या पता इन के लिए, आँखे तरस जाएगी
    जाने कब गुम हुआ, कहा खोया, एक आँसू, छुपा के रखा था

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)