ಬಿರುಕು

Courtesy - Devian Art

ಸಿ ಪಿ ರವಿಕುಮಾರ್

ಎಲ್ಲಾದರೂ ಬಿರುಕು ಕಂಡಿತೇ?
ಮಧ್ಯ ಇದು ಒಂದು ಬೆಣೆ
ಸಾಧ್ಯವಾದಾಗೆಲ್ಲಾ
ಸಮಯ ಸಿಕ್ಕಾಗೆಲ್ಲಾ
ಹಾಕುತ್ತಿರು ಏಟು
ಒಂದು ದಿನ ಎರಡು ಭಾಗವಾಗುತ್ತದೆ
ಎಲ್ಲಾದರೂ ಬಿರುಕು ಕಂಡಿತೇ?
ಹುಡುಕು, ಸಿಕ್ಕುತ್ತದೆ ಅಂಟು
ಕಷ್ಟವಾಗಬಹುದು, ಜೋಡಿಸು
ಮೊದಲು ಗೆರೆ ಕಾಣಬಹುದು
ಆದರೆ ಸೋರುವುದಿಲ್ಲ

ಎಲ್ಲಾದರೂ ಸೀಳು ಕಂಡಿತೇ?
ಎಡ ಬಲವೆಂದು ಎರಡೂ ಕೈಯಲ್ಲಿ ಹಿಡಿದು
ವಿರುದ್ಧ ದಿಕ್ಕುಗಳಲ್ಲಿ ಎಳೆದುಬಿಡು
ಹರಿದು ಎರಡು ಭಾಗವಾಗುತ್ತದೆ
ಎಲ್ಲಾದರೂ ಸೀಳು ಕಂಡಿತೇ?
ಹುಡುಕಿ ತಾ ಒಂದು ಸೂಜಿ ಮತ್ತು ನೂಲಿನ ಎಳೆ
ಕಷ್ಟವಾಗಬಹುದು, ಹಾಕು ಹೊಲಿಗೆ
ಮೊದಲು ಗೆರೆ ಕಾಣಬಹುದು
ಆದರೆ ಮಾನ ಮುಚ್ಚುತ್ತದೆ

ನೆನಪಿಡು
ನಿನ್ನ ಕೈಕಾಲು, ನಿನ್ನ ಹಲ್ಲು, ನಿನ್ನ ಅಂಗಾಂಗಗಳಲ್ಲಿ
ಎಂದು ಬೇಕಾದರೂ ಕಾಣಿಸಿಕೊಳ್ಳಬಹುದು
ಬಿರುಕುಗಳು,  ಸೀಳು
ಎಲ್ಲಿಗೆ ಓಡುತ್ತೀಯಾ?
ಕಸಾಯಿಖಾನೆಗೋ
ದವಾಯಿಖಾನೆಗೋ

ಸಮಾಜದ ನೋವು ನಿನ್ನದೇ
ನಿನ್ನ ಹೆಬ್ಬೆಟ್ಟಿನ ನೋವನ್ನು
ನಿನ್ನ ನರಮಂಡಲ
ನಿನಗೆ ಹೇಳುತ್ತಿಲ್ಲವೇ?
ನಿನಗೆ ಏನು ಬೇಕು ಹೇಳು
ಸರ್ಜರಿಯೋ ಬ್ಯಾಂಡೇಜೋ

ನೆನಪಿಡು
ಇದ್ದೇ ಇರುತ್ತದೆ ಎಲ್ಲಾ ಕಡೆ
ಇಂದಲ್ಲ ಮುಂದೆ
ಒಂದಲ್ಲ ಒಂದು ಬಿರುಕು
ಮುಲಾಮು ಹಚ್ಚುತ್ತಾ
ನೋವು ಮರೆತು
ಮುಂದೆ ಸಾಗುವುದೇ ಬದುಕು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)