ನಿನಗಾಗಿ ತಂದಿರುವೆ ಈ ವೈಶಾಖ

ಮೂಲ : ಡಾ. ಎಸ್. (ಕುಟ್ಟಿ) ರೇವತಿ (ತಮಿಳು)
ಇಂಗ್ಲಿಷ್ ಅನುವಾದ: ಕಲ್ಯಾಣ್ ರಾಮನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 



ನಿನ್ನೆದೆಯ ಹುಲ್ಲುಗಾವಲು ಒಣಗಿಹೋಗಿದೆಯೇ,  
ಪತ್ರಗಳೇ ಬರೆದಿಲ್ಲ ಈನಡುವೆ. 
ಪ್ರಶಾಂತಸಾಗರದಂತಿರುವ ನಿನ್ನ ಪತ್ರಗಳು,
ಅವುಗಳ ಕೆಳಗೆ ಭೋರ್ಗರೆಯುವ ಕಣ್ಣೀರಿನ ಕಡಲು. 
ರಕ್ಷಿಸಲು ಧಾವಿಸಬೇಕೆಂಬ ತವಕ  
ಉಂಟು ಮಾಡುವ ನಿನ್ನ ಮೃದುವಾದ ಒಡಲು. 

ಬೇಸಗೆಯ ಬೀದಿಯಲ್ಲಿ ಬೇರಾರೂ ಕಾಣಿಸುವುದಿಲ್ಲ, 
ಹೊರತಾಗಿ ಒಬ್ಬ ಪೋಸ್ಟ್ ಮ್ಯಾನ್, 
ಅವನು ತರುತ್ತಿದ್ದಾನೆ ಕತ್ತು ಹಿಸುಕಿದ ಪತ್ರಗಳನ್ನು ಹೊತ್ತು,
ಹಾಗೂ ಬಾಲ್ಯದ ರಹಸ್ಯಗಳನ್ನು ಕಳೆದುಕೊಂಡ ಹುಡುಗಿಯನ್ನು ಬಿಟ್ಟು. 

ಎಲ್ಲ ತೊರೆಗಳನ್ನೂ ಒಂದೇ ಗುಟುಕಿನಲ್ಲಿ 
ಹೀರಿಬಿಡುವ ವೈಶಾಖದ ವಿಚಿತ್ರ ಹಕ್ಕಿ 
ಮೆಲ್ಲನೆ ಬಂದಾಗ ಕಲ್ಲುಬಂಡೆಗಳಿಗೂ ಜೀವ ಬರುತ್ತದೆ. 
ಮಕ್ಕಳು ಆಡಲು ನಿರಾಕರಿಸುತ್ತಾರೆ 
ನಿತ್ಯವೂ ರಕ್ತದಲ್ಲಿ ಮಿಂದೇಳುವ ಸೂರ್ಯನ ಕೆಳಗೆ.  
ಒಂದು ಖಾಲೀ ಮನೆಯಲ್ಲಿ ಬಹಳ ಹೊತ್ತಿನಿಂದಲೂ 
ಟೆಲಿಫೋನ್ ರಿಂಗಣಿಸುತ್ತಿದೆ. 
ಹುಡುಗಿಯರ ಕಣ್ಣುಗಳು ಮಬ್ಬಿನಲ್ಲಿ ತೇಲುತ್ತವೆ. 

ಹಿಂದೊಮ್ಮೆ 
ಮರಗಳಿಗೆ ನಿಲ್ಲಲೂ ಶಕ್ತಿಯಿಲ್ಲದ ಒಂದು ಬೇಸಗೆಯಲ್ಲಿ 
ನನ್ನ ದೇಹವನ್ನು ಜೀವಂತ, ಅಗಾಧವೆಂದು 
ಬಣ್ಣಿಸಿದ್ದೆ ನೀನು. 
ನಿದ್ದೆಯಿಂದ ಎದ್ದಾಗ ನನ್ನ ಹ್ಯಾಂಡ್ ಬ್ಯಾಗ್ ತೆರೆದಿತ್ತು. 
ಅದರಲ್ಲಿ ನಾನು ಜೋಪಾನ ಮಾಡಿದ್ದೆ 
ನಿನ್ನ ಮುತ್ತುಗಳು, 
ಕಣ್ಣೀರಿನ ಉಪ್ಪಿನಲ್ಲಿ ನೆಂದು ಒಣಗಿದ ನಮ್ಮ ಜಗಳಗಳು. 

ಈ ಬೇಸಗೆಯಲ್ಲಿ ಅದರ ನೆನಪು 
ನಂದಿಸಿದ ಕಂದೀಲಿನ ಕಮಟು ವಾಸನೆಯಂತೆ -
ನಿನಗಾಗಿ ಜೋಪಾನ ಮಾಡಿಟ್ಟಿದ್ದೇನೆ. 

ನನಗೆ ಪತ್ರಗಳನ್ನು ಬರೆ, ಖಂಡಿತಾ ಬರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)