ಕುದುರೆಯಲ್ಲ


ಮೂಲ - ನ್ಯಾಟಲೀ ಶಪೇರೋ (ಅಮೆರಿಕಾ ಸಂಸ್ಥಾನ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

Image result for bug wiki

ನನಗೆ ಇಷ್ಟವಾಗುವುದು  ಸರಾಸರಿ  ಇಪ್ಪತ್ತೈದು ವರ್ಷಗಳ ಕಾಲ 
ಬಾಳಿ ಬದುಕುವ ಸಾಕಿದ ಕುದುರೆಯಲ್ಲ; ನನಗಿಷ್ಟವಾಗುವುದು 
ಒಂದೇ ದಿನ ಬದುಕುವ ಹುಳು. ಅದರಲ್ಲೂ ಒಂದು ದುರ್ದಿನದಲ್ಲಿ 
ಬದುಕುವ ಹುಳು. ಎಲ್ಲೋ ರೈಲೊಂದು ಹಳಿ ತಪ್ಪಿದ ದಿವಸ,
ಕೆರೆನೀರು ರಾಸಾಯನಿಕಗಳಿಂದ ಕಲುಷಿತವಾದ ದಿವಸ,  
ಅಪರಾಧ ಮುಚ್ಚಿಟ್ಟದ್ದನ್ನು ನ್ಯಾಯಪಾಲಕ ಒಪ್ಪಿಕೊಂಡ ದಿವಸ, 
ಬೇರೇನೂ ಕುರಿತು ಜನರಿಗೆ ಯೋಚಿಸಲೇ ಆಗದಂಥ ದಿವಸ,
ಆ ಯಃಕಶ್ಚಿತ್ ಹುಳುವನ್ನು ಯಾರೂ ಕ್ಯಾರೇ ಎನ್ನದ ದಿವಸ. 
ಹುಳುವಿನ ಮನೋವ್ಯಾಪಾರ ನನಗೆ ಗೊತ್ತಿಲ್ಲವೇ 
ಕೊಳೆತು ನಾರುವ ಕಾಲದಲ್ಲಿ, ಪಾಪದಲ್ಲಿ ಸಂಭವಿಸಿದ ನನಗೆ?
ಎಲ್ಲರೂ ಎಷ್ಟು ವ್ಯಸ್ತರೆಂದರೆ ನನ್ನನ್ನು ಕೊಲ್ಲಲೂ ಯಾರಿಗೂ ಪುರುಸೊತ್ತಿಲ್ಲ. 
ವಸ್ತುಸ್ಥಿತಿ ಹೀಗಿದ್ದರೂ ಹೆಚ್ಚದು ನನ್ನ ಆಯಸ್ಸು. 
ನಾನು ಬದುಕುವುದು ಕುದುರೆಗಳೊಂದಿಗೆ ಅಲ್ಲ,
ನನ್ನ ವಾಸ ನಾಯಿಯೊಂದಿಗೆ, ಮುಸ್ಸಂಜೆ ಕಣ್ಣುಕಾಣದ ನಾಯಿ,
ಕಾಲಿಗೆ ದೆಬ್ಬೆ ಕಟ್ಟಿಕೊಂಡು ಕುಂಟುವ ನಾಯಿ, 
ಯಾವುದೇ ಪ್ರತಿಮೆ ಕಂಡಾಗ ಕಾಲೆತ್ತುವ ನಾಯಿ. 
ಹುಳುವಿಗೆ ಒಮ್ಮೆ ಅರ್ಥವಾಗುವಂತಿದ್ದರೆ ನನ್ನ ಭಾಷೆ 
ಅವಳಿಗೆ ನಾನು ತಿಳಿಸಿ ಹೇಳಬಹುದಾಗಿತ್ತು ಭಯ ಪಡದಿರು 
ನಮ್ಮ ಜಗತ್ತು ಆಗಲೇ ಹೋಗಿದೆ ಸತ್ತು, ಅದಕ್ಕೆ ನೀನು ಏನೂ ತರಲಾರೆ ಆಪತ್ತು. 

ಕವಿತೆಯ ಸ್ವಾರಸ್ಯ: ಇಪ್ಪತ್ತೈದು ವರ್ಷಗಳಷ್ಟು ದೀರ್ಘಕಾಲ ಬದುಕುವ ಕುದುರೆಯ ಮೈಮೇಲೆ ಹುಳುಗಳು ಬಾರದಂತೆ ಬೆಳೆಸಲು ಮನುಷ್ಯ ಎಷ್ಟು ಕಷ್ಟ ಪಡುತ್ತಾನೆ? ಇಂಥ ಹುಳು ಬೆಳೆಯಲು ಬೀದಿನಾಯಿಯ ಮೊರೆ ಹೋಗುತ್ತದೆ.   ಆದರೆ ಹುಳುವಿನ ಜೀವನದಲ್ಲೂ ಒಂದು ನಿಯತ್ತಿದೆ.  ಜನ ತನ್ನನ್ನು ಕೊಲ್ಲಲು ಮರೆತ ದಿವಸವೂ ಅದು ಮತ್ತೊಂದು ದಿನ ಬದುಕುವ ಆಲೋಚನೆ ಮಾಡುವುದಿಲ್ಲ. ಹೀಗಾಗಿ ಹುಳುವೇ ಕವಯಿತ್ರಿಗೆ ಆದರ್ಶವಾಗಿ ಕಾಣುತ್ತಿದೆ! ನಮ್ಮ ವರ್ತಮಾನವನ್ನು ಕಂಡಾಗ ನಾವೆಲ್ಲರೂ ಕಜ್ಜಿನಾಯಿಯೊಂದಿಗೆ ಬಾಳುತ್ತಿರುವ "ಹುಳು"ಮಾನವರಾಗಿ ಕವಯಿತ್ರಿಗೆ ಕಂಡರೆ ಏನಾಶ್ಚರ್ಯ? 
ಈ ಕವಿತೆಯನ್ನು ಇನ್ನೊಂದು ಅರ್ಥದಲ್ಲೂ ನೋಡಬಹುದು.  ಇಂದು ಯಃಕಶ್ಚಿತ್ ಎಂಬುದನ್ನೇ ವೈಭವೀಕರಿಸಿ ತೋರಿಸುವುದನ್ನು ನೋಡುತ್ತೇವೆ.  ಕುದುರೆ ಸಾಕುವುದು ಕಷ್ಟದ ಕೆಲಸ ಹೇಗೋ ಹಾಗೇ ನಿಜವಾದ ಸಾಧನೆ ಮಾಡುವುದು ಕಷ್ಟ. ಒಳ್ಳೆಯ ಕವಿತೆ, ಒಳ್ಳೆಯ ಪುಸ್ತಕ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ.  ಅದರಲ್ಲಿ ಅಷ್ಟು "ಲಾಭವೂ" ಇಲ್ಲ ಎಂದು ನಿರ್ಧರಿಸಿದವರು ಗುಣಮಟ್ಟದಲ್ಲಿ ಕಡಿಮೆ ಮಾಡಿಕೊಂಡು ಸಂಖ್ಯೆಯನ್ನು ಹೆಚ್ಚಳ ಮಾಡಿದರು.  ಹುಳುಗಳು ಹೇರಳ ಸಂಖ್ಯೆಯಲ್ಲಿರುತ್ತವೆ, ಕುದುರೆಗಳಲ್ಲ.  ಕೆಟ್ಟುಹೋಗುತ್ತಿರುವ ಜಗತ್ತಿನಲ್ಲಿ ದೊಡ್ಡ ಸಮಸ್ಯೆಗಳೊಂದಿಗೆ ಎಲ್ಲರೂ ಹೆಣಗುತ್ತಿರುವಾಗ  ಹುಳು ತನ್ನ ಬದುಕನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬಹುದಾಗಿತ್ತು. ಆದರೆ  ಪುಣ್ಯವಶಾತ್ ಹುಳು ಹಾಗೆ ಮಾಡುವುದಿಲ್ಲ! ಈಗಾಗಲೇ ಕೆಟ್ಟುಹೋದ ಜಗತ್ತಿಗೆ ನಿನ್ನಿಂದ ಏನೂ ಆಪತ್ತಿಲ್ಲ ಎಂದು ಕವಯಿತ್ರಿ ಹುಳುವಿಗೆ ಹೇಳುವ ಸಮಾಧಾನ ಏನನ್ನು ಸೂಚಿಸುತ್ತದೆ ಎಂದು ಯೋಚಿಸಿ. 




ಕಾಮೆಂಟ್‌ಗಳು


  1. What I adore is not horses, with their modern
    domestic life span of 25 years. What I adore
    is a bug that lives only one day, especially if
    it’s a terrible day, a day of train derailment or
    chemical lake or cop admits to cover-up, a day
    when no one thinks of anything else, least of all
    that bug. I know how it feels, born as I’ve been
    into these rotting times, as into sin. Everybody’s
    busy, so distraught they forget to kill me,
    and even that won’t keep me alive. I share
    my home not with horses, but with a little dog
    who sees poorly at dusk and menaces stumps,
    makes her muscle known to every statue.
    I wish she could have a single day of   language,
    so that I might reassure her don’t be afraid –
    our whole world is dead and so can do you no harm.

    ಪ್ರತ್ಯುತ್ತರಅಳಿಸಿ
  2. ಮೂಲ ಕವನದಲ್ಲಿ ನಾಯಿಯು ಹೆಣ್ಣುನಾಯಿ ಎಂಬ ಅರ್ಥ ಬರುವಂತಿದೆ ಅಲ್ಲವೆ? ಹಾಗಿದ್ದರೆ ಪ್ರತಿಮೆ ಕಂಡಾಗ‌ ಕಾಲೆತ್ತುವ ನಾಯಿ ಎಂಬ ಅನುವಾದ ಸರಿಯಾಗದು ಎನಿಸುತ್ತದೆ.(ಅದು ಗಂಡು ನಾಯಿಗಳ ನಡವಳಿಕೆ) ನಾಯಿ ಪ್ರತಿಮಗೆ ಮೈ ಉಜ್ಜುವ ಕ್ರಿಯೆಯನ್ನೇನಾದರು ಆ ಸಾಲು ಸೂಚಿಸುತ್ತದೆಯೆ?

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)