ನಿದರ್ಶನ

ಮೂಲ : ನ್ಯಾಟಲೀ ಶಪೆರೋ (ಅಮೆರಿಕಾ ಸಂಸ್ಥಾನ) 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 




ಸತ್ತವರಿಗೆ ತಮ್ಮ ಒಂದಿಷ್ಟನ್ನಾದರೂ 
ಬಚ್ಚಿಡಲು ಬೇರೆಲ್ಲಿದೆ ಸ್ಥಾನ 
ಉಳಿದವರನ್ನು ಹೊರತು?

ಹೀಗಾಗಿ ನನಗೆ ಮಗಳು ಹುಟ್ಟಿದಾಗ 
ಅವಳಿಗೆ ನಿನ್ನ ಹೆಸರು ಕೊಟ್ಟೆ. 

ಅವಳು ಅದನ್ನು ಬಳಸುವುದಿಲ್ಲ. 

ಯಾವತ್ತೋ ಒಮ್ಮೆ ತಮಾಷೆಗೆ ಕರೆದ ಹೆಸರನ್ನೇ 
ಮತ್ತೆ ಮತ್ತೆ ಕೂಗಿ ಕರೆದು 
ಈಗ ಅದೇ  ಕಾಯಂ ಆಗಿಹೋಗಿದೆ. 

ಅದಾದರೂ ಹೋಗಲಿ ಎಂದರೆ  
ತನ್ನ ಹೆಸರನ್ನು ಅವಳು 
ಕೊಟ್ಟು ಬಿಟ್ಟಿದ್ದಾಳೆ 
ತನ್ನ ಗಾಜಿನ ಕಣ್ಣಿನ ಗೊಂಬೆಗಳಿಗೆ.
ನಿನ್ನನ್ನೇ ಕೂಗಿ ಕರೆದಂತೆ 
ಭಾಸವಾಗುತ್ತದೆ ನನಗೆ 
ಅವಳು ಕಿರುಚಿ ಕರೆದಾಗ 
ರೈತನ ಗೊಂಬೆತಲೆಯನ್ನು,
ಉಣ್ಣೆಯಲ್ಲಿ ಹೆಣೆದ ಆಡನ್ನು, 
ಚಿಂದಿಬಟ್ಟೆಗಳಿಂದ ಮಾಡಿದ 
ಪೋಲೀಸ್ ಪೇದೆಯನ್ನು. 

ಕಂದು ಬಣ್ಣದ ಟೊಣಪ ನಾಯಿಗೆ 
ಕೆಂಪುದಾರ ಕಟ್ಟಿ ಎಳೆಯುತ್ತಾ ಹೋಗುವಾಗ 
ಅದು ವಾಲಿಕೊಂಡಾಗ 
ನಿನ್ನ ಹೆಸರನ್ನೇ ಕೂಗಿ ಗದರಿಸುತ್ತಾಳೆ. 

ಆ ನಾಯಿಗೋ  
ಯಾವಾಗಲೂ ಬೀದಿಯಲ್ಲಿ ದರದರ 
ಎಳೆಸಿಕೊಂಡು ಮೆರವಣಿಗೆ ಹೋಗುವುದೇ ರೂಢಿಯಾಗಿದೆ, 
ಹೋಗಿ ಗುಂಡಿಕ್ಕಿ ಕೊಲ್ಲುವರೋ 
ಉಳಿದವರಿಗೆ ನಿದರ್ಶನದ ರೂಪದಲ್ಲಿ ಎಂಬಂತೆ. 

ಏನು ಮಾಡಿತ್ತೋ ಅದು ಪಾಪ - 
ಅದು ಏನಾದರೂ ಮಾಡಿರಲಿ, 
ನೀನು ಮಾತ್ರ ಅದನ್ನು ಮಾಡಬೇಡ.

ಕವಿತೆಯ ಸ್ವಾರಸ್ಯ: ಲಘುಹಾಸ್ಯದ ಸಂದರ್ಭದಿಂದ ಈ ಕವಿತೆ ಪ್ರಾರಂಭವಾಗುತ್ತದೆ. ಕವಯಿತ್ರಿ ತನ್ನ ತಾಯಿಯ ನೆನಪನ್ನು ರಕ್ಷಿಸಿಕೊಳ್ಳಲು ಅವಳ ಹೆಸರನ್ನು ಮಗಳಿಗೆ ಕೊಡುತ್ತಾಳೆ. ಆದರೆ ಮಗಳು ಆ ಹೆಸರನ್ನು ತನ್ನ ಗೊಂಬೆಗಳಿಗೆ ಇಟ್ಟುಬಿಟ್ಟಿದ್ದಾಳೆ. ಈ ಗೊಂಬೆಗಳಿಗೆ ಮಗಳು ತಾಯಿಯ ಹೆಸರು ಹಿಡಿದು ಗದರಿದಾಗ ಕವಯಿತ್ರಿಗೆ ಕಸಿವಿಸಿಯಾಗುತ್ತದೆ. ಒಂದು ನಾಯಿಯ ಗೊಂಬೆಯನ್ನು ದರದರ ಎಳೆದುಕೊಂಡು ಹೋಗುತ್ತಾ ಅದಕ್ಕೆ ಅಜ್ಜಿಯ ಹೆಸರು ಹಿಡಿದು ಬೈಯುತ್ತಾಳೆ.  ಅದೆಷ್ಟು ಅಪರಾಧಿಗಳ ಹೆಸರು ಶ್ರೀರಾಮ, ಶ್ರೀಕೃಷ್ಣ ಎಂದೆಲ್ಲಾ ಇರುತ್ತದೆ!  ಉಳ್ಳವರು ಮಾಡಿದ ಅಪರಾಧಗಳಿಂದ ಸತ್ತವರ ನೆನಪಿಗೂ ಅಪಚಾರವಾಗುವುದೇ? 
 

ಕಾಮೆಂಟ್‌ಗಳು

  1. AN EXAMPLE
    Where can the dead hope
    to stash some part
    of themselves, if not in the living?

    And so when I had a daughter,
    I gave her your name.

    She does not use it.

    She goes by a silly, other
    thing she was called once in fun,
    and then often enough

    that it stuck. But oh her hideous pill-
    eyed toys – to them each, she has given
    her given name,

    and so it is you

    I hear her again and again calling to.
    It is your name she shrieks

    to the bale-head farmer, the woven
    goat, the cop made of buttons and rags.

    Your name, to the squat gray

    dog on wheels, tipping on its side
    as she drags it by a red string.

    That dog, always prone
    and pulled along, as though constantly
    being killed and paraded

    through town to make an example.
    What did it do – 

    Whatever it did, don’t do it.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)