ಗಾಳಿಯ ಬಣ್ಣಗಳ ವರ್ಣಚಿತ್ರ
ಪೋಕಹಾಂಟಾಸ್ ಎಂಬ ಮೂಲ ಅಮೇರಿಕನ್ (ರೆಡ್ ಇಂಡಿಯನ್) ಮಹಿಳೆಯನ್ನು ಕುರಿತು ಡಿಸ್ನಿ ಚಲಚ್ಚಿತ್ರ ಕಂಪನಿ ತಯಾರಿಸಿದ ಅನಿಮೇಷನ್ ಚಿತ್ರ ಅಪಾರ ಜನಪ್ರಿಯತೆ ಪಡೆದಿದೆ. ಇದರಲ್ಲಿ "ಪೇಂಟ್ ವಿತ್ ಆಲ್ ದ ಕಲರ್ಸ್ ಆಫ್ ದ ವಿಂಡ್" ಎಂಬ ಹಾಡು ತುಂಬಾ ಜನಪ್ರಿಯವಾಯಿತು. ಯೂಟೂಬ್‍ನಲ್ಲಿ ಈ ಹಾಡನ್ನು ನೀವು ಕೇಳಬಹುದು. ಈ ಹಾಡಿನ ಭಾವಾನುವಾದವನ್ನು ಕೆಳಗೆ ಕೊಟ್ಟಿದ್ದೇನೆ. ಬ್ರಿಟನ್ನಿನಿಂದ ಬಂದ ವಲಸೆಗಾರರು ಮೂಲ ಅಮೇರಿಕನ್ ಜನಾಂಗದವರನ್ನು ನಾಶಗೊಳಿಸಿ ಅಮೇರಿಕಾ ಭೂಮಿಯ ಮೇಲೆ ತಮ್ಮ ಸ್ವಾಮ್ಯವನ್ನು ಘೋಷಿಸಿಕೊಂಡರು. ರೆಡ್ ಇಂಡಿಯನ್ ಬುಡಕಟ್ಟಿನ ಜನರಲ್ಲಿ ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಆತ್ಮವಿದೆ ಎಂಬ ನಂಬಿಕೆಯಿದೆ. ಆದರೆ ವಲಸೆ ಬಂದವರಿಗೆ ಇದೆಲ್ಲಾ ಹಾಸ್ಯಾಸ್ಪದ ವಿಷಯ. ಅವರಿಗೆ ಭೂಮಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸುವುದಷ್ಟೇ ಮುಖ್ಯ. ಪೋಕಹಾಂಟಾಸ್ ಎಂಬ ಮಹಿಳೆ ಜಾನ್ ಎಂಬ ವಲಸೆಗಾರನಲ್ಲಿ ಅನುರಕ್ತಳಾಗುತ್ತಾಳೆ. ಅವನಿಗೆ ನಿಸರ್ಗದ ಶಕ್ತಿಯನ್ನೂ ಮತ್ತು ನಿಸರ್ಗದೊಂದಿಗೆ ನಮ್ಮ ಅವಿನಾ ಸಂಬಂಧವನ್ನೂ ಅವಳು ತಿಳಿಸಿಕೊಡುತ್ತಾಳೆ.
ಮೂಲ ಇಂಗ್ಲಿಷ್ ರಚನೆ - ಆಲನ್ ಮೆಂಕೆನ್ ಮತ್ತು ಸ್ಟೀಫನ್ ಲಾರೆನ್ಸ್ ಶ್ವಾರ್ಜ್
ಕನ್ನಡಕ್ಕೆ - ಸಿ. ಪಿ ರವಿಕುಮಾರ್
ವಿಶ್ವವನ್ನೆಲ್ಲಾ ಸುತ್ತಿದ ನಿನ್ನ ದೃಷ್ಟಿಯಲ್ಲಿ
ಏನೂ ತಿಳಿಯದ ಅನಾಗರೀಕಳು ನಾನು;
ಇರಬಹುದು! ಆದರೂ ಈ ಸೃಷ್ಟಿಯಲ್ಲಿ
ಎಷ್ಟೊಂದನ್ನು ಇನ್ನೂ ಅರಿತಿಲ್ಲ ನೀನು!
ಕಾಲಿಟ್ಟ ನೆಲವೆಲ್ಲ ನಿನ್ನದೇ ಎಂಬುದು ನಿನ್ನ ಧೋರಣೆ
ನಿರ್ಜೀವ ವಸ್ತು ಭೂಮಿ ಎಂಬ ಮನೋಧಾರಣೆ -
ನನಗೆ ಗೊತ್ತು ಪ್ರತಿಯೊಂದೂ ಬಂಡೆ-ಮರ-ಪ್ರಾಣಿಗೂ
ಇರುವುದೊಂದು ಪ್ರಾಣ, ಆತ್ಮ, ಇರುವುದೊಂದು ಹೆಸರು.
ನಿನ್ನ ಹಾಗೆ ಕಾಣುವವರು, ನಿನ್ನ ಹಾಗೆ ಯೋಚಿಸುವರು,
ಅವರು ಮಾತ್ರ ಮಂದಿ ಎಂದು ನಿನ್ನ ಮನೋಭಾವನೆ
ಅಪರಿಚಿತನ ಭಾವ ಧರಿಸಿ ಅಪರಿಚಿತನ ಹೆಜ್ಜೆ ಹಾಕು,
ತಿಳಿಯದೆಷ್ಟೋ ವಿಷಯ ನೀನು ಆಗ ತಿಳಿದುಕೊಳ್ಳುವೆ
ಹುಣ್ಣಿಮೆಯ ಚಂದ್ರನಿಗೆ ತೋಳ ಊಳಿಡುವುದು ಏತಕೆ?
ಮೀಸೆ ಕೆಳಗೆ ಬೆಕ್ಕು ತನಗೆ ತಾನೇ ನಗುವುದೇತಕೆ?
ಹಾಡಬಲ್ಲೆಯಾ ದನಿಗೂಡಿಸಿ ಬೆಟ್ಟಗಳ ಜೊತೆಗೆ ?
ಚಿತ್ರ ರಚಿಸಬಲ್ಲೆಯಾ ಹಿಡಿದು ಗಾಳಿಯ ಬಣ್ಣಗಳ ರೇಖೆ?
ಬಾ, ಕಾಡಿನಲ್ಲಿ ಓಡಾಡು ಹಿಡಿದು ಪೈನ್ ಮರಗಳ ಜಾಡು,
ಬಾ, ಭೂಮಿ ನೀಡುವ ಸವಿಹಣ್ಣುಗಳ ರುಚಿ ನೋಡು,
ಸುತ್ತ ಹಬ್ಬಿರುವ ವನಸಂಪತ್ತಿನಲ್ಲಿ ಹೊರಳಾಡು,
ಬೆಲೆ ಎಷ್ಟೆಂಬ ಪ್ರಶ್ನೆ ಮನದಿಂದ ಹೊರದೂಡು -
ಹರಿವ ಝರಿ, ನಗುವ ತೊರೆ, ನನ್ನ ಸೋದರರು ಇವರು!
ಹಾರುವ ಬೆಳ್ಳಕ್ಕಿ, ನೀರುನಾಯಿ ನನ್ನ ಗೆಳೆಯರು!
ಮುರಿಯಲಾರದ ಸಂಬಂಧ ನಮ್ಮೆಲ್ಲರ ನಡುವೆ -
ಒಂದಕ್ಕೊಂದು, ಒಂದಕ್ಕೊಂದು, ಮುಗಿಯದ ಸಂಕೋಲೆ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ