ಡೋರಿ ಅಟ್ಲಾಂಟಾಗೆ ಹೊರಟಿದ್ದು

ಮೂಲ - ಮಾರ್ಕ್ ಹ್ಯಾಲಿಡೆ (ಅಮೇರಿಕಾ ಸಂಸ್ಥಾನ)
ಕನ್ನಡಕ್ಕೆ - ಸಿ. ಪಿ ರವಿಕುಮಾರ್ 
 

ಜೆನ್? ಹೇಯ್, ನಾನು, ಡೋರಿ. ಬಸ್‍ನಲ್ಲಿ ಹೊರಟಿದ್ದೇನೆ ಲಗ್ವಾರ್ಡಿಯಾ, ಅಟ್ಲಾಂಟಾಗೆ. 
ಏನು? ... ಇರಬಹುದು. ನನಗೆ ಖಡಾಖಂಡಿತ ಗೊತ್ತಿಲ್ಲ. ಅವನ ದಿನಚರಿ ಎಷ್ಟು ಕಿತ್ತುಹೋಗಿದೆ ಅಂದರೆ ... 
ಅದು ಹೋಗಲಿ. ನಾನು ನಿನಗೆ ಮಾರ್ಸಿಯ ವಿಷಯ ಹೇಳೋದಿತ್ತು. ಹೂಂ. 
ನಾನು ಅವಳಿಗೆ ಹೇಳಿದೆ. ನಾನಂದೆ, ಮಾರ್ಸೀ, ಇವನು ಉಳಿದವರ ಹಾಗಲ್ಲ ಅನ್ನಿಸುತ್ತೆ, ಗೊತ್ತಾ?
ನೀನು ಈನಡುವೆ  ಡೇಟ್ ಮಾಡಿದ ಹುಡುಗರಿಗೆ ಹೋಲಿಸಿ ನೋಡು. 
ನೀನು ಅವರ ಬಗ್ಗೆ ಹೇಳಿದ್ದು ಕೇಳಿದರೆ 
ನಿಜ ಹೇಳ್ತೀನಿ, ಮಾರ್ಸೀ, ಈ ಹುಡುಗರು  ಎಷ್ಟೇ ಚಮಕ್ ಧಮಕ್ ಇರಬಹುದು,
ಎಷ್ಟೇ ಒಳ್ಳೇ ಕೆಲಸದಲ್ಲಿರಬಹುದು, ಆದರೆ ನಿಜ ಹೇಳಬೇಕಂದ್ರೆ -
ಕೊನೆಗೆ ಆಗೋದೇನು, ಮಂಚಕ್ಕೆ ಹೋಗೋದು ತಾನೇ,
ಬೆಳಗ್ಗೆ ಎದ್ದಾಗ ಕಾಫಿ ಚೆನ್ನಾಗಿತ್ತು, ಥ್ಯಾಂಕ್ಸ್ ಅಂತ ಹೇಳೋದು, ಅಷ್ಟೇ ತಾನೇ?
ಆದರೆ ಈ ಹುಡುಗ ... ಏನಂದಿ? ಹೌದು, ಜೇಸನ್. ಹೂಂ, 
ನಾನು ಮಾರ್ಸಿಗೆ ಹೀಗೇ ಹೇಳಿದೆ, 
ನೀನು ಹೇಳೋದು ಕೇಳಿದರೆ ಜೇಸನ್ ಬೇರೆ ಥರದ ಹುಡುಗ ಅಂತ ಕಾಣತ್ತೆ,
ಮತ್ತೆ ಬಾಬ್ ಅವನ ವಿಷಯದಲ್ಲಿ ಹೇಳಿದ್ದು ಕೇಳಿದರೂ ಅಷ್ಟೇ ...
ಬಾಬ್ ಅವನ ಜೊತೆ ಹೋದ ವರ್ಷ ಯಾವುದೋ ಪ್ರಾಜೆಕ್ಟ್ ಮಾಡಿದ್ದನಂತೆ, 
ಅದಕ್ಕೇ ನಾನು ಮಾರ್ಸಿಗೆ ಅಂದೆ, ನೀವಿಬ್ಬರೂ ಈಗಾಗಲೇ 
ಎರಡು ಸಲ ಕಾಫಿ, ಎರಡು ಸಲ ಮಧ್ಯಾಹ್ನದ ಊಟ, 
ಒಂದು ಸಲ ರಾತ್ರಿಯ ಊಟ, ಎಲ್ಲಾ ಮಾಡಿದ್ದರೂ ಅವನು ಒಂದು ಸಲವೂ ... 
ಇಲ್ಲ, ಬಾಬ್ ಹೇಳೋದು ಅವನು ಖಂಡಿತಾ ಸ್ಟ್ರೇಟ್ ಮನುಷ್ಯ ...
ಅದೇನೋ ಆರು ವರ್ಷದ ಹಿಂದೆ ಡೈವೋರ್ಸ್ ಏನೋ ಆಗಿತ್ತಂತೆ, ಆದರೆ ...
ಏನಂದೆ? ಹೂಂ.  ಮಾಡಿದೀನಿ. ನೇಥನ್‍ನ ಪಾರ್ಟಿಯಲ್ಲಿ,
ಯಾವುದೋ ಸಿನಿಮಾ ನೋಡಿ ಬಂದ ಮೇಲೆ, 
"ದ ಡಚೆಸ್ ಆಫ್ ಮ್ಯಾಲ್ಫಿ" ... 
ನಿನಗೆ ಹೇಳಿದ್ದೆ ಅಂದುಕೊಂಡಿದ್ದೆ ... ಏನಂದೆ?
ಹೂಂ, ಬರೀ ಐದು ನಿಮಿಷ ಅಷ್ಟೇ, ಒಂದು ಸಿಗರೇಟು, ಅಷ್ಟೇ, 
ಅಂಥದ್ದೇನೂ ಇಲ್ಲ, ಒಂದು ಥರಾ ಯೋಚನೆಯಲ್ಲಿ ಮುಳುಗಿದ ಹಾಗಿತ್ತು, ಅಷ್ಟೇ.
ಆದರೆ ನಾನು ಹೇಳೋದು ಏನಪ್ಪಾ ಅಂದರೆ ... ಹೂಂ, ನಾನು ಹೇಳೋದೂ ಅದೇ ...
ನಾನು ಅಂದೆ, ಮಾರ್ಸೀ, ಈ ಹುಡುಗನಿಗೆ ಗೊತ್ತಿಲ್ಲದೇ ಏನು,
ಮಂಚದ ಮೇಲೆ ಮಲಗೋದು ಇದರ ಭಾಗವೇ ಅಂತ,
ಅದಕ್ಕೇ ನಾನು ಅಂದೆ, ಮಾರ್ಸೀ, ಅದೇ ಒಂದು ಕೊನೆಯ ಧ್ಯೇಯ ಅಲ್ಲ,
ಅದು ಒಂದು ಭಾಗ ಮಾತ್ರ ... 
ಏನಂದೆ? ... ಹೌದೇ ಹೌದು ... ಅದು ಅದಕ್ಕಿಂತಲೂ  ದೊಡ್ಡದಾದ ಯಾವುದೋ ಒಂದರ ಅಭಿವ್ಯಕ್ತಿ ...
ಹೂಂ! ನಾವಿಬ್ಬರೂ ಇಡೀ ಜನ್ಮ ಪೂರ್ತಿ ಒಂದಾಗಿರೋಣ ಅಂದ ಹಾಗೆ ...
ಅದಕ್ಕೇ ನಾನು ಮಾರ್ಸಿಗೆ ಬೈದು ತಿಳಿಸಿ ಹೇಳಿದೆ, 
ಮಾರ್ಸೀ, ನೀನು ಇವನನ್ನು ಗಂಭೀರವಾಗಿ ತೊಗೊಳ್ಳಿಲ್ಲ ಅಂದ್ರೆ 
ಬೇರೆ ಯಾರಾದೂ ಅವನನ್ನ ... ಏನಂತೀ? ... ಹೂಂ, 
ನೋಡು, ನಿಜ ಹೇಳಬೇಕು ಅಂದ್ರೆ ... 
ಜೆನ್? ಯಾಕೋ ನೀನು ಹೇಳಿದ್ದು ಕೇಳಿಸ್ತಾ ಇಲ್ಲ ... 
ನಾನು  ಹೇಳಿದ್ದು ಸರಿಯಾಗಿ ಕೇಳಿಸ್ತಿದೆ ತಾನೇ?
ಜೆನ್, ನಾನು ಏರ್‍ಪೋರ್ಟಿನಿಂದ ನಿನಗೆ ಫೋನ್ ಮಾಡ್ತೀನಿ, ಓಕೆ, ಬೈ.  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)