ಮನೆಗೆಲಸದವಳು, ೧೯೩೭
ಮೂಲ - ನತಾಷಾ ಟ್ರೆಥೆವೇ (ಅಮೇರಿಕಾ ಸಂಸ್ಥಾನ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಇಡೀ ವಾರ ಅವಳು ಶುಚಿಗೊಳಿಸಿದ್ದಾಳೆ
ಬೇರಾರದೋ ಮನೆ.
ಬಗ್ಗಿ ನೋಡಿಕೊಂಡಿದ್ದಾಳೆ
ತನ್ನದೇ ಬಿಂಬ
ತಾನು ತಿಕ್ಕಿ ತೊಳೆದ
ತಾಮ್ರತಳದ ಪಾತ್ರೆಗಳಲ್ಲಿ,
ತಾನೇ ಉಜ್ಜಿ ಒರೆಸಿದ
ಮರದ ಮೇಜು-ಬಾಗಿಲುಗಳಲ್ಲಿ,
ತಾನೇ ಮುಚ್ಚಿದ
ಟಾಯ್ಲೆಟ್ ಮುಚ್ಚಳದಲ್ಲಿ.
ಅವಳ ಬಿಂಬ ಅವಳಿಗೆ ಹೇಳುತ್ತದೆ:
ಇದನ್ನು ಬದಲಾಯಿಸೋಣ, ಹುಡುಗಿ.
ರವಿವಾರ ಮಾತ್ರ ಅವಳಿಗೆ ಸೇರಿದ್ದು -
ಚರ್ಚಿಗೆ ಧರಿಸುವ ಬಟ್ಟೆಗಳಿಗೆ
ಗಂಜಿ ಹಾಕಿ ಒಗೆದು ಇಸ್ತ್ರಿ ಮಾಡಿ
ತೂಗುಹಾಕಿದ್ದಾಳೆ,
ಸಂಗೀತದ ರೆಕಾರ್ಡ್ ಹಾಡುತ್ತಿದೆ,
ಇಡೀ ಮನೆಯೇ ನರ್ತಿಸುತ್ತಿದೆ.
ಅವಳು ಪರದೆ ಸರಿಸಿ
ಇಡೀ ಮನೆಯನ್ನು ಬೆಳಗುತ್ತಾಳೆ,
ಬೆಳಕಿನಿಂದ,
ಬಕೆಟ್ ತುಂಬಾ ನೀರಿನಿಂದ,
ಅಷ್ಟಮೂಲೆಗಳ ಸಾಬೂನಿನಿಂದ.
ಸ್ವಚ್ಚತೆಯು ದೈವತ್ವಕ್ಕೆ ಸಮಾನ.
ಕಿಟಕಿ ಬಾಗಿಲುಗಳನ್ನು ಪೂರ್ತಿ ತೆರೆದಿದ್ದಾಳೆ,
ಪರದೆಗಳು ಹಿಂದೆಮುಂದೆ ಓಲಾಡುತ್ತಿವೆ,
ಬಗ್ಗಿ ತೆಗೆಯುವಾಗ ಒಗೆದ ಬಟ್ಟೆಗಳನ್ನು
ಅವಳ ಕುತ್ತಿಗೆ ಬಡಿಯುತ್ತದೆ ಮಡಕೆಗಳ ಅಂಚಿಗೆ,
ಒಣಹಾಕಿದ ಬಟ್ಟೆಗಳು ತಂತಿಯ ಮೇಲೆ
ರಪರಪ ಸದ್ದು ಮಾಡುತ್ತಿವೆ.
ನನ್ನ ಬಳಿಯಲ್ಲೇ ಇರುವೆ ಓ ನನ್ನ ದೇವರೇ.
ಅವಳು ಕಂಬಳಿಗೆ ಹೊಡೆದು ಧೂಳೆಬ್ಬಿಸುತ್ತಾಳೆ
ಪೊರಕೆಯಿಂದ ಝಾಡಿಸುತ್ತಾಳೆ ಮಣ್ಣುಧೂಳಿನ ಕಣ.
ಅಜ್ಜಿತಲೆ ಹೂವಿನಿಂದ ಮೇಲೇಳುವ ರೋಮದಂತೆ
ಮೇಲೇಳುತ್ತದೆ ಪ್ರತಿಯೊಂದೂ -
ಬದಲಾವಣೆಗಾಗಿ ಎದ್ದ ಪ್ರಾರ್ಥನೆಗಳಂತೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ