ಮೊಳಕಾಲ್ಮೂರು!!

 


ಯಾವ ಊರಿನ ಹೆಸರು ಕೇಳಿರದೇ ಇದ್ದರೂ ಮೊಳಕಾಲ್ಮೂರು ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಊರಿನ ಹೆಸರು ಅಂಥದ್ದು. ನೆನಪಿನಲ್ಲಿ ಉಳಿಯುವಂಥದ್ದು.  ಈ ಊರಿನ ಹೆಸರು ಅದು ಹೇಗೆ ಬಂತೋ! ಮೊಳಕಾಲಮ್ ಪ್ಲಸ್ ಊರು ಈಕ್ವಲ್ಸ್ ಮೊಳಕಾಲ್ಮೂರು ಎಂದು ಅದೇ ಊರಿನ ಒಬ್ಬರು ಅಂಕಣಕಾರರು ಹೇಳಿದರು. ಅವರು ಬರೆಯುವ ಕಾಲಂ ಅಳೆದರೆ ಒಂದು ಮೊಳ ಕರೆಕ್ಟಾಗಿ ಇರುತ್ತಿತ್ತು.  ಸಂತೆಗೆ ಒಂದು ಮೊಳ ನೇದಂತೆ ಎಂಬ ವಾಕ್ಯದಿಂದ ಪ್ರೇರಿತರಾಗಿ ಅವರು ಬರೆಯುತ್ತಿರಬಹುದು. ಮೊಳ ಕಾಲಂ ಊರು ಎಂಬ ಅವರ ವಿವರಣೆ ನನಗಂತೂ ಪಥ್ಯವಾಗಲಿಲ್ಲ. "ನೋಡಿ, ಈ ಊರು ಬಹಳ ಹಳೆಯದು. ಅದಕ್ಕೆ ಹಿಂದಿನಿಂದಲೂ ಇದೇ ಹೆಸರಿದೆ. ನೀವು ಕಾಲಂ ಬರೀತಿರೋದು ಒಂದು ಆರು ತಿಂಗಳಿಂದ, ಅಷ್ಟೇ." ಎಂದು ನಾನು ವಾದಿಸಿದೆ. ಇದರಿಂದ ಅವರು ಕೋಪಗೊಂಡು ನನ್ನ ಫೇಸ್ಬುಕ್ ಅಂಚೆಗಳಿಗೆ ಲೈಕ್ ಹಾಕುವುದನ್ನು ಬಿಟ್ಟರು. ಬಹುಶಃ ನನ್ನನ್ನು ಅಗೆಳೆಯ (unfriend) ಮಾಡಿರಲೂ ಬಹುದು. ಅದೇ ಧೈರ್ಯದ ಮೇಲೆ ಅವರ ಬಗ್ಗೆ ಬರೆಯುತ್ತಿರುವೆ. 


ರಿಸರ್ಚ್ ಇಲ್ಲದೆ ಏನನ್ನೂ ಒಪ್ಪದ ಯುಗ ಇದು. ಹಾಗಾಗಿ ಹೆಸರಿನ ಒಗಟು ಬಿಡಿಸಲು ವಿಕಿಪೀಡಿಯ ನೋಡಿದೆ. ಮೊಳಕಾಲ್ಮೂರು ಹೆಸರಿಗೆ ತಕ್ಕಂತೆ ಕನ್ನಡದಲ್ಲೇ ಮೂರು ಪುಟಗಳು ಸಿಕ್ಕವು. ಒಂದೊಂದೂ ಮೂರೂ ಕಾಲು ಮೊಳ ಇದೆಯಾ ಎಂದು ಅಳತೆ ಮಾಡಿ ನೋಡುವ ಇಚ್ಛೆಯಾದರೂ ನಾನು ಹಾಗೆ ಮೊಳ ಹಾಕುವುದನ್ನು ನೋಡಿ ಜನ ಏನು ತಿಳಿದಾರೋ ಎಂದು ಸುಮ್ಮನಾದೆ. ಒಂದು ವಿಕಿಪೀಡಿಯ ಪುಟದಲ್ಲಿ ಮುರಿದ ಮೊಳಕಾಲಿನ ಊರೇ ಮೊಳಕಾಲ್ಮೂರು ಎಂದು ವಾದಿಸಿದ್ದಾರೆ.   ಬ್ರಿಟಿಷರು ಇಲ್ಲಿ ಯುದ್ಧ ಮಾಡಲು ಬಂದಾಗ ಆ ಪ್ರದೇಶದಲ್ಲಿ ಅವರ ಮೊಳಕಾಲು ಮುರಿಯಿತು ಎಂದು ಏನೋ ತೇಲಿಸಿ ಬರೆದಿದ್ದಾರೆ. ಬ್ರಿಟಿಷರು ಕುದುರೆಯ ಮೇಲೆ ತಾನೇ ಓಡಾಡುತ್ತಿದ್ದದ್ದು? ಜುಂ ಅಂತ ಕುದುರೆಯ ಮೇಲೆ ಓಡಾಡಿ ಯಾರಿಗೆ ಮೊಳಕಾಲು ಮುರಿದಿದೆ ಹೇಳಿ! ಪಾಪ ಆ ಕುದುರೆಯ ಮೊಳಕಾಲು ಮುರಿಯಿತೋ ಏನೋ ಯಾರಿಗೆ ಗೊತ್ತು? ಹಾಗೆ ನೋಡಿದರೆ ಬ್ರಿಟಿಷರು ಅಂಥ ಭಾರೀ ತೂಕದ ಆಸಾಮಿಗಳೇನಲ್ಲ.  ಅವರಿಗೆ ಭಾರತದಲ್ಲಿ ಹ್ಯಾಮ್, ಚೀಸ್, ಎಕ್ಲೇರ್, ಹಾಟ್ ಚಾಕೊಲೇಟ್ ಇತ್ಯಾದಿ ಎನಿಡ್ ಬ್ಲೈಟನ್ ವಿವರಿಸಿದ ತಿಂಡಿ ತೀರ್ಥಗಳನ್ನು ಯಾವ ಅಡುಗೆಭಟ್ಟನೂ ಮಾಡಿಕೊಡಲಿಲ್ಲ.  ಮುಳಗಟಾನಿ ಸೂಪ್ ಕೊಟ್ಟು ಸೇಡು ತೀರಿಸಿಕೊಂಡರು. ತೊಗೋ ಈ ತಣ್ಣಿ, ಇದರಲ್ಲಿ ಮುಳುಗಿ ಸಾಯಿ ಎಂದು ಭಟ್ಟರು ಶಾಪ ಹಾಕಿ ಕೊಟ್ಟ ಚಪ್ಪರದವರೆ ಸೂಪನ್ನೇ ಅವರು ಚಪ್ಪರಿಸಿ ತಿಂದರು. ಹೀಗಿರುವಾಗ ತೂಕ ಹೆಚ್ಚಿಸಿಕೊಂಡು, ಅದೂ ಕುದುರೆಯ ಮೊಳಕಾಲನ್ನು ಮುರಿಯುವಷ್ಟು, ಆಗಿರಲಿಕ್ಕಿಲ್ಲ ಬಿಡಿ. 


ಬ್ರಿಟಿಷರಿಗೆ ಮೊಲದ ಕಾಲು ಒಂದು ಗುಡ್ ಲಕ್ ಚಾರ್ಮ್ ಎಂದು ಕೇಳಿದ್ದೇನೆ. ಹೀಗಾಗಿ ಮೂರು ಬ್ರಿಟಿಷ್ ಆಫೀಸರುಗಳು ಮೊಲಗಳನ್ನು ಬೇಟೆ ಆಡಿ ಮೂರು ಕಾಲುಗಳನ್ನು ಸಂಗ್ರಹಿಸಿದ ಊರಿಗೆ ಮೊಲಕಾಲ್ ಮೂರು ಎಂಬ ಹೆಸರು ಬಂದಿರಲು ಸಾಧ್ಯ.  ಆದರೆ ಅಪ್ಪಟ ಸಸ್ಯಾಹಾರಿಗಳಾದ ಅವರ ಭಟ್ಟರು ಈ ಮೊಲ ಕಾಲ್ ನೋಡಿ ರಾಬಿಡ್ ಅವತಾರ ತಾಳಿ ಅಂದಿನ ಮುಳಗುಟಾನಿ ಸೂಪಿಗೆ ಒಂದು ಹಿಡಿ ಕರಿಮೆಣಸು ಹೆಚ್ಚಾಗಿಯೇ ಅರೆದ ಕಾರಣ ರಾಬಿಟ್ ಫುಟ್ ಬ್ರಿಟಿಷ್ ಅಧಿಕಾರಿಗಳಿಗೆ ಗುಡ್ ಲಕ್ ತಂದಿದ್ದು ಅನುಮಾನವೇ.


ನನ್ನ ಈ ಸಂದೇಹವನ್ನು ಒಬ್ಬ ಸಿರಿಧಾನ್ಯಪ್ರೇಮಿ ಜೊತೆ ಹೇಳಿದಾಗ ಅವರು "ಮೊಳಕೆ ಕಾಳು  ತಿಂದ ಊರೇ ಮೊಳಕಾಲ್ಮೂರು ಎಂಬುದೇ ಸರಿಯಾದ ಸಮಾಸ" ಎಂದು ಮಿಲೆಟ್ ಸಮೋಸಾ ಮುರಿಯುತ್ತಾ ಡಿಕ್ಲೇರ್ ಮಾಡಿದರು. ಹಿಂದೊಮ್ಮೆ ಮೊಳಕೆ ಕಾಳುಗಳನ್ನು ತಿನ್ನುತ್ತಿರಲಿಲ್ಲ. "ಮೊಳಕೆ ಒಡೆದ ಕಾಳಿನ ಜೊತೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡುಬಿಡುವುದೇ ನಮ್ಮ ಅಸ್ಮಿತೆ.  ಆದರೆ ಮೊಳಕಾಲ್ಮೂರು ಈ ದಿಕ್ಕಿನಲ್ಲಿ ಹೊಸ ಭಾಷ್ಯವನ್ನು ಬರೆಯಿತು. ಕಡಲೆಕಾಳು, ಹೆಸರುಕಾಳು ಮತ್ತು ಮಡಕೇಕಾಳು ಈ ಮೂರೂ ಕಾಳುಗಳನ್ನು ಬೆರೆಸಿ ಮೊಳಕೆ ಮಾಡಿ ತಿಂದರೆ ಯಾವ ಮೊಳಕೆಹತ್ಯಾ ಪಾಪವೂ ಬರುವುದಿಲ್ಲ ಎಂದು ಮೊಳಕಾಲ್ಮೂರು ಮಹೇಶ ಶಾಸ್ತ್ರಿಗಳು ಧ್ಯಾನ ಮಾಡಿ ಧಾನ್ಯಪ್ರಾಧಾನ್ಯ ಶೋಧನೆ ಮಾಡಿದರು. ಅಂದಿನಿಂದ ಮೊಳಕೆ ಈಸ್ ಓಕೆ ಎಂಬ ತಿಳಿವಳಿಕೆ ಹೆಚ್ಚಿತು" ಎಂದು "ಸಿರಿಧಾನ್ಯವೇ ಸರಿಧಾನ್ಯ" ಪುಸ್ತಕದ ಲೇಖಕರೂ ಆದ ನನ್ನ ಮಿತ್ರರು ಹೇಳಿದರು.


ಯಾರು ಹಿತವರು ನಿನಗೆ ಈ ಮೂರರೊಳಗೆ ಎಂಬ ಸ್ಥಿತಿಯಾಯಿತು ನನ್ನದು. ಮೊಳಕಾಲಂ, ಮೊಳಕೆ ಕಾಲಂ, ಮೊಲ ಕಾಲಂ ಎಂಬ ಟ್ರೈಲೆಮಾ ನನ್ನನ್ನು ತ್ರಿವಿಧ ತ್ರಿಶೂಲದಂತೆ ತಿವಿಯುತ್ತಿದೆ.  ಇದನ್ನು ಹೇಳಿಕೊಂಡಾಗ ನಮ್ಮ ಮನೆಯವರು ಮೊಳಕಾಲ್ಮೂರು ಸೀರೆ ಬಹಳ ಫೇಮಸ್ ಅಂತೆ, ಅವರು ಕಾಲಕ್ಕೆ ತಕ್ಕಂತೆ ಚೂಡಿದಾರ್ ಮೆಟೀರಿಯಲ್ ಕೂಡಾ ಮಾಡ್ತಾರಾ ಎಂದು ಕೇಳಿ ನನ್ನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಿಮಗೆ ಏನಾದರೂ ಗೊತ್ತಿದ್ದರೆ ಹೇಳಿ.


ಸಿ. ಪಿ. ರವಿಕುಮಾರ್


#ನಗುಬಂತಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)