ಫೇನ್ ಮನ್ ಹೇಳಿದ ಕಥೆ
ಆ ಹುಡುಗ ನನ್ನನ್ನು ಕೇಳಿದ ಸ್ವಲ್ಪ ಸೊಕ್ಕಿ,
ಅಲ್ಲಿ ಬೊಡ್ಡೆಯ ಮೇಲೆ ಕೂತಿದೆಯಲ್ಲ ಹಕ್ಕಿ -
ಅದರ ಹೆಸರೇನು ಗೊತ್ತಾ?
ಊಹೂಂ ಗೊತ್ತಿಲ್ಲ ಎಂದೆ ಅನುಮಾನಿಸುತ್ತ.
ಅದು ಕಂದು ಕತ್ತಿನ ಕಾಜಾಣ!
ನಿಮ್ಮಪ್ಪ ಏನೂ ಹೇಳಿಕೊಟ್ಟೇ ಇಲ್ಲ ,ವಿಜ್ಞಾನ!
ನಾನು ನನ್ನಷ್ಟಕ್ಕೆ ನಕ್ಕೆ ಒಳಗೊಳಗೇ
ಏಕೆಂದರೆ ಅಪ್ಪ ನನಗೆ ಕೊಟ್ಟಿದ್ದ ತಿಳಿವಳಿಕೆ
ಏನೂ ತಿಳಿಸದು ನಮಗೆ ಹಕ್ಕಿಯ ಹೆಸರು
ಅದೋ ಅಲ್ಲಿ ಹಕ್ಕಿ ಕಾಣುತ್ತಿದೆಯಲ್ಲ ನೋಡು
ಕಂದು ಕತ್ತಿನ ಕಾಜಾಣ ಎನ್ನುವರು ಇಲ್ಲಿ
ಹಾಲ್ಸೆನ್ಫ್ಲ್ಯೂಜೆಲ್ ಎನ್ನುವರು ಜರ್ಮನಿಯಲ್ಲಿ
ಚೈನಾ ಭಾಷೆಯಲ್ಲಿ ಚಂಗ್ ಲಿಂಗ್ ಎನ್ನುವರು
ಈ ಎಲ್ಲಾ ಹೆಸರು ತಿಳಿದುಕೊಂಡಿದ್ದರೂ
ತಿಳಿಯದು ಹಕ್ಕಿಯ ವಿಷಯ ಒಂದು ಚೂರೂ
ತಿಳಿಯುವುದು ಏನಿದ್ದರೂ ಹಕ್ಕಿಗೆ ಜನರಿಟ್ಟ ಹೆಸರು
ಕಾಜಾಣ ಹಾಡುತ್ತದೆ, ಹಾರುವುದನ್ನು ಕಲಿಸುತ್ತದೆ ಮರಿಗೆ
ಮೈಲುಗಟ್ಟಲೆ ಹಾರಿ ಬರುತ್ತದೆ ಬಂದಾಗ ಬೇಸಗೆ
ಹೇಗೆ ಕಂಡು ಹಿಡಿಯುವುದೋ ದಾರಿ, ಕಾಜಾಣ -
ಅರ್ಥೈಸಿಕೊಂಡಿಲ್ಲ ಯಾವ ಜಾಣ!
ಇಟ್ಟ ಹೆಸರಿಗೂ ಮತ್ತು ವಾಸ್ತವಕ್ಕೂ ಅಂತರ
ಇರುವುದನ್ನು ಅಪ್ಪ ಹೇಳಿಕೊಟ್ಟ ಈ ಥರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ