ಭುವನೇಶ್ವರಿಯ ನೆನೆ ಮಾನಸವೆ!

 



ಭುವನೇಶ್ವರಿ ನಮ್ಮ ರಾಜ್ಯೋತ್ಸವಕ್ಕೆ ಬಂದದ್ದು ನಿಮಗೆ ಗೊತ್ತೇ? ಹೌದು, ಸಾಕ್ಷಾತ್ ಭುವನೇಶ್ವರಿ! 


ಇಲ್ಲ, ಭುವನೇಶ್ವರಿಯ ಕೈಯಲ್ಲಿ ಯಾವ ಆಯುಧಗಳೂ ಇರಲಿಲ್ಲ. ಹಳದಿ ಕೆಂಪು ಧ್ವಜವೂ ಇರಲಿಲ್ಲ.  ನಮಗೆಲ್ಲ ಸ್ವಲ್ಪ ನಿರಾಸೆ ಆಯಿತು. ಭುವನೇಶ್ವರಿಯ ಜೊತೆ ಸೆಲ್ಫೀ ತೊಗೊಂಡು ಸೋಷಿಯಲ್ ಮೀಡಿಯಾ ಮೇಲೆ ನಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಲ್ಲುವ  (ಅಲ್ಲ ಹೆಚ್ಚಿಸಿಕೊಳ್ಳುವ) "ಸೆಲ್ಫೀಷ್" ಮೋಟೋ ಹೊಂದಿದ್ದ ಸೆಲ್ಫೀಶ್ ಹಾಗೂ ಸೆಲ್ಫೀಷಿನಿಯರು ಸಪ್ಪೆ ಮುಖ ಹಾಕಿಕೊಂಡು ಕೂತರು. ಆದರೆ ಕೆಲವೇ ನಿಮಿಷಗಳಲ್ಲಿ  ಎಲ್ಲರ ಮೈಯಲ್ಲಿವಿದ್ಯುತ್ ಸಂಚಾರ ಆಯಿತು. ಇಲ್ಲ, ಯಾವ ಶಾರ್ಟ್ ಸರ್ಕ್ಯುಟ್ ಆಗಲಿಲ್ಲ! ಭುವನೇಶ್ವರಿಯ ಮಾತುಗಳಿಂದ ಎಲ್ಲರ ಮೈಯಲ್ಲಿ ವಿದ್ಯುತ್ ಸಂಚಾರ ಆಯಿತು, ಅಷ್ಟೇ.


ಕಾಳಿಯನ್ನು ಪ್ರಾರ್ಥಿಸಿದ ತೆನಾಲಿ ಅವಳನ್ನು ನೋಡಿ ನಕ್ಕನಂತೆ. ಕುಪಿತಗೊಂಡ ಕಾಳಿ ಇವನು ನಕ್ಕಿದ್ದಕ್ಕೆ ಏನು ಕಾರಣ ಎಂದು ಕೇಳಿದಳು. "ತಾಯಿ! ನನಗೆ  ಇರುವುದು ಒಂದು ಮುಖ, ಆದರೂ ನೆಗಡಿ ಬಂದಾಗ ಎಷ್ಟು ಕಷ್ಟ ಪಡುತ್ತೇನೆ! ನಿನಗೆ ಅಷ್ಟೊಂದು ಮುಖಗಳು! ನಿನಗೆ ನೆಗಡಿ ಆದರೆ ನೀನೆಷ್ಟು ಫಜೀತಿ ಪಡುತ್ತೀ ಎಂದು ನೆನೆದು ನಗು ಬಂತು!" ಎಂಬ ಉತ್ತರ ಕೇಳಿ ಕಾಳಿಗೂ ನಗುಬಂತು. (ತೆನಾಲಿಗೆ  #ನಗುಬಂತಾ ಎಂದು ಟ್ಯಾಗ್ ಮಾಡುವ ಕಷ್ಟ ಎಂದೂ ಬರಲಿಲ್ಲ.)  ಕಾಳಿಯು ಅವನಿಗೆ ವಿಕಟಕವಿ ಎಂಬ ಬಿರುದು ಕೊಟ್ಟಳು. ವಿಕಟಕವಿ ಎಂಬುದು ಕನ್ನಡದಲ್ಲಿ ಪ್ಯಾಲಿನ್ಡ್ರೋಮವೆಂಬುದು ವಿಶೇಷ. 


ಅಂದು ಎಲ್ಲ ರಿವರ್ಸ್ ಆಗಿಹೋಗಿತ್ತು. ( ಎಲ್ಲ ಎಂಬುದು ಪ್ಯಾಲಿಂಡ್ರೋಮ್ ಅಲ್ಲ.) ಕಾಳಿಯು ವಿಕಟಕವಿಯ ಸ್ಥಾನದಲ್ಲಿ ಮೈಕ್ ಹಿಡಿದು ನಿಂತಿದ್ದಳು! ಓತಪ್ರೋತವಾಗಿ ನಗೆಹನಿಗಳನ್ನು ಎಲ್ಲರಿಗೂ ಪ್ರೋಕ್ಷಿಸುತ್ತಿದ್ದಳು! ಅದೂ ಕನ್ನಡದಲ್ಲಿ! #ನಗುಬಂತಾ ಎಂದು ಕೇಳಿದಾಗ ಇಲ್ಲಿ #ನಗುವಂತಾ ವಿಷಯ ಏನಿದೆ ಎಂದು ಕಡೆಗಣಿಸುವವರೂ ಕೂಡಾ ನಗುತ್ತಿದ್ದರು. ನಾನು ನನ್ನನ್ನೇ ಚೂಟಿಕೊಂಡು ನಾನೇನು ಕನಸು ಕಾಣುತ್ತಿರುವೆನೋ ಎಂದು ಪರೀಕ್ಷಿಸಿದೆ. ಇಲ್ಲ! ಕನಸಲ್ಲ!


ನಮ್ಮ ಕಚೇರಿಗೆ ಬಂದು ನಮ್ಮನ್ನು ನಗಿಸಿದ ಭುವನೇಶ್ವರಿ ಹೆಗಡೆ ಅವರಿಗೆ ವಂದಿಸುತ್ತಾ ಈ ಮಿಸ್ಟರಿಯನ್ನು ಇಲ್ಲಿಗೇ ಬಸ್ಟ್ ಮಾಡುತ್ತೇನೆ.


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)