ಮಕ್ಕಳ ದಿನ




ಮಕ್ಕಳಿದ್ದವರನ್ನು ಕೇಳಿ

ಮಕ್ಕಳ ದಿನ ಯಾವುದೆಂದು

ಹುಟ್ಟಿದಾಗ ಅತ್ತರೂ 

ಕಣ್ಣಲ್ಲಿ ಮುತ್ತು ತುಂಬಿಕೊಳ್ಳುವ ತಾಯಿ

ಎಂದೂ ಹಾಡದ ತಂದೆಯೂ

ಕಲಿತು ಹಳ್ಳುಳ್ಳಾಯಿ

ಸೀತವಾದರೆ ಕೆಮ್ಮಾದರೆ

ರಾತ್ರಿ ಇಡೀ ಜಾಗರಣೆ 

ಹೆಗಲಮೇಲೆ ಹೊತ್ತು

ರಥಯಾತ್ರೆ ವಿಜೃಂಭಣೆ

ರಾತ್ರಿ ಕುಸುಕುಸು ಸದ್ದು

ನಿದ್ದೆಯಲ್ಲೇ ಎದ್ದು

ಒದ್ದೆಯಾಗಿದೆಯೇ ಬೇಕಾಗಿದೆಯೇ ಹಾಲು

ಹೊಟ್ಟೆನೋವೇ ಏನೋ ತಿಳಿಯದೆ ಕಂಗಾಲು

ತಾರಮ್ಮಯ್ಯ ಎಂದಾಗ ನಕ್ಕರೆ ಬೀಗಿ

ತೂಗಿ ತೂಗಿ ಮಲಗದ ಮಗುವಿಗೆ ರೇಗಿ

ಹೆಜ್ಜೆ ಇಟ್ಟರೆ ಸಂಭ್ರಮ

ಅಪ್ಪ ಅಮ್ಮ ಎಂದರೆ ವಿಭ್ರಮ

ಮೊದಲ ದಿನ ಸ್ಕೂಲಲ್ಲಿ ಹೋ ಎಂದು ಅತ್ತಾಗ

ಅಳದಿದ್ದರೂ ಕರುಳು ಕಿತ್ತಂತೆ ಇತ್ತಾಗ 

ಎಷ್ಟು ಬೆಳೆಯಿತು ಎಂದು ಹಾಕುತ್ತಾ ಗೀಟು

ಏಳು ಏಳು ಶಾಲೆಗೆ ಹೊತ್ತಾಯಿತು

ಶಾಲೆಯಲ್ಲಿ ಸಂಭ್ರಮದ ಆನುವಲ್ ಡೇ 

ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವ ಮಗು ನಮ್ಮದೇ

ಒಂದು ಎರಡು ಶಿಶುಗೀತೆ ಹಾಡು

ಮೂರು ನಾಕು ಮಗ್ಗಿ ಉರು ಹಾಕು

ಏಳು ಎಂಟು ಆಲ್ಜೀಬ್ರಾ ನಂಟು

ಒಂಬತ್ತು ಹತ್ತು ಮೀಸೆ ಬಂದಿತ್ತು

ಎನ್ನುತ್ತಾ ಕಳೆಯುತ್ತಾರಲ್ಲ ದಿನವೆಲ್ಲಾ 

ಒಂದರ ನಂತರ ಒಂದು

ಕೇಳಿ ಅವರನ್ನು ಮಕ್ಕಳ ದಿನ ಯಾವುದೆಂದು


ಸಿ ಪಿ ರವಿಕುಮಾರ್


#ಕವಿತಾಸ್ಫೂರ್ತಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)