ತಂದೂರ್ ರೊಟ್ಟಿ
ಹಾಸ್ಟಲ್ ವಾರ್ಡನ್ ಜವಾಬ್ದಾರಿಯನ್ನು ವಹಿಸಿಕೊಂಡು ನಾನು ವಾರ್ಡನ್ ಮನೆಯ ಗೃಹಪ್ರವೇಶ ಮಾಡಿ ಒಂದೆರಡು ವಾರಗಳಾಗಿದ್ದವು. ಗೃಹಪ್ರವೇಶ ಎಂದರೆ ಹಾಲು ಉಕ್ಕಿಸುವುದು, ಅಷ್ಟೇ. ಹಾಸ್ಟಲ್ ಕೆಲಸಗಳು ಹೇಗೆ ನಡೆಯುತ್ತವೆ ಎಂದು ಕ್ರಮೇಣವಾಗಿ ಅರ್ಥಮಾಡಿಕೊಳ್ಳುತ್ತಾ ಸಾಗುತ್ತಿದ್ದೆ. ಏನೂ ತೊಂದರೆಯಾಗದಿದ್ದರೆ ಅಷ್ಟೇ ಪುಣ್ಯ ಎಂಬ ಮನೋಭಾವನೆಯನ್ನು ನಾನು ತಳೆದಿದ್ದೆ. ನನಗೆ ಕೇಳಿಬರುತ್ತಿದ್ದ ದೂರುಗಳಲ್ಲಿ ಪ್ರಮುಖವಾದದ್ದು ಮೆಸ್ ಆಹಾರದ ಬಗ್ಗೆ. ಒಂದು ದಿನ ಸಂಜೆ ಒಬ್ಬ ಹುಡುಗ ತನ್ನ ಊಟದ ತಟ್ಟೆಯನ್ನೇ ಹಿಡಿದು ನಮ್ಮ ಮನೆಯ ಬಾಗಿಲು ಬಡಿದ. ಅವನ ಹಿಂದೆ ಇನ್ನಷ್ಟು ಜನ ಹುಡುಗರು ನಿಂತಿದ್ದರು. ಅಸಿಸ್ಟೆಂಟ್ ಮೆಸ್ ಸೂಪರ್ವೈಸರ್ ಬಿಷ್ಟ್ ಕೂಡಾ ಇದ್ದ.
ನಾನು: ಏನಾಯಿತು?
ತಟ್ಟೆ ಹಿಡಿದ ಹುಡುಗ: ಸರ್ ನೋಡಿ ನಿಮ್ಮ ಹಾಸ್ಟೆಲಿನಲ್ಲಿ ಕೊಡಲಾಗುತ್ತಿರುವ ರೋಟಿ ಹೇಗಿದೆ!
ನಾನು: ಯಾಕೆ, ಏನಾಗಿದೆ?
ತಹಿಹು: ಸರ್ ಇದು ತಿನ್ನಲು ಲಾಯಕ್ಕಾಗಿದೆಯೇ! ಅಡಿಯೆಲ್ಲ ಕಪ್ಪಾಗಿದೆ. ಎಷ್ಟು ದಪ್ಪ ಇದೆ. ಹಲ್ಲಿನಿಂದ ಕಚ್ಚಲೂ ಆಗದ ಹಾಗಿದೆ ...
ನಾನು: ಏನು ಬಿಷ್ಟ್ ಜೀ, ನಿಮ್ಮ ಅಭಿಪ್ರಾಯ ಏನು?
ಬಿಷ್ಟ್: ಸರ್, ನನ್ನ ಮಾತು ಕೇಳಿ. ಇವರು ಊಟಕ್ಕೆ ಬಂದಿದ್ದು ತಡವಾಗಿ. ಈಗ ನೋಡಿ ಗಂಟೆ ಎಂಟೂಮುಕ್ಕಾಲು ಚಳಿಗಾಲದಲ್ಲಿ ಏಳು ಗಂಟೆಗೇ ಡಿನ್ನರ್ ಪ್ರಾರಂಭ. ತಂದೂರಿ ರೋಟಿ ಬಿಸಿಯಾಗಿ ತಿಂದರೆ ತಾನೇ ಚೆನ್ನ! ನ್ಯಾಯವಾಗಿ ಇವರು ತಡವಾಗಿ ಬಂದವರು, ಮೆಸ್ ಮುಚ್ಚಿದ ಮೇಲೆ ಹಿಂಬದಿಯ ಬಾಗಿಲಿನಿಂದ ಒಳಕ್ಕೆ ಬಂದು ಊಟಕ್ಕೆ ಕೂತವರು. ಇವರಿಗೆ ಊಟ ಇಲ್ಲ ಎಂದು ಹೇಳಬಹುದಾಗಿತ್ತು. ಮಕ್ಕಳಲ್ಲವೇ ಅಂತ ಯಾರೂ ತಡೆಯಲಿಲ್ಲ. ಮಾಡಿಟ್ಟಿದ್ದ ರೋಟಿ ಇನ್ನು ಹೇಗಿರುತ್ತೆ.
ತಹಿಹು: ಸರ್, ಬಿಸಿಯಾದ ರೊಟ್ಟಿಯನ್ನು ಮೆಸ್ ಕೆಲಸಗಾರರು ತಮಗಾಗಿ ಇಟ್ಟುಕೊಂಡಿದ್ದಾರೆ. ನಮಗೆ ತಂಗಳು ಬಡಿಸಿದ್ದಾರೆ
ಈ ವಾಗ್ವಾದಕ್ಕೆ ಕೊನೆಯಿಲ್ಲ. ನಾನು "ಇನ್ನು ಮುಂದೆ ನೀನು ಊಟಕ್ಕೆ ಬೇಗ ಬರಬೇಕು. ಬಿಷ್ಟ್ ಜೀ, ನೀವೂ ಕೂಡಾ ಈ ರೀತಿಯ ದೂರು ಬಾರದಂತೆ ನಿಗಾ ವಹಿಸಿ. ನಾಳೆ ಭಟ್ ಜೀ ಅವರೊಂದಿಗೆ ಈ ವಿಷಯ ಮಾತಾಡುತ್ತೇನೆ. ಅವರಿಗೆ ಭೇಟಿಯಾಗಲು ಹೇಳಿ" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಕೆಲಸ ಮಾಡಿದೆ. ಹುಡುಗರು ಗೊಣಗಿಕೊಂಡು ಹೋದರು. ಮರುದಿನ ಭಟ್ ನನ್ನ ಆಫೀಸಿಗೆ ಬಂದು "ಸಾಬ್ ಜೀ, ಏನಾದರೂ ತೊಂದರೆ ಆಯಿತಾ?" ಎಂದು ಕೇಳಿದ.
"ಹುಡುಗರು ರೋಟಿ ಚೆನ್ನಾಗಿಲ್ಲ ಅಂತಾರಲ್ಲ"
"ಸಾಬ್ ಜೀ, ನೀವು ಒಮ್ಮೆ ಬಂದು ಮೆಸ್ ಊಟ ಮಾಡಿ. ಎಷ್ಟು ಫಸ್ಟ್ ಕ್ಲಾಸ್ ಇರುತ್ತದೆ ನೀವೇ ನೋಡುವಿರಂತೆ."
"ತಂದೂರಿ ರೋಟಿ ಕೊಡುವ ಬದಲು ಚಪಾತಿ ಕೊಡಲು ಸಾಧ್ಯವಿಲ್ಲವೇ?"
"ಸಾಬ್ ಜೀ, ಹಾಸ್ಟೆಲಿನಲ್ಲಿ ನಾನ್ನೂರು ಜನ ಇದ್ದಾರೆ. ಲಟ್ಟಿಸಿದ ಚಪಾತಿ ಕೊಟ್ಟರೆ ಒಬ್ಬೊಬ್ಬರೂ ನಾಲ್ಕು ತಿನ್ನುತ್ತಾರೆ. ಕೆಲವರು ಹುಡುಗರು ಪಂದ್ಯ ಕಟ್ಟಿ ಹತ್ತು ಇಪ್ಪತ್ತು ತಿನ್ನುತ್ತಾರೆ. ನಾನೇ ನೋಡಿದ್ದೇನೆ. ಐಸ್ ಕ್ರೀಮ್ ಇರೋ ದಿವಸ ಕೆಲವು ಹುಡುಗರು ಎರಡೆರಡು ಸಲ ಊಟ ಮಾಡುತ್ತಾರೆ. ಸಾವಿರಾರು ಚಪಾತಿ ಲಟ್ಟಿಸೋದು ಸಾಧ್ಯವೇ?"
"ಟಿವಿಯಲ್ಲಿ ರೋಟಿ ಮೇಕರ್ ಅಂತ ಏನೋ ಜಾಹೀರಾತು ಬರುತ್ತಲ್ಲ."
ಭಟ್ ಜೀ ನನ್ನ ಕಡೆ ನೋಡಿ ನಗು ತಡೆಹಿಡಿದುಕೊಂಡ. "ಸಾಬ್ ಜೀ, ನಮ್ಮ ಮನೆಯಲ್ಲಿ ಹೆಂಗಸರು ನಾಜೂಕಾಗಿ ಮಾಡೋ ಕೆಲಸಕ್ಕೆ ಅವೆಲ್ಲ ಸರಿ. ಇದು ಹಾಸ್ಟೆಲ್ ಮೆಸ್. ಇಲ್ಲಿ ಅವೆಲ್ಲ ಆಗೋದಿಲ್ಲ. ಎಂಟುನೂರು, ಸಾವಿರ ರೋಟಿ ಮಾಡೋದೇನು ಸುಲಭ ಅಂದುಕೊಂಡಿರಾ! ತಂದೂರ್ ಮುಂದೆ ನಿಂತು ಬೆವರು ಸುರಿಸಿಕೊಂಡು ರೋಟಿ ಮಾಡುತ್ತಾನೆ ನಮ್ಮ ಹುಡುಗ!"
ಹಾಸ್ಟೆಲಿನಲ್ಲಿ ಬದಲಾವಣೆ ತರುವುದು ಸುಲಭಸಾಧ್ಯವಲ್ಲ ಎಂದು ನನಗೆ ಬೇಗ ಮನದಟ್ಟಾಯಿತು. ನಿಜವೆಂದರೆ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿರಲಿಲ್ಲ. ಒಮ್ಮೊಮ್ಮೆ ವಾದವಿವಾದಗಳು ಬಿಸಿಯೇರಿ ವಾರ್ಡನ್ ವರೆಗೆ ಬರುತ್ತಿದ್ದವು. ಹುಡುಗರು ಕಾರ್ಮಿಕರ ಮೇಲೆ ಮತ್ತು ಕಾರ್ಮಿಕರು ಹುಡುಗರ ಮೇಲೆ ಅಪವಾದ ಹೊರಿಸುತ್ತಿದ್ದರು. ಹುಡುಗರು ತಲೆಗೂದಲು ತೊಳೆಯಲು ತರುವ ಎರಡು ರೂಪಾಯಿಯ ಶಾಂಪೂ ಪ್ಯಾಕೆಟ್ಟನ್ನು ಬಿಸಾಡುವ ಕಾರಣ ಬಚ್ಚಲಿನ ಪೈಪ್ ಕಟ್ಟಿಕೊಳ್ಳುತ್ತದೆ, ಹುಡುಗರು ವೃಥಾ ಆಹಾರ ಚೆಲ್ಲಿ ದುಂದು ಮಾಡುತ್ತಾರೆ, ಇಂತಹ ದೂರುಗಳು ಬರುತ್ತಿದ್ದವು.
(ಮುಂದುವರೆಸುತ್ತೇನೆ.)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ