ಏನಾದರೂ ಬೀರುತ್ತಿರು ತಮ್ಮ

 



ಬೀರಬಲ್ ಎಂಬ ಹೆಸರಿನಲ್ಲಿ ಕೆಲವರಿಗೆ ಬಲ ಎಂಬುದು ದೊಡ್ಡದಾಗಿ ಕಂಡರೆ ಕೆಲವರಿಗೆ ಬೀರ್ ಎಂಬುದು  ದೊಡ್ಡದಾಗಿ ಕೇಳಿಸಿ ಅದರ ಹೀರಬಲ್ಲ ಸೋದರ ಬಿಯರ್ ನೆನಪಾಗಿ  ಅದಮ್ಯ ಬಾಯಾರಿಕೆ ಸೃಷ್ಟಿಸುತ್ತದೆ. ಬೀರು ಎಂಬುದು ಕನ್ನಡ ಪದವೇ. ಸಂಕ್ರಾಂತಿಯ ದಿನ ಎಳ್ಳುಬೀರುವ ನಾರಿಯರನ್ನೂ ಮತ್ತು ಕ್ರಾಂತಿಯ ವಿಭ್ರಾಂತಿಯಲ್ಲಿ ಕಲ್ಲು ಬೀರುವ ಬೀದಿಮಾರಿಯರನ್ನೂ ನೀವು ನೋಡಿಯೇ ಇರುತ್ತೀರಿ.  ಎಳ್ಳು ಮತ್ತು ಕಲ್ಲು ಅಲ್ಲದೆ ಬೀರಬಲ್ (beerable, adj.) ವಸ್ತುಗಳು ಬಹಳ ಇವೆ. ಗಂಡುಬೀರಿ,ಹಲ್ಲುಬೀರಿ (ರ) ಇತ್ಯಾದಿಗಳು ನಿಮಗೆ ಪರಿಚಿತವಾದ ಜನರೇ. ಬೀರ ಎಂಬುದು ವೀರ ಎಂಬ ಪದದ ಇನ್ನೊಂದು ರೂಪ. ವೀರಬಲ ಎಂಬುದೇ ಬೀರಬಲ್ ಆಗಿದೆ ಎಂದಾದರೆ ಹಲ್ಲುಬೀರ ಎಂದರೆ ಯಾರು? ಹಲ್ಲನ್ನೇ ಆಯುಧವಾಗಿ ಬಳಸುವ ವೀರನೆ?  ನೇಗಿಲನ್ನು ಆಯುಧವಾಗಿ ಬಳಸಿಕೊಂಡ ಬಲರಾಮ ಹೇಗೆ ಹಲಾಯುದನೋ ಹಾಗೆ ಹಲ್ಲಿನಿಂದ ಕಚ್ಚುವವನು ಹಲ್ಲಾಯುಧ.  ಇನ್ನು ಗಂಡುಬೀರಿ ಎಂದರೆ ಗಂಡಿನಂತೆ ವೀರಯುದ್ಧ ಮಾಡಿದವಳೇ ಗಂಡುಬೀರಿ ಎಂದು ಅರ್ಥೈಸುವುದು ರೂಢಿ. ಇಂದಿನ ಮಹಿಳಾ ವಿಮೋಚನಾ ಯುಗದಲ್ಲಿ ಇದನ್ನು ಹೇಳುವುದು ಕಷ್ಟ. ಗಂಡಿನಂತೆ ವೀರ ಯುದ್ಧ ಮಾಡುವುದು ಎಂಬುದನ್ನು ಕೇಳುತ್ತಲೇ ಎಷ್ಟೋ ಜನ ವಿಮೋಚಕಿಯರು ವೀರಗಚ್ಚೆ ಹಾಕಿ ಯುದ್ಧಕ್ಕೆ ಸನ್ನದ್ಧರಾಗುವರು.   


ನಗೆ ಬೀರುವುದು ಎಂಬ ಪ್ರಯೋಗವೂ ಸಾಮಾನ್ಯ.  ಆದರೆ ನಗೆಬೀರ ಎಂಬ ಪ್ರಯೋಗವನ್ನು ನಾನೆಂದೂ ಕೇಳಿಲ್ಲ.  ಜೋಕಿಗೆ ನಗಬಲ್ಲ ವೀರರೇ ನಗೆವೀರರು ಎಂದಾದರೆ ಇಂಥ ನಗೆವೀರರು ಹೆಚ್ಚುಜನರನ್ನು ನಾನು ನೋಡಿಲ್ಲ. ಹೀಗಾಗಿ ನಾನು ಜೋಕ್ ಹೇಳಿದಾಗ ನಗುಬಂತಾ ಎಂದು ಕೇಳುತ್ತೇನೆ. ಕೆಲವರು ಬಲವಂತವಾಗಿ ನಗುತ್ತಾರೆ. ಅವರೇ ನನ್ನ ಮಟ್ಟಿಗೆ ನಗುವೀರರು. ಇನ್ನುಳಿದವರು ಕ್ಯಾರೇ ಎನ್ನುವುದಿಲ್ಲ. ನೋಡಿಯೂ ನೋಡದಂತೆ ಮುಂದೆ ಹೋಗುತ್ತಾರೆ. ಇದನ್ನು ಒಬ್ಬರು ಪ್ರೊಫೆಸರ್ ಹತ್ತಿರ ಹೇಳಿಕೊಂಡಾಗ ಅವರು ತಮ್ಮ ದುಃಖವನ್ನು ಹೀಗೆ ಅರುಹಿದರು. "ನೋಡಿ, ನಾನು ಪ್ರೊಫೆಸರ್ ಆದಾಗ ನನ್ನ ಜೋಕಿಗೆ ಬಿದ್ದು ಬಿದ್ದು ನಗುತ್ತಿದ್ದ ಹುಡುಗರು ಈಗ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ನಾನು ಈಗಲೂ ಅವರ ಜೊತೆ ಲಿಂಕ್ಡ್ ಇನ್ ಮುಂತಾದ ತಾಣಗಳಲ್ಲಿ ಸಂಪರ್ಕದಲ್ಲಿ ಇದ್ದೇನೆ.  ಯಾರೂ ನನ್ನ ಜೋಕುಗಳಿಗೆ ಸ್ಪಂದಿಸುವುದೇ ಇಲ್ಲ."  ಅನೇಕ ಪ್ರೊಫೆಸರರು ತಮ್ಮ ಜೋಕಿಗೆ ನಗುವ ವೀರವೀರಿಯರಿಗೆ ಹೆಚ್ಚಿನ ಗ್ರೇಡ್ ಕೊಡುತ್ತಾರೆ ಎಂಬುದು ಶುದ್ಧ ಸುಳ್ಳು. ನಗುವು ಸಹಜದ ಧರ್ಮ ಎಂದೇ ನಂಬಿದ ಪ್ರೊಫೆಸರರು ನಗೆಟ್ಗಳನ್ನು (nugget) ಆಗಾಗ ವಿದ್ಯಾರ್ಥಿಗಳಿಗೆ ಹಂಚುವುದು ತಮ್ಮ ಸಹಜಧರ್ಮ ಎಂದೇ ನಂಬಿದ್ದಾರೆ. ನಗುವುದು ಸಹಜದ ಧರ್ಮ ಹೌದೋ ಅಲ್ಲವೋ ತಿಳಿಯದು.   ಪ್ರೊಫೆಸರ್ ಹತ್ತಿರ ಒಳ್ಳೆಯ ಗ್ರೇಡ್ ಗಿಟ್ಟಿಸುವ ಆಸೆಯಿಂದ ಅವರ ಜೋಕುಗಳಿಗೆ ಬಿದ್ದು ಬಿದ್ದು ನಗುವುದು ಸಹಜವೇನಲ್ಲ, ಬಿಡಿ. ಹೀಗಾಗಿ ನನ್ನ ಜೋಕುಗಳಿಗೆ ಎಲ್ಲೋಎಲ್, ಆರ್ ಓ ಎಫೆಲ್ ಇತ್ಯಾದಿ ಕಾಮೆಂಟುಗಳನ್ನು ಯಾರೂ ಹಾಕಿಲ್ಲದಿದ್ದರೂ ನಾನು ಯಾರನ್ನೂ ದೂರಿಲ್ಲ.  ಇಬ್ಬರು ನನ್ನ #ನಗುಬಂತಾ ಎಂಬ ಟ್ಯಾಗ್ ನೋಡಿ ಎಲ್ಲೋ ಎಂದಷ್ಟೇ ಬರೆದರು. ಸ್ವಾಮೀ ನೀವು ಎಲ್ಲೋಎಲ್ ಎಂದಲ್ಲವೇ ಬರೆಯಬೇಕು ಎಂದುಕೊಂಡಿದ್ದು ಎಂದು ಸವಿನಯ ಮೆಸೇಜ್ ಕಳಿಸಿದೆ. "ಇಲ್ಲ, ಎಲ್ಲೋ ಇದೆ ಇಲ್ಲಿ ನಗುವಂಥದ್ದು ಎಂದೇ ನನ್ನ ಮಾತಿನ ತಾತ್ಪರ್ಯ" ಎಂದು ಹೇಳಿ ಮಾಯವಾದರು.  ಕೆಲವರಿಗೆ ನಾನು ಬರೆದದ್ದು ಜೋಕ್ ಎಂದು ತಿಳಿಯದು ಎಂಬ ಅರಿವು ನನಗಿದೆ. ಹಾಗಾಗಿ ಈ ನಗುಬಂತಾ ಟ್ಯಾಗ್ ಹಾಕುತ್ತೇನೆ. #ನಗುಬಂತಾ ಎಂದು ಬರೆದ ಒಂದು ಬ್ಯಾಡ್ಜ್ ಮಾಡಿಸಿ ಈನಡುವೆ ನಾನು ಜೋಬಿನಲ್ಲಿ ಇಟ್ಟುಕೊಂಡೇ ಓಡಾಡುತ್ತೇನೆ. ನನಗೆ ಮಾತಾಡಲು ಅವಕಾಶ ಸಿಕ್ಕಾಗ ನಾನು ಜೋಕ್ ಹೇಳಿದ ಕೂಡಲೇ ಈ ಬ್ಯಾಡ್ಜ್ ತೆಗೆದು ಎಲ್ಲರಿಗೂ ತೋರಿಸುತ್ತೇನೆ. ನನ್ನನ್ನು ಆಹ್ವಾನಿಸಿದ ಅತಿಥೇಯರು ಕೂಡಲೇ ನಗುತ್ತಾರೆ. ಅವರು ಆ ಸಂಸ್ಥೆಯಲ್ಲಿ ಮುಖ್ಯರಾಗಿದ್ದರೆ ಇನ್ನೂ ಅನೇಕರು ಪ್ರತಿಧ್ವನಿಸುವ ಹಾಗೆ ನಗುತ್ತಾರೆ.


ಧರ್ಮಭೀರು ಎಂಬ ಪದವನ್ನು ಕೂಡಾ ನೀವು ನೋಡಿರಬಹುದು. ಕೆಲವರು ಅದನ್ನು ಧರ್ಮಬೀರು ಎಂದು ಬರೆಯುತ್ತಾರೆ. ಧರ್ಮವನ್ನು ಬೀರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ ಎಂಬುದೇನೋ ನಿಜವೇ ಬಿಡಿ. ಧರ್ಮಗಳಿಗೆ ಕಲ್ಲು ಬೀರುವುದು, ಧರ್ಮಗಳತ್ತ ಹಲ್ಲು ಬೀರುವುದು, ಇವೆಲ್ಲವೂ ಈಗ ಫ್ಯಾಷನ್ ಆಗಿವೆ. ಆದರೆ ಧರ್ಮಭೀರು ಎಂದರೆ ಧರ್ಮಕ್ಕೆ ಹೆದರುವವನು ಎಂದು ಅರ್ಥ.  ಹಿಂದಿ ಸಿನಿಮಾ ನಟ ಧರ್ಮೇಂದ್ರ ಅಥವಾ ಧರಮ್  ಗೆ ಹೆದರುವುದಲ್ಲ.  ಧರಂ ಕುರಿತು ಒಂದು ಜೋಕ್ ನನಗೆ ಯಾರೋ ಹೇಳಿದರು. ಅವನನ್ನು ಕಂಡರೆ ಬೀದಿ ನಾಯಿಗಳು ಹೆದರುತ್ತವೆಯಂತೆ. ಯಾಕೆಂದರೆ ಅವನು ಎಲ್ಲ ಚಿತ್ರಗಳಲ್ಲೂ ಕುತ್ತೇ ಮೈ ತೇರಾ ಖೂನ್ ಪೀ ಜಾವೂಂಗಾ ಎಂದು ಡೈಲಾಗ್ ಹೇಳುತ್ತಾನಲ್ಲ.  ನಾನೀಗ ಧರ್ಮಭೀರು ನಾಯಿಗಳನ್ನು ಕುರಿತು ಹೇಳುತ್ತಿಲ್ಲ. Beer ಕುಡಿಯುವವರದ್ದೇ ಒಂದು ಧರ್ಮ ಎಂದು ನಿಮಗೆ ಗೊತ್ತಿದೆಯೇ? ಬೇಕಾದರೆ ಗಮನಿಸಿ. ನೂರಾರು ಜನರ ಪಾರ್ಟಿ ಇರಬಹುದು, ಅಲ್ಲಿ ಹಾಡು ನೃತ್ಯಗಳು ನಡೆಯುತ್ತಿರಬಹುದು, ನಗೆಬುಗ್ಗೆಗಳು ಏಳುತ್ತಿರಬಹುದು, ಸೂಪ್ ಸ್ಟಾರ್ಟರ್ಗಳನ್ನು ಹೊತ್ತ ವೇಟರುಗಳು ಅತ್ತಿಂದಿತ್ತ ಅಲೆದಾಡುತ್ತಿರಬಹುದು, ಹೆಂಗಸರು ಗುಸುಗುಸು ಗುಟ್ಟು ಮಾತಾಡಿಕೊಳ್ಳುತ್ತಿಬಹುದು.... ಆದರೆ ಬಿಯರ್ ಕುಡಿಯುವವರು ಒಂದು ಕಡೆ ತಣ್ಣಗೆ ಕೂತು ತಮ್ಮದೇ ಧ್ಯಾನಲೋಕದಲ್ಲಿ ಮಗ್ನರಾಗಿರುತ್ತಾರೆ. ನಡುನಡುವೆ ಚಿಪ್ಸ್ ಮತ್ತು ಖಾರದ ಕಡಲೇಕಾಯಿ ತಿನ್ನಲು ಮಾತ್ರ ಅವರು ಬಾಯ್ತೆರೆಯಬಹುದು.  ಹಾಗೆ ಒಟ್ಟಿಗೆ ಕೂತವರಲ್ಲಿ ಒಬ್ಬರಿಗೊಬ್ಬರು ಪರಿಚಯವೂ ಇರುವುದಿಲ್ಲ. ಆದರೆ ಅವರ ಬಿಯರ್ ಧರ್ಮ ಅವರನ್ನು ಒಟ್ಟಿಗೆ ಬಂಧಿಸುತ್ತದೆ. 


Bureau ಎಂಬ ಬೀರು ನಮಗೆ ಬ್ರಿಟಿಷರ ಕೊಡುಗೆ. ಬೀರುವಿನಲ್ಲಿ ಇದ್ದಿದ್ದನ್ನು ಅವರು ಬಳಿದುಕೊಂಡು ನಾವೆಗಳಲ್ಲಿ ತುಂಬಿಕೊಂಡು ನಮಗೆ ಖಾಲಿ ಬೀರುವನ್ನು ಮಾತ್ರ ಕೊಟ್ಟು ನಗೆಬೀರಿ ಟಾಟಾ ಹೇಳಿ ಹೋದರು. ಒಡವೆ ವಸ್ತ್ರಗಳನ್ನು ಜೋಪಾನ ಮಾಡಲು ಹಿಂದೊಮ್ಮೆ ನೆಲದಲ್ಲಿ ಹಳ್ಳ ಅಗೆದು ಕುಡಿಕೆಯಲ್ಲಿ ಹೂತಿಡುವುದು ಸಾಧಾರಣವಾಗಿತ್ತು.  ಧರ್ಮವೇ ನೆಲೆಯಾಗಿರುವ ದೇವಸ್ಥಳಗಳಲ್ಲೂ ಈನಡುವೆ ಯಾವ ಭೀತಿಯೂ ಇಲ್ಲದೆ ಕಳ್ಳತನ ನಡೆಯುವ ಕಾರಣ ದೇವರ ಒಡವೆವಸ್ತ್ರಗಳನ್ನೂ ಬೀರುವಿನಲ್ಲಿ ಭದ್ರ ಮಾಡಬೇಕಾದ ಸನ್ನಿವೇಶವಿದೆ. ಇಂಥ ಬೀರುಗಳನ್ನೇ ಧರ್ಮಬೀರು ಎಂದು ಕರೆಯುವುದಾದರೆ ನನ್ನದೇನೂ ಅಭ್ಯಂತರವಿಲ್ಲ.  ಪುಟ್ಟ ಪಾಪನ ಪುಟ್ಟ ಅಂಗಿ, ಆಟಿಕೆ ಇತ್ಯಾದಿಗಳನ್ನು ಇಡುವ ಬೀರುವಿಗೆ ಪಾಪಬೀರು ಎಂದರೂ ನನಗೇನೂ ತೊಂದರೆ ಇಲ್ಲ.


ಬೀರುವ ವಸ್ತುಗಳಲ್ಲಿ ಎಳ್ಳು, ಕಲ್ಲು ಅಲ್ಲದೆ ಬೆಳಕು,ನೋಟ, ಪ್ರಭಾವ, ಪರಿಮಳ ಇವೆಲ್ಲವೂ ಸೇರಿವೆ. ಅರಳು ಮಲ್ಲಿಗೆ ಅರಳು, ಬಿರಿದು ಪರಿಮಳ ಬೀರು ಎಂದು ಕವಿಯೊಬ್ಬ ಹಾಡಿದ್ದನ್ನು ನೆನಪಿಸಿಕೊಳ್ಳಿ.   ಪ್ಲೀಸ್ ಥ್ರೋ ಸಮ್ ಲೈಟ್ ಆನ್ ದಿಸ್ ಟಾಪಿಕ್ ಎನ್ನುವುದನ್ನು ಕನ್ನಡದಲ್ಲಿ ದಯವಿಟ್ಟು ಈ ವಿಷಯದ ಮೇಲೆ ಸ್ವಲ್ಪ ಬೆಳಕು ಬೀರುವಿರಾ ಎಂದೇ ಅನುವಾದಿಸುತ್ತಾರೆ.  ಪ್ರಭಾವ ಬೀರುವುದಂತೂ ಈಗ ಬಹಳ ದೊಡ್ಡ ಉದ್ಯೋಗವೇ ಆಗಿದೆ. ಇಂಥ ಸಾಬೂನು ಬಳಸಿ ತ್ವಚೆಯ ಕೋಮಲತೆಯನ್ನು ಕಾಪಾಡಿ ಎಂದು ನಟಿಯೊಬ್ಬಳು ಹೇಳಿದರೆ ಎಲ್ಲರೂ ಅದೇ ಸಾಬೂನಿಗಾಗಿ ಕ್ಯೂ ನಿಲ್ಲುತ್ತಾರೆ. ಇಂಥ ಶಾಂಪೂ ಬಳಸಿ ನಿಮ್ಮ ಕೇಶದ ಸೌಂದರ್ಯವನ್ನು ವೃದ್ಧಿಸಿ ಎಂದರೆ ಲೋಕೇಶ (lowಕೇಶ)ರೇ ಏಕೆ ನೋಕೇಶರೂ ಅದೇ ಶಾಂಪೂ ಆರ್ಡರ್ ಮಾಡುತ್ತಾರೆ. ಈಗ ಸಾಮಾಜಿಕ ತಾಣಗಳಲ್ಲಿ ಪ್ರಭಾವ ಬೀರುತ್ತಾ ವಿವಿಧ ಆಲೋಚನೆಗಳನ್ನು ವಿಕ್ರಯಿಸುವುದು  ಕೂಡಾ ಒಂದು ದಂಧೆ. ಇನ್ನು ನೋಟ ಬೀರುವ ಬಗ್ಗೆ ನಾನೇನು ಹೇಳುವುದಿದೆ! ನಾನೇ ಹಿಂದೆ ಬರೆದ ಒಂದು ಪದ್ಯವನ್ನು ಕೊಟ್ಟು ಬೀರಬಲ್ಲದ್ದನ್ನೆಲ್ಲಾ ಬೀರಿಯಾಗಿದೆ ಎಂಬ ಕಾರಣ ಇಲ್ಲಿಗೆ ಮುಗಿಸುತ್ತೇನೆ.


ಪದ್ಯ:

ಬೀರಲು ಬಂದಿದ್ದಾಳೆ

ಮಾರು ಜಡೆಯ ಸುಂದರಿ

ಕಿರುಗಬ್ಬು ಎಳ್ಳು ಬೆಲ್ಲ

ಬೀರಿ ಹೋಗಬಾರದೇ

ವಾರೆ ನೋಟ ಒಂದನು

ಕಿರುನಗೆಯ ಕೂಡಾ ಬೀರಳಲ್ಲ!


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)