ಹಾಲನು ಮಾರಲು.ಹೋಗುವ ಬಾರೇ ಬೇಗ ಸಖೀ

 ನಸುಕಿನಲ್ಲೇ ವಾರ್ಡನ್ ಮನೆಯ ಬಾಗಿಲನ್ನು ಯಾರೋ ಬಡಿದರು. ಆಗ ದೆಹಲಿಯಲ್ಲಿ ಚಳಿಗಾಲ. ದೆಹಲಿಯ ಚಳಿಯ ಪ್ರಕೋಪವನ್ನು ಅನುಭವಿಸಿದವರೇ ಬಲ್ಲರು. ಅದರಲ್ಲೂ ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಕಿರುಕುಳಕ್ಕೆ ಮತ್ತೊಂದು ಆಯಾಮ ಸಿಕ್ಕಂತೆ.  ಮಗಳು ಆಗಿನ್ನೂ ವರ್ಷ ತುಂಬಿದ ಮಗು. ಅವಳು ಮಗುವಾಗಿದ್ದಾಗಲೂ ರಾತ್ರಿ ಜಾಗರಣೆ ಮಾಡಿ ಬೆಳಗ್ಗೆ ನಿದ್ರಿಸುವ ಅಭ್ಯಾಸ ಮಾಡಿಕೊಂಡಿದ್ದಳು. ವಾರ್ಡನ್ ಜವಾಬ್ದಾರಿ ಸ್ವೀಕರಿಸುವ ಮುನ್ನ ನಾವು ಆಗ ವೈಶಾಲಿ ಅಪಾರ್ಟ್ಮೆಂಟ್ಸ್ ಎಂಬ ಸಮುಚ್ಚಯ ವಸತಿಯಲ್ಲಿದ್ದೆವು. ಆ ಮನೆಯಲ್ಲಿ  ಹಜಾರದಿಂದ ಒಳಕೋಣೆಯವರೆಗೂ ಉದ್ದದ ಓಣಿಯಂತಹ ದ್ವಾರವಿತ್ತು. ನನ್ನ ಹೆಂಡತಿ ಅದಕ್ಕೆ ಹೊಂದುವ ಕಾರ್ಪೆಟ್ ಮಾಡಿಸಿ ಹಾಕಿದ್ದಳು. ರಾತ್ರಿ ಹತ್ತು ಗಂಟೆಗೆ ಮಲಗುವ ಸಮಯವೆಂದರೆ ಮಗಳು ಅತ್ಯಂತ ಚೈತನ್ಯದಿಂದ ಆಡಲು ಸಿದ್ಧಳಾಗಿರುತ್ತಿದ್ದಳು! ಅವಳ ತಾಯಿಗೆ ಇಡೀ ದಿನ ಅವಳನ್ನು ನೋಡಿಕೊಂಡು ಸುಸ್ತಾಗಿಹೋಗಿರುತ್ತಿತ್ತು. ಆಟಕ್ಕೆ ನಾನೇ ಸಿಕ್ಕುತ್ತಿದ್ದೆ. ಒಂದು ಗಂಟೆ ಹಾಗೂ ಹೀಗೂ ಆಟದಲ್ಲಿ ಕಳೆಯುತ್ತಿತ್ತು. ಹನ್ನೊಂದು ಸಮೀಪಿಸಿದಾಗ ನನಗೂ ತೂಕಡಿಕೆ ಪ್ರಾರಂಭವಾಗುತ್ತಿತ್ತು. ಅವಳನ್ನು ಉದ್ದದ ಕಾರ್ಪೆಟ್ ಮೇಲೆ ಮಲಗಿಸುತ್ತಿದ್ದೆ. ಆಗ ಅವಳಿಗೆ ಒಂದು ಕಡೆಗೆ ಮಾತ್ರ ಬೋರಲಾಗಲು ಬರುತ್ತಿತ್ತು. ತೆಂಗಿನಕಾಯಂತೆ ಉರುಳುತ್ತಾ ಓಣಿಯ ಇನ್ನೊಂದು ತುದಿ ತಲುಪುವಳು. ಅಲ್ಲಿ ಕೋಣೆಯ ಬಾಗಿಲು ಸಿಕ್ಕುತ್ತಿತ್ತು. ಉರುಳುವುದು ಅಸಾಧ್ಯವೆಂದಾಗ ಅವಳು ಪ್ರತಿಭಟಿಸುತ್ತಿದ್ದಳು. ನಾನು ಅವಳನ್ನು ಮಗ್ಗಲು ಬದಲಾಯಿಸಿ ಮಲಗಿಸುತ್ತಿದ್ದೆ. ಈಗ ಮತ್ತೆ ಇನ್ನೊಂದು ದಡಕ್ಕೆ ದೋಣಿ ಚಲಿಸುತ್ತಿತ್ತು. ಈ ದೋಣಿವಿಹಾರಗಳ ನಡುವೆ ನಾನು ಕುರ್ಚಿಯ ಮೇಲೆ ಕೂತು ನಿದ್ದೆ ಮಾಡುತ್ತಿದ್ದೆ!


ಈಗ ಮಗಳಿಗೆ ಒಂದು ತುಂಬಿದ್ದರೂ ರಾತ್ರಿ ಅವಳನ್ನು ಮಲಗಿಸಬೇಕೆಂದರೆ ಅದೊಂದು ತಪಸ್ಸು. ದಿಲ್ಲಿಯ ಚಳಿಯಿಂದ ರಕ್ಷಿಸಲು ಸ್ವೆಟರ್, ಟೋಪಿ ಇತ್ಯಾದಿಗಳ ಅಲಂಕಾರ.  ತೊಡೆಯ ಮೇಲೆ ಕೊನೆಗೂ ನಿದ್ದೆ ಹೋದವಳನ್ನು ಬಹುಮೆಲ್ಲಗೆ ಹಾಸಿಗೆಯ ಮೇಲೆ ಮಲಗಿಸಬೇಕು. ಆ ಚಳಿಯಲ್ಲೋ  ಹಾಸಿಗೆಯ ಹೊದ್ದಿಕೆ ಕೊರೆಯುತ್ತಿರುತ್ತದೆ.  ಅವಳು ಎಚ್ಚರಗೊಂಡು ಕುಸುಕುಸು ಮಾಡುತ್ತಾಳೆ. ಗಾಬರಿಯಿಂದ ಆವಳನ್ನು ತಟ್ಟಿ ಮಲಗಿಸಬೇಕು. ನಡುರಾತ್ರಿ ಒದ್ದೆ ಮಾಡಿಕೊಂಡು ಮತ್ತೆ ಅರೆನಿದ್ರೆಯಲ್ಲಿ ಅತ್ತಾಗ ನಮಗೆ ಗಾಢ ನಿದ್ರೆ. ಹೇಗೋ ಅರೆನಿದ್ದೆಗಣ್ಣಲ್ಲೇ ಡಯಪರ್ ಬದಲಾಯಿಸಬೇಕು. ಅವಳಿಗೆ ಆ ಚಳಿಯಲ್ಲಿ ಎದ್ದು ಹಾಲು ಕಾಯಿಸಿ ಆರಿಸಿ ಬಾಟಲಿಗೆ ತುಂಬಿ ಬಾಯಲ್ಲಿಡಬೇಕು. ಇದನ್ನು ಓದುವಾಗಲೇ ನಿಮಗೆ ದಿಗಿಲಾದರೆ ನನಗೆ ಅರ್ಥವಾಗುತ್ತದೆ.


ಇಂಥ ಸ್ಥಿತಿಯಲ್ಲಿ ಬೆಳಬೆಳಗ್ಗೆ ಬಾಗಿಲು ಬಡಿದು ಎಬ್ಬಿಸಿದವರಿಗೆ ಆಶೀರ್ವಚನ ಹೇಳುತ್ತಾ ನಾನು.ಬಾಗಿಲು ತೆರೆದೆ. ಬಿಷ್ಟ್ ಜೀ ಮತ್ತು ಇಬ್ಬರು ಮೆಸ್ ಕಾರ್ಮಿಕರು ನಿಂತಿದ್ದರು. ಅವರ ತಲೆಯ ಮೇಲೆ ಕಳಚಿಬಿದ್ದಿದ್ದ ಆಕಾಶವೂ ನನಗೆ ಹೆಲೋ ಎಂದಿತು.


ಹಿನ್ನೆಲೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ದೆಹಲಿಯಲ್ಲಿ ಹಾಲು ಪೂರೈಸಲು ಸರಕಾರದ ದುಗ್ಧ ನಿಗಮವೊಂದಿದೆ. ಆಗ ಲೀಟರಿಗೆ ಏಳೂವರೆ ರೂಪಾಯಿ ಬೆಲೆಗೆ ಈ ನಿಗಮ ಹಾಲು ಪೂರೈಸುತ್ತಿತ್ತು. ಅಪಾರ ನಷ್ಟದಲ್ಲಿದ್ದರೂ ಕೂಡಾ. ದೆಹಲಿಯ ಪ್ರಜೆಗಳು ವಿಶೇಷ ಜೀನ್ಸ್ ಉಳ್ಳವರಾದ್ದರಿಂದ ಅವರಿಗೆ ಈ ಬಗೆಯ ಸವಲತ್ತುಗಳು ದೊರೆಯಲೇಬೇಕು. ದುಗ್ಧ ನಿಗಮದವರ ವ್ಯಾನ್ ಪ್ರತಿದಿನ ಬೆಳಗ್ಗೆ ಐಐಟಿಯ ಒಂದು ಹಾಸ್ಟೆಲಿಗೆ ಬಂದು ಇಡೀ ಕ್ಯಾಂಪಸಿಗೆ ಬೇಕಾದ ಹಾಲನ್ನು ಇಳಿಸಿ ಹೋಗುತ್ತಿತ್ತು.  ಹಾಸ್ಟೆಲುಗಳಿಗೆ ಬೇಕಾದ ಹಾಲು ದೊಡ್ಡ ಪ್ರಮಾಣದ್ದು. ಅವರಿಗೆ ಐದು ಲೀಟರ್ ಪ್ಯಾಕೆಟ್ಟುಗಳಲ್ಲಿ ಹಾಲು ಸರಬರಾಜಾಗುತ್ತಿತ್ತು. ಐಐಟಿಯ ನಿವಾಸಿಗಳಿಗೆ ಹಾಲು ಪೂರೈಸುವುದು ದೆಹಲಿ ದುಗ್ಧ ನಿಗಮದ ಕೆಲಸವಲ್ಲ.  ನನ್ನಂಥ ಪ್ರಾಧ್ಯಾಪಕರು ಮೊದಲಾದವರು ಹೊರಗೆ ಬೂತ್ ಇರುವ ಕಡೆಗೆ ಹೋಗಿ ಹಾಲು ತರಬೇಕಾದದ್ದು ನ್ಯಾಯ

 ಆದರೆ ಇದು ಕಷ್ಟದ ಕೆಲಸ. ಐಐಟಿ ಇದಕ್ಕಾಗಿ ಕಂಡುಕೊಂಡ ಪರಿಹಾರವೆಂದರೆ ಎಲ್ಲರೂ ತಮಗೆ ಎಷ್ಟು ಹಾಲು ಬೇಕೆಂಬ ಮಾಹಿತಿಯನ್ನು ಐಐಟಿಗೆ ಕೊಡಬೇಕು. ಅಷ್ಟು ಹಾಲನ್ನು ಐಐಟಿಯ ಒಂದು ಹಾಸ್ಟಲ್ ಪ್ರತಿದಿನ ಪಡೆದುಕೊಂಡು ಹಾಸ್ಟೆಲ್ ಕಾರ್ಮಿಕರ ಮೂಲಕ ವಿತರಣೆ ಮಾಡಿಸುವುದು. ಹೀಗೆ ಸರಬರಾಜು ಮಾಡಿದ್ದಕ್ಕೆ ಹಾಸ್ಟಲ್ ಕಾರ್ಮಿಕರಿಗೆ ಒಂದಿಷ್ಟು ಹಣ ಸಿಕ್ಕುತ್ತಿತ್ತು. ಇದನ್ನು ಶುಲ್ಕದ ಮೂಲಕ ಐಐಟಿ ನಿವಾಸಿಗಳಿಂದ ಸ್ವೀಕರಿಸುವುದು.  ಪ್ರತಿ ವರ್ಷ ಈ ಜವಾಬ್ದಾರಿ ಬೇರೊಂದು ಹಾಸ್ಟೆಲಿಗೆ ಹೋಗುವುದು. ನಾನು ವಾರ್ಡನ್ ಆದಾಗ ಈ ಕೆಲಸ ನೀಲಗಿರಿ ಹಾಸ್ಟೆಲ್ ಮೇಲೆ ಬಿದ್ದಿತ್ತು.


ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಪ್ರತಿದಿನ ನಿವಾಸಿಗಳಿಗೆ ಬೇಕಾದಷ್ಟು ಹಾಲನ್ನು ಒಂದು ಲೀಟರ್ ಪ್ಯಾಕೆಟ್ಟುಗಳಲ್ಲಿ ನಿಗಮ ಸರಬರಾಜು ಮಾಡುತ್ತಿತ್ತು. ಅದನ್ನು ಹಾಸ್ಟೆಲ್ ಕಾರ್ಮಿಕರು ಸೈಕಲ್ ಮೇಲೆ ಹೋಗಿ ಮನೆಮನೆಗೆ ತಲುಪಿಸಿ ಬರುತ್ತಿದ್ದರು.  ಆದರೆ ಅಂದು …


ಆಕಾಶ ಭೂಮಿಯ ಮೇಲೆ ಕಳಚಿಬಿತ್ತು. ನಿಗಮದ ವ್ಯಾನ್ ನಿವಾಸಿಗಳಿಗೆ ಬೇಕಾದಷ್ಟು ಹಾಲನ್ನು ಐದು ಲೀಟರ್ ಪ್ಯಾಕೆಟ್ಟುಗಳಲ್ಲಿ ಕೊಟ್ಟು ಹೊರಟೇ ಹೋಯಿತು. ಇದನ್ನು ಬಿಷ್ಟ್ ಜೀ ನನಗೆ ತಿಳಿಸಿದ.


ಐದು ಲೀಟರ್ ಪ್ಯಾಕೆಟ್ಟುಗಳಿಂದ ಹಾಲನ್ನು ಸರಬರಾಜು ಮಾಡುವುದು ಹೇಗೆ! ಈಗಾಗಲೇ ಹಾಲು ಬರಲಿಲ್ಲ ಎಂದು ಅನೇಕಾನೇಕ ಕರೆಗಳು ಬಂದಿದ್ದವು.


"ಸರ್, ನಾವು ಎಲ್ಲರಿಗೂ ಫೋನ್ ಮಾಡಿ ಇಲ್ಲಿಗೇ ಬರಲು ಹೇಳಬಹುದು. ಆದರೆ ನಮ್ಮ ಹತ್ತಿರ ಲೀಟರ್ ಅಳತೆ ಇಲ್ಲ. ಆವರಿಗೇ ಅದನ್ನು ತರಲು ಹೇಳುತ್ತೇವೆ. ಇಲ್ಲಿಗೆ ಬಂದು ತೊಗೊಂಡು ಹೋಗಲಿ" ಎಂದು ಬಿಷ್ಟ್ ಜೀ ಖಡಾಖಂಡಿತವಾಗಿ ಹೇಳಿದ.


ನಾನು ತಲೆ ಕೊಡವಿಕೊಂಡೆ. ನಾನೇ ಈ ಸ್ಥಿತಿಯಲ್ಲಿದ್ದರೆ ಇದು ನನಗೆ ಕಿರಿಕಿರಿಯ ಕೆಲಸ. ಲೀಟರ್ ಅಳತೆ ಹೊಂದಿಸಿಕೊಂಡು ಹಾಸ್ಟೆಲಿಗೆ ಹೋಗುವುದು ಯಾರಿಗೆ ಬೇಕಾಗಿದೆ? ಅದೂ ಚಳಿಯಲ್ಲಿ! ಚಹಾ ಕುಡಿಯದೆ! ಇದು ಆಗದ ಮಾತು!!


"ತಾಳಿ. ಇದಕ್ಕೆ ಏನಾದರೂ ಬೇರೆ ಉಪಾಯ ಯೋಚಿಸೋಣ."


ಬಿಷ್ಟ್ ಜೀಗೆ ಇದು ರುಚಿಸಲಿಲ್ಲ. ದೆಹಲಿಯಲ್ಲಿ ಜನರಿಗೆ ಸುಲಭದ ಪರಿಹಾರ ಕೊಡುವುದು ಸೇರದು ಎಂದೇ ನನಗೆ ಅನ್ನಿಸುತ್ತದೆ. ಸಮಸ್ಯೆ ಬಂದಾಗ ಅದನ್ನು ದೊಡ್ಡದು ಮಾಡಿ ತಮ್ಮ ಪ್ರಾಮುಖ್ಯತೆ ಮೆರೆಯುವುದು ಅಲ್ಲಿ ಸಾಮಾನ್ಯ.


ಅಷ್ಟರಲ್ಲಿ ನನ್ನ ಹೆಂಡತಿಯೂ ಬಂದಳು. ಅವಳಿಗೂ ಸಮಸ್ಯೆ ತಿಳಿಯಿತು. ನಾವು ಕನ್ನಡದಲ್ಲೇ ಮಾತಾಡಿಕೊಂಡೆವು

 ಅವಳು ಒಳಗೆ ಹೋಗಿ ನನ್ನ ಮಗಳ ಒಂದು ಫೀಡಿಂಗ್ ಬಾಟಲ್ ತಂದಳು. ನಾನು ಅದನ್ನು ಮೆಸ್ ಕಾರ್ಮಿಕರಿಗೆ ತೋರಿಸಿ "ನೋಡಿ, ಇದು 250 ಮಿಲಿ ಲೀಟರ್ ಬಾಟಲು. ಇದರಲ್ಲಿ ನಾಲ್ಕು ಸಲ ಹಾಲು ತುಂಬಿ ಒಂದು ಪಾತ್ರೆಗೆ ಹಾಕಿ. ಅಲ್ಲಿ ಗುರುತು ಹಾಕಿಕೊಳ್ಳಿ. ಸರಬರಾಜು ಮಾಡಲು ಹೋಗುವ ಎಲ್ಲರೂ ಇಂತಹ ಒಂದು ಪಾತ್ರೆ ತೊಗೊಂಡು ಹೋಗಿ. ಅರ್ಥವಾಯಿತೇ? ಆಗಬಹುದು ತಾನೇ?"


ಅವರು ಪರಸ್ಪರ ಮುಖ ನೋಡಿಕೊಂಡು ಆಗಬಹುದು ಎಂದರು. ಬಾಟಲ್ ತೆಗೆದುಕೊಂಡು ಮುಗುಳ್ನಗುತ್ತಾ ಹೋದರು. ಬಿಷ್ಟ್ ಜೀ ಏನೂ ಮಾತಾಡಲಿಲ್ಲ.


ಅಂದು ಭಟ್ ಜೀ ನನ್ನನ್ನು ಭೇಟಿ ಮಾಡಲು ಬಂದ. "ಸಾಬ್ ಜೀ, ಇವತ್ತು ನೀವು ಬಹಳ ಒಳ್ಳೇ ಸಲಹೆ ಕೊಟ್ಟು ಕೆಲಸ ಸುಲಭ ಮಾಡಿದಿರಂತೆ. ಎಲ್ಲರೂ ಹೊಗಳಿದರು. ಹಿಂದೊಮ್ಮೆ ಹೀಗಾದಾಗ ಅದೇನು ಫಜೀತಿ ಆಗಿತ್ತು! ಸ್ವತಃ ಡೀನ್ ಸಾಹೇಬರು ಹಾಸ್ಟೆಲಿಗೆ ಬಂದು ಎಲ್ಲರಿಗೂ ಅಲ್ಲೇ ಹಾಲು ಅಳೆದು ಕೊಡುವ ವ್ಯವಸ್ಥೆ ಮಾಡಿದರು. ಡೀನ್ ಸಾಹೇಬರೇ ಕೆಲವರಿಗೆ ಹಾಲು ಅಳೆದುಕೊಟ್ಟರು" ಎಂದು ಹೊಗಳಿದ. ಅಂತೂ ಹಾಸ್ಟೆಲ್ ಕೆಲಸಗಾರರ ದೃಷ್ಟಿಯಲ್ಲಿ ನನ್ನ ಬಗ್ಗೆ ಅಭಿಮಾನ ಒಂದು ಚೂರು ಹೆಚ್ಚಿತು. ಕೇರ್ ಟೇಕರ್ ಕೂಡಾ ನನ್ನನ್ನು ಹೊಗಳಿದ. ಅಸಿಸ್ಟೆಂಟ್ ಕೇರ್ ಟೇಕರ್ ಆಗಿದ್ದ ಚಂದೇಲ್ ಜೀ ಮಾತ್ರ ನನಗೆ ಏನೂ ಹೇಳಲಿಲ್ಲ.  


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)