ಇಂಟರ್ನೆಟ್ ಉಗಮದಲ್ಲಿ ಸುದ್ದಿ ಗುಂಪುಗಳು

 ಇಂಟರ್ನೆಟ್ ಹೊಸದಾಗಿದ್ದಾಗ ಇಂದಿನ ಹಾಗೆ ಸಾಮಾಜಿಕ ತಾಣಗಳು ಇರಲಿಲ್ಲ. ಗೂಗಲ್ ಇವೆಲ್ಲ ಇನ್ನೂ ಬಂದಿರಲಿಲ್ಲ. ಯೂನಿಕ್ಸ್ ಬಳಕೆದಾರರಿಗೆ ರೀಡ್ ನ್ಯೂಸ್ ಎಂಬ ಒಂದು ತಂತ್ರಾಂಶ ಇತ್ತು. ಬಳಕೆದಾರರು ನ್ಯೂಸ್ ಗ್ರೂಪ್ಸ್ ಅಥವಾ ಸುದ್ದಿಗುಂಪುಗಳನ್ನು ಸೃಷ್ಟಿಸಿ ಅಲ್ಲಿ ತಮಗೆ ಇಷ್ಟವಾದ ಸಂಗತಿಗಳನ್ನು ಕುರಿತು ಹರಟೆ ಹೊಡೆಯಬಹುದಾಗಿತ್ತು. ಇವು ಇನ್ನೂ ಇವೆ. ಇಲ್ಲಿ ಜಾಹೀರಾತುಗಳ ಕಿರಿಕಿರಿ ಇಲ್ಲ. ಗಂಭೀರ ವಿಷಯಗಳ ಮೇಲೆ ಚರ್ಚೆ ಸಾಧ್ಯವಾಗಿತ್ತು. ಉದಾಹರಣೆಗೆ ಕಂಪ್ಯೂಟರ್ ಸೈನ್ಸ್ ವಿಷಯ ಕುರಿತಾದ ಸುದ್ದಿಗುಂಪಿನಲ್ಲಿ  ಗುಂಪಿಗೆ ಸೇರಿದ ಯಾರೇ ಬೇಕಾದರೂ ಪ್ರಶ್ನೆ ಕೇಳಬಹುದು.ಅದಕ್ಕೆ ಉಳಿದವರು ಉತ್ತರ ಹೇಳಬಹುದು. ಇಂದು ಕೋರಾ ಇದಕ್ಕೆ ಸಮೀಪದ್ದು. ವ್ಯತ್ಯಾಸ ಎಂದರೆ ಆಗ ಬಹಳ ಪ್ರಸಿದ್ಧ ಪ್ರಾಧ್ಯಾಪಕರು ಮತ್ತು ಸಂಶೋಧಕರು ಈ ಗುಂಪುಗಳಲ್ಲಿ ಭಾಗವಹಿಸುತ್ತಿದ್ದರು.


ಭಾರತಕ್ಕೆ ಸಂಬಂಧಿಸಿದ ಒಂದು ನ್ಯೂಸ್ ಗ್ರೂಮ್ ಕೂಡಾ ಇತ್ತು. ಅದು ಈಗಲೂ ಅಸ್ತಿತ್ವದಲ್ಲಿ ಇರಬಹುದು. ಆದರೆ ಆಗ ಅದು ಬಹಳ ಸಕ್ರಿಯವಾಗಿತ್ತು. ಅಮೆರಿದಲ್ಲಿ ಓದುತ್ತಿದ್ದ ಬಹಳ ಮಂದಿ ಪಿಎಚ್.ಡಿ. ಮತ್ತು ಎಂ.ಎಸ್. ವಿದ್ಯಾರ್ಥಿಗಳು ಈ ಗುಂಪಿನಲ್ಲಿ ಚರ್ಚೆ ಮಾಡುತ್ತಿದ್ದರು. ನಾನು ಆಗ ಕ್ಯಾಲಫೋರ್ನಿಯಾದಲ್ಲಿ ವಿದ್ಯಾರ್ಥಿ. ಥೀಸಿಸ್ ಬರೆಯುವ ನಡುವೆ ನಾನು ಕೂಡಾ ಈ ಗುಂಪಿನಲ್ಲಿ ಸಕ್ರಿಯನಾಗಿದ್ದೆ. ಕನ್ನಡದ ನೂರಾರು ಕವಿತೆ ಮತ್ತು ಕತೆಗಳನ್ನು ಆಗ ಭಾಷಾಂತರಿಸಿ ಹಂಚಿದ್ದೇನೆ. ಭಾರತದಲ್ಲಿ ಆಗ ಎಲ್ಲರಿಗೂ ಇಂಟರ್ನೆಟ್ ಲಭ್ಯವಾಗಿರಲಿಲ್ಲ. ನನಗೆ ತಿಳಿದಂತೆ Pavanaja U B ಒಬ್ಬರು ಮಾತ್ರ ಭಾರತದಿಂದ ಭಾಗವಹಿಸುತ್ತಿದ್ದರು.


ಕ್ರಮೇಣ ಈ ನ್ಯೂಸ್ ಗ್ರೂಪುಗಳಲ್ಲೂ ಭಾರತ ಪಾಕಿಸ್ತಾನ ಜಗಳಗಳು ಪ್ರಾರಂಭವಾದವು. ಎಲ್ಲರಿಗೂ ಕಿರಿಕಿರಿ ಉಂಟು ಮಾಡುವ ಪೋಸ್ಟ್ಗಳು ಬರಲಾರಂಭಿಸಿದವು. ಜೈ ಸಾಯಿ ಬಾಬಾ ಎಂದು ಒಮ್ಮೆಲೇ ಹತ್ತಾರು ಸಂದೇಶಗಳು ಬರುವುವು. ಕಲ್ಕಿ ಎಂಬ ಹೆಸರಿನಲ್ಲಿ ಒಬ್ಬರು ಯಾರೋ ಇಂಥ ಸಂದೇಶಗಳನ್ನು ಪ್ರತಿದಿನ ಹಾಕುತ್ತಿದ್ದರು.  ತಲೆಬುಡ ಇಲ್ಲದ ಪೋಸ್ಟ್ ಗಳನ್ನು ಕುಲದೀಪ್ ಎಂಬ ಹೆಸರಿನ ಒಬ್ಬರು ಯಾರೋ ಪ್ರತಿನಿತ್ಯ ಹಾಕುತ್ತಿದ್ದರು. ಇವು ನೂರಾರು ಗುಂಪುಗಳಿಗೆ ಕಾಪಿ ಆಗಿರುತ್ತಿದ್ದವು. ಇಂದು ಬಾಟ್ ಗಳು ಈ ಬಗೆಯ ಕೆಲಸ ಮಾಡುತ್ತವೆ.  ಕೆಟ್ಟ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡುವುದು, ಒಬ್ಬರಿಗೆ ಕಾಟ ಕೊಡಲು ಅವರ ಮೇಲ್ ಬಾಕ್ಸಿಗೆ ಸಾವಿರಾರು ಸಂದೇಶಗಳನ್ನು ಕಳಿಸುವುದು, ಇವೆಲ್ಲ ನಡೆಯುತ್ತಿದ್ದವು. 


ಸಾಹಿತ್ಯದಲ್ಲಿ ಆಸಕ್ತಿ ಉಳ್ಳ ಎಷ್ಟೋ ಮಂದಿ ನನಗೆ ಆಗ ಪರಿಚಯವಾದರು. ನಾನು ಪೋಸ್ಟ್ ಮಾಡುತ್ತಿದ್ದ ಭಾಷಾಂತರಗಳನ್ನು ಬಹಳ ಆಸ್ಥೆಯಿಂದ ಓದಿ ಪ್ರತಿಕ್ರಿಯೆ ನೀಡುತ್ತಿದ್ದರು. ಇಂಥ ಮಾಧ್ಯಮದಲ್ಲಿ ಬರೆಯುವುದು ಒಂದು ಆಪ್ಯಾಯಮಾನ ಅನುಭವವಾಗಿತ್ತು.  ಇಂಥ ಸಾಹಿತ್ಯಪ್ರೇಮಿಗಳನ್ನು ಸೇರಿಸಿ ನಾನು ಎರಡು ಕಲ್ಚರಲ್ ವಾಲ್ಯೂಮ್ಗಳನ್ನು ಪ್ರಕಟಿಸಿದೆ. ಭಾರತದ ಅನೇಕ ಭಾಷೆಗಳ ಕವಿತೆಗಳ ಮತ್ತು ಕಥೆಗಳ ಇಂಗ್ಲಿಷ್ ಅನುವಾದಗಳು ಮತ್ತು ವಿಮರ್ಶೆಗಳು ಇವುಗಳಲ್ಲಿ ಪ್ರಕಟವಾದವು. ಇವು ಬಹುಶಃ ಈಗಲೂ ಎಲ್ಲಾದರೂ ಆರ್ಕೈವ್ ಆಗಿರಬಹುದು. 


ಕೆಲವೊಮ್ಮೆ ಗುಂಪುಗಳಲ್ಲಿ ಬಹಳ ತಮಾಷೆಯ ಸಂಗತಿಗಳು ನಡೆಯುತ್ತಿದ್ದವು. ಒಬ್ಬರು ಯಾರೋ "ರಾಮ್" ಎಂದು ಬರೆಯುವುದೇ ಸರಿ, ಅನಗತ್ಯವಾಗಿ ಕೆಲವರು "ರಾಮ" ಎಂದು ಬರೆಯುತ್ತಾರೆ ಎಂದು ಬರೆದರು. ಅವರು ಉತ್ತರ ಭಾರತೀಯರು. ಅದಕ್ಕೆ ದಕ್ಷಿಣದ ಒಬ್ಬರು "ಹೌದು, ರಾಮನ್ ಎಂದೂ ಕೆಲವರು ಬರೆಯುತ್ತಾರೆ. ರಾಮುಡು ಎಂಬುದೇ ಸರಿಯಾದ ಪ್ರಯೋಗ ಎಂದು ಗೊತ್ತಿದ್ದರೂ ಎಂದು ಗೇಲಿ ಮಾಡಿದರು.  


ಆಗ ಭಾರತೀಯ ಭಾಷೆಗಳಲ್ಲಿ ಟೈಪ್ ಮಾಡುವುದು ಸಾಧ್ಯ ಇರಲಿಲ್ಲ. ಟ್ರಾನ್ಸ್ ಲಿಟರೇಷನ್ ಬಳಸಿ ಬರೆಯಬೇಕಿತ್ತು. ಇದನ್ನೇ ಇಂದು ನಾವು ಕಂಗ್ಲಿಷ್ ಎಂದು ಕರೆಯುತ್ತೇವೆ. ಆದರೆ ಟ್ರಾನ್ಸ್ ಲಿಟರೇಷನ್ ಕೂಡಾ ಒಂದು ವೈಜ್ಞಾನಿಕ ಪದ್ಧತಿ. ಅದನ್ನು ಸರಿಯಾಗಿ ಬಳಸಿ ಸಂವಹನ ಸಾಧ್ಯ. ಇಲ್ಲಿ ಇಂಗ್ಲಿಷ್ ಭಾಷೆಯ ಲೋವರ್ ಮತ್ತು ಅಪ್ಪರ್ ಕೇಸ್ ಅಕ್ಷರಗಳನ್ನು ಸರಿಯಾಗಿ ಬಳಸಬೇಕು.  ಸ್ವರಗಳಾದ ಎ ಇ ಐ ಓ ಯೂ ಬರೆಯುವಾಗ ಲೋವರ್ ಕೇಸ್ ಬಳಸಿದರೆ ಹೃಸ್ವ, ಅಪ್ಪರ್ ಕೇಸ್ ಬಳಸಿದರೆ ದೀರ್ಘ. ಹಾಗೇ ವ್ಯಂಜನಗಳನ್ನು ಬಳಸುವಾಗ ಲೋವರ್ ಕೇಸ್ ಬಳಸಿದರೆ ಅಲ್ಪಪ್ರಾಣ ಮತ್ತು ಅಪ್ಪರ್ ಕೇಸ್ ಬಳಸಿದರೆ ಮಹಾಪ್ರಾಣ. ಈಗ ಈ ಸಮಸ್ಯೆಗಳೇನೋ ಪರಿಹಾರವಾಗಿವೆ. ಆದರೆ ಕಿರಿಕಿರಿ ಮಾಡುವ ಪೋಸ್ಟ್, ಜಾಹೀರಾತು, ಜಗಳಗಳು, ಟ್ರೋಲಿಂಗ್ ಇವೆಲ್ಲ ಈಗ ದೊಡ್ಡ ಸಮಸ್ಯೆಗಳಾಗಿವೆ. ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಒಂದು ಸಮಸ್ಯೆ ಬಗೆಹರಿಸುವಷ್ಟರಲ್ಲಿ ಅನೇಕಾನೇಕ ಹೊಸ ಸಮಸ್ಯೆಗಳು ಹುಟ್ಟಿ ಬೆಳೆಯುವುದು ಪ್ರಾಕೃತಿಕ ನಿಯಮವೇ ಏನೋ!


#ನೆನಪುಗಳು


ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)