ಯುದ್ಧದ ನೆನಪು
ನಾನಾಗ ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಒಮ್ಮೆಲೇ ಬಾಂಗ್ಲಾದೇಶದ ವಿಮೋಚನೆಗಾಗಿ ಯುದ್ಧಘೋಷಣೆಯಾಯಿತು. ಯಾರಿಗೂ ಈ ಕುರಿತು ಸುಳಿವೂ ಇರಲಿಲ್ಲ. ಯುದ್ಧಘೋಷಣೆಯಾದ ಸಂದರ್ಭವನ್ನು ನಾನು ಮರೆಯಲಾರೆ.
ನಮ್ಮ ತಂದೆ ಸ್ಥಳೀಯ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಇವುಗಳನ್ನು ಬರೆಯುತ್ತಿದ್ದರು. ಕನ್ನಡದ ಅನೇಕಾನೇಕ ಕಲಾವಿದರು, ಲೇಖಕರು ಮತ್ತು ಪರಿಣಾಮಿ ವ್ಯಕ್ತಿಗಳನ್ನು ಕುರಿತು ಅವರು ದ ಹಿಂದೂಸ್ತಾನ್ ಟೈಮ್ಸ್, ದ ಈವನಿಂಗ್ ನ್ಯೂಸ್, ದ ಇಂಡಿಯನ್ ಎಕ್ಸ್ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ವಿಪುಲವಾಗಿ ಬರೆದರು. ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಕೆಲವು ಕಾರ್ಯಕ್ರಮಗಳಿಗೆ ನಮ್ಮನ್ನೂ ಕರೆದುಕೊಂಡುಹೋಗುತ್ತಿದ್ದರು. ಇಂಥದೇ ಒಂದು ಸಂದರ್ಭ. ಅವತ್ತು ಪೂರಬ್ ಔರ್ ಪಶ್ಚಿಮ್ ಎಂಬ ಹಿಂದಿ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಸಿನಿಮಾ ಸ್ಕ್ರೀನಿಂಗ್ ಆದ ಕಾರಣ ನಾನು ಮತ್ತು ನನ್ನ ಅಣ್ಣ ಮರುಮಾತಿಲ್ಲದೆ ನಮ್ಮ ತಾಯಿತಂದೆಯರೊಂದಿಗೆ ಹೋಗಲು ಒಪ್ಪಿದೆವು. ಬೇರೆ ಸಂಗೀತ, ನ್ಯತ್ಯ ಕಾರ್ಯ ಕ್ರಮಗಳಿಗೆ ಹೋಗಲು ನಾವು ಮೂಗು ಮುರಿಯುತ್ತಿದ್ದೆವು. ಹೀಗಾಗಿ ಅನೇಕ ಅದ್ಭುತ ಕಲಾವಿದರ ಕಾರ್ಯಕ್ರಮಗಳನ್ನು ನೋಡುವ ಅವಕಾಶದಿಂದ ತಪ್ಪಿಸಿಕೊಂಡ ನನ್ನ ಪೆದ್ದುತನಕ್ಕೆ ಈಗಲೂ ಬೇಸರವಾಗುತ್ತದೆ.
ದೆಹಲಿಯ ಚಳಿಗಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುನರ್ಜೀವ ಬರುತ್ತದೆ. ಜನ ಬಣ್ಣಬಣ್ಣದ ಸ್ವೆಟರ್ ಹಾಕಿಕೊಂಡು ಹೊರಗೆ ಬರುತ್ತಾರೆ. ನಾವೂ ಅಂದು ಸ್ವೆಟರ್ ಮಫ್ಲರ್ ಇತ್ಯಾದಿ ಧರಿಸಿ ಸಜ್ಜಾಗಿ ಕಾರ್ಯಕ್ರಮಕ್ಕೆ ಹೋದೆವು. ಬಹುಶಃ ಅದು ಸಪ್ರೂ ಹೌಸ್ ಎಂಬ ಭವನದಲ್ಲಿ ನಡೆಯಲಿದ್ದ ಕಾರ್ಯಕ್ರಮ ಎಂದು ನೆನಪು. ನಾವು ಕಾರ್ಯಕ್ರಮಕ್ಕೆ ಸ್ವಲ್ಪಹೊತ್ತು ಮೊದಲೇ ಹೋಗಿ ಸೇರಿದೆವು. ನಮ್ಮಂತೆ ನೂರಾರು ಜನ ಬಂದು ಆಡಿಟೋರಿಯಮ್ಮಿನಲ್ಲಿ ಉಪಸ್ಥಿತರಾಗಿದ್ದರು. ಕಾರ್ಯಕ್ರಮ ಯಾಕೋ ತಡವಾಗುತ್ತಿದೆ ಎಂದು ಜನ ಮಾತಾಡಿಕೊಂಡರು. ನಮ್ಮ ತಂದೆ ತಾಯಿಗೆ ಮಾತಾಡಲು ಸ್ನೇಹಿತರು ಸಿಕ್ಕಿದ್ದರಿಂದ ಅವರಿಗೆ ಹೊತ್ತು ಹೋಗಿದ್ದು ತಿಳಿಯಲಿಲ್ಲ. ನಮಗೆ ಬೋರ್ ಎನ್ನಿಸತೊಡಗಿತು. ಅರ್ಧಗಂಟೆ ತಡವಾದರೂ ಕಾರ್ಯಕ್ರಮ ಪ್ರಾರಂಭವಾಗುವ ಲಕ್ಷಣವೇ ಕಾಣಲಿಲ್ಲ. ಎಲ್ಲರೂ ಚಡಪಡಿಸುತ್ತಿದ್ದರು. ಸಿನಿಮಾ ಮುಗಿದ ಮೇಲೆ ಮನೆಗೆ ಹೋಗಿ ಸೇರಬೇಕಲ್ಲ. ಅದೂ ದೆಹಲಿಯ ಕೊರೆಯುವ ಚಳಿಯಲ್ಲಿ! ಮಕ್ಕಳಿಗೆ ಹೋಮ್ ವರ್ಕ್ ಮಾಡುವ ಜವಾಬ್ದಾರಿಯೂ ಇರುತ್ತದೆ ಬೇರೆ!
ಸುಮಾರು ಒಂದು ಗಂಟೆಯಾದರೂ ಕಾರ್ಯಕ್ರಮ ಪ್ರಾರಂಭವಾಗದೇ ಇದ್ದಾಗ ಯಾಕೋ ಏನೋ ಸರಿಯಾಗಿಲ್ಲ ಎಂದು ಎಲ್ಲರಿಗೂ ಅನ್ನಿಸತೊಡಗಿತು. ಆಗ ಟ್ರಾನ್ಸಿಸ್ಟರ್ ರೇಡಿಯೋ ಇಟ್ಟುಕೊಳ್ಳುವುದೇ ಒಂದು ದೊಡ್ಡ ಲಕ್ಷುರಿಯಾಗಿತ್ತು. ಯಾರಾದರೂ ಜೊತೆಗೆ ಟ್ರಾನ್ಸಿಸ್ಟರ್ ರೇಡಿಯೋ ತಂದಿದ್ದರೋ ಮತ್ತು ಅದರ ಮೂಲಕ ಸುದ್ದಿ ತಿಳಿದುಕೊಂಡರೋ ಅಥವಾ ಕಾರ್ಯಕ್ರಮದ ಆಯೋಜಕರು ಬಂದು ಹಿಂದಿನ ಬಾಗಿಲಿನಲ್ಲಿ ನಿಂತು ಏನಾದರೂ ಘೋಷಿಸಿದರೋ ತಿಳಿಯದು. ಹಿಂದಿನ ಸೀಟುಗಳಲ್ಲಿ ಕೂತಿದ್ದ ಜನರಲ್ಲಿ ಅನೇಕಾನೇಕರು ಮೇಲೆದ್ದು ನಿರ್ಗಮಿಸಲು ಉಪಕ್ರಮಿಸಿದರು. ನಮ್ಮ ತಂದೆ ಹೋಗಿ ವಿಚಾರಿಸಿಕೊಂಡು ಬಂದು "ಕಾರ್ಯಕ್ರಮ ರದ್ದಾಗಿದೆ. ಭಾರತ ಮತ್ತು ಪಾಕೀಸ್ತಾನ್ ನಡುವೆ ಯುದ್ಧ ಪ್ರಾರಂಭವಾಗಿದೆ" ಎಂದರು. ಅವರ ಧ್ವನಿಯಲ್ಲಿ ಇದ್ದ ಆತಂಕ ನಮಗೆ ಕಂಡರೂ ಅದು ಕಾರ್ಯಕ್ರಮ ರದ್ದಾಗಿದ್ದಕ್ಕೆ ಇರಬಹುದೆಂದು ನಾನು ಕಲ್ಪಿಸಿಕೊಂಡೆ!
ತಂದೆಯ ಆತಂಕಕ್ಕೆ ಇನ್ನೊಂದು ಕಾರಣವೂ ಇತ್ತು. ಯುದ್ಧ ಪ್ರಾರಂಭವಾದ ಕಾರಣ ಬ್ಲಾಕ್ ಔಟ್ ಘೋಷಿತವಾಗಿತ್ತು. ಹೊರಗೆ ಒಂದಾದರೂ ದೀಪಗಳು ಉರಿಯುತ್ತಿರಲಿಲ್ಲ. ಬಸ್ ಸಂವಹನವೂ ನಿಂತಿತ್ತು. ಮನೆಗೆ ಹೋಗುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆಗ ಆಟೋ, ಟ್ಯಾಕ್ಸಿ ಮೊದಲಾದವು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ನಮ್ಮ ತಂದೆ ತಾಯಿ ಪರಸ್ಪರ ಮಾತಾರಿಕೊಂಡರು. ನಾವು ನಡೆದೇ ಹೊರಟು ದಾರಿಯಲ್ಲಿ ಬರುವ ಆಟೋರಿಕ್ಷಾ ಮೊದಲಾದವುಗಳ ಕಡೆ ನಿಗಾ ಇಟ್ಟು ಅವನ್ನು ನಿಲ್ಲಿಸಲು ಸಾಹಸ ಪಡುತ್ತಿದ್ದೆವು. ಲಿಫ್ಟ್ ಕೇಳುವುದು ಕೂಡಾ ಆಗ ಚಾಲ್ತಿಯಲ್ಲಿತ್ತು. ಒಂದು ಕಾರ್ ನಮ್ಮ ಪಕ್ಕದಲ್ಲಿ ಬಂದು ನಿಂತಿತು. ನಮ್ಮ ತಂದೆ ಕಾರ್ ಚಾಲಕರೊಂದಿಗೆ ಚುಟುಕು ಸಂಭಾಷಣೆಯ ನಂತರ ನಮಗೆ ಕಾರ್ ಹತ್ತಿ ಕೂರಲು ನಿರ್ದೇಶಿಸಿದರು. ನಾನು ಮತ್ತು ಅಣ್ಣ ನಮ್ಮ ತಾಯಿತಂದೆಯರ ತೊಡೆಯ ಮೇಲೆ ಹೇಗೋ ಕೂತೆವು. ಕಾರು ನಮ್ಮನ್ನು ನಮ್ಮ ಮನೆಯ ಸಮೀಪದಲ್ಲಿ ಡ್ರಾಪ್ ಮಾಡಿತು. ಕಾರಿನ ಮಾಲೀಕರನ್ನು ವಂದಿಸುತ್ತ ನಮ್ಮ ತಂದೆ "ನೀವು ಹೀಗೆ ನಂಬಿಕೆಯಿಂದ ಸಹಾಯ ಮಾಡಿದ್ದು ಬಹಳ ದೊಡ್ಡ ವಿಷಯ! ಲಿಫ್ಟ್ ಕೊಡಲು ಜನ ಹೆದರುತ್ತಾರೆ" ಎಂದರು. ಮಾರುತ್ತರವಾಗಿ "ನಿಮ್ಮ ಜೊತೆಗೆ ಪುಟ್ಟ ಮಕ್ಕಳಿದ್ದರಲ್ಲ!" ಎಂದು ಕಾರ್ ಮಾಲೀಕರು ಮುಗುಳ್ನಕ್ಕು ಮುಂದೆ ಸಾಗಿದರು.
ಮುಂದೆ ದೆಹಲಿಯಲ್ಲಿ ಕ್ಷಿಪ್ರ ಬದಲಾವಣೆಗಳಾದವು. ರಸ್ತೆಯ ಬದಿಗಳಲ್ಲಿ ಟ್ರೆಂಚ್ ತೋಡಿದರು. "ಪಾಕ್ ನಮ್ಮ ಮೇಲೆ ವಿಮಾನ ದಾಳಿ ಮಾಡಿದಾಗ ಸೈರನ್ ಕೂಗುತ್ತೆ. ಆಗ ನಾವು ಟ್ರೆಂಚ್ ಒಳಗೆ ಹೋಗಿ ಅಡಗಿಕೊಳ್ಳಬೇಕು" ಎಂದು ಸ್ಕೂಲಿನಲ್ಲಿ ಎಲ್ಲರೂ ಮಾತಾಡಿಕೊಂಡೆವು. ಸಂಜೆ ಬ್ಲಾಕ್ ಔಟ್ ಸಾಮಾನ್ಯವಾಯಿತು. ಪೊಲೀಸರು ಗಸ್ತು ತಿರುಗುತ್ತಾ ಕೋಲಿನಿಂದ ಟಕ್ ಟಕ್ ಕುಟ್ಟುತ್ತಾ ದೀಪ ಉರಿಯುವುದು ಕಂಡರೆ ಬತ್ತೀ ಬುಝಾವೋ ಎಂದು ಕೂಗುತ್ತಿದ್ದರು. ಬ್ಲಾಕ್ ಔಟ್ ಮುಂಚೆಯೇ ಊಟ ಮಾಡುವ ಪದ್ಧತಿ ಪ್ರಾರಂಭವಾಯ್ತು. ನಮ್ಮ ಶಾಲೆಯಲ್ಲೂ ಟ್ರೆಂಚ್ ತೋಡಿದರು. ಶಾಲೆಯ ಭವನದ ಮೇಲೆ ದಾಳಿಯಾದರೆ ಬೆಂಕಿ.ಹೊತ್ತಿಕೊಂಡರೆ ಮೇಲಿನ ಮಹಡಿಯಿಂದ ಹಗ್ಗ ಹಿಡಿದು ಹೇಗೆ ಕೆಳಗೆ ಬರಬಹುದು ಎಂದು ಪ್ರದರ್ಶನ ಮಾಡಿ ತೋರಿಸಿದರು. ನನಗಂತೂ ಇದನ್ನು ನೋಡಿ ಗಾಬರಿಯೇ ಆಯಿತು. ನನ್ನ ಶಾಲಾ ಸಹಪಾಠಿಗಳು ತಮಗೆ ಗೊತ್ತಿದ್ದ ಅಲ್ಪಸ್ವಲ್ಪವನ್ನೇ ದೊಡ್ಡದು ಮಾಡಿ ಜಂಬ ಕೊಚ್ಚುತ್ತಿದ್ದರು. "ನನಗೇನಾದರೂ ಪಾಕ್ ಸೈನಿಕರು ಸಿಕ್ಕರೆ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ" ಇತ್ಯಾದಿ ಹರಟೆಗಳು. ಆಗಿನ್ನೂ ಐರನ್ ಮ್ಯಾನ್ ಚಿತ್ರ ಬಂದಿರಲಿಲ್ಲ. ಹಾಗೂ ನನ್ನ ಸಹಪಾಠಿಯೊಬ್ಬ ತಾನು ಕಬ್ಬಿಣದ ಬಟ್ಟೆ ಹಾಕಿಕೊಂಡು ಪಾಕ್ ಸೈನಿಕರನ್ನು ಎದುರಿಸಿ ಅವರನ್ನೆಲ್ಲಾ ನಾಶ ಮಾಡಿಬಿಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ!
ಕೊನೆಗೂ ಯುದ್ಧ ಮುಗಿಯಿತು. ಬಾಂಗ್ಲಾದೇಶದ ಉದಯವಾಯಿತು. ಇದಕ್ಕೆ ಭಾರತ ತೆತ್ತ ಬೆಲೆ ಅಪಾರ. ಈ ವಿಭಜನೆ ನಡೆಯದೇ ಇದ್ದಿದ್ದರೂ ಬಹುಶಃ ಚರಿತ್ರೆ ವಿಭಿನ್ನವಾಗಿರುತ್ತಿರಲಿಲ್ಲ. ಪಶ್ಚಿಮ ಪಾಕೀಸ್ತಾನ, ಪೂರ್ವ ಪಾಕೀಸ್ತಾನ ಎಂಬ ಹುಚ್ಚು ಕಲ್ಪನೆಯಿಂದ ಹಿಂಸೆಯಲ್ಲದೆ ಬೇರೇನೂ ಹೊರಬರಲು ಸಾಧ್ಯವಿರಲಿಲ್ಲ. ಭಾರತ ಬೆಲೆ ತೆರಬೇಕಾಯಿತು ಎಂದೆನಲ್ಲವೇ? ವಸ್ತುಗಳ ಬೆಲೆಗಳು ಆಗಲೇ ಹಠಾತ್ ಮೇಲೇರಿದವು. "ನಾನು ಹಿಂದೆ ತಿಂಗಳಿಗೊಮ್ಮೆ ಬ್ಯಾಂಕಿಗೆ ಹೋಗಿ ಕ್ಯಾಷ್ ತರುತ್ತಿದ್ದೆ. ಈ ಕಾಲದಲ್ಲಿ ಪ್ರತಿ ವಾರವೂ ಹೋಗಬೇಕಾಯಿತು. ನನಗೆ ಪತ್ರಿಕೆ ಬರವಣಿಗೆಯಿಂದ ಸ್ವಲ್ಪ ಮೇಲು ಸಂಪಾದನೆ ಇರುವುದರಿಂದ ನಡೆಯಿತು. ಉಳಿದವರು ಹೇಗೆ ಸಂಭಾಳಿಸುತ್ತಿದ್ದಾರೋ" ಎಂದು ನಮ್ಮ ತಂದೆ ಆಗಾಗ ಹೇಳುತ್ತಿದ್ದರು.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ