ನಿನ್ನ ಗುರುತು
ನಿನ್ನ ಗುರುತು
ಮೂಲ : ಎರಿನ್ ಹ್ಯಾನ್ಸನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ನಿನ್ನ ವ್ಯಾಖ್ಯಾನವಾಗದು ನಿನ್ನ ವಯೋಮಾನ
ಅಥವಾ ನೀ ತೊಟ್ಟ ಬಟ್ಟೆಗಳ ಅಳತೆ
ನೀನಲ್ಲ ನಿನ್ನ ತಲೆಗೂದಲಿನ ಬಣ್ಣ
ಅಥವಾ ತೂಕದ ಯಂತ್ರ ತೋರುವ ಸಂಖ್ಯೆ.
"ನೀನು" ಎನ್ನಲಾಗದು ನಿನ್ನ ಹೆಸರನ್ನು
ನೀನಲ್ಲ ನಿನ್ನ ಕೆನ್ನೆಯಲ್ಲಿ ಬೀಳುವ ಗುಳಿ
ನೀನೆಂದರೆ ನೀನು ಓದುವ ಪುಸ್ತಕ ಮತ್ತು
ನಿತ್ಯವೂ ನೀನು ಬಳಸುವ ಪದಾವಳಿ.
ಬೆಳಗಿನ ನಿನ್ನ ಗೊಗ್ಗರು ಧ್ವನಿ ನಿನ್ನ ಗುರುತು
ನಿನ್ನ ಪರಿಚಯ ನೀನು ಮರೆಮಾಚುವ ನಗೆಮುಗುಳು
ನೀನು ನಿನ್ನ ನಗೆಯಲ್ಲಿರುವ ಮಧುರ ಧಾತು
ನೀನೇ ನೀನು ಸುರಿಸಿದ ಕಣ್ಣೀರ ಹನಿಗಳು
ಒಬ್ಬನೇ ಇದ್ದಾಗ ಹಾಡಿಕೊಳ್ಳುವೆಯಲ್ಲ,
ಗಟ್ಟಿ ದನಿಯಲ್ಲಿ, ಆ ಹಾಡು ನೀನು.
ನೀನಲೆದಾಡಿದ ಗುಡ್ಡಗಾಡುಗಳು ನೀನು
ಮನೆಯೆಂಬ ಹೆಸರಿಟ್ಟ ಗೂಡು ನೀನು.
ನಿನ್ನ ನಂಬಿಕೆಗಳು ನೀನು
ನಿನ್ನ ಆತ್ಮೀಯರು ನೀನು
ನಿನ್ನ ಕೋಣೆಯ ತೂಗುಚಿತ್ರಗಳು ನೀನು
ನಿನ್ನಾಸೆ, ಕನಸು, ಆಕಾಂಕ್ಷೆ ನೀನು.
ನಿನ್ನನ್ನು ನೀನಾಗಿಸಿದೆ ಎಷ್ಟೊಂದು ಚೆಲುವು
ಎಂಬುದನ್ನು ನೀನು ಹೋದಂತಿದೆ ಮರೆತು.
ನೀನಲ್ಲದ ವಸ್ತುಗಳಲ್ಲಿ ಯಾವಾಗ ನೀನು
ಹುಡುಕಿಕೊಳ್ಳತೊಡಗಿದೆಯೋ ನಿನ್ನ ಗುರುತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ