ಇಲ್ಲಿ ಯಾರೂ ಮುಖ್ಯರಲ್ಲ
ಸಿ ಪಿ ರವಿಕುಮಾರ್
ಇಲ್ಲಿ
ಯಾರೂ ಮುಖ್ಯರಲ್ಲ!
ಯಾರೂ ಅಮುಖ್ಯರಲ್ಲ!
ಯಾವುದೂ ಯ:ಕಶ್ಚಿತವಲ್ಲ!
ಹೀಗೆ ಕುವೆಂಪು ಬರೆದಿದ್ದನ್ನು "ಇಲ್ಲಿ ಯಾರೂ ಮುಖ್ಯರಿಲ್ಲ, ಯಾರೂ ಅಮುಖ್ಯರಿಲ್ಲ, ಯಾವುದೂ ಯಃಕಶ್ಚಿತವಲ್ಲ" ಎಂದು ತಿದ್ದಿಕೊಂಡರೆ ಅದು ಟ್ವಿಟ್ಟರಿಗೆ ಅನ್ವಯವಾಗುತ್ತದೆ. ನೋಡಿ, ಇಲಾನ್ ಮಸ್ಕ್ ಸುಮಾರು ನಲವತ್ತನಾಲ್ಕು ಬಿಲಿಯನ್ ಡಾಲರ್ ಕೊಟ್ಟು ಟ್ವಿಟ್ಟರನ್ನು ಕೊಂಡುಕೊಂಡರೂ ಅವರನ್ನು ಸೀಈಓ ಪದವಿಯಿಂದ ಕೆಳಗೆ ಇಳಿಸಿಯೇ ಬಿಟ್ಟರು. ಈಗ ಮುಂದಿನ ಸೀಈಓ ಯಾರು ಎಂಬುದಕ್ಕೆ ಎಲ್ಲರೂ ನಾಮುಂದು ತಾಮುಂದು ಎಂದು ನುಗ್ಗುತ್ತಿದ್ದಾರೆ. "ಇಲ್ಲಿ ಯಾರೂ ಅಮುಖ್ಯರಲ್ಲ" ಎಂದು ತಿಳಿದ ತಕ್ಷಣವೇ ನಾನೂ ಅರ್ಜಿ ಹಾಕಿದ್ದೇನೆ. ಇದನ್ನು ನಾನು ಎಷ್ಟೇ ಗುಟ್ಟಾಗಿ ಇಟ್ಟರೂ ಅವರಿಗೆ ಹೇಗೋ ಗೊತ್ತಾಗಿ ನನ್ನ ಫ್ರೆಂಡ್ಸ್ ವೆಂಕ, ಸೀನ ಮತ್ತು ನಾಣ ಕೂಡಾ ಅರ್ಜಿ ಕಳಿಸಿದ್ದಾರೆ. ಅರ್ಜಿ ಹಾಕುವುದು ಕೂಡಾ ಈಗ ಕಷ್ಟವಲ್ಲ. ಟ್ವೀಟ್ ಮಾಡಿ ಅಲ್ಲಿ ಅಟ್ ಇಲಾನ್ ಮಸ್ಕ್ ಅಂತ ಹಾಕಿಬಿಟ್ಟರೆ ಸಾಕು. ಇಲಾನ್ ಮಸ್ಕ್ ತಮಗೆ ಬಂದ ನಲವತ್ತನಾಲ್ಕು ಬಿಲಿಯನ್ ಅರ್ಜಿಗಳನ್ನು "ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದು ನೋಡುತ್ತಾ ದಿನವಿಡೀ ಕೂತಿರುತ್ತಾರೆ. ಹೀಗಾಗಿ ಅವರು ತಮ್ಮ ಮಗು X Æ A-Xii ನೋಡಿಕೊಳ್ಳಲು ಏನೇನೂ ಸಹಾಯ ಮಾಡುತ್ತಿಲ್ಲ ಎಂದು ಅವರ ಹೆಂಡತಿ ಟ್ವೀಟ್ ಮಾಡಿದ್ದಾರೆ.
ಇಲ್ಲಿ
ಯಾವುದಕ್ಕೂ ಮೊದಲಿಲ್ಲ!
ಯಾವುದಕ್ಕೂ ತುದಿಯಿಲ್ಲ!
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ!
ಕೊನೆ ಮುಟ್ಟುವುದು ಇಲ್ಲ!
ಇದನ್ನು ಕೂಡಾ ದಾರ್ಶನಿಕ ಕವಿ ಕುವೆಂಪು ಮುಂದೆ ಬರುವ ಸಾಮಾಜಿಕ ತಾಣಗಳನ್ನು ತಮ್ಮ ದೂರ ದೃಷ್ಟಿಯಿಂದ ನೋಡುತ್ತಾ ಬರೆದಿರಬಹುದು. ವಾಟ್ಸಾಪ್ ಫೇಸ್ಬುಕ್ ಟ್ವಿಟ್ಟರ್ ಇನ್ಸ್ಟಾಗ್ರಾಂ ಯಾವುದನ್ನೇ ಆದರೂ ತೊಗೊಳ್ಳಿ. ಹರಿದು ಬರುವ ನಗೆಹನಿ, ಚರ್ಚೆ, ಮಾಹಿತಿ, ಅಪಮಾಹಿತಿ, ರೆಸಿಪಿ, ಆರೋಗ್ಯಕ್ಕಾಗಿ ಟಿಪ್ಸ್, ... ಈ ಯಾವುದಕ್ಕೂ ಒಂದು ತುದಿಮೊದಲಿಲ್ಲ. ಎಲ್ಲರೂ ತಮಗೆ ಕಂಡ ಬರವಣಿಗೆಯನ್ನು ತಮ್ಮದೇ ಎಂಬಂತೆ ನಿಸ್ಸಂಕೋಚದಿಂದ ಶೇರ್ ಮಾಡುವ ಕಾರಣ ಮೂಲ ಮೂಲ ಜೋಕ್ ಯಾರದ್ದೆಂದು ಯಾರಿಗೂ ತಿಳಿಯುವುದಿಲ್ಲ. ನದೀ ಮೂಲ ಮತ್ತು ಸಾಧುವಿನ ಮೂಲ ಹುಡುಕಬಾರದು ಎಂದು ಯಾರೋ ಒಬ್ಬ ಸಾಧುಗಳು ಹೇಳಿದ್ದಾರೆ, ನೋಡಿ. ಹಾಗೇ ವಾಟ್ಸಾಪ್ ಜೋಕುಗಳ ಮೂಲವನ್ನು ಕೂಡಾ ಹುಡುಕಬೇಡಿ. ನನ್ನ ಫ್ರೆಂಡ್ ವೆಂಕ, ಸೀನ ಮತ್ತು ನಾಣ ಇವರೆಲ್ಲರಿಗೂ ನಾನೊಂದು ಸಂದೇಶ ಕಳಿಸಿದೆ. ಬಹಳ ಹೊತ್ತು ಯೋಚಿಸಿ ಟೈಪ್ ಮಾಡಿ ತಿದ್ದಿ ಕಳಿಸಿದ ಸಂದೇಶವನ್ನು ಅವರು ತಮ್ಮದೇ ಎಂಬಂತೆ ತಮ್ಮ ತಮ್ಮ ವೃತ್ತಗಳಲ್ಲಿ ಶೇರ್ ಮಾಡಿದರು. ಹೀಗಾಗಿ ನನ್ನದೇ ಸಂದೇಶ ನನಗೆ ಮೂರು ಸಲ ದೊರಕಿತು. ಅಯ್ಯೋ! ಅಷ್ಟೇ ಆಗಿದ್ದರೆ ನನಗೆ ಕೋಪ ಬರುತ್ತಿರಲಿಲ್ಲ. ನನ್ನ ಸಂದೇಶವು ಅಲ್ಲಿಂದ ಇಲ್ಲಿ ಇಲ್ಲಿಂದ ಮತ್ತೊಂದು ಕಡೆ ಹರಿದಾಡಿ ನನಗೆ ಪ್ರತಿ ತಿಂಗಳೂ ಒಮ್ಮೆ ಹೆಲೋ ಹೇಳತೊಡಗಿದಾಗ ನನ್ನ ಸೈರಣೆ ತಪ್ಪಿತು. ಆಗ ಯಾರೋ ಕುವೆಂಪು ಅವರ "ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ" ಎಂಬ ಸಂದೇಶ ಕಳಿಸಿದ್ದು ನೋಡಿ ನನಗೆ ನಾನೇ ಸಮಾಧಾನ ಹೇಳಿಕೊಂಡೆ.
ಅಂದಹಾಗೆ ನಾನು ವಿದ್ಯಾರ್ಥಿಯಾಗಿದ್ದಾಗ ಕವಿಗಳ ಇದೇ ವಾಕ್ಯವನ್ನು ನಾನು ಅಂದಿನ ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್ ಬಸ್ಸುಗಳಿಗೆ ಅನ್ವಯಿಸಿಕೊಂಡಿದ್ದೆ. ಈ ಬಸ್ಸುಗಳು ಯಾವುದೂ ಎಲ್ಲೂ ನಿಲ್ಲುತ್ತಿರಲಿಲ್ಲ. ಸ್ಟಾಪಿನಲ್ಲಿ ನಿಂತಂತೆ ಕಾಣುತ್ತಿತ್ತು. ಆದರೆ ವೆಲಾಸಿಟಿ ಎಂದೂ ಜೀರೋ ಆಗುತ್ತಿರಲಿಲ್ಲ! ಈ ಸ್ಥಿತಿಯಲ್ಲೇ ಜನರು ಬಸ್ಸಿನಿಂದ ಇಳಿಯುತ್ತಿದ್ದರು! ಈ ಸ್ಥಿತಿಯಲ್ಲೇ ಜನರು ಬಸ್ಸಿನೊಳಗೆ ಹತ್ತುತ್ತಿದ್ದರು! ಇನ್ನು "ಕೊನೆ ಮುಟ್ಟುವುದು ಇಲ್ಲ" ಎಂಬ ವಾಣಿಯ ಪರಮಾರ್ಥವನ್ನು ನೋಡಿ. ಅಂದು ಬಸ್ಸುಗಳಿಗೆ ಇಂಥದೊಂದು ಗುರಿ ಎಂದು ಇರುತ್ತಿರಲಿಲ್ಲ. ಒಮ್ಮೆಲೇ ಕಂಡಕ್ಟರ್ ಬೋರ್ಡ್ ಬದಲಾಯಿಸಿ "ಡಿಪೋ" ಎಂದು ಬರೆದಿದ್ದ ಬೋರ್ಡನ್ನು ಹಾಕಿ ಬಸ್ ಡಿಪೋ ಕಡೆಗೆ ಗಾಡಿ ಓಡಿಸಿಬಿಡುವರು! ಇಂದಿನ ಸನ್ನಿವೇಶದಲ್ಲಿ "ಕೊನೆ ಮುಟ್ಟುವುದು ಇಲ್ಲ" ಎನ್ನುವುದು ಒಂದು ವಾದವಿವಾದಗಳಿಗೆ ಹೇಗೆ ಒಪ್ಪುತ್ತದೆ ನೋಡಿ. ಟಿವಿ ಚರ್ಚೆಗಳಲ್ಲಿ ಅದೇ ವಿಷಯವನ್ನು ಮತ್ತೆ ಮತ್ತೆ ಚರ್ಚಿಸುತ್ತಲೇ ಇರುತ್ತಾರೆ. ಸಮಯಾಭಾವದಿಂದ ಕೊನೆಗೆ ಚರ್ಚೆ ಮುಗಿದು ಜಾಹೀರಾತುಗಳು ಪ್ರಾರಂಭವಾಗುತ್ತವೆ. ಸಾಮಾಜಿಕ ತಾಣಗಳ ಚರ್ಚೆಗೆ ಈ ಭಾಗ್ಯವೂ ಇಲ್ಲ. ಇಲ್ಲಿ ಎಲ್ಲವೂ ನಿರಂತರ! ಎಲ್ಲಿ ಎಲ್ಲರೂ ಒಂದೊಂತರ! ಭಾರತದಲ್ಲಿ ರಾತ್ರಿಯ ಹತ್ತು ಹೊಡೆಯಿತೇ? ಚಿಂತೆಯಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಜನ ಕಣ್ಣು ತೆರೆದಿದ್ದಾರೆ. ಚರ್ಚೆ ಮುಂದುವರೆಯಬಹುದು.
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ನಿಜ, ನಿಜ! ಸಾವಧಾನವಾಗಿ ವಾಟ್ಸಾಪ್ ಫೇಸ್ಬುಕ್ ಇನ್ಸ್ಟಾಗ್ರಾಂ ನೋಡುತ್ತಾ ಇರುವಾಗ ಬಾಸ್ ಏನಾದರೂ ಅತ್ತ ಬರುವ ಸುಳಿವು ಸಿಕ್ಕಿತೆನ್ನಿ. ಅವಸರವು ಸಾವಧಾನದ ಬೆನ್ನೇರದೇ ಇದ್ದರೆ ಕೇಳಿ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ-
ಊ ತೀರ್ಥ!
ಈ ವಿಶ್ವದಲ್ಲಿ ಎಲ್ಲಕ್ಕೂ ಇದೆ "ಅರ್ಥ." ಪ್ಯಾರಿಸ್ ನಗರದ ಏರ್ ಪೋರ್ಟಲ್ಲಿ ಬಲೂನುಗಳನ್ನು "ಪ್ಯಾರಿಸ್ ಗಾಳಿ" ಎಂದು ದೊಡ್ಡ ಬೆಲೆಗೆ ಮಾರುತ್ತಾರೆ. ಸೆಲ್ ಫೋನ್ ಎಂದು ಸುಮ್ಮನೇ ಕರೆಯುವರೇ? ಸೆಲ್ ಮಾಡಲೇ ಇರುವುದು ಸೆಲ್ ಫೋನು! ಕಾರ್ ವಿಮೆ, ಜೀವನ ವಿಮೆ, ಕಾರ್ ಲೋನ್, ಹೌಸಿಂಗ್ ಲೋನ್, ಹೀಗೆ ಇಡೀ ದಿನ ಏನಾದರೂ "ಅರ್ಥ"ಪೂರ್ಣ ವಿಷಯಗಳು ಸೆಲ್ ಫೋನಿನಲ್ಲಿ ಹರಿದು ಬರುತ್ತಲೇ ಇರುತ್ತದೆ. ಆಲೆಕ್ಸ್ ಟ್ಯೂ ಎಂಬ ಹುಡುಗನ ಕಥೆ ಕೇಳಿದ್ದೀರಾ? ಅವನಿಗೆ ಕಾಲೇಜ್ ವಿದ್ಯಾಭ್ಯಾಸಕ್ಕೆ ಹಣ ಬೇಕಾಗಿತ್ತು. ಅವನು ತನ್ನ ವೆಬ್ ತಾಣದ ಪಿಕ್ಸೆಲ್ಲುಗಳನ್ನೇ ಮಾರಾಟಕ್ಕಿಟ್ಟ. ಹತ್ತು ಕ್ರಾಸ್ ಹತ್ತರ ಪಿಕ್ಸೆಲ್ ಸಮೂಹಕ್ಕೆ ನೂರು ಡಾಲರ್. ಜನರು ಕ್ಯಾ ಜಾತಾ ಹೈ ಅಂತ ಕೊಂಡು ಕೊಂಡರು ಕೂಡಾ. ಯಾವುದೂ ಅಲ್ಲ ವ್ಯರ್ಥ!
ನೀರೆಲ್ಲವೂ ತೀರ್ಥ ಎಂದು ಕುವೆಂಪು ಯಾಕೆ ಹೇಳಿದರೋ! ಅವರು ತೀರ್ಥಹಳ್ಳಿಯ ಹತ್ತಿರದವರು. ಅಲ್ಲಿಯ ನದಿಯ ನೀರು ಅವರಿಗೆ ತೀರ್ಥದಂತೆ ಕಂಡಿರಬಹುದು. ಈಗ ನೀರಿಗೂ ಬೆಲೆ ಬಂದು ಜನರು ನೀರನ್ನೂ ಕೊಳ್ಳುವ ಪರಿಸ್ಥಿತಿ ಇರುವಾಗ ನೀರನ್ನು ತೀರ್ಥದ ಪ್ರಮಾಣದಲ್ಲಿ ಕುಡಿಯುವುದನ್ನು ಜನ ರೂಢಿ ಮಾಡಿಕೊಂಡ ಕಾರಣ ನೀರೆಲ್ಲವೂ ತೀರ್ಥವೇ ಬಿಡಿ! ಒಬ್ಬ ಪತ್ರಿಕಾ ಸಂಪಾದಕರು ತೀರ್ಥ ಎನ್ನುವ ಪದಕ್ಕೆ ಬೇರೇನೋ ಅರ್ಥ ಕಲ್ಪಿಸಿದರು. ಈ ತೀರ್ಥ ಬೀರ್ಥಗಳು ನೋಡಿ ಈಗ ನೀರಿಗಿಂತಲೂ ಜನಪ್ರಿಯ. ಬಾರೋ ಕೃಷ್ಣಯ್ಯ ಎಂಬ ದೇವರನಾಮ ಕೇಳಿ ಬೆಳೆದ ನಾನು ಒಮ್ಮೆ ಕೃಷ್ಣಯ್ಯ ಬಾರು ಎಂಬ ಫಲಕ ನೋಡಿ ಬೆಚ್ಚಿ ಬಿದ್ದೆ. ಗಂಗಾ ಬಾರ್, ಯಮುನಾ ಬಾರ್, ತುಂಗಾ ಬಾರ್ ಇವೆಲ್ಲಾ ಬಂದಾದ ಮೇಲೆ ನೀರೆಲ್ಲ ooo ತೀರ್ಥವೇ ಸರಿ!
ಕವಿಯ ದಾರ್ಶನಿಕತೆಗೆ ಮಾರು ಹೋದ ನಾನು ಅವರಿಗೆ ನಮನ ಸಲ್ಲಿಸುತ್ತಾ ಈ ಉಪನ್ಯಾಸವನ್ನು ಇಲ್ಲಿಗೇ ಕೊನೆಗೊಳಿಸುತ್ತೇನೆ.
#ಹರಟೆ
#ನಗುಬಂತಾ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ