ಮಂಜಪ್ಪನ ಕೋಳಿ

(ರಾಜಕುಮಾರ್ ಸ್ಥಬತಿ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ಕೊಟ್ಟಿರುವ ಚಿತ್ರ ಬರೆದಿದ್ದು ಏಐ)



ಮೂಳೆ ಕೊರೆಯುವ ಚಳಿಗಾಲದ ರಾತ್ರಿ 

ಮಂಜಪ್ಪ ತೊಟ್ಟು ತನ್ನ ಹಸಿರು ಟೋಪಿ

ನಿದ್ದೆ ಬಾರದೆ ಎದ್ದು ಕೊಟ್ಟಿಗೆಗೆ ಬಂದು

ನೋಡುವನು ಕೋಳಿ ಮಲಗಿದೆಯೇ ಎಂದು


ಪ್ರೀತಿಯಿಂದ ಸಾಕಿದ್ದಾನೆ ಹಾಕಿ ಕಾಳು ನೀರು

ಇನ್ನೇನು ತಿಂಗಳು ಕಳೆದರೆ ಮಾರಮ್ಮನ ತೇರು

ಮೊಟ್ಟೆ ಇಟ್ಟು ಮರಿ ಮಾಡುವ ತನ್ನ ಧನಮೂಲ

ಸಮೀಪಿಸುತ್ತಿದೆ ಮಾರಮ್ಮನಿಗೆ ಒಪ್ಪಿಸುವ ಕಾಲ


ಇಲ್ಲ ಎನ್ನಲಾಗದು ಊರಲ್ಲಿ ಎಲ್ಲರಿಗೂ ಸರತಿ

ಬಂದಾಗ ಕೋಳಿ ಒಪ್ಪಿಸುವುದೇ ರೀತಿ

ಕೈಗೆತ್ತಿಕೊಂಡಾಗ ಕೋಳಿಯನ್ನು ಕಂದನ ಹಾಗೆ

ಮಂಜಪ್ಪನ ಕಣ್ಣು ಮಂಜಾದದ್ದು ಯಾಕೆ


ಹೀಗೇ ಎತ್ತಿಕೊಳ್ಳುತ್ತಿದ್ದ ಮಗಳ ನೆನಪಾಗಿ

ಮತ್ತಷ್ಟು ಕ್ರೂರ ಎನಿಸುತ್ತದೆ ಮಾಗಿ

ಮಾತು ಬಾರದ ಮೌನಿ, ಮನೆಗೆಲಸದಲ್ಲಿ ಜಾಣಿ

ಹೆಗಲಿನ ಮೇಲೆ ಹೊತ್ತು ಬೆಳೆಸಿದ ರಾಣಿ


ಜಾತ್ರೆಯಲ್ಲೇ ನಡೆದಿದ್ದಲ್ಲವೇ ಅವಳ ಮದುವೆ

ಹರಕೆ ಹೊತ್ತಿದ್ದ ಮಾರಮ್ಮನಿಗೆ ಕೋಳಿ ಕೊಡುವೆ

ಅವನ ಕಣ್ಣಂಚಲ್ಲಿ ನೆನಪು ತರಿಸುತ್ತದೆ ತೇವ

ತಬ್ಬಿಕೊಳ್ಳುವನು ತನ್ನದೆಂಬ ಏಕೈಕ ಜೀವ


ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)