ಗ್ಯಾಸ್ ಲೈಟಿಂಗ್

ಸಿ ಪಿ ರವಿಕುಮಾರ್



"ಒಲೆಯ ಮೇಲೆ ಕುಕ್ಕರು ಬಡಿ" ಎಂದು ನಿಮಗೆ ಯಾರಾದರೂ ಹೇಳಿದರೆ ಅದರ ಅರ್ಥ ಒಲೆಯ ಮೇಲೆ ಕೂತುಬಿಡಿ ಅಂತ ಖಂಡಿತಾ ಅಲ್ಲ.  ಕುಕ್ಕರುಗಾಲಲ್ಲಿ ಕೂಡು ಎಂದರೆ ಕುಕ್ಕುಟ ಅಥವಾ ಕೋಳಿಯ ಹಾಗೆ ಕೂಡುವುದು ಎಂದು ಕೂಡಾ ಈಗ ಮಕ್ಕಳಿಗೆ ಗೊತ್ತಿಲ್ಲ. ಏಕೆಂದರೆ ಈಗ ಮೇಷ್ಟ್ರು ಮಕ್ಕಳಿಗೆ ಇಂಥ ಶಿಕ್ಷೆಗಳನ್ನು ಕೊಡುವಂತಿಲ್ಲ.   "ಶಿಕ್ಷಕ" ಎನ್ನುವುದು ಇಂದು ಕೇವಲ ಆಲಂಕಾರಿಕ ಪದವಾಗಿ ಉಳಿದಿದೆ. ನಾನು ಓದುತ್ತಿದ್ದಾಗ ಅನೇಕ ಬಗೆಯ ಶಿಕ್ಷೆಗಳನ್ನು ಶಿಕ್ಷಕರು ಮುಂಚೆಯೇ ಯೋಚಿಸಿಕೊಂಡು ಕ್ಲಾಸಿಗೆ ಬರುತ್ತಿದ್ದರು.  ಬೆಂಚಿನ ಮೇಲೆ ನಿಲ್ಲಿಸುವುದು ಅತ್ಯಂತ ಸರಳ ಶಿಕ್ಷೆ.  ಇದು ಎಷ್ಟು ಪ್ರಸಿದ್ಧವಾಯಿತು ಎಂದರೆ ಮುಂದೆ ಐಟಿ ಇಂಜಿನಿಯರ್ ಆದಮೆಲೂ ಇದನ್ನು ಮರೆಯದಷ್ಟು. ಕೆಲಸಕ್ಕೆ ಸೇರಿದ ಇಂಜಿನಿಯರಿಗೆ ಯಾವ ಪ್ರಾಜೆಕ್ಟ್ ಕೊಡಬೇಕು ಎಂಬ ನಿರ್ಧಾರ ಆಗುವವರೆಗೆ ಅವನು (ಅವಳು) ಬೆಂಚಿನ ಮೇಲೆ ನಿಂತಿರಬೇಕು.  ಹಾಗಂತ ಐಟಿ ಕಂಪನಿಗಳಲ್ಲಿ ಬೆಂಚುಗಳು ಇರುತ್ತವೆ ಎಂದು ಖಂಡಿತಾ ಕಲ್ಪಿಸಿಕೊಳ್ಳಬೇಡಿ. ಬೆಂಚ್ ಇಲ್ಲದ ಕೆಲವು ಕಂಪನಿಗಳಲ್ಲಿ ನೆಲದ ಮೇಲೆ ನಿಲ್ಲಿಸುತ್ತಾರೆ.  ಪಾರ್ಕಿನಲ್ಲಿ ಬೆಂಚ್ ಕಂಡಾಗ ಕೆಲವರಿಗೆ ನಿದ್ದೆ ಬಂದು ಮಲಗಿ ಬಿಡುತ್ತಾರೆ. ಆದರೆ ಐಟಿ ಬೆಂಚ್ ಹಾಗೆ ಮಲಗುವ ಸ್ಥಳವಲ್ಲ. ಎಚ್ಚರವಾಗಿ ಕಾಯುತ್ತಾ ನಿಂತಿರಬೇಕು. ನಿಂತಲ್ಲೇ ಏನಾದರೂ ವ್ಯಾಯಾಮ ಮಾಡುತ್ತಿದ್ದರೆ ಇನ್ನೂ ಒಳ್ಳೆಯದು.  


ಶಿಕ್ಷಕರು ಕೊಡುತ್ತಿದ್ದ ಇನ್ನಿತರ ಶಿಕ್ಷೆಗಳು ಎಂದರೆ ಕ್ಲಾಸಿನ ಹೊರಗೆ ನಿಲ್ಲಿಸುವುದು, ತಪ್ಪಾಗಿ ಬರೆದ ವಾಕ್ಯವನ್ನು ಇಪ್ಪತ್ತು ಸಲ ಬರೆಸುವುದು, ಮೈದಾನದಲ್ಲಿ ಐದು ಸುತ್ತು ಓಡಿಸುವುದು, ಕಿವಿ ಹಿಂಡುವುದು, ರೂಲರಿನಿಂದ ಅಂಗೈ ಗೆಣ್ಣಿನ ಮೇಲೆ ಹೊಡೆಯುವುದು, ಕತ್ತಲೆ ಕೋಣೆಯಲ್ಲಿ ಕೂಡಿಹಾಕುವುದು, ಇತ್ಯಾದಿ. ರೋಆಲ್ಡ್ ಡಾಲ್ ಎಂಬ ಲೇಖಕ ಬರೆದ ಮಕ್ಕಳ ಕಾದಂಬರಿ "ಮಟಿಲ್ಡ" ದಲ್ಲಿ ಸ್ಕೂಲಿನ ಹೆಡ್ ಮಿಸ್ಟ್ರೆಸ್ ಮಹಾ ಕ್ರೂರಿ.  ಆಕೆಯ ಹೆಸರು ಮಿಸ್ ಅಗಾಥಾ ಟ್ರೆಂಚ್ ಬುಲ್. ಹೆಸರೇ ಮೈ ನಡುಗಿಸುವಂಥದ್ದು. ಮಿಸ್ ಟ್ರೆಂಚ್ ಬುಲ್  ಮಕ್ಕಳನ್ನು ಕ್ರಿಮಿಗಳು ಎಂದೇ ಕರೆಯುವಳು. ಕ್ರಿಮಿಗಳಿಗೆ ಪ್ರವೇಶವಿಲ್ಲ ಎಂದು ಅವಳ ಕೋಣೆಯ ಮುಂದೆ ಬೋರ್ಡ್ ತೂಗುಹಾಕಿದೆ.  ಮಕ್ಕಳಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವುದರಲ್ಲಿ ಅವಳು ನಿಷ್ಣಾತಳು.  ಮಕ್ಕಳನ್ನು ಕೂಡಿಹಾಕಲು ಅವಳು "ಚೋಕಿ" ಎಂಬ ವಿಶೇಷ ಸಾಧನವನ್ನೇ ನಿರ್ಮಿಸಿದ್ದಾಳೆ.  ಚೋಕ್ ಎಂದರೆ (ಕುತ್ತಿಗೆಯನ್ನು) ಅದುಮುವುದು.  ಚೋಕಿ ಎಂದರೆ ಒಬ್ಬರು ತೆವಳಲು ಮಾತ್ರ ಸಾಧ್ಯವಿರುವ ಕತ್ತಲ ಕೋಣೆ. ಅಲ್ಲಿ ಅತ್ತಿತ್ತ ಕದಲಿದರೆ ಚೂಪಾದ ಮರದ ತುಂಡುಗಳು ಚುಚ್ಚುತ್ತವೆ. ಕೂಡಲಾಗದು. ನೆಲದ ಮೇಲೂ ಮೊಳೆಗಳನ್ನು ಹೊಡೆದಿದ್ದಾರೆ. ಅಬ್ಬಾ, ಇಂಥ ಚೇಂಬರಿನಲ್ಲಿ ಒಂದು ಇಡೀ ದಿವಸ ಇದ್ದ ಮಗು ಚೇಷ್ಟೆ ಹಾಗಿರಲಿ, ಮುಂದೆಂದೂ ಬಾಯೇ ಬಿಡದು. ಇಷ್ಟೆಲ್ಲ ಭಯ ಇದ್ದರೂ ಬ್ರೂಸ್ ಎಂಬ ಹುಡುಗ ಈಕೆಗೆಂದು ತಯಾರಿಸಿದ ಚಾಕೊಲೇಟ್ ಕೇಕಿನಿಂದ ಒಂದು ಚೂರನ್ನು ಕದ್ದು ತಿನ್ನುತ್ತಾನೆ. ಅದಕ್ಕೆ ಅವನಿಗೆ ಕೊಡುವ ಶಿಕ್ಷೆ ಎಂದರೆ ಇಡೀ ಕೇಕ್ ಅವನೊಬ್ಬನೇ ತಿನ್ನಬೇಕು ಎನ್ನುವುದು. ಆಗತಾನೇ ಊಟ ಮುಗಿಸಿದ ಬ್ರೂಸ್ ಮೂರು ಪದರಗಳ ಕೇಕ್ ಒಬ್ಬನೇ ತಿನ್ನಬೇಕು! ಪಾಪ, ಚೋಕಿಯ ಹೆದರಿಕೆ ಅವನನ್ನು ತಿನ್ನಲು ಪ್ರೇರೇಪಿಸುತ್ತದೆ. ಸಾಲದು ಎಂಬಂತೆ ಸುತ್ತಲೂ ನೆರೆದ ಮಕ್ಕಳು ಅವನನ್ನು ಹುರಿದುಂಬಿಸುತ್ತಿದ್ದಾರೆ! ಭೀಮನು ಬಕಾಸುರನ ಮೃಷ್ಟಾನ್ನ ಭೋಜನವನ್ನು ಸ್ವಲ್ಪವೂ ಬಿಡದೆ ಮೆದ್ದಂತೆ ಬ್ರೂಸ್ ಇಡೀ ಕೇಕ್ ತಿಂದು ಮುಗಿಸಿಯೇ ಬಿಟ್ಟ. ತನ್ನ ಸೋಲನ್ನು ಒಪ್ಪದ ಮಿಸ್ ಟ್ರೆಂಚ್ ಬುಲ್ ಅವನನ್ನು ಚೋಕಿಗೆ ತಳ್ಳಿ ಅಟ್ಟಹಾಸ ಮೆರೆಯುತ್ತಾಳೆ.  ಅತ್ಯುಚ್ಚ ಶಿಕ್ಷಕಿ ಎಂಬ ಅವಾರ್ಡ್ ಏನಾದರೂ ಇದ್ದರೆ ಅದಕ್ಕೆ ಇವಳ ಹೆಸರು ಇಡುವುದು ಮೇಲು!


 "ಕುಕ್ಕರ್ ಇಡಿ" ಅನ್ನೋದು ಸಹಜವಾದ ಕೋರಿಕೆಯಾದರೂ ಕೆಲವೊಮ್ಮೆ ಜನರ ಕೋಪದ ತಾಪ ಹೆಚ್ಚಾಗಿ ಇಡಿ ಅನ್ನೋ ಬದಲು ಬಡಿ ಎಂದು ಕೂಗುತ್ತಾರೆ.  ಅದನ್ನು ನೀವು "Olay! ಕುಕ್ಕರ್ ಇಡು, buddy" ಎಂಬ ನಯವಾದ ವಿನಂತಿ ಎಂಬಂತೆ ಸ್ವೀಕರಿಸಿದರೆ ಎಲ್ಲರಿಗೂ ಕ್ಷೇಮ.  

ಕುಕ್ಕರ್ ಇಟ್ಟರೆ ಸಾಕೆ? ಗ್ಯಾಸ್ ಹಚ್ಚಬೇಡವೇ? 

"ಗ್ಯಾಸ್ ಹಚ್ಚುವುದು" ಅಥವಾ ಗ್ಯಾಸ್ ಲೈಟಿಂಗ್ ಎಂಬುದು ಈಗ ಬೇರೊಂದು ವಿಶಿಷ್ಟ ಅರ್ಥ ಪಡೆದುಕೊಂಡಿದೆ!  ಕನ್ನಡದಲ್ಲಿ "ಹಚ್ಚಿಕೊಡು" ಎಂಬ ಪ್ರಯೋಗವನ್ನು ಕೇಳಿರಬಹುದು.  ಗ್ಯಾಸ್ ಲೈಟಿಂಗ್ ಏನೆಂದು ವಿವರಿಸಲು ಒಂದು ಉದಾಹರಣೆ ನೋಡೋಣ.  ಅದೇ ಆಗ ಡ್ರೈವಿಂಗ್ ಕಲಿತವನು ಕಾರ್ ಓಡಿಸುತ್ತಿದ್ದಾನೆ. ಅವನ ಮಿತ್ರರು ಅವನನ್ನು ಗೇಲಿ ಮಾಡುತ್ತಾ ಕೂತಿದ್ದಾರೆ. ಒಮ್ಮೆಲೇ ಈ ಮಿತ್ರರು ಸೀಟ್ ಬಿಟ್ಟು ಮೇಲೆದ್ದು ಧಬಕ್ಕನೆ ಕೂಡುತ್ತಾರೆ. ಅಯ್ಯೋ ತಾನು ಸ್ಪೀಡ್ ಬ್ರೇಕರ್ ನೋಡಲೇ ಇಲ್ಲವೇನೋ ಎಂದು ಕಾರ್ ಚಾಲಕನಿಗೆ ಅನುಮಾನ ಬರುತ್ತದೆ. ಇಂಥದ್ದೇ ಕಿತಾಪತಿ ಮತ್ತೆರಡು ಸಲ ನಡೆದರೆ ತನಗೆ ಸರಿಯಾಗಿ ಡ್ರೈವ್ ಮಾಡಲು ಬರುತ್ತದೋ ಇಲ್ಲವೋ ಎಂಬ ಗುಮಾನಿ ಕಾರ್ ಚಾಲಕನಿಗೆ ಖಂಡಿತಾ ಬರುತ್ತದೆ! ಈ ಉದಾಹರಣೆಯಲ್ಲಿ ಚಾಲಕನ ಮಿತ್ರರು ಬಳಸಿದ ತಂತ್ರವೇ ಗ್ಯಾಸ್ ಲೈಟಿಂಗ್. 


"ನಿನ್ನ ಅಡುಗೆಯಲ್ಲಿ ಉಪ್ಪು ಜಾಸ್ತಿ" ಇತ್ಯಾದಿ ಟೀಕೆಗಳನ್ನು ಗಂಡನು ಮಾಡಿದರೆ ಹೆಂಡತಿಗೆ ತನ್ನ ಅಡುಗೆ ಕಲೆಯ ಸಂಶಯ ಬರಬಹುದು.  ಈ ತಂತ್ರವನ್ನು ಬಳಸಿ ಎಷ್ಟೋ ಜನ ಗಂಡಂದಿರು ಗ್ಯಾಸ್ ಹಚ್ಚಿ ಕುಕ್ಕರು ಬಡಿದು ಅಡುಗೆ ಮಾಡುವ ಹೊರೆಯನ್ನು ತಮ್ಮ ತಲೆಯ ಮೇಲೆ ತಾವೇ ಎಳೆದುಕೊಂಡಿದ್ದಾರೆ.  ಗ್ಯಾಸ್ ಲೈಟಿಂಗ್ ಈಗ ಸಾಮಾಜಿಕ ತಾಣಗಳಲ್ಲಿ ಬಹಳ ಸಾಮಾನ್ಯ ಪದ. ರಾಜಕೀಯ ಪಕ್ಷಗಳು ಸಾಮಾಜಿಕ ತಾಣಗಳಲ್ಲಿ ಮೀಮ್, ವಿಡಿಯೋ ಇತ್ಯಾದಿಗಳ ಮೂಲಕ ಗ್ಯಾಸ್ ಲೈಟಿಂಗ್ ಮಾಡುವುದು ಸರ್ವೇ ಸಾಧಾರಣವಾಗಿದೆ. 


ಕನ್ನಡದಲ್ಲಿ ಇದಕ್ಕೆ ಗೂಬೆ ಕೂಡಿಸುವುದು ಎನ್ನುತ್ತಾರೆ.  ಹಿಂದೆ ಮದುವೆಮನೆಗಳಲ್ಲಿ ಯಾರಿಗಾದರೂ ಈ ಚೇಷ್ಟೆ ಹೊಳೆಯುತ್ತಿತ್ತು. ಯಾರೋ ಪಾಪದ ವ್ಯಕ್ತಿಯನ್ನು ಆರಿಸಿ ಅವರ ಜುಟ್ಟಿಗೆ ಒಂದು ದಾರವನ್ನು ಕಟ್ಟುವುದು. ದಾರದ ಇನ್ನೊಂದು ತುದಿಗೆ ಹೂವೋ ಎಲೆಯೋ ಏನಾದರೂ ಕಟ್ಟುವುದು. ಪಾಪದ ಪ್ರಾಣಿಗೆ ತಾನು ಓಡಾಡಿದಾಗ ಎಲ್ಲರೂ ತನ್ನನ್ನೇ ನೋಡುವುದು ಅಥವಾ ನಗುವುದು ಕಂಡು ತನ್ನ ಬಗ್ಗೆ ತನಗೇ ಅನುಮಾನ ಬಂದೀತು!  ಗ್ಯಾಸ್ ಲೈಟಿಂಗ್ ಈಗ ಎಷ್ಟು ಸಾಧಾರಣವಾಗಿಹೋಗಿದೆ ಎಂದರೆ ವಿಜ್ಞಾನಿಗಳು ಕೂಡಾ ಈ ಹಳ್ಳಕ್ಕೆ ಬಿದ್ದಿದ್ದಾರೆ.  ಭೂಮಿಯು ಚೆಂಡಿನಂತಿದೆ ಎಂದು ಸ್ಕೂಲಿನಲ್ಲಿ ಹೇಳಿಕೊಟ್ಟರು. ಕೆಲವರು ಭೂಮಿ ತಟ್ಟೆಯ ಹಾಗಿದೆ ಎಂದು ಪ್ರಾರಂಭಿಸಿದ್ದಾರೆ.  ವಿಶ್ವದ ತಾಪಮಾನ ಹೆಚ್ಚುತ್ತಿದೆ ಎಂದು ಕೇಳುತ್ತಾ ಬೆಳೆದೆವು. ಅದು ಗ್ಯಾಸ್ ಲೈಟಿಂಗ್ ಎಂದು ಕೆಲವರು ಗ್ಯಾಸ್ ಹಚ್ಚಿದ್ದಾರೆ. ಎಣ್ಣೆ ತುಪ್ಪ ಕೊಬ್ಬರಿ ತಿಂದರೆ ಕೊಲೆಸ್ಟರಾಲ್ ಹೆಚ್ಚಿ ಸಾಯುವಿರಿ ಎಂದು ಹೆದರಿಸಿದರು. ಈಗ ಕೊಬ್ಬರಿ ತಿನ್ನಿ, ಎಣ್ಣೆ ಕುಡಿಯಿರಿ, ಸಾಲ ಮಾಡಿಯಾದರೂ ತುಪ್ಪ ತಿನ್ನಿ.  ಅಂದು: ಹಸುವಿನ ಸಗಣಿ ಹಾಕಿ ಬೆಳೆ ಬೆಳೆಯುವುದೆಲ್ಲ ಮೂರ್ಖತನ, ರಸಗೊಬ್ಬರ ಹಾಕಿ. ಇಂದು: ಹಸುವಿನ ಸಗಣಿ ಹಾಕಿ ಬೆಳೆದ ಆರ್ಗಾನಿಕ್ ತರಕಾರಿಗೆ ಮೂರು ಪಟ್ಟು ಹಣ ಕಕ್ಕಿ. ಅಂದು:  ಕಾಫಿ ಕುಡಿಯಬೇಡಿ, ಆರೋಗ್ಯಕ್ಕೆ ಹಾನಿಕಾರಕ. ಇಂದು: ಲಂಬೂ ಲೋಟದಲ್ಲಿ ಕಾಫಿ ಹೀರಿ, ಕಾಫಿ ಆರೋಗ್ಯಕ್ಕೆ ಪೂರಕ.  ಹೀಗೆ ಅವರೊಮ್ಮೆ ಇವರೊಮ್ಮೆ ಗ್ಯಾಸ್ ಲೈಟಿಂಗ್ ಮಾಡುತ್ತಾ ನಮ್ಮನ್ನು ಕೂಡಲೂ ಆಗದ ನಿಲ್ಲಲೂ ಆಗದ ಚೋಕಿಗೆ ದೂಡಿಬಿಟ್ಟಿದ್ದಾರೆ.  


ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ

ಗ್ಯಾಸ್ ಹಚ್ಚಿ ಉರಿದಡೆ ನಿಲಲಾಗದು


ಎಂಬ ವಚನವನ್ನು ನೆನೆಯುತ್ತಾ ಈ ಗ್ಯಾಸ್ ಇಲ್ಲಿಗೇ ನಿಲ್ಲಿಸಿ ಕುಕ್ಕರು ಬಡಿಯುತ್ತೇನೆ.


#ನಗುಬಂತಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)