ಚಾಟ್ ಜಿಪಿಟಿ ಕಾರ್ನರ್
"ಅದೇನೋ ಚಾಟ್ ಜಿಪಿಟಿ ಅಂತೆ ಅದು ಇಲ್ಲಿ ಸಿಕ್ಕಲ್ವಾ?" ಅಂತ ಮರಿಗೌಡ ಕೇಳಿದಾಗ ಚಾಟ್ ಮಾಡಿಕೊಡುವ ಚಾಟ್ ಮೇಕರ್ ಅವರ ಕಡೆಗೆ ಕುತೂಹಲದಿಂದ ನೋಡಿ ಇಲ್ಲ ಎಂಬಂತೆ ತಲೆ ಆಡಿಸಿದ. ರಾಜಾರಾಂ ನೆತ್ತಿಗೆ ಖಾರ ಹತ್ತಿದವರಂತೆ ಕೆಮ್ಮಿ ನೀರು ಕುಡಿದು ಸುಧಾರಿಸಿಕೊಂಡರು.
"ರೀ! ಚಾಟ್ ಜಿಪಿಟಿ ಅಂದ್ರೆ ಚಾಟ್ ಅಂತ ಯಾರು ನಿಮಗೆ ಹೇಳಿದ್ದು?!"
"ನಮ್ಮ ಹುಡುಗ ಅದೇನೋ ಚಾಟ್ ಜಿಪಿಟಿ ಅಂತ ಪಿಟಿಪಿಟಿ ಹೇಳ್ತಾ ಇದ್ದ. ಅವನ ಫೆಂಡ್ಸ್ ಎಲ್ಲಾ ಟ್ರೈ ಮಾಡಿದರಂತೆ. ಸಖತ್ ಅಂತ ಅವರಮ್ಮನ ಮುಂದೆ ಏನೋ ತುಂಬಾ ಹೇಳ್ತಾ ಇದ್ದ. ಅವನು ಎಲ್ಲಾ ಹೇಳೋದು ಅಮ್ಮನಿಗೆ. ನಾನು ಜಿಪಿಟಿ ಅಂದ್ರೆ ಎಂಥದ್ದೋ ಚಾಟ್ಏ ಇರಬೇಕು ಅಂತ ಕನ್ಕ್ಲೂಡ್ ಮಾಡಿದೆ. ಅದಕ್ಕೆ ಕಾರಣವೂ ಇದೆ. ನಮ್ಮ ಚಾಟ್ ಕಾರ್ನರ್ನಲ್ಲಿ ಗೋಲ್ ಗಪ್ಪಾ ಚಾಟ್ಗೆ ಚಾಟ್ ಜಿ, ಪಾಪಡಿ ಚಾಟ್ಗೆ ಚಾಟ್ ಪಿ ಅಂತ, ಟೊಮೆಟೊ ಚಾಟ್ಗೆ ಚಾಟ್ ಟಿ ಅಂತ ಬರೆದಿರೋದು ನೀವೂ ನೋಡಿದ್ದೀರಲ್ಲ."
"ಓಹೋ. ಅದೆಲ್ಲ ಸೇರಿಸಿದರೆ ಚಾಟ್ ಜಿಪಿಟಿ ಅಂತ ನಿಮ್ಮ ಕಲ್ಪನೇನೋ!"
"ಹೆಹೆ..."
"ಸಾರಿ, ನಿಮ್ಮ ಉತ್ತರ ತಪ್ಪಾಗಿದೆ. ನಿಮಗೆ ಮೈನಸ್ ಎರಡು ಅಂಕಗಳು."
"ಏನು ಮತ್ತೆ ಚಾಟ್ ಜಿಪಿಟಿ ಅಂದ್ರೆ!?"
"ಅಯ್ಯೋ ಅದೊಂದು ಚಾಟಿಂಗ್ ಆಪ್ ಕಣ್ರೀ. ಎಐ ಬೇಸ್ಡ್ ಉ." ರಾಜಾರಾಂ ಚಾಟಿ ಹೊಡೆದ ಹಾಗೆ ಹೇಳಿ ಚಮಚದಿಂದ ಚಾಟ್ ತಿನ್ನುತ್ತಾ ಚಾ ಕುಡಿದರು.
"ಏಐ ಅಂದ್ರೆ ಏನು ಏರ್ ಇಂಡಿಯಾನಾ?"
"ಛೇ ಅಲ್ರೀ. ಏರ್ ಇಂಡಿಯಾ ಯಾಕೆ ನೆನಪಿಗೆ ಬಂತು?"
"ಅಯ್ಯೋ ಅವರು ಈಗ ನ್ಯೂಸಲ್ಲಿದ್ದಾರೆ ಕಣ್ರೀ. ಯಾರೋ ಮಿಶ್ರಾ ಅಂತೆ. ವಿಶ್ರಾಮ ಕೋಣೆ ಅಂತ ತಪ್ಪು ತಿಳಿದು ಅಲ್ಲಿ ಮಾಡೋದನ್ನ ಇನ್ನೆಲ್ಲೋ ಮಾಡಿದರಂತೆ."
"ನೋಡಿದೆ ಕಣ್ರೀ. ನಮ್ಮ ಟೆಲಿವಿಷನ್ ಮೀಡಿಯಾಗೆ ಡೆಡ್ಲಿ ಟಾಪಿಕ್ ಸಿಕ್ಕಿಬಿಟ್ಟಿತು ನೋಡಿ. ಮಿಶ್ರಾನ ಕುಟ್ಟಿ ಪುಡಿ ಮಾಡಿ ಮಿಶ್ರಣ ಮಾಡಿಬಿಟ್ಟಿದ್ದಾರೆ." ಎಂದು ನಾನು ಮಧ್ಯದಲ್ಲಿ ಸೇರಿಸಿದೆ.
"ನಮ್ಮ ಪ್ರಿಂಟ್ ಮೀಡಿಯಾ ಏನು ಕಡಿಮೆ? ಮಿಶ್ರ ಛಾಪು ತಾಳದಲ್ಲಿ ಪೀ ಪೀ ಪೀ ಅಂತ ಶಹನಾಯಿ ಬಾರಿಸ್ತಿದಾರೆ. ಇನ್ನೊಂದು ವಿಡಿಯೋ ನೋಡಿದೀರಾ? ಇಬ್ಬರು ಸೀಟಿಗಾಗಿ ಹೊಡೆದಾಡಿಕೊಂಡರಲ್ಲ. ಒಂದು ಏರ್ ಲೈನ್ ಸೀಟಿಗೆ ಹೀಗೆ ಹೊಡೆದಾಡೋರು ಮೆಡಿಕಲ್ ಸೀಟಿಗೆ ಇನ್ನೇನು ಖೂನಿ ಮಾಡಿಬಿಡ್ತಾರೋ ಏನೋ!"
"ಏಐ ಅಂದರೆ ಏರ್ ಇಂಡಿಯಾ ಅಲ್ಲವಾ? ಮತ್ತೆ ಇನ್ನೇನು?"
"ಆರ್ಟಿಫಿಷಿಯಲ್ ಇಂಟೆಲಿಜೆನ್ಸ್!" ಎಂದು ರಾಜಾರಾಂ ನಿಮಗೆ ಅಷ್ಟೂ ಗೊತ್ತಿಲ್ಲವಾ ಎಂಬ ರೀತಿಯಲ್ಲಿ ಮರಿಗೌಡರನ್ನು ದುರುಗುಟ್ಟಿ ನೋಡಿದರು.
"ನಮಗೆ ನ್ಯಾಚುರಲ್ ಇಂಟೆಲಿಜೆನ್ಸ್ ಇದೆಯಪ್ಪ, ನಮಗೆ ಯಾಕೆ ಆರ್ಟಿಫಿಷಿಯಲ್ ಬೇಕು?" ಎಂದು ಮರಿಗೌಡ ಅರ್ಥಗರ್ಭಿತವಾಗಿ ರಾಜಾರಾಂ ಕಡೆ ನೋಡಿ ನಕ್ಕರು.
ಚಾಟ್ ಕಾರ್ನರಿನ ಭಯ್ಯಾ ನಾವು ಆರ್ಡರ್ ಮಾಡಿದ್ದ ಚಾಟ್ ಜಿ, ಚಾಟ್ ಪಿ ಮತ್ತು ಚಾಟ್ ಟಿ ಇವುಗಳನ್ನು ತಂದಿಟ್ಟ.
"ಚಾಟ್ ಜಿಪಿಟಿ ಎಷ್ಟು ಸ್ಮಾರ್ಟ್ ಅಂದ್ರೆ ಅದು ಕವನ ಬರೆಯುತ್ತೆ, ಕಥೆ ಬರೆಯತ್ತೆ, ಪ್ರೋಗ್ರಾಮಿಂಗ್ ಮಾಡುತ್ತೆ, ಒಬ್ಬ ಮನುಷ್ಯನೇನೋ ಅನ್ನೋ ಹಾಗೆ ಚಾಟ್ ಮಾಡತ್ತೆ."
"ಅಯ್ಯೋ ಚಾಟ್ ಮಾಡೋದೇನು ಕಷ್ಟ? ನಮ್ಮ ಕಿಶನ್ ಭಯ್ಯಾ ಕೂಡಾ ಮಾಡ್ತಾನೆ."
"ಏನು ಟಾಪಿಕ್ ಕೊಟ್ಟರೂ ಕವನ ಬರೆಯುತ್ತೆ"
"ಅಯ್ಯೋ ನಮ್ಮ ಕವಿಗಳು ಟಾಪಿಕ್ ಇಲ್ಲದೇ ಬರೀತಾರೆ."
"ಬೇಕೂ ಅಂದ್ರೆ ನಗೆಹನಿ ಬರೆಯತ್ತೆ"
"ಹೌದಾ! ನನಗೆ ಈಗ ಅನುಮಾನ ಬರ್ತಿದೆ. ಇಲ್ಲೊಬ್ಬರು ಫೇಸ್ಬುಕ್ ಮೇಲೆ ದಿನಕ್ಕೊಂದು ನಗುಬಂತಾ ಅಂತ ಏನೇನೋ ಕಂತೆ ಬರೀತಾರೆ. ಅದನ್ನೆಲ್ಲಾ ನಿಮ್ಮ ಚಾಟ್ ಪಿಪಿಟಿ ಕೈಲಿ ಬರೆಸಿಕೊಂಡು ತಾವೇ ಕ್ರೆಡಿಟ್ ತೋಗೋತಾರೆ ಅಂತ ಕಾಣತ್ತೆ."
"ಪಿಪಿಟಿ ಅಲ್ಲ ಜಿಪಿಟಿ"
"ನನ್ನ ಮಗ ಮತ್ತೆ ಪಿಪಿಟಿ ಮಾಡಬೇಕು, ಪಿಪಿಟಿ ಮಾಡಬೇಕು ಅಂತ ಯಾವಾಗಲೂ ಹಾರಾಡ್ತಾ ಇರ್ತಾನಲ್ಲ."
"ಪಿಪಿಟಿ ಅಂದರೆ ಪವರ್ ಪಾಯಿಂಟ್."
"ಜಿಪಿಟಿ ಅಂದ್ರೆ ಏನು ಮತ್ತೆ?"
"ಅದೆಂಥದ್ದೋ ಜನರೇಟಿವ್ ಪ್ರೀ ಟ್ರೈನ್ಡ್ ಟ್ರಾನ್ಸ್ಫಾರ್ಮರ್ ಅಂತೆ."
"ಟ್ರಾನ್ಸ್ ಫಾರ್ಮರ್ ಅಂದ್ರೆ ನಮ್ಮ ಅಪಾರ್ಟ್ಮೆಂಟ್ ಮುಂದೆ ಇದೆಯಲ್ಲ. ಒಂದೊಂದು ಸಲ ಇದ್ದಕ್ಕಿದ್ದ ಹಾಗೆ ಕಿಡಿ ಬರತ್ತೆ ಅದರಲ್ಲಿ."
"ಅಲ್ರೀ. ಇದು ಎಂಥದ್ದೋ ಸಾಫ್ಟ್ವೇರ್."
"ಏನು ಸಾಫ್ಟ್ ವೇರೋ ಏನೋ! ಕವನ ಬರೆಯೋದಕ್ಕೆ ಯಾಕ್ರೀ ಬೇಕೂ ಸಾಫ್ಟ್ವೇರ್? ಪಾಪ ನಮ್ಮ ಕವಿಗಳು ಎಲ್ಲಿಗೆ ಹೋಗಬೇಕು? ಮೊದಲೇ ಅವರ ಸಪ್ತಾಕ್ಷರಿ ಮಂತ್ರ ಏನು ಅಂತ ಮುದ್ದಣ ಹೇಳಿಬಿಟ್ಟಿದಾನೆ. ಇನ್ನು ಚಾಟ್ ಟಿಪಿಟಿ ಎಲ್ಲಾ ಪೈಪೋಟಿ ಬಂದ್ರೆ ಅವರಿಗೆ ಪಿಪಿಟಿ ಭಿಕ್ಷಾಂದೇಹಿ ಅಷ್ಟೇ."
"ಸರ್ ಜೀ, ಔರ್ ಕುಚ್ ಕಚೋರಿ, ಸಮೋಸಾ?" ಎಂದು ಭಯ್ಯಾ ಕೇಳಿದ.
"ಈ ಪಿಪಿಟಿ ವಿಷಯ ಮಾತಾಡಿ ಆಡಿ ಒಂದು ಟೀ ಕುಡಿಯೋಣ ಅನ್ನಿಸ್ತಾ ಇದೆ. ದೋ ಚಾಯ್ ತೀನ್ ಕರೋ ಭಯ್ಯಾ."
"ದೋ ಚಾಯ್ ತೀನ್?" ಎಂದು ಭಯ್ಯಾ ಭಯಭೀತನಾದ.
"ಕ್ಯಾ ಭಯ್ಯಾ! ಚಾಟ್ ಪಿಪಿಟಿ ಸಮಜ್ ಜಾತಾ ತುಂ ಸಮಜಾ ನಹೀ?" ಎಂದು ಮರಿಗೌಡ ಸಿಕ್ಸರ್ ಬಾರಿಸಿದರು.
ಭಯ್ಯಾ ತುಟಿಪಿಟಿಸದೆ ಸುಮ್ಮನೆ ನಿಂತಿದ್ದ.
"ದೋ ಚಾಯ್ ತೀನ್ ಗ್ಲಾಸ್ ಭಯ್ಯಾ" ಎಂದು ನಾನು ಅವನ ಸಹಾಯಕ್ಕೆ ನಿಂತೆ.
"ಅಚ್ಛಾ!!" ಎಂದು ಜ್ಞಾನೋದಯ ಆದಂತೆ ಅವನು ಒಳಗೆ ಹೋದ.
"ಟೂ ಬೈ ತ್ರೀ ಟೀ ಬಗ್ಗೆ ಚಾಟ್ ಪಿಪಿಟಿ ಒಂದು ಜೋಕ್ ಬರೆದುಕೊಡತ್ತಾ?" ಎಂದು ಮರಿಗೌಡ ತಮ್ಮ ಪ್ಲೇಟಿನಲ್ಲಿದ್ದ ಏಕಮಾತ್ರ ಬಟಾಣಿಯನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಂಡರು.
(ಇದನ್ನು ಬರೆದದ್ದು ಚಾಟ್ ಜಿಪಿಟಿ ಅಲ್ಲ.)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ