ಒಂದು ವಿವಾದ

 (ಈ ಕವಿತೆಗೆ ಪ್ರೇರಣೆ ಆಂಟೋನಿಯೊ ರೋಟಾ ಎಂಬ ಕಲಾವಿದನ ಚಿತ್ರ. ಒಬ್ಬ ಚಪ್ಪಲಿ ಹೊಲೆಯುವವನನ್ನು ತನ್ನ ಹಳೆಯ ಚಪ್ಪಲಿ ರಿಪೇರಿ ಮಾಡಿಕೊಡಲು ದುಂಬಾಲು ಬಿದ್ದ ಬಾಲಕಿಯ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏ ಐ.



ಒಂದು ವಿವಾದ

'ಆಗದಮ್ಮ ಏನೂ ಮಾಡಲು ಆಗದು
ಜಾಗವೇ ಇಲ್ಲ ಹಾಕಲು ಹೊಲಿಗೆ
ಹೋಗು! ಸುಮ್ಮನೇ ಪೀಡಿಸದಿರು ಮಗೂ!!

'ಹೀಗೇ ಹೇಳಿದ್ದೆಯಲ್ಲ ಹೋದಸಲವೂ!'
ರಾಗ ಎಳೆದಳು (ಅವನಲ್ಲಿ ಅಪ್ಪನಷ್ಟೆ ಸಲುಗೆ)
'ಆಗ ಹೇಗಾಯಿತೋ ಹಾಗೇ ಈಗಲೂ.'

'ಮೃದುವಾದ ಪಾದಕ್ಕೆ ಬೇಕು ಹೊಸ ಪಾದುಕೆ
ಇದು ಕೂಡಾ ಹೋಗದಲ್ಲ ನಿನ್ನಪ್ಪನ ತಲೆಗೆ!
ಕೊಡಿಸು ಹೊಸದೆಂದು ಕೇಳಿಕೋ ಹೋಗು!'

'ಐದು ವರ್ಷದ ಹಿಂದೆ ಕೊಂಡದ್ದು ನಿನ್ನಲ್ಲೇ
ಇದರ ಸಾಲ ತೀರಿದ್ದು ವರ್ಷದ ಕೆಳಗೆ!
ಪದೇ ಪದೇ ಮನೆಗೆ  ಬರಬೇಕಾಯಿತು ನೀನು!'

'ಆಯಿತು ಹೋಗು, ಏನಾದೀತೋ !
ಕಾಯಬೇಕಾದೀತು ಎರಡು ವಾರದವರೆಗೆ!
ಸಾಯದೇ ಇದ್ದರೆ ಮಾಡುವ ಏನಾದರೂ!'


'ಬೇಗ ಮುಗಿಸಿಕೊಡು ಮಾವ, ನಾನು ನಾಳೆ ಬರುವೆ
ಆಗದೆಂದರೂ ಕೆಲಸ ನೀನು ದೇವರ ಹಾಗೆ
ಹೇಗೋ ಮಾಡುವೆ ಪೂರ್ತಿ  ಹಿಂದೆ ಬಿದ್ದಾಗ ಜನರು!'

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)