ಹೋಮಿಯೋಪತಿ ಔಷಧ (ನೆನಪು)

 


ಆಗ ನನಗೆ ಹನ್ನೊಂದೋ ಹನ್ನೆರಡೋ ವಯಸ್ಸು. ನಾವು ಆಗ ದೆಹಲಿಯಲ್ಲಿದ್ದೆವು.  ಆಗ ಅಷ್ಟೊಂದು ಕ್ಲಿನಿಕ್ ಗಳು ಇರಲಿಲ್ಲ. ಜನ ಚಿಕಿತ್ಸೆಗಾಗಿ ಸರಕಾರೀ ಡಿಸ್ಪೆನ್ಸರಿಗೆ ಹೋಗುತ್ತಿದ್ದರು.  ನಾವಿದ್ದ ಮನೆಯ ಬೀದಿಯಲ್ಲೇ ಒಬ್ಬ ಪ್ರಸಿದ್ಧ ವೈದ್ಯರು ಮನೆಯಲ್ಲೇ ಕ್ಲಿನಿಕ್ ಹಾಕಿಕೊಂಡಿದ್ದರು. ಡಾ| ಘೋಷಾಲ್ ಎಂಬುದು ಅವರ ಹೆಸರು. ಅವರನ್ನು ಕಾಣಲು ದೂರದೂರದಿಂದ ಜನ ಬರುತ್ತಿದ್ದರು. ದಿನಬೆಳಗಾದರೆ ಅವರ ಮನೆಯ ಮುಂದೆ ದೊಡ್ಡ ಕ್ಯೂ  ನಿಲ್ಲುತ್ತಿತ್ತು. ಕೆಲವು ಸಲ ಸರಿರಾತ್ರಿಯ ಹೊತ್ತು ಯಾರಾದರೂ ಅವರನ್ನು ಕಾಣಲು ಬಂದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. "ಡಾಕ್ಟರ್ ಸಾಬ್! ಡಾಕ್ಟರ್ ಸಾಬ್!" ಎಂದು ಅವರು ಕೂಗಿಕೊಳ್ಳುತ್ತಿದ್ದುದು ನಮ್ಮ ಮನೆಗೂ ಕೇಳುತ್ತಿತ್ತು.  ಡಾಕ್ಟರ್ ಸಾಹೇಬರು ಇದನ್ನು ಕಿವಿಗೇ ಹಾಕಿಕೊಳ್ಳದೆ ಇದ್ದುಬಿಡುತ್ತಿದ್ದರು. ಕೆಲವೊಮ್ಮೆ ಅವರು ಬೈದು "ನಾಳೆ ಬೆಳಗ್ಗೆ ಬನ್ನಿ" ಎಂದು ಹೇಳುವುದು ಕೇಳುತ್ತಿತ್ತು. 


ಒಂದು ಸಲ ಯಾರದೋ ಮನೆಗೆ ಹೋದಾಗ ಅಲ್ಲಿ ಅವಲಕ್ಕಿ ತಿಂದದ್ದಕ್ಕೋ ಏನೋ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಈ ಹೊಟ್ಟೆ ನೋವು ಬಂದಾಗ ಒಂದು ಅರ್ಧ ಗಂಟೆ ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತಿತ್ತು.  ದಿನಕ್ಕೆ ಹೀಗೆ ಒಂದೆರಡು ಸಲ ಆಗತೊಡಗಿತು. ಮೊದಲು ಮನೆವೈದ್ಯ ಮಾಡಿದರು. ಗುಣವಾಗಲಿಲ್ಲ. ನಾನು ಒದ್ದಾಡುವುದು ನೋಡಿ ಅಷ್ಟು ಹತ್ತಿರದಲ್ಲಿದ್ದ ಡಾ. ಘೋಷಾಲ್ ಅವರ ಬಳಿ ಕರೆದೊಯ್ಯಲು ನನ್ನ ತಂದೆ ನಿರ್ಧರಿಸಿದರು. 


ಸುಮಾರು ಒಂಬತ್ತು ಗಂಟೆಗೆ ನಮ್ಮನ್ನು ಒಳಗೆ ಬಿಟ್ಟರು. ಡಾಕ್ಟರ್ ಸಾಹೇಬರು ನಮ್ಮನ್ನು ಬೆಂಚಿನ ಮೇಲೆ ಕೂಡಲು ಹೇಳಿ ಉಳಿದ ರೋಗಿಗಳ ಜೊತೆ ಮಾತಾಡುತ್ತಿದ್ದರು. ಕೊನೆಗೆ ನಮ್ಮ ಸರದಿ ಬಂದಾಗ "ಏನು ಸಮಾಚಾರ?" ಎಂದು ಕೇಳಿದರು. ನನ್ನ ತಂದೆ "ಇವನಿಗೆ ಕೆಲವು ದಿನಗಳಿಂದ ಹೊಟ್ಟೆ ನೋವು ಬರುತ್ತಿದೆ ..." ಎಂದು ಹೇಳತೊಡಗಿದರು. ಡಾ. ಘೋಷಾಲ್ ಅರ್ಧದಲ್ಲೇ ಅವರನ್ನು ತಡೆದು, "ನೋಡಿ, ನಾನು ಅವನನ್ನು ಆಗಿಂದ ಗಮನಿಸುತ್ತಿದ್ದೇನೆ. ಚೆನ್ನಾಗೇ ಇದ್ದಾನೆ. ನಾನು ಅವನ ಕಡೆ ನೋಡಿದಾಗ ನೋವಿನಿಂದ ಮುಖ ಹಿಂಡುತ್ತಾನೆ.  ಅವನಿಗೆ ಏನೂ ಆಗಿಲ್ಲ. ಶಾಲೆಗೆ ಚಕ್ಕರ್ ಹೊಡೆಯಲು ಸಬೂಬು ಹೇಳುತ್ತಿದ್ದಾನೆ!" ಎಂದುಬಿಟ್ಟರು. ನನ್ನ ತಂದೆ ಅವಾಕ್ಕಾದರು! "ಇಲ್ಲ ಡಾಕ್ಟರ್, ಅವನು ಕ್ಲಾಸಿನಲ್ಲಿ ಮೊದಲ ರಾಂಕ್ ಬರುತ್ತಾನೆ. ಅವನಿಗೆ ಚಕ್ಕರ್ ಹಾಕುವ ಉದ್ದೇಶ ಇಲ್ಲ ..." ಎಂದು ಹೇಳಲು ಪ್ರಾರಂಭಿಸಿದರು. "ನೋಡಿ, ಡಾಕ್ಟರ್ ನಾನೋ ನೀವೋ? ನನಗೆ ಸಾಕಷ್ಟು ಅನುಭವ ಇದೆ," ಎಂದು ಕಡ್ಡಿ ಮುರಿದಹಾಗೆ ಸಂಭಾಷಣೆಯನ್ನು ಮುಗಿಸಿಯೇ ಬಿಟ್ಟರು. 


ನನ್ನ ತಂದೆ ಪೆಚ್ಚಾಗಿಬಿಟ್ಟರು. ನಮ್ಮ ಮನೆಗೆ ಸ್ವಲ್ಪ ದೂರದಲ್ಲೇ ಆರ್ಯ ಸಮಾಜ್ ಎಂಬ ಒಂದು ಸಂಸ್ಥೆ ಇತ್ತು. ಅಲ್ಲಿ ಬೆಳಗ್ಗೆ-ಸಂಜೆ ಒಂದು ಉಚಿತ ಹೋಮಿಯೋಪತಿ ಡಿಸ್ಪೆನ್ಸರಿ ನಡೆಸಲಾಗುತ್ತಿತ್ತು. ನನ್ನ ತಂದೆ ನನ್ನನ್ನು ಅಲ್ಲಿಗೇ ಕರೆದುಕೊಂಡು ಹೋದರು. ಅಲ್ಲಿ ಡಾ. ಮೆಹತಾ ಎಂಬ ವಯಸ್ಸಾದ ಡಾಕ್ಟರ್ ಇದ್ದರು. ತುಂಬಾ ಶಿಸ್ತಿನ ಮನುಷ್ಯ.  ಉದ್ದದ ಮೂಗಿನ ಮೇಲೆ ಕನ್ನಡಕದ ಹಿಂದೆ ಅವರ ಕಣ್ಣುಗಳು ಮಿಂಚುತ್ತಿದ್ದವು. ಅವರಿಗೆ ನನ್ನ ತಂದೆ ನನ್ನ ಸಮಸ್ಯೆ ವಿವರಿಸಿದರು. ಅವರು ನನಗೆ ಅದೆಷ್ಟೋ ಪ್ರಶ್ನೆ ಕೇಳಿದರು. ನೋವು ಯಾವಾಗ ಬರುತ್ತದೆ, ಎಷ್ಟು ಹೊತ್ತಿರುತ್ತದೆ, ಇತ್ಯಾದಿ ಇತ್ಯಾದಿ. ಸುಮಾರು ಹದಿನೈದು-ಇಪ್ಪತ್ತು ಪ್ರಶ್ನೆಗಳ ನಂತರ ಸಿಹಿಮಾತ್ರೆಗಳ ಗುಳಿಗೆಯ ಮೇಲೆ ತಮ್ಮ ನಡುಗುವ ಕೈಗಳಿಂದ ಔಷಧ ಬೆರೆಸಿ ಚಿಕ್ಕ ಪೊಟ್ಟಣಗಳಲ್ಲಿ ಸುತ್ತಿ ಕೊಟ್ಟರು. ಹೇಗೆ ತೆಗೆದುಕೊಳ್ಳಬೇಕೆಂದು ಹೇಳಿದರು. ಕೈಯಿಂದ ಗುಳಿಗೆಗಳನ್ನು ಮುಟ್ಟಬಾರದು ಇತ್ಯಾದಿ ವಿವರಿಸಿದರು. ನನ್ನ ತಂದೆಯವರಿಗೆ ಇದು ಹೋಮಿಯೋಪತಿಯ ಮೊದಲ ಅನುಭವ. ಅವರು ಕುತೂಹಲದಿಂದ ಡಾ. ಮೆಹತಾ ಅವರನ್ನು ಒಂದಿಷ್ಟು ಪ್ರಶ್ನೆ ಕೇಳಿದರು. ಅವರು ಇಂಗ್ಲಿಷ್ ನಲ್ಲಿ ಮಾತಾಡಿದ್ದರಿಂದಲೋ ಏನೋ ಡಾ. ಮೆಹತಾ ಅವರಿಗೆ ಸಾಕಷ್ಟು ವಿಷಯ ತಿಳಿಸಿದರು. ಮುಂದೆ ಡಾ. ಮೆಹತಾ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿ ಡಾ. ಕರಮ್ ಚಂದ್ ಇಬ್ಬರೂ  ನನ್ನ ತಂದೆಗೆ ಬಹಳ ಒಳ್ಳೆಯ ಮಿತ್ರರಾದರು. ಒಮ್ಮೆ ನಮ್ಮ ಮನೆಗೂ ಬಂದು ಕಾಫಿ ಕುಡಿದರು ಎಂದು ನೆನಪು.  


ನನ್ನ ಹೊಟ್ಟೆ ನೋವು ಒಂದೆರಡೇ ದಿನಗಳಲ್ಲಿ ವಾಸಿಯಾಯಿತು. ಇದಾದ ಕೆಲವು ತಿಂಗಳ ನಂತರ ನನ್ನ ತಂದೆ ಅವರಿಗೆ ಬಲ ಭುಜದಲ್ಲಿ ನೋವು ಕಾಣಿಸಿತು. ಕೈಯನ್ನು ಹಿಂದೆ-ಮುಂದೆ ತಿರುಗಿಸುವುದೇ ಸಾಧ್ಯವಾಗದಷ್ಟು ನೋವು. ಅವರು ಡಾ. ಮೆಹತಾ ಮತ್ತು ಡಾ. ಕರಮ್ ಚಂದ್ ಹತ್ತಿರ ಹೋದರು. ನಮ್ಮ ತಂದೆ ಈಗ ಮಿತ್ರರಾದ್ದರಿಂದ ಅವರು ತಾವು ನೀಡುವ ಔಷಧದ ಹೆಸರನ್ನೂ ಹೇಳುತ್ತಿದ್ದರು. "ನಿಮಗೆ ನಾವು ಕೊಡುತ್ತಿರುವುದು ರಸ್ಟಾಕ್ಸ್ ಎಂಬ ಔಷಧಿ," ಎಂದು ತಿಳಿಸಿದರು. ಸ್ವಲ್ಪ ದಿನಗಳ ನಂತರ ನೋವು ಮಾಯವಾಯಿತು. 


ನಾವು ದೆಹಲಿ ಬಿಟ್ಟು ಬೆಂಗಳೂರಿಗೆ ವಾಪಸ್ ಬರುವಾಗ ನನ್ನ ತಂದೆಗೆ ಡಾ. ಕರಮ್ ಚಂದ್ ಮತ್ತು ಡಾ. ಮೆಹತಾ ಅವರ ಸ್ನೇಹವನ್ನು ತ್ಯಜಿಸಿ ಬರುವುದು ನೋವಿನ ಸಂಗತಿಯಾಗಿತ್ತು. ಬೆಂಗಳೂರಿನಿಂದಲೂ ಅವರು ವೈದ್ಯರಿಗೆ ಆಗಾಗ ಪತ್ರ ಬರೆಯುತ್ತಿದ್ದರು.  ನನ್ನ ತಂದೆಗೆ ಅವರು ಹಲವಾರು ಸರ್ವೇ ಸಾಮಾನ್ಯ ಕಾಯಿಲೆಗಳಿಗೆ ಗುಳಿಗೆಗಳನ್ನು ಸೀಸೆಗಳಲ್ಲಿ ಹಾಕಿ ಕೊಟ್ಟಿದ್ದರು!  ನನ್ನ ತಂದೆಯವರಿಗೆ ಹೋಮಿಯೋಪತಿಯಲ್ಲಿ ಹೀಗೆ ಅಗಾಧ ವಿಶ್ವಾಸ ಉಂಟಾಯಿತು. ಹೋಮಿಯೋಪತಿ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಡಾ. ಕರಮ್ ಚಂದ್ ಮತ್ತು ಡಾ. ಮೆಹತಾ ಅವರಿಗೆ ಒಂದಿಷ್ಟು ವಿವರಿಸಿದ್ದನ್ನು ಎಲ್ಲರಿಗೂ ಹೇಳುತ್ತಿದ್ದರು! 


ನಾನು ಈಗಲೂ ಹೋಮಿಯೋಪತಿ ಬಳಸುತ್ತೇನೆ. ಅದನ್ನು ಕುರಿತು ಒಂದೆರಡು ಪುಸ್ತಕಗಳೂ ಮನೆಯಲ್ಲಿವೆ. ಎಷ್ಟೋ ಜನ ಹೀಗೆ ತಾವೇ ವೈದ್ಯಕೀಯ ಮಾಡಿಕೊಳ್ಳುತ್ತಾರೆ. ಹೋಮಿಯೋಪತಿ ವೈದ್ಯಕೀಯದಿಂದ ಯಾವ ಅಡ್ಡ ಪರಿಣಾಮವೂ ಇಲ್ಲ ಎಂದು ಹೇಳುತ್ತಾರೆ. ಒಮ್ಮೆ ನನ್ನ ಮಗಳು ಎರಡು ವರ್ಷದವಳಾಗಿದ್ದಾಗ ಮನೆಯಲ್ಲಿದ್ದ  ಬಾಟಲಿನಿಂದ ಸಕ್ಕರೆ ಮಾತ್ರೆಗಳನ್ನು ನುಂಗಿಬಿಟ್ಟಳು.  ನನ್ನ ಹೆಂಡತಿಗೆ ಕಾಫಿ ಹೋಮಿಯೋಪತಿ ವೈದ್ಯಕ್ಕ ಪ್ರತ್ಯೌಷಧ ಎಂದು ನೆನಪಿತ್ತು. ಕೂಡಲೇ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿದಳು. ಅವರು "ನೀವು ಮಾಡಿದ್ದು ಸರಿಯಾಗಿದೆ, ಏನೂ ಹೆದರುವ ಅಗತ್ಯವಿಲ್ಲ,"  ಎಂದರು. ಹೋಮಿಯೋಪತಿ ಔಷಧ ತೆಗೆದುಕೊಳ್ಳುವವರು ಕಾಫಿ ಕುಡಿಯದಿರುವುದು ಮೇಲು.  


ಹೋಮಿಯೋಪತಿ ವೈದ್ಯಕೀಯ ಕೆಲವರಿಗೆ ನಾಟುತ್ತದೆ, ಕೆಲವರಿಗೆ ನಾಟುವುದಿಲ್ಲ.  ಮಕ್ಕಳಿಗಂತೂ ಸಿಹಿಗುಳಿಗೆಗಳನ್ನು ನೀಡುವುದು ಸುಲಭ! ಕಾಫಿ ಕುಡಿಯಬಾರದು, ಹೊತ್ತು-ಹೊತ್ತಿಗೆ ಸರಿಯಾಗಿ ಔಷಧ ತೆಗೆದುಕೊಳ್ಳಬೇಕು, ಸರಿಯಾದ ಡೋಸ್ ತೆಗೆದುಕೊಳ್ಳಬೇಕು, ಇತ್ಯಾದಿ ನಿಯಮಗಳನ್ನು ಕೆಲವರು ಪಾಲಿಸುವುದಿಲ್ಲ.  ಎಲ್ಲಾ ಔಷಧಿಗಳಿಗೂ ಅನ್ವಯಿಸುವ ಹಾಗೆ ನಂಬಿಕೆ ಕೂಡಾ ಮುಖ್ಯ. ನನ್ನ ತಾಯಿಗೆ ಈ ಸಿಹಿಗುಳಿಗೆಗಳಿಂದ ಏನಾದೀತು ಎಂಬ ಅನಾದರವಿತ್ತು. "ನಿಮ್ಮ ಅಮ್ಮನಿಗೆ ನಂಬಿಕೆ ಇಲ್ಲ, ಅವಳು ಔಷಧವನ್ನು ಸರಿಯಾಗಿ ತೊಗೂಳ್ಳುವುದೂ ಇಲ್ಲ, ಅದಕ್ಕೇ ಅವಳಿಗೆ ಅದು ನಾಟುವುದಿಲ್ಲ," ಎಂದು ನನ್ನ ತಂದೆ ಪೇಚಾಡುತ್ತಿದ್ದರು!


ಮುಂಚೆ ಅಮೇರಿಕಾದಲ್ಲಿ ಹೋಮಿಯೋಪತಿ ಬಳಕೆಯಲ್ಲಿರಲಿಲ್ಲ. ಅಲ್ಲಿರುವ ನನ್ನ ಮಿತ್ರರೊಬ್ಬರು ಹತ್ತು ವರ್ಷಗಳ ಹಿಂದೆ ತಾವೂ ಹೋಮಿಯೋಪತಿ ಔಷಧ ತೆಗೆದುಕೊಳ್ಳುತ್ತಿರುವ ಬಗ್ಗೆ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಅದು ತುಂಬಾ ದುಬಾರಿ ಕೂಡಾ ಎಂದು ಅವರು ನನಗೆ ಹೇಳಿದರು! ಈಗ ಅಮೆರಿಕಾದಲ್ಲೂ ಈ ಪದ್ಧತಿ ಜನಪ್ರಿಯವಾಗಿದೆ. ಬಹುಶಃ ಅದಕ್ಕೇ ಇರಬಹುದು, ಹೋಮಿಯೋಪತಿ ಕುರಿತು ಟೀಕೆಗಳೂ ಬರುತ್ತಿರುತ್ತವೆ! ಯೋಗ-ಪ್ರಾಣಾಯಾಮಗಳಿಂದ ರೋಗಗಳು ದೂರವಾಗುತ್ತವೆ ಎಂದರೆ ಕೆಲವರು ನಂಬುವುದಿಲ್ಲ. ಆಯುರ್ವೇದದಲ್ಲಿ ಪಪ್ಪಾಯದ ಎಲೆಗಳು ಡೆಂಗೀ ಜ್ವರಕ್ಕೆ ಔಷಧ ಎಂದು ಮೊದಲು ಪತ್ರಿಕೆಗಳಲ್ಲಿ ಓದುಗರೊಬ್ಬರು ಪತ್ರ ಬರೆದಾಗ ಅದಕ್ಕೆ ಸಾಕಸ್ತು ಟೀಕೆಗಳೂ ಬಂದವು.  ಈಗ ಪಪ್ಪಾಯದ ಎಲೆಗಲೇ ಸಿಕ್ಕುವುದಿಲ್ಲ ಎನ್ನುವಂತಾಗಿದೆಯಂತೆ!  ಪರ್ಯಾಯವಾದ ಯಾವುದೇ ವ್ಯವಸ್ಥೆ ಬಂದರೂ ಪಟ್ಟಭದ್ರ ವ್ಯವಸ್ಥೆ ಅದನ್ನು ಟೀಕಿಸುತ್ತದೆ. ಔಷಧದ ವಿಷಯದಲ್ಲೂ ಹಾಗೇ ಎಂದು ನನ್ನ ಅಭಿಪ್ರಾಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)