ನಾಟ್ಉ ನಾಟ್ಉ ನಾಟ್ಉ




"ನಾಟ್ಉ ನಾಟ್ಉ ನಾಟ್ಉ!" ಎಂದು ರಾಜಾರಾಂ ಹಮ್ ಮಾಡಿಕೊಂಡರು. ನಾವು ಚಾಟ್ ಸೆಂಟರ್ ಕಡೆಗೆ ಹೊರಟಿದ್ದೆವು.


"ಏನ್ರೀ ಅದು ನಾಟ್ ನಾಟ್ ನಾಟ್ ಅಂತ?" ಎಂದು ಮರಿಗೌಡ ಕೇಳಿದರು.


"ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದೆ ಹಾಡಿಗೆ. ಏನು ಅಂತ ಕೇಳ್ತಾ ಇದೀರಲ್ಲ!"


"ಗೋಲ್ಡನ್ ಗ್ಲೋಬ್ ಅಂದ್ರೆ ಯಾವ ಅವಾರ್ಡ್ ಅದು?"


"ಹಾಲಿವುಡ್ ಕೊಡೋ ಅವಾರ್ಡ್ ಕಣ್ರೀ.  ಈ ಸಲ ತೆಲುಗು ಹಾಡಿಗೆ ಕೊಟ್ಟಿದಾರೆ. ನಾಟ್ಉ ನಾಟ್ಉ ನಾಟ್ಉ..."


"ಯಾವ ಸಿನಿಮಾ ರೀ? ತೆಲುಗಿನಲ್ಲಿ ಒಳ್ಳೊಳ್ಳೆ ಭಕ್ತಿ ಪ್ರಧಾನ ಚಿತ್ರಗಳು ಮಾಡ್ತಾ ಇದ್ರು. ಮಾಯಾಬಜಾರ್ ನೋಡಿದೀರಾ ತಾನೇ?"


"ಇದು ಆರ್ ಆರ್ ಆರ್ ಅಂತ ಕಣ್ರೀ. ನಾನು ನೆಟ್ ಫ್ಲಿಕ್ಸ್ನಲ್ಲಿ ನೋಡಿದೆ. ನಾಟ್ಉ ನಾಟ್ಉ ನಾಟ್ಉ ಅಂತ ಅದೇನು ಡ್ಯಾನ್ಸ್ ಮಾಡಿದಾರೆ ಗೊತ್ತಾ! ನನಗೇ ಡ್ಯಾನ್ಸ್ ಮಾಡೋಣ ಅಂತ ಹುರುಪು ಬಂದು ನನ್ನ ಮಿಸೆಸ್ ಅವರಿಗೆ ಹೇಳಿದೆ. ಅವರು ನಾಟ್ ನಾಟ್ ನಾಟ್ ಅಂದು ಬಿಟ್ರು."


"ಏನು ನಾಟ್ ನಾಟ್ ನಾಟ್ ಅಂದ್ರೆ?"


"ಯಾರಿಗೆ ಗೊತ್ತು! ಈಗೆಲ್ಲಾ ಸಿನಿಮಾದಲ್ಲಿ ಬರೋ ಹಾಡುಗಳಿಗೆ ಮೀನಿಂಗ್ ಎಲ್ಲಾ ಇರಲ್ಲ. ಹಿಂದೆ ಕೂಡಾ ಇರಲಿಲ್ವಾ, ರಂಪಂಪೋಚ್ ರಂಪಂಪೋಚ್ ಅಂತ. ಅದಕ್ಕೆ ಏನಿದೆ ಅರ್ಥ! ಏನೋ ಮ್ಯೂಸಿಕ್ ಡೈರೆಕ್ಟರಿಗೆ ಟ್ಯೂನ್ ಹೊಳೀತು. ಅದಕ್ಕೆ ಸರಿಯಾಗಿ ಏನೋ ಸಾಹಿತ್ಯ ಗೀಚಿ ಎಸೆದರಾಯ್ತು. ಸಾಹಿತ್ಯ ಎಲ್ಲಾ ಯಾರು ನೋಡ್ತಾರೆ ಈಗ! ಸೆಟ್ಸ್ ಚೆನ್ನಾಗಿರಬೇಕು.  ಕಾಸ್ಟ್ಯೂಮ್ಸ್ ಚೆನ್ನಾಗಿರಬೇಕು. ಆಕ್ಟರ್ಸ್ ಡ್ಯಾನ್ಸ್ ಚೆನ್ನಾಗಿ ಮಾಡಬೇಕು.  ಸ್ಪೆಷಲ್ ಎಫೆಕ್ಟ್ಸ್ ಇರಬೇಕು."


"ಕ್ರಿಕೆಟ್ನಲ್ಲಿ ಅಂಪೈರ್ ಔಟ್ ಕೊಟ್ಟಾಗ ಬ್ಯಾಟ್ಸ್ಮನ್ ಇಲ್ಲ ನಾನು ಔಟ್ ಆಗಿಲ್ಲ ಅನ್ನೋದಕ್ಕೆ ಈ ನಾಟ್ಉ ನಾಟ್ಉ ನಾಟ್ಉ ಉಪಯೋಗ ಆಗಬಹುದು" ಎಂದು ನಾನು ಸೇರಿಸಿದೆ.


"ಓಹ್ ವೇಟ್ ಈ ಮಿನಿಟ್. ನೆನ್ನೆ ಹುರುಳಿಕಾಯಿ ವ್ಯಾಪಾರ ಮಾಡೋಕ್ಕೆ ಹೋದಾಗ ತರಕಾರಿ ಮಾರೊಳು ನಾಟಿ ನಾಟಿ ನಾಟಿ ಅಂತ ಏನೋ ಹಾಡಿದ್ದು ಇದಕ್ಕೇನಾ! ನಾನು ನನಗೆ ನಾಟಿ ಅಂತ ಕರೀತಿದಾಳೆ ಅಂದುಕೊಂಡೆ. ಅದನ್ನ ನಮ್ಮ ಮನೆಯೋರಿಗೆ ಹೇಳಿದ್ದಕ್ಕೆ ಅವರು ಕೋಪ ಮಾಡಿಕೊಂಡು ಇನ್ಮೇಲಿಂದ ಅವಳ ಹತ್ರ ತರಕಾರಿ ಏನೂ ತರೋದು ಬೇಕಾಗಿಲ್ಲ, ನಾನು ಮನೆ ಮೇಲೆ ಬರೋ ತರಕಾರಿ ತೊಗೋತೀನಿ ಅಂತ ಖಂಡತುಂಡ ಹೇಳಿಬಿಟ್ರು."


"ವಾಟ್ ಎ ನಾಟಿ ಸಿಚುವೇಷನ್. ಐ ಮೀನ್ ಕೆ ಎನ್ ಓಹ್ ಟಿ ಟಿ ವೈ!" ಎಂದು ರಾಜಾರಾಂ ನಕ್ಕರು.


"ಅಂತೂ ತೆಲುಗು ಚಿತ್ರಕ್ಕೆ ನೋಡಿ ಗೋಲ್ಡನ್ ಗ್ಲೋಬ್ ಬಂದಿದೆ. ಕನ್ನಡ ಚಿತ್ರಕ್ಕೆ ಏನಾದರೂ ಬಂದಿದೆಯಾ?"


"ಆಸ್ಕರ್ ಬರತ್ತೆ ಅಂತ ಭಾಸ್ಕರ್ ಹೇಳಿದರು."


"ಯಾರು ಭಾಸ್ಕರ್?"


"ನನ್ನ ನೇಬರ್ ಭಾಸ್ಕರ್. ವೆರಿ ವೆಲ್ ರೆಡ್ ಫೆಲೋ. ಕಾಂತಾರ ವಿಲ್ ಗೆಟ್ ಆಸ್ಕರ್ ಅಂತ ಅವರು ಬೆಟ್ ಕಟ್ಟಿದಾರೆ."


"ವಾವ್."


"ಆಸ್ಕರ್ ಬಂದರೆ ಆಂಜನೇಯನಿಗೆ ವಡೆಮಾಲೆ ಹಾಕಿಸ್ತೀನಿ ಅಂತ ನನ್ನ ಮಿಸೆಸ್ ಕೂಡಾ ಹೇಳಿಕೊಂಡುಬಿಟ್ಟಿದಾಳೆ."


"ಅದೇನು ಅವರಿಗೆ ಅಂಥಾ ಭಕ್ತಿ?"


"ಅವಳೂ ಬೆಟ್ ಕಟ್ಟಿದಾಳೆ. ಅವರ ಲೇಡೀಸ್ ಕ್ಲಬ್ಬಲ್ಲಿ ಒಬ್ಬೊಬ್ಬರೂ ಐನೂರು ಹಾಕಿದ್ದಾರೆ."


"ಆಸ್ಕರ್ ಬರಲ್ಲ ಅಂತ ಎಷ್ಟು ಜನ, ಬರತ್ತೆ ಅಂತ ಎಷ್ಟು ಜನ?"


"ಮುಂಚೆ ನಮ್ಮ ಮಿಸೆಸ್ ಬರಲ್ಲ ಅಂತ ಬೆಟ್ ಕಟ್ಟಿದಳು. ಎಲ್ಲರೂ ಅವಳಿಗೆ ನೀನು ಕನ್ನಡದವಳಾಗಿ ಆಸ್ಕರ್ ಬರಲ್ಲ ಅಂತ ಬೆಟ್ ಕಟ್ಟಿದೀಯಲ್ಲ ಅಂತ ಬೈದರು. ಹೀಗಾಗಿ ಚೇಂಜ್ ಮಾಡಿದಳು. ಈಗ ಎಲ್ರೂ ಆಸ್ಕರ್ ಬರತ್ತೆ ಅಂತ ಬೆಟ್ ಕಟ್ಟಿದ್ದಾರೆ!"


"ಬಂದ್ರೆ ಯಾರಿಗೆ ಪ್ರೈಜು!!"


"ಎಲ್ಲರಿಗೂ!"


"ಅಂದ್ರೆ!?"


"ಎಲ್ಲರೂ ಐನೂರು ತೊಗೊಂಡು ಪಾರ್ಟಿಗೆ ಹೋಗೋದು."


"ಆಸ್ಕರ್ ಬರದೇ ಹೋದ್ರೆ ..."


"ನಾನು ಕೂಡಾ ಹಾಗೇ ಕೇಳಿದೆ. ಅದಕ್ಕೆ ನಮ್ಮ ಮಿಸೆಸ್ ಕೋಪ ಮಾಡಿಕೊಂಡು ನಿಮ್ಮದು ನೆಗೆಟಿವ್ ಥಿಂಕಿಂಗ್ ಅಂತ ಬೈದಳು."


"ಈವನ್ ದೆನ್! ಬರದೇ ಹೋದರೆ?"


"ಆಗ ಎಲ್ರೂ ಸಂತಾಪಕ್ಕಾಗಿ ಪಾರ್ಟಿ ಮಾಡ್ತಾರಂತೆ."


"ಚಾಟ್ಉ ಚಾಟ್ಉ ಚಾಟ್ಉ!"


"ಹೂಂ. ಎಲ್ರೂ ಚಾಟ್ ಕಾರ್ನರಿಗೆ ಹೋಗ್ತಾರೆ."


"ಅಲ್ರೀ. ಚಾಟ್ ಕಾರ್ನರ್ ಹೆಸರು ಬದಲಾಯಿಸಿದಾನೆ ನೋಡಿ. ಚಾಟ್ಉ ಚಾಟ್ಉ ಚಾಟ್ಉ ಅಂತ!"


"ಗ್ರೇಟ್. ನೀವು ಏನು ತೋಗೊತೀರಿ? ನಾನು ಸಮೋಸಾ ಚಾಟ್ಉ"


"ನಾನು ಪಾಪಡಿ ಚಾಟ್ಉ"


"ನಾನು ಸಂಕ್ರಾಂತಿ ಸ್ಪೆಷಲ್ ಎಳ್ಳುಬೆಲ್ಲ ಚಾಟ್ಉ"


"ಮತ್ತೆ ಆಯ್ತಲ್ಲ ಚಾಟ್ಉ ಚಾಟ್ಉ ಚಾಟ್ಉ!" ಎಂದು ರಾಜಾರಾಂ ಆರ್ಡರ್ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)