ತಾಯಿ

 ತಾಯಿ



ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ
ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು
ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ.


ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ
ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ
ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು
ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ.


ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ
ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ?
ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ
ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ.


ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ
ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು!
ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ!
ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ!


ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ?
ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ?
ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ?
ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.'


ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ
ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ: 
ಇಪ್ಪತ್ತುಸಾವಿರಕ್ಕೂ ಸಾವುನೋವುಗಳಿಗಾಗಿ ಅತ್ತು
ಹಿಪ್ಪೆಯಾಗಿ ಹೋಗಿದ್ದವರಿಗೆ ಸಿಕ್ಕಿದೆ ದೈವದ ಗವಾಹಿ.


ಕವಿತೆ: ಸಿ. ಪಿ. ರವಿಕುಮಾರ್

( ೧೧-೨-೨೦೨೩)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)