ಕಬೀರನ ವಜ್ರಗಳು

 


(೧)

ಅಂಥ ವಜ್ರವನ್ನು ಆಯ್ದುಕೋ ಎಂಥದ್ದು

ಸಹಿಸಿಕೊಳ್ಳಬಲ್ಲದೋ ಸುತ್ತಿಗೆಯ ಪೆಟ್ಟು

ಕಪಟಿಗಳನ್ನು ಎಂದಿಗೂ ನೆಚ್ಚದಿರು ಯಾರು

ಹೊಳೆವರೋ ಬಣ್ಣದ ವೇಷವನು ತೊಟ್ಟು

(ಜ್ಞಾನಿಗಳಂತೆ ತೋರುವವರೆಲ್ಲ ಜ್ಞಾನಿಗಳಲ್ಲ.)


(೨)

ನಿನ್ನ ವಜ್ರಗಳ ಥೈಲಿಯನು ತೆರೆಯದಿರು

ಡೇರೆ ಹಾಕಿರುವ ಕಡೆ ಜನರು ಅಲೆಮಾರಿ

ಗಂಟು ಹಾಕಿ ಭದ್ರ ಮಾಡಿಟ್ಟುಕೋ ಮತ್ತು

ನಿನ್ನ ಪಾಡಿಗೆ ನೀನು ಹಿಡಿ ನಿನ್ನ ದಾರಿ


(ಎಲ್ಲಾ ಕಡೆಗೂ ನಿನ್ನ ಜ್ಞಾನ ಪ್ರದರ್ಶಿಸಬೇಡ)


(೩)

ಎಣ್ಣೆಯನ್ನು ತನ್ನೊಳಗೆ ಇಟ್ಟುಕೊಂಡಂತೆ ಎಳ್ಳು

ಬೆಂಕಿಯನ್ನು ತನ್ನೊಳಗೆ ಇಟ್ಟುಕೊಂಡಂತೆ ಕಲ್ಲು

ಭಗವಂತನನ್ನು ಒಳಗೆ ಇಟ್ಟುಕೊಂಡಿರುವೆ ನೀನು

ಸಾಧ್ಯವಾದರೆ ಕಣ್ತೆರೆದು ಮೇಲೆದ್ದು ನಿಲ್ಲು

(೪)

ಇಡೀ ಭೂಮಿಯನ್ನೇ ಮಾಡಿಕೊಂಡು ಕಾಗದ

ಲೇಖನಿ ಮಾಡಿಕೊಂಡು ಎಲ್ಲ ವನಕಾನನ

ಸಪ್ತ ಸಾಗರವನ್ನೇ ಮಾಡಿಕೊಂಡು ಮಸಿ

ಬರೆದರೂ ಪೂರೈಸದು ಗುರುವಿನ ಗುಣಗಾನ


(೫)

ಏನು ಬಂದಂತೆ ನೀರೆರೆದು ಮಾಡಿದರೆ ಸ್ನಾನ 

ಮಡಿಯಾಗದೆ ಕಳೆದು ಮನದೊಳಗಿನ ಮೈಲಿಗೆ

ಬಿಟ್ಟಿತೇ ಹೇಳು ಮೀನಿನ ವಾಸನೆ ಮೈಯೊಳಗಿಂದ

ಇದ್ದರೂ ಮೀನು ಸದಾಕಾಲ ನೀರೊಳಗೆ

(೬)

ಸಾಯದು ಮಾಯೆ, ಸಾಯದು ಮನಸ್ಸು

ಸಾಯುವುದು ಪುನಃಪುನಃ  ಶರೀರ

ಸಾಯದು ಆಸೆ, ಸಾಯದು ತೃಷ್ಣೆ

ಇದೋ ಹೇಳಿ ಹೋಗಿದ್ದಾನೆ ಕಬೀರ


(೮)

ಮನವು ಸತ್ತಿತೆಂದು ಭಾವಿಸಿದೆ ನಾನು

ಸತ್ತು  ತಾಳಿತೋ ಏನೋ ಪ್ರೇತ ರೂಪ

ನನ್ನ ಬೆಂಬತ್ತಿದೆ ಸತ್ತ ನಂತರವೂ!

ಹಾಳು ಮನಸ್ಸು ಅಂತಹ ಭೂಪ !

(೯)

ಸರೋವರದಲ್ಲಿ ಅರಳುವಳು ಕಮಲಿನಿ

ಮೇಲೆ ಆಕಾಶದಲ್ಲಿ ಅರಳುವನು ಇಂದು

ಮನದಲ್ಲಿ ನೆನೆದವರು ಸನಿಹದಲ್ಲಿರುವಂತೆ 

ಬಿಂಬರೂಪದಲ್ಲಿ ಸೇರುವನು ಬಂದು


(ದೇವರನ್ನು ನೆನೆದಾಗ ಅವನು ಎಲ್ಲಿದ್ದರೂ ಬೇರೆ ರೂಪದಲ್ಲಿ ಹತ್ತಿರ ಬರುತ್ತಾನೆ ಎಂಬ ಭಾವ)

ಮೂಲ: ಕಬೀರ್

ಅನುವಾದ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)