ರಹೀಮನ ದ್ವಿಪದಿಗಳು

 ಉತ್ತಮ ಪ್ರಕೃತಿಯ ಜನರನ್ನು

ಕೆಡಿಸಲಾರದು ದುಷ್ಟರ ಸಂಗ|

ಚಂದನವನ್ನು ಕೆಡಿಸದೋ ಹೇಗೆ

 ಸುತ್ತಿಕೊಂಡ ಭುಜಂಗ||


(ಭುಜಂಗ : ಹಾವು)

(ಬೇವು ಬೆಲ್ಲದೊಳಿಡಲೇನು ಫಲ ಎಂದು ದಾಸರು ಹಾಡಿದ್ದಾರೆ. ಅದರ ಪಾಸಿಟಿವ್ ಸ್ಪಿನ್ ಇಲ್ಲಿದೆ ನೋಡಿ.)

(೨)

ತನ್ನ ನೀರನ್ನು ತಾನೇ ಹೀರದು ನದಿ

ತನ್ನ ಹಣ್ಣನ್ನು ತಾನೇ ಭಕ್ಷಿಸದು ಮರ|

ಸಾಧುಸಂತರು ಹಾಗೇ ಪರಮಾರ್ಥಕ್ಕಾಗಿ 

ಧರಿಸಿ ಬಂದಿರುತ್ತಾರೆ ಶರೀರ ||

(೩)

ಮೌನವಾಗಿರಲು ಎರಡೂ ಒಂದೇ ಬಗೆ

ಕೋಗಿಲೆ ಮತ್ತು ಕಾಗೆ|

ಯಾರು ಏನೆಂದು ತಿಳಿಯುವುದು

ವಸಂತ ಕಾಲಿಡುತ್ತಿದ್ದ ಹಾಗೇ||


(೪)

ಕೆಟ್ಟ ಕಾಲ ಬಂದಾಗ ರಹೀಮ

ಬಾಯಿಗೆ ಮೌನದ ಮುದ್ರೆ ಒತ್ತು |

ಒಳ್ಳೆಯ ದಿನಗಳು ಬಂದಾಗ

ಕೆಲಸ ಕೈಗೂಡುವುದೆಷ್ಟು ಹೊತ್ತು||


(೫)

ಪರೋಪಕಾರ ಮಾಡುವ ಜನ ಧನ್ಯರು

ಸೌಖ್ಯ ನೆಲೆಸುವುದು ಅವರಲ್ಲಿ|

ಸದಾ ಶೋಭಾಯಮಾನವಾಗಿರುವಂತೆ

ಗೋರಂಟಿ ಹಚ್ಚುವವರ ಕೈಯಿ||


(೬)

ನಮ್ಮ ಕೈಯಲ್ಲಿರುವುದು ಏನಿದ್ದರೂ

ಕೆಲಸ ಮಾಡುವುದು, ಅದರ ಫಲವಲ್ಲ|

ದಾಳ ಹಾಕುವುದಷ್ಟೇ ನಮ್ಮ ಕೈಲಾಗುವುದು

ಬೀಳುವ ಗರವು ನಮ್ಮ ಕೈಯಲ್ಲಿಲ್ಲ||

(೭)

ಪ್ರಯತ್ನಿಸಿದರೆ ಮನಸ್ಸಿಟ್ಟು ಮನುಜನಿಗೆ

ಸಾಧಿಸದಿರಲು ಏನಿದೆ ಕಾರಣ|

ಮನಸ್ಸಿಟ್ಟು ಮಾಡಿದರೆ ಪ್ರಯತ್ನ

ನರನಿಗೆ ವಶನಾಗುವನು ನಾರಾಯಣ||


(೮)

ರಹೀಮ ಬಂದರೆ ಬರಲಿ ಬಿಡು

ಸ್ವಲ್ಪ ದಿವಸ ವಿಪತ್ತು|

ಯಾರು ಹಿತವರು ಯಾರಲ್ಲ

ಎಂದು ತಿಳಿಯುವ ಹೊತ್ತು||


(೯)

ಮೆತ್ತಗಾಗುವುದುಂಟೆ ರಹೀಮ

ನೀರಲ್ಲಿಟ್ಟ ಕಲ್ಲು |

ಮೂರ್ಖನಿಗೆ ಬಂದೀತೆ ಬುದ್ಧಿ

ಜ್ಞಾನಿಗಳ ಸಂಗದಲ್ಲೂ||


(೧೦)

ಏಕೆ ಹೋಗಬೇಕಿತ್ತು ಹರಿಣದ ಹಿಂದೆ ರಾಮ

ರಾವಣನ ಜೊತೆಗೆ ಯುದ್ಧ ನಡೆಯಲೆಂದೇ|

ಆಗಬೇಕಾದದ್ದು ಆಗಿಯೇ ತೀರುವುದು

ನಮ್ಮದೇನೂ ನಡೆಯದು ವಿಧಿಯ ಮುಂದೆ||


ಮೂಲ: ರಹೀಮ್

ಅನುವಾದ: ಸಿ. ಪಿ. ರವಿಕುಮಾರ್



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)