ರೂಪಾಯಿಗೆ ಇಪ್ಪತ್ತು

 "ರೂಪಾಯಿಗೆ ಇಪ್ಪತ್ತು"

ಮೂಲ: ಟಾಮ್ ಬಾರ್ಲೋ

ಅನುವಾದ: ಸಿ. ಪಿ. ರವಿಕುಮಾರ್




ಐದುಪೈಸೆಯ ನಾಣ್ಯಗಳ ಬಗ್ಗೆ ಯೋಚಿಸುತ್ತಿದ್ದೆ

ಹುಡುಗರ ಜೋಬುಗಳಲ್ಲಿ ಝಣಝಣ ಎನ್ನುತ್ತ

ಅಂಗಡಿಯ ಮುಂದೆ 

ಹೋಗಿ ನಿಲ್ಲಲು ಧೈರ್ಯ ತುಂಬುತ್ತಿದ್ದವಲ್ಲ

ಪೆಪ್ಪರಮಿಂಟು, ಹಾಲುಖೋವಾ, ಚಿಕ್ಕಿ, ಮಾವಿನಕಾಯಿ

ವಾರದ ಸಂಬಳ ಪಡೆದ ದಿನಗೂಲಿ ಕೆಲಸಗಾರ 

ಅಡ್ಡಾಡುವಂತೆ ಅಂಗಡಿಯಿಂದ ಅಂಗಡಿಗೆ.

ಇವತ್ತು ದಾರಿಯಲ್ಲಿ ಬಿದ್ದಿತ್ತು ಐದುಪೈಸೆಯ ನಾಣ್ಯ,

ಯಾರೋ ಎಂದೋ ಕಳೆದುಕೊಂಡದ್ದು,

ಬಹಳ ದಿನಗಳಿಂದ ಅಲ್ಲೇ ಇದ್ದಿರಬಹುದು,

ಧೂಳು ಸೇರಿಕೊಂಡಿತ್ತು.

ನಾನು ಅಲ್ಲೇ ಬಿಟ್ಟು ನಡೆದೆ.

ರೂಪಾಯಿಗೆ ಇಪ್ಪತ್ತು

ಸಿಕ್ಕುತ್ತವೆ ಕೈತುಂಬಾ

ಭಿಕ್ಷೆಯವನೂ ಮೂಸಿ ನೋಡದ ವಸ್ತು.

ಅವನಿಗೆ ಗೊತ್ತು ಐದುಪೈಸೆಯ ನಾಣ್ಯದ ಬೆಲೆ

ಏನಿದ್ದರೂ ಅಲ್ಲಾಡುವ ಮೇಜಿನ ಅಡಿಯಲ್ಲಿಡಲು ಅಷ್ಟೇ.

ನಾನು ಇಟ್ಟುಕೊಂಡಿರುತ್ತೇನೆ ಒಂದನ್ನು ನನ್ನ ಬಳಿ,

ಇಂದೇನು ಕುಡಿಯಲಿ ಗಾಳಿಯನ್ನೋ ಔಷಧವನ್ನೋ

ಇತ್ಯಾದಿ ಮುಖ್ಯ ನಿರ್ಧಾರಗಳನ್ನು  ಕೈಗೊಳ್ಳಲು.

ಕಾಲಾಂತರದಲ್ಲಿ ನಾವೆಲ್ಲರೂ ಕುಗ್ಗುತ್ತೇವೆ,

ಹುಡುಗನ ಬೊಗಸೆಯಿಂದ ನಡುಗುವ ಕೈಗಳಿಗೆ.

ಕೈಗಳಿಂದ ಜಾರಿಹೋಗುತ್ತವೆ ನಾಣ್ಯಗಳು

ಜಾರಿ ಉರುಳಿ ಬೀದಿಯಲ್ಲಿ ಎಲ್ಲೋ ಮಾಯವಾಗುತ್ತವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)