ಹ್ಯಾಲೋವೀನ್

 ಹ್ಯಾಲೋವೀನ್



ಕಟುಕನ ಭಾರೀ ಗಾತ್ರದ ಚಾಕು ಮೊದಲು ಒಳನುಗ್ಗಿ

ಕೊರೆಯುತ್ತದೆ ತೊಟ್ಟುಳ್ಳ ಗುಂಡನೆ ಮುಚ್ಚಳ ಮೇಲುಗಡೆ.

ಈಗ ಕೈಹಾಕಿ ಒಳಗೆ ಬಗೆದು ಕೈಗಂಟುವ ಮಾಂಸಲ ಭಾಗ

ಚಮಚದಿಂದ ಕೆರೆದು ಶುದ್ಧಗೊಳಿಸಬೇಕು  ಒಳಗೋಡೆ.

ಅಂದು ಮಧ್ಯಾಹ್ನವೇ ರೂಪಿಸಿದ ಭಯಾನಕ ಆಕೃತಿ:

ಮೊದಲು ಕೆತ್ತಬೇಕು ತ್ರಿಕೋನಾಕಾರದ ಕಣ್ಣು

ಅಥವಾ ವಜ್ರಾಕ್ರಾರದವು ಮತ್ತು ಚೌಕಾಕಾರದ ಮೂಗು.

ಕೆಳಗೆ ಬಾಗಿದ ಬಾಯಲ್ಲಿ ಮೂರು ಭಯಾನಕ ಹಲ್ಲು. 

ಬೇಕೆನಿಸಿದರೆ ಗುಂಡನೆಯ ಕಿವಿ. ಮುಸ್ಸಂಜೆ ಹೊತ್ತು

ಒಳಗೆ ಮೋಂಬತ್ತಿ ಇಟ್ಟು ಹಚ್ಚಿದಾಗ ಕಾಣುತ್ತದೆ 

ಹಿಂಭಾಗದಲ್ಲಿ ಕತ್ತಲು. ಮುಂದಿನಿಂದ ನೋಡಿದರೆ

ಕಾಣುವುದು ಪಕ್ವ ಕುಂಬಳಕಾಯಿ, ಅಷ್ಟೇ.

ಹೊರಗೆ ತರಗೆಲೆಗಳುದುರಿದ ಹುಲ್ಲಿನ ಮೇಲೆ ಬಿದ್ದ ನೆರಳು

ಕೈ ಮಾಡಿ ಕರೆದಾಗ ಬೆರಳು ಆಗಮಿಸುತ್ತಾರೆ ಮಕ್ಕಳು.

"ಟ್ರಿಕ್ ಆರ್ ಟ್ರೀಟ್."  ತೆರೆದ ಬಾಗಿಲಿನ ಮುಂದೆ ನಿಂತ

ಕುಂಬಳಕಾಯಿ ಕೊರೆದ ಮಾಯಾವಿ ವೇಷದಾರಿ

ಉದುರಿಸುತ್ತಾನೆ ಅವರ ಜೋಳಿಗೆಗಳಲ್ಲಿ ಪೆಪ್ಪರ್ಮಿಂಟು

ಅವನಿಗೆ ಗೊತ್ತು ಏನೆಂದು ಚಳಿಗಾಲದ ಸಂದೇಶ:

ಭೂತಗಳಂತೆ ನಟಿಸುವ ಮಕ್ಕಳಷ್ಟೇ ವಾಸ್ತವ.


ಮೂಲ: ಮ್ಯಾಕ್ ಹ್ಯಾಮಂಡ್

ಅನುವಾದ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)