ಹೀರೆ ಕಾ ಹಾರ್

 ಹೀರೆ ಕಾ ಹಾರ್ 



ಹಾರ ತುರಾಯಿ ಅನ್ನುವಾಗ ಬಹಳ ಜನರಿಗೆ ತುರಾಯಿ ಏನೆಂದು ಗೊತ್ತೇ ಇಲ್ಲ.  ಕೈಗೆ ಕೊಡುವ ಹೂವಿನ ಗುಚ್ಛಕ್ಕೆ ತುರಾಯಿ ಎನ್ನುವ ಹೆಸರಿದೆ. ಇದರ ಮೂಲ ಏನೋ ಯಾರಿಗೆ ಗೊತ್ತು? ಹಿಂದಿಯಲ್ಲಿ ತುರಈ ಎಂಬ ಪದ ಇದೆ. ಹೀರೆಕಾಯಿಗೆ ತುರಈ ಎನ್ನುತ್ತಾರೆ.  ಹಿಂದೊಮ್ಮೆ ಸಮಾರಂಭಗಳಲ್ಲಿ ಕೈಗೆ ಹೀರೆಕಾಯಿ ಕೊಡುತ್ತಿದ್ದರೋ ಏನೋ ಎಂಬುದನ್ನು ಕುರಿತು ಸಂಶೋಧನೆ ನಡೆಯಬೇಕಾಗಿದೆ. ಅತಿಥಿ ಹಿಗ್ಗಿ ಹೀರೇಕಾಯಿ ಆಗಲು ಹಾಗೆ ಮಾಡುತ್ತಿದ್ದರೋ ಏನೋ.  ಬಹುಶಃ ಹೀರೇಕಾಯಿ ಆಗ ಅಪರೂಪದ ತರಕಾರಿ ಆಗಿರಬಹುದು. ಬಂದವರ ಕೈಗೆ ನಿಂಬೆಹಣ್ಣು ಕೊಡುವ ಸಂಪ್ರದಾಯ ಹಿಂದೆ ಇತ್ತೆಂದು ಹೇಳುತ್ತಾರೆ. ಮದುವೆಯಲ್ಲಿ ಕಾಶೀಯಾತ್ರೆ ಸಂದರ್ಭದಲ್ಲಿ ತೆಂಗಿನಕಾಯಿ ವರನ ಕೈಗೆ ಕೊಡುವ ಸಂಪ್ರದಾಯವೂ ಇದೆ. ಕೆಲವರು ಅದನ್ನು "ನೋಡು ಹೀಗೆ ಇದ್ದ ತೆಂಗಿನಕಾಯಿ ಮುಂದೆ ಹೇಗೆ ಚಟ್ನಿ ಆಗುತ್ತದೆ ನೋಡು, ಹೀಗಾಗಿ ನೀನೇನೂ ಹೆದರಬೇಡ" ಎಂದೆಲ್ಲ ಹೇಳುವ ಬದಲು ಸಾಂಕೇತಿಕವಾಗಿ ಅದನ್ನೇ ಹೇಳುವ ಪ್ರಯತ್ನ ಎಂದು ಊಹಿಸಿದ್ದಾರೆ. ನಿಂಬೆ ಹಣ್ಣನ್ನು ಅತಿಥಿಗೆ ಕೊಟ್ಟರೆ "ನೋಡಿ, ಪಾನಕ ಮಾಡಲು ನಮಗೆ ಪುರುಸೊತ್ತಿಲ್ಲ, ಮನೆಯಲ್ಲಿ ಸಕ್ಕರೆ ಇಲ್ಲ, ಯಾಲಕ್ಕಿ ತಂದಿಲ್ಲ, ಹೀಗಾಗಿ ನಿಂಬೆಹಣ್ಣನ್ನು ನಿಮಗೆ ಕೊಡುತ್ತಿದ್ದೇವೆ ಸ್ವೀಕರಿಸಿ" ಎಂದು ಪರೋಕ್ಷವಾಗಿ ಹೇಳಿದಂತೆ ಎಂದು ಅದೇ ಸಂಶೋಧಕರು ಊಹಿಸಿದ್ದಾರೆ.  ಆದರೆ ಹೀರೇಕಾಯಿ ಕೊಡುವ ಸಂಪ್ರದಾಯದ ಬಗ್ಗೆ ಅವರು ಏನೂ ಹೇಳಿಲ್ಲ.  ಕೈಗೆ ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಪಡವಕಾಯಿ, ಸೋರೆಕಾಯಿ ಮುಂತಾದವನ್ನು ಕೊಡುವ ಸಂಪ್ರದಾಯವೂ ಕಂಡುಬಂದಿಲ್ಲ.  ತುರಯಿ ಅಥವಾ ಹೀರೆಗೆ ಮಾತ್ರ ಈ ಹೀರೋ ಸ್ಥಾನವನ್ನು ನೀಡಲಾಗಿದೆ. ಹೀರೆಕಾಯಿ ಮೇಲೆ ಶ್ರೀರಾಮನೇ ಹಾಕಿರುವ ಗೆರೆಗಳ ಕಾರಣ ಅದಕ್ಕೆ ಈ ಸ್ಥಾನಮಾನ ದೊರಕಿರಬಹುದು ಎನ್ನುವ ವಾದ ಕೆಲವರದ್ದು. ಹೇಗೆ ಮರಳುಸೇವೆ ಮಾಡಿದ ಅಳಿಲಿನ ಬೆನ್ನಿನ ಮೇಲೆ ಶ್ರೀರಾಮನು ಮೂರು ಗೆರೆ ಎಳೆದನೋ ಹಾಗೆ ರಾಮೇಶ್ವರದಲ್ಲಿ ಅವನ ಹಸಿವು ತಣಿಸಿದ ಹೀರೆಕಾಯಿಗೂ ರಾಮನು ಗೆರೆ ಬರೆದನೆಂದು ಹೇಳುತ್ತಾರೆ. ಕೆಲವರು ರಾಮನು ಬ್ರಿಜ್ ಹೇಗೆ ಇರಬೇಕು ಎಂಬ ನಕಾಶೆಯನ್ನು ಹನುಮಂತ ಮುಂತಾದವರಿಗೆ ಹೀರೆಕಾಯಿ ಮೇಲೆ ಬಿಡಿಸಿ ತೋರಿಸಿದ ಕಾರಣ ಅದಕ್ಕೆ ಬ್ರಿಜ್ ಗೋರ್ಡ್ ಎಂಬ ಹೆಸರು ಬಂದಿತೆಂದೂ ಕ್ರಮೇಣ ಅದು ರಿಜ್ ಗೋರ್ಡ್ ಆಯಿತೆಂದೂ ಅನುಮಾನಿಸಿದ್ದಾರೆ.


ಹಾರ ಪ್ಲಸ್ ಹೀರೆ ಈಕ್ವಲ್ಸ್ ಹಿಗ್ಗಿದ ಮೋರೆ ಎಂಬ ಗಾದೆಯನ್ನು ನೀವೂ ಕೇಳಿರಬಹುದು. ಸಮಾರಂಭದಲ್ಲಿ ಸಿಕ್ಕ ಹಾರವನ್ನು ಮತ್ತು ಹೀರೆಕಾಯನ್ನು ಅತಿಥಿ ಮನೆಗೆ ಹೋಗಿ ಹೆಂಡತಿಗೆ ಕೊಟ್ಟಾಗ ಅವಳ ಮೋರೆ ಹಿಗ್ಗದೇ ಏನು!  ಸುಗಂಧರಾಜ ಹೂವಿನ ಹಾರವಾದರೆ ಅದರಲ್ಲಿ ನಡುವೆ ಟೊಮೇಟೋ ಕಾಯಿಗಳೂ ಇರುತ್ತವೆ. (ಅವನ್ನು ಚಿನ್ನಾರಿ ಕಾಗದದಿಂದ ಮುಚ್ಚಿರುತ್ತಾರೆ.) ಟೊಮೇಟೋ ಕಾಯಿ ಮತ್ತು ಹೀರೆಕಾಯಿ ಚಟ್ನಿಯ ಸೂಪರ್ ಟೇಸ್ಟಿ  ರೆಸಿಪಿಯನ್ನು ನೋಡಲು ನನ್ನ ಸೀಪೀಸ್ ರೆಸಿಪೀಸ್ ಲಿಂಕಿಗೆ ಖಂಡಿತಾ ಭೇಟಿ ಕೊಡಿ.  ಅತಿಥಿಯು ತನ್ನ ಹೆಂಡತಿಗೆ ಹಾರ ಪ್ಲಸ್ ಹೀರೆ ಕೊಟ್ಟಾಗ ಎಲ್ಲ ಹೆಂಡತಿಯರ ಮುಖವೂ ಹಿಗ್ಗುತ್ತಿತ್ತು ಎಂದು ಅನ್ನಲಾಗದು.  ನಾನು ಕೇಳಿದ್ದು ಹೀರೆ ಕಾ ಹಾರ್. ನೀವು ತಂದಿದ್ದು ಹೀರೇ ಔರ್ ಹಾರ್!" ಎಂದು ಮುನಿಸಿಕೊಂಡು ಹಾರ ಮತ್ತು ಆಹಾರ ತ್ಯಜಿಸಿ ಕೋಪಗೃಹಕ್ಕೆ ತೆರಳಿದ ರಾಂಝಾನ ಹೆಂಡತಿ ಹೀರಾ ಎಂಬುವಳ ಕಥೆಯನ್ನು ನೀವು ಕೇಳಿಯೇ ಇರುತ್ತೀರಿ.


ಎಂಥೆಂಥ ಹಾರಗಳನ್ನು ಜನ ಹಾಕಿಕೊಳ್ಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಂಗುಲಿಮಾಲಾ ಎಂಬ ಒಬ್ಬ ಡಕಾಯಿತ ಕಾಡಿನ ಮೂಲಕ ಹೋಗುವವರನ್ನು ಲೂಟಿ ಮಾಡುವುದಲ್ಲದೆ ಅವರ ಕೈಬೆರಳನ್ನು ಕತ್ತರಿಸಿ ಹಾರ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದನಂತೆ. ತಾನು ಎಷ್ಟು ಜನರನ್ನು ಲೂಟಿ ಮಾಡಿದೆ ಎಂಬ ಲೆಕ್ಕ ಹಾಕಲು ಅವನಿಗೆ ಹೀಗೆ ಮಾಡಬೇಕಾಯಿತಂತೆ. ಏನು ಮಾಡೋದು, ಅವನ ಅಮ್ಮ ಲೆಕ್ಕ ಹೇಳಿಕೊಟ್ಟಾಗ ಬೆರಳಿನ ಮೇಲೆ ಎಣಿಸುವುದನ್ನು ಹೇಳಿಕೊಟ್ಟಳು. ಅವನು ಹತ್ತು ಜನರನ್ನು ಲೂಟಿ ಮಾಡುವವರೆಗೆ ಏನೂ ತೊಂದರೆ ಇರಲಿಲ್ಲ. ಆನಂತರ ಏನೂ ಮಾಡಲು ತಿಳಿಯದೆ ಹನ್ನೊಂದನೇ ಮನುಷ್ಯನ ಉಂಗುಷ್ಟವನ್ನು ಕತ್ತರಿಸಿಕೊಂಡನಂತೆ. ಮುಂದೆ ಅವನಿಗೆ ಬುದ್ಧ ಎಂಬವರು ಮನಸ್ಸಿನಲ್ಲೇ ಎಣಿಸುವ ಲೆಕ್ಕ ಹೇಳಿಕೊಟ್ಟ ಮೇಲೆ ಈ ಹಾರದ ಹಾರರ್ ಕಥೆ ಮುಕ್ತಾಯ ಆಯಿತೆಂದು ಹೇಳುತ್ತಾರೆ. ಕೌಂಟಿಂಗ್ ಬಹಳ ಮುಖ್ಯ ನೋಡಿ. ಕೌಂಟ್ ಮಾಡಲು ಬರದ ಕೌಂಟ್ ಡ್ರಾಕುಲಾ ಎಂಬವನೊಬ್ಬ ಕುತ್ತಿಗೆಗೆ ಕಚ್ಚಿ ರಕ್ತ ಹೀರಿಬಿಡುತ್ತಿದ್ದನಂತೆ. ಅಬ್ಬಾ ಈ ಹೀರೋ ವಿಲನ್ ಕಥೆಗಿಂತ ನಮ್ಮ ಹೀರೆಕಾಯಿ ಎಷ್ಟೋ ವಾಸಿ.


ಇದನ್ನೆಲ್ಲಾ ನಾನು ಒಬ್ಬರಿಗೆ ಹೇಳುತ್ತಿದ್ದಾಗ ಹೀರೆಕಾಯಿ ಹಾರವನ್ನೇ ಹಾಕಿದರೆ ಹೇಗೆ ಎಂದು ಅವರು ನನ್ನನ್ನು ಕೇಳಿದರು. ಹೀರೆ ಕಾ ಹಾರ್ ಅಂದರೆ ಹೀಗೂ ಇರಬಹುದಲ್ಲ ಎಂದು ಯೋಚಿಸುತ್ತಾ ಕಾಫಿ ಹೀರಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)